ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಗುಡ್ಡದಲ್ಲಿ ಮಾರ್ದನಿಸಿದ ಹೊಡೆದಾಟ

Last Updated 8 ಅಕ್ಟೋಬರ್ 2011, 5:20 IST
ಅಕ್ಷರ ಗಾತ್ರ

ಸಿರುಗುಪ್ಪ: ವಿಜಯ ದಶಮಿಯಂದು ನಡೆವ ದೇವರಗುಡ್ಡದ ಮಾಳ ಮಲ್ಲೇಶ್ವರ ಸ್ವಾಮಿಯ ಕಾರಣಿಕ ಉತ್ಸವದಲ್ಲಿ ರಾತ್ರಿಯಿಡೀ ಸಾವಿರಾರು ಬಡಿಗೆಗಳ ಸದ್ದು ಕೇಳಿಬಂತಲ್ಲದೆ, ಕಡುವೈರಿಗಳ ನಡುವಿನ ಕಾಳಗವನ್ನು ನೆನಪಿಸಿತು.
ರಾಜ್ಯದ ಗಡಿಗೆ ಹೊಂದಿರುವ ಆಂಧ್ರಪ್ರದೇಶದ ಹೊಳಗುಂದಿ ಮಂಡಲದ ನೆರಣಕಿ ಗ್ರಾಮದ ಬಳಿಯ  ದೇವರಮಲ್ಲಯ್ಯನ ಗುಡ್ಡದಲ್ಲಿ ಗುರು ವಾರ ಮಧ್ಯರಾತ್ರಿಯಿಂದ ಶುಕ್ರವಾರ ಬೆಳಗಿನ ಜಾವದವರೆಗೆ ನಡೆದ ಕಾರಣಿಕ ಉತ್ಸವದಲ್ಲಿ ಕಂಡುಬಂದ ಬಡಿಗೆ ಯೊಂದಿಗೆ ಹೊಡೆದಾಡುವ ಕದನದ ಕಥನವಿದು.

ಪೊಲೀಸರೆದುರೇ ಸಾವಿರಾರು ಭಕ್ತರು ಕೈಯಲ್ಲಿ ಬಡಿಗೆ ಹಿಡಿದು ಹಲಗೆ, ತಾಳಕ್ಕೆ ಹೆಜ್ಜೆಹಾಕುತ್ತಾ ಕುಣಿದು ಕುಪ್ಪಳಿಸುವ ವೇಳೆ ಬಡಿಗೆಗಳೊಂದಿಗೆ ಹೊಡೆದಾಡುವ ಪ್ರಸಂಗ ಎಂಥವರ ಎದೆಯನ್ನೂ ಒಂದು ಕ್ಷಣ ಝಲ್ ಎನಿಸದೇ ಇರದು. ಪಾರಂಪರಿಕವಾಗಿ ನಡೆದು ಬಂದಿರುವ ಗುಡ್ಡದಮಲ್ಲಯ್ಯನ ಕಾರಣಿಕ ಉತ್ಸವದ ವಿಶೇಷವಿದು.

ಇಲ್ಲಿ ಉತ್ಸವ ಮೂರ್ತಿಗಳನ್ನು ಗುಡ್ಡದ ಮೇಲಿರುವ ದೇವಸ್ಥಾನದಿಂದ ಹೊತ್ತು ಬರುವ ಭಕ್ತಸಮೂಹ ಪಂಜಿನ ಮೆರವಣಿಗೆಯಲ್ಲಿ ಬಡಿಗೆಗಳ ಹೊಡೆದಾಟದಲ್ಲಿ ಮಗ್ನರಾಗಿ ಭಕ್ತಿಯ ಪರಾಕಾಷ್ಠೆಯಲ್ಲಿ ಮುಳುಗಿ ಭಂಡಾರ ಎರಚುತ್ತ ಗುಡ್ಡದ ಮೇಲಿಂದ ಕೆಳಗೆ ಇಳಿಯುತ್ತಿದ್ದಂತೆಯೇ ಬಡಿಗೆ ಹಿಡಿದ ಮಲ್ಲಯ್ಯನ ಭಕ್ತರು ಆವೇಶಭರಿತರಾಗಿ, ಸ್ವಾಮಿಯ ಘೋಷಣೆ ಕೂಗುತ್ತ ಬಡಿಗೆ ಝಳಪಿಸುತ್ತ ಪರಸ್ಪರ ಬಡಿದಾಟದಲ್ಲಿ ತೊಡಗಿ, ಗಾಯಗೊಂಡರೂ ಲೆಕ್ಕಿಸದೆ ಭಂಢಾರ ಹಚ್ಚಿಕೊಂಡು ರೌದ್ರಾವತಾರ ತಾಳಿ ಕುಣಿಯುವುದನ್ನು ನೋಡಲು, ಸ್ವಾಮಿಯ ಕಾರಣಿಕ  ಆಲಿಸಲು ಲಕ್ಷಾಂತರ ಜನ ಅಲ್ಲಿ ಸೇರುವುದು ವಿಶೇಷ.

ಸ್ವಾಮಿಯ ಅರ್ಚಕ ಕಾರಣಿಕ ಹೇಳುವ ಸಮಯದಲ್ಲಿ ಮಾತ್ರ ನಿಶ್ಯಬ್ಧ ವಾತಾವರಣ ಕಂಡುಬಂದರೆ, ದೇವ ರನ್ನು ದೇವಾಲಯಕ್ಕೆ ತಂದು ಪ್ರತಿಷ್ಠಾಪಿಸಿದ ನಂತರ ಬಡಿಗೆಗಳ ಸದ್ದು ಅಡಗಿ, ಅಲ್ಲಿಯವರೆಗೆ ನಡೆದ ಕಾದಾಟ ಮರೆತ ಭಕ್ತರು ಪರಸ್ಪರ ದೇವರಿಗೆ ಕಾಯಿ-ಕರ್ಪೂರ ಅರ್ಪಿಸಿ ತಮ್ಮ ಊರುಗಳತ್ತ ಸಾಗುವುದು ಕಂಡು ಬಂತು.

ಆಂಧ್ರಪ್ರದೇಶದ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ನೂರಾರು ಪೊಲೀಸರನ್ನು, ಅರೆ ಮಿಲಿಟರಿ ಪಡೆಯನ್ನು ನಿಯೋಜಿಸಿದ್ದು, ಪೊಲೀಸ ರೆದುರೇ ಹೊಡೆದಾಟ ನಡೆದು ಸಾವು, ನೋವು ಸಂಭವಿಸಿದರೂ ಪ್ರಕರಣ ದಾಖಲಿಸುವಂತಿಲ್ಲ. ಇದು ದೇವರಿಗಾಗಿ ನಡೆಯುವ ಕಾದಾಟ ಎಂದು ಅಲ್ಲಿನ ಭಕ್ತರು ತಿಳಿಸಿದರು.

ಬನ್ನಿ ಮುಡಿಯುವುದು, ರಕ್ತ ದರ್ಪಣ, ಕಾರಣಿಕ ಹೇಳಿಕೆ ಮತ್ತು ಸಾಂಪ್ರದಾಯಿಕ ಧಾರ್ಮಿಕ ಆಚರಣೆ ಗಾಗಿ ಬಂದ ಭಕ್ತಸಮೂಹ ಬಡಿಗೆಯ ಸಮೇತ ಪಂಜು ಹಿಡಿದು ಮುಂದೆ ಸಾಗುತ್ತದೆ. ಬಡಿಗೆಗಳ ಸದ್ದು, ನಿರ್ಜನ ಗುಡ್ಡದಲ್ಲಿ ಮಾರ್ದನಿಸಿ, ನೆರೆದ ಭಕ್ತ ಸಾಗರವನ್ನು ಪುಳಕಗೊಳಿಸುತ್ತದೆ. ಹೊಸಬರನ್ನು ತಲ್ಲಣಗೊಳಿಸುತ್ತದೆ. ಇದನ್ನು ನೋಡಲೂ ಧೈರ್ಯ ಬೇಕು ಎಂದು ಅಲ್ಲಿ ನೆರೆದವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT