ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರನ್ನೇ ದೂರ ಸರಿಸಬಲ್ಲ ದೇವಕಣಗಳು

Last Updated 5 ಜುಲೈ 2012, 19:30 IST
ಅಕ್ಷರ ಗಾತ್ರ

ವಿಜ್ಞಾನಿಗಳ ಕಮ್ಮಟದಲ್ಲಿ ದೇವರೇ ಧುತ್ತೆಂದು ಕಣರೂಪದಲ್ಲಿ ಪ್ರತ್ಯಕ್ಷವಾದಂತೆ ಇಡೀ ನಾಗರಿಕ ಲೋಕ ಸಂಭ್ರಮಿಸುತ್ತಿದೆ. ಆ ಭ್ರಮೆಯನ್ನು ಬದಿಗಿಡೋಣ. ದೇವರಿಗೂ `ದೇವಕಣ~ ಕ್ಕೂ ಏನೇನೂ ಸಂಬಂಧ ಇಲ್ಲ. ಸೂಕ್ಷ್ಮಲೋಕದಲ್ಲಿ ಅಂಥದ್ದೊಂದು ಕಣ ಇದ್ದಿರಲೇಬೇಕು ಎಂದು ವಿಜ್ಞಾನಿಗಳು 50 ವರ್ಷಗಳ ಹಿಂದೆಯೇ ತರ್ಕಿಸಿದ್ದರು. ಅದನ್ನು ಪತ್ತೆಹಚ್ಚಲು ಏನೆಲ್ಲ ಹರಸಾಹಸ ಮಾಡಿದ್ದರು. ಸಾವಿರಾರು ಕೋಟಿ ಡಾಲರ್ ವ್ಯಯಿಸಿದ್ದರು. ಏಕೆಂದರೆ ಅದು ಇದೆಯೆಂದು ಖಚಿತವಾದರೆ ಭೌತವಿಜ್ಞಾನದ ಮಬ್ಬುಚಿತ್ರಗಳೆಲ್ಲ ನಿಚ್ಚಳವಾಗುತ್ತವೆ ಎಂಬುದು ಗೊತ್ತಿತ್ತು.

`ಎಷ್ಟು ಹುಡುಕಿದರೂ ಈ ದರಿದ್ರ ಮುಂಡೇದು ಸಿಗ್ತಾನೇ ಇಲ್ಲವಲ್ಲ~ ಎಂದು ಅನೇಕ ವಿಜ್ಞಾನಿಗಳು ಅದನ್ನು ಶಪಿಸುತ್ತಿದ್ದರು. ನೊಬೆಲ್ ವಿಜ್ಞಾನಿ ಲಿಯೊನ್ ಲೆಡರ್ಮ್ಯೋನ್ ಎಂಬಾತ ಆ ಕಣದ ಬಗೆಗೇ ಒಂದು ಗ್ರಂಥವನ್ನು ಬರೆದು ಅದಕ್ಕೆ `ದ ಗಾಡ್‌ಡ್ಯಾಮ್ ಪಾರ್ಟಿಕಲ್~ (ತರಲೆ ಕಣ) ಎಂಬ ಶಿರೋನಾಮೆ ಕೊಟ್ಟ.

ಆದರೆ, ಪ್ರಕಾಶಕರು ಆ ಹೆಸರು ಬೇಡ, ಬೇರೇನಾದರೂ ಹೆಸರು ಕೊಡಿ ಎಂದಾಗ, ಡ್ಯಾಮ್ ಭಾಗವನ್ನು ಕಿತ್ತುಹಾಕಿದ. ಭೌತವಿಜ್ಞಾನ ಕ್ಷೇತ್ರಕ್ಕೆ ಮೇಟಿ ಕಂಬ ಎನ್ನಿಸುವಷ್ಟರ ಮಟ್ಟಿಗೆ ಈ ಕಣ ಮಹತ್ವದ್ದಾಗಿರುವುದರಿಂದ ಅದಕ್ಕೆ ಗಾಡ್ (ದೇವಕಣ) ಎಂಬ ಹೆಸರಿಟ್ಟರೆ ತಪ್ಪೇನಿಲ್ಲ ಎಂದು ಆಮೇಲೆ ಸಮಜಾಯಿಷಿ ಕೊಡುತ್ತ ಹೋದ.

ಈಗಲೂ ವಿಜ್ಞಾನಿಗಳು ಅದನ್ನು ದೇವಕಣ ಎನ್ನುವುದಿಲ್ಲ. `ಹಿಗ್ಸ್ ಬೋಸಾನ್~ ಎನ್ನುತ್ತಾರೆ. ಇದೇನೆಂದು ಅರ್ಥ ಮಾಡಿಕೊಳ್ಳಬೇಕಾದರೆ ನಾವು ಅತಿಸೂಕ್ಷ್ಮಲೋಕದ ಕ್ವಾಂಟಮ್ ವಿಶ್ವಕ್ಕೆ ಇಳಿಯಬೇಕಾಗುತ್ತದೆ. ಸೂಕ್ಷ್ಮದ ಈ ವಿಶ್ವವೂ ಹೊರಗಿನ ಬ್ರಹ್ಮಾಂಡದಷ್ಟೇ ಅನೂಹ್ಯ, ಅಷ್ಟೇ ನಿಗೂಢ, ಅಷ್ಟೇ ಸಂಕೀರ್ಣ. ಅದು ಸಾಮಾನ್ಯ ತರ್ಕಕ್ಕೆ ಸಿಗವುದಿಲ್ಲ. ಆಡುಭಾಷೆಯಲ್ಲಿ ಅದನ್ನು ವಿವರಿಸುವುದೂ ಸಾಧ್ಯವಿಲ್ಲ.

ಉದಾಹರಣೆಗೆ ಹೀಲಿಯಂ ಎಂಬ ಅನಿಲವನ್ನು ಅತಿಶೀತಲ ಸ್ಥಿತಿಗೆ ಒಯ್ದು ದ್ರವರೂಪಕ್ಕೆ ತಂದು ಒಂದು ಪಾತ್ರೆಗೆ ಹಾಕಿದರೆ ಅದು ಕ್ವಾಂಟಮ್ ಸ್ಥಿತಿಗೆ ಬರುತ್ತದೆ. ಅದನ್ನು ಬಟ್ಟಲಲ್ಲಿಟ್ಟು ಕಡ್ಡಿಯಿಂದ ತಿರುವಿದರೆ, ಒಂದು ಸುಳಿಯಲ್ಲ, ಎರಡು ಮೂರು ಸುಳಿಗಳು ಕಾಣುತ್ತವೆ; ದ್ರವವನ್ನು ಹಾಗೇ ಬಿಟ್ಟರೆ ಅದು ಪಾತ್ರೆಯ ಅಂಚಿನಗುಂಟ ಮೇಲೇರುತ್ತ ಆಚೆ ದಾಟಿ ಹೊರಟೇ ಹೋಗುತ್ತದೆ.

ಕ್ವಾಂಟಮ್ ಜಗತ್ತಿನ ಇಂಥ ವಿಶಿಷ್ಟ ಸನ್ನಿವೇಶವನ್ನು ಸಂಖ್ಯಾಶಾಸ್ತ್ರದ ಆಧಾರದಿಂದಲೇ ಊಹಿಸಿದ ಭಾರತದ ಅಪ್ರತಿಮ ವಿಜ್ಞಾನಿ ಸತ್ಯೇಂದ್ರನಾಥ್ ಬೋಸ್ 1924ರಲ್ಲಿ ಪ್ರಬಂಧವೊಂದನ್ನು ಬರೆದು ಇಂಗ್ಲಿಷ್ ವಿಜ್ಞಾನ ಪತ್ರಿಕೆಗಳಿಗೆ ಕಳಿಸುತ್ತಾರೆ. ಯಾರೂ ಪ್ರಕಟಿಸುವುದಿಲ್ಲ. ಎಸ್.ಎನ್. ಬೋಸ್ ಅದನ್ನು ಐನ್‌ಸ್ಟೀನ್‌ಗೆ ಕಳಿಸಿ, `ನನ್ನ ಲೆಕ್ಕಾಚಾರ ಸರಿಯೆಂದು ನಿಮಗೆ ಅನ್ನಿಸಿದರೆ ಅದನ್ನು ಜರ್ಮನ್ ಭಾಷೆಗೆ ತರ್ಜುಮೆ ಮಾಡಿಸಿ, ಯಾವುದಾದರೂ ಪತ್ರಿಕೆಯಲ್ಲಿ ಪ್ರಕಟಿಸಲು ನೆರವಾಗುತ್ತೀರಾ~ ಎಂದು ಕೇಳುತ್ತಾರೆ.

ಐನ್‌ಸ್ಟೀನ್ ಅದನ್ನು ಓದಿ, ಮೆಚ್ಚಿ, ಖುದ್ದಾಗಿ ತರ್ಜುಮೆ ಮಾಡಿ, ಪ್ರತಿಷ್ಠಿತ ಜರ್ಮನ್ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟಿಸುತ್ತಾರೆ. ಜೊತೆಗೆ ತಮ್ಮ ಲೆಕ್ಕಾಚಾರವನ್ನೂ ಅದಕ್ಕೆ ತಳಕು ಹಾಕಿ, ದ್ರವ್ಯಗಳ ಆ ವಿಶಿಷ್ಟ ಸ್ಥಿತಿಗೆ `ಬೋಸ್- ಐನ್‌ಸ್ಟೀನ್ ಕಂಡೆನ್ಸೇಟ್~ ಎಂದು ಹೆಸರಿಸುತ್ತಾರೆ. ಬೋಸ್ ಊಹಿಸಿದ ಈ ಸ್ಥಿತಿಗೆ ಅದರಲ್ಲಿರುವ ವಿಶಿಷ್ಟ ಕಣಗಳೇ ಕಾರಣವೆಂದು ಪೀಟರ್ ಹಿಗ್ ಎಂಬಾತ 1964ರಲ್ಲಿ ತೋರಿಸಿ ಅದಕ್ಕೆ `ಬೋಸಾನ್~ ಎಂದು ಕರೆದ ಮೇಲೆ, ಹಿಗ್ ಮತ್ತು ಬೋಸ್ ಹೆಸರುಗಳು ಸೇರಿ ಆ ಕಣಕ್ಕೆ `ಹಿಗ್ಸ್ ಬೋಸಾನ್~ ಎಂಬ ಹೆಸರು ಬರುತ್ತದೆ.

ಪರಮಾಣು ಎಷ್ಟು ಸೂಕ್ಷ್ಮ ಎಂಬುದು ನಮಗೆ ಗೊತ್ತೇ ಇದೆ. ನಾವು ಒಮ್ಮೆ ಉಸಿರು ಎಳೆದುಕೊಂಡರೆ 10ರ ಮುಂದೆ 20 ಸೊನ್ನೆ ಇಟ್ಟಾಗ ಬರುವಷ್ಟು ದೊಡ್ಡ ಸಂಖ್ಯೆಯ ಆಮ್ಲಜನಕದ ಪರಮಾಣುಗಳು ನಮ್ಮಳಗೆ ಹೋಗುತ್ತವೆ. ಅಂಥ ಸೂಕ್ಷ್ಮ ಪರಮಾಣುವಿನಲ್ಲಿ ಪ್ರೋಟಾನ್, ನ್ಯೂಟ್ರಾನ್ ಇರುತ್ತವೆ. ಪ್ರೋಟಾನನ್ನು ಒಡೆದರೆ ಒಳಗಿನದು ಅನೂಹ್ಯ ಲೋಕ. ಅದೇ ಕ್ವಾಂಟಮ್ ವಿಶ್ವ.

ಅಲ್ಲಿ ಕ್ವಾರ್ಕ್‌ಗಳಿರುತ್ತವೆ. ಅವುಗಳಲ್ಲೂ ಸುಮಾರು 40 ಬಗೆಯ ಕಣಗಳಿರುತ್ತವೆ. ಅವು ತರಂಗ ರೂಪದಲ್ಲಿ ಇವೆಯೊ, ಕಣರೂಪದಲ್ಲಿ ಇವೆಯೊ ನಿರ್ಧರಿಸಲು ಸಾಧ್ಯವಿಲ್ಲ. ಪರೀಕ್ಷಿಸಲು ಹೋದರೆ ಅವು ತಮ್ಮ ಸ್ವರೂಪವನ್ನೇ ಬದಲಿಸುತ್ತವೆ. ಅವುಗಳಲ್ಲೆೀ ಹೇಡ್ರಾನ್, ಲೆಪ್ಟಾನ್, ಬೋಸಾನ್, ಫರ್ಮಿಯಾನ್‌ಗಳು ಇದ್ದು ಅವು ತಂತಮ್ಮಳಗೆ ತಾಕಲಾಡುತ್ತ, ನಾನಾ ಬಗೆಯ ಮೂಲಕಣಗಳನ್ನು (ಅವನ್ನು ಮತ್ತಷ್ಟು ಒಡೆಯಲು ಸಾಧ್ಯವಿಲ್ಲ) ಹೊಮ್ಮಿಸುತ್ತವೆ. ಕ್ವಾರ್ಕ್‌ಗಳ ಈ ಚಂಚಲ ವಿಶ್ವವನ್ನು ನೋಡಿದ ಈಚಿನ ತಲೆಮಾರಿನ ವಿಜ್ಞಾನಿಗಳು ಅವಕ್ಕೆ ಸ್ಟ್ರೇಂಜ್ , ಚಾರ್ಮ್ , ಅಪ್‌ಕ್ವಾರ್ಕ್, ಟಾಪ್‌ಕ್ವಾರ್ಕ್, ಬಾಟಮ್ ಕ್ವಾರ್ಕ್, ಟ್ರುಥ್, ಬ್ಯೂಟಿ ಮುಂತಾದ ಪರಿಚಿತ ಹೆಸರುಗಳನ್ನಿಟ್ಟಿದ್ದಾರೆ.

ಕ್ವಾಂಟಮ್ ವಿಶ್ವದಲ್ಲಿ ಅಪ್ ಅಂದರೆ ಮೇಲೆ ಎನ್ನುವಂತಿಲ್ಲ; ಬ್ಯೂಟಿ ಎಂದರೆ ಸೌಂದರ್ಯ ಎನ್ನುವಂತೆಯೂ ಇಲ್ಲ. ಮಾಸ್ ಎಂದರೆ ತೂಕ ಎನ್ನುವಂತಿಲ್ಲ. ಬೋಸಾನ್ ಕಣಗಳು ವಸ್ತುಗಳಿಗೆ ದ್ರವ್ಯರಾಶಿಯನ್ನು //(ಞ)// ಕೊಟ್ಟಿವೆ ಎಂದು ವಿಜ್ಞಾನಿಗಳು ತರ್ಕಿಸಿದ್ದಾರೆ. ಪ್ರೋಟಾನಿನ ಒಳಗಿರುವ ಈ ಮರಿಕಣವೊಂದಕ್ಕೆ ಪ್ರೋಟಾನ್‌ಗಿಂತ 120 ಪಟ್ಟು ಹೆಚ್ಚು ದ್ರವ್ಯರಾಶಿಯಿದೆ ಎಂದು ಅವರು ಹೇಳುತ್ತಾರೆ. ಅಲ್ಲಿಗೆ ಭಾಷೆಯ ಪರಿಮಿತಿಯನ್ನು ಮೀರಿ ನಾವು ವಸ್ತುಸ್ಥಿತಿಯನ್ನು ಗ್ರಹಿಸಬೇಕಾಗುತ್ತದೆ.

ಬ್ರಹ್ಮಾಂಡದ ಪ್ರತಿಯೊಂದು ಕಣದಲ್ಲೂ ಅಡಗಿರುವ ವಿಶ್ವವ್ಯಾಪಿ ಸತ್ಯವನ್ನು ಅರ್ಥಮಾಡಿಕೊಳ್ಳಲು ತಿಣುಕಬೇಕಾಗುತ್ತದೆ. ನಕ್ಷತ್ರದ ಸುತ್ತ ಗ್ರಹಗಳು ಚಲಿಸುವಂತೆ ಮಾಡುವ ಗುರುತ್ವಶಕ್ತಿಯನ್ನು ಹಿಡಿದಿಟ್ಟುಕೊಂಡ ಗ್ರಾವಿಟ್ರಾನ್ ಕಣ ಇದೆಯೆ. ಸದಾ ಕತ್ತಲಲ್ಲೆೀ ಇರುವ ಕಪ್ಪುದ್ರವ್ಯ ಹೊಮ್ಮಿಸುವ ಕಣಗಳಿವೆಯೆ. ಈ ಮಾಯಾವಿ ಹಿಗ್ಸ್ ಬೋಸಾನ್ ಕಣವೇ ವಿಶ್ವದ ಎಲ್ಲ ವಸ್ತುಗಳಿಗೆ ದ್ರವ್ಯರಾಶಿ ನೀಡಿದೆಯೆ.

ಈ ಕಣಗಳನ್ನೆಲ್ಲ ಅಧ್ಯಯನ ಮಾಡಬೇಕಾದರೆ ಕೊಲೈಡರ್ ಎಂಬ ಭಾರೀ ಯಂತ್ರ ಸಮೂಹವೇ ಬೇಕಾಗುತ್ತದೆ. ಜಿನಿವಾ ಬಳಿ 27 ಕಿಮೀ ಉದ್ದದ ಬಳೆಯಂಥ ನಿರ್ವಾತ ಸುರಂಗದಲ್ಲಿ ಪ್ರೋಟಾನ್ ಕಣವನ್ನು ಭಾರಿ ವೇಗದಲ್ಲಿ ಸುತ್ತಿಸಿ ಡಿಕ್ಕಿ ಹೊಡೆಸುತ್ತಾರೆ. ಡಿಕ್ಕಿಯ ಆಘಾತ ಹೆಚ್ಚಾದಷ್ಟೂ ಹೆಚ್ಚು ಹೆಚ್ಚು ಕಣಗಳು ಒಮ್ಮೆ ಮಿಂಚಿನಂತೆ ಕೋರೈಸಿ ಅದೃಶ್ಯವಾಗುತ್ತವೆ. ಅದನ್ನು ಎಕ್ಸ್‌ರೇ ಹಾಳೆಯಂಥ ಬಲವಾದ ಅಯಸ್ಕಾಂತದ ಮೇಲೆ ಮುದ್ರಿಸಿಕೊಂಡು ಅದರ ವಿಶ್ಲೇಷಣೆ ಮಾಡುತ್ತಾರೆ. `ಹಿಗ್ಸ್ ಬೋಸಾನ್~ ಲಕ್ಷಣಗಳಿರುವ ಮಿಂಚುಗೀರು ಕಂಡಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

 

ಇಂದೋರ್ ಸಂಸ್ಥೆಯ ಪಾತ್ರ
ಭೋಪಾಲ್ (ಪಿಟಿಐ): `ಹಿಗ್ಸ್ ಬೋಸನ್~ ಅಥವಾ `ದೇವ ಕಣ~ ಪತ್ತೆಗೆ ಐರೋಪ್ಯ ಪರಮಾಣು ಸಂಶೋಧನಾ ಕೇಂದ್ರ (ಸಿಇಆರ್‌ನ್) ಬಳಸಿರುವ ಯಂತ್ರಗಳಿಗೆ (ಲಾರ್ಜ್ ಹಾಡ್ರನ್ ಕೊಲೈಡರ್- ಎಲ್‌ಎಚ್‌ಸಿ) ಬೇಕಾದ ಅಗತ್ಯ ಭಾಗಗಳನ್ನು ಪೂರೈಸುವಲ್ಲಿ ಇಲ್ಲಿನ ರಾಜಾರಾಮಣ್ಣ ಸೆಂಟರ್ ಫಾರ್ ಅಡ್ವಾನ್ಸ್ ಟೆಕ್ನಾಲಜಿ (ಆರ್‌ಆರ್‌ಸಿಎಟಿ) ಪ್ರಮುಖ ಪಾತ್ರವಹಿಸಿದೆ.

ಆರ್‌ಆರ್‌ಸಿಎಟಿ ಸಂಸ್ಥೆ ಪರಮಾಣು ಇಂಧನ ವಿಭಾಗದ ನೋಡೆಲ್ ಏಜೆನ್ಸಿಯಾಗಿದ್ದು, `ಹಿಗ್ಸ್ ಬೋಸನ್~ ಕಣ ಪತ್ತೆ ಹಚ್ಚುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸಿದೆ.

ಆರ್‌ಆರ್‌ಸಿಎಟಿ ಜೊತೆಗೆ ಇಂಡೋ ಜರ್ಮನ್ ಟೂಲ್ ರೂಮ್ (ಐಜಿಟಿಆರ್) ಕೂಡ 27 ಕಿ.ಮೀ ಉದ್ದದ ಎಲ್‌ಎಚ್‌ಸಿ ಯಂತ್ರ ಕಾರ್ಯ ನಿರ್ವಹಿಸಲು ಜಾಕ್‌ಗಳನ್ನು ಅಭಿವೃದ್ಧಿಪಡಿಸಿರುವುದಾಗಿ ಐಜಿಟಿಆರ್‌ನ ವ್ಯವಸ್ಥಾಪಕ ಸಿ.ಎಸ್.ಶರ್ಮಾ ತಿಳಿಸಿದ್ದಾರೆ.

ಅದು ನಿಜಕ್ಕೂ `ಹಿಗ್ಸ್ ಬೋಸಾನ್~ ಕಣಗಳೇ ಆಗಿದ್ದರೆ, ಅದರ ಗುಣಲಕ್ಷಣಗಳನ್ನು ಪೂರ್ತಿ ಅರ್ಥ ಮಾಡಿಕೊಂಡರೆ ಮುಂದೊಂದು ದಿನ ನಾವು ನಮ್ಮ ಸುತ್ತಲಿನ ವಸ್ತುಗಳಲ್ಲಿನ ದ್ರವ್ಯರಾಶಿ ಯನ್ನು ಕಳಚಿ ಹಾಕಲು ಸಾಧ್ಯವಾಗಬಹುದು. ಆಗ ಇನ್ನೊಂದು ಊಹಾತೀತ ಲೋಕವೇ ತೆರೆದುಕೊಳ್ಳುತ್ತದೆ. ಬೆಳಕಿನ ವೇಗವನ್ನು ಮೀರಿ ವಸ್ತುಗಳನ್ನು ಕ್ಷಣಾರ್ಧದಲ್ಲಿ ಇನ್ನೊಂದು ಲೋಕಕ್ಕೆ ರವಾನಿಸಬಹುದು. ನಾವೇ ಹೋಗಲು ಸಾಧ್ಯವಾಗಬಹುದು. ಭವಿಷ್ಯವನ್ನು ಯಾರೂ ಊಹಿಸಲು ಸಾಧ್ಯವಿಲ್ಲ.

1874ರಲ್ಲಿ ವುಡ್‌ವಾರ್ಡ್ ಎಂಬಾತ ಕೆಂಪಾಗಿ ಉರಿಯುವ ತಂತಿಯಿಂದ ವಿದ್ಯುತ್ ಬೆಳಕು ಹೊಮ್ಮಿಸಿದ. ಎಡಿಸನ್ ಬಿಟ್ಟರೆ ಬೇರೆ ಯಾರಿಗೂ ಅದರ ಮಹತ್ವ ಗೊತ್ತಾಗಿರಲಿಲ್ಲ; ಉರಿಯುವ ತಂತಿಯಿಂದ ಯಾರಿಗೇನು ಪ್ರಯೋಜನ? ಎಂದು ಮೂಗು ಮುರಿದವರೇ ಎಲ್ಲ. ವಿದ್ಯುತ್ ಬೆಳಕಿನ ಕ್ರಾಂತಿ ಅಂದಿನಮಟ್ಟಿಗೆ ಅನೂಹ್ಯವಾಗಿತ್ತು.
ಮತ್ತೆ ದೇವರು? ಅವನು ಪ್ರತ್ಯಕ್ಷವಾಗಿದ್ದು ನಿಜವೆ? ಎರಡು ಮಹಾಸೂಕ್ಷ್ಮ ಕಣಗಳು ಡಿಕ್ಕಿಹೊಡೆದು ಸ್ಫೋಟಗೊಂಡಾಗ ಮಿಂಚು ಕೋರೈಸುತ್ತದಲ್ಲ, ಅದನ್ನೇ ಬೇಕಿದ್ದರೆ ವಿಶ್ವರೂಪ ದರ್ಶನ ಎಂದುಕೊಳ್ಳಿ. ಈ ಬ್ರಹ್ಮಾಂಡವನ್ನು ಸುಸ್ಥಿರವಾಗಿಡಲು ಶ್ರಮಿಸುವ ಎಲ್ಲ ಶಕ್ತಿಗಳೂ ಆ ಕ್ಷಣದಲ್ಲಿ ತಂತಮ್ಮ ಪಾತ್ರಪರಿಚಯ ಮಾಡಿಕೊಟ್ಟು ಮಾಯವಾಗುತ್ತವೆ.

ಬ್ರಹ್ಮಾಂಡದ ಉಗಮ ಕ್ಷಣದಲ್ಲೂ ಅದೇ ಸ್ಥಿತಿ ಇತ್ತು. ನಮ್ಮಳಗಿನ ಪ್ರತಿ ಕಣದಲ್ಲಿ ಅವೆಲ್ಲ ಪಾತ್ರಗಳೂ ಅಡಗಿ ಕೂತಿವೆ. ಅದನ್ನೇ ಬೇಕಿದ್ದರೆ ದೇವರು ಎಂದುಕೊಳ್ಳಿ. ಆದರೆ ವಿಜ್ಞಾನದಲ್ಲಿ ಪ್ರತಿ ಬಾರಿ ಮಹತ್ವದ ಸಂಶೋಧನೆ ಆದಾಗಲೂ ದೇವರ ಪಾತ್ರ ದೂರ ಸರಿಯುತ್ತಿದೆ.

ನ್ಯೂಟನ್ ಗುರುತ್ವಾಕರ್ಷಣ ಸಿದ್ಧಾಂತ ಮಂಡಿಸಿದ ದಿನವೇ ಈ ಸೌರಮಂಡಲವನ್ನು ದೇವರು ಹಿಡಿದಿಟ್ಟಿಲ್ಲ, ಅದು ಆಟೊಮ್ಯೋಟಿಕ್ ಯಂತ್ರದಂತಿದೆ ಎಂಬ ಕಲ್ಪನೆ ಬಂತು. ಭೂಖಂಡಗಳು ಸರಿಯುತ್ತಿವೆ ಎಂದು ವೆಗೆನರ್ ಹೇಳಿದ್ದು, ಪಾಚಿದ್ರವ್ಯಗಳೇ ವಿಕಾಸಗೊಂಡು ಮನುಷ್ಯನನ್ನು ರೂಪಿಸಿವೆ ಎಂದು ತೋರಿಸಿದ್ದು -ಈ ಎಲ್ಲವೂ ದೇವರನ್ನು (ಕುವೆಂಪು ಹೇಳಿದಂತೆ) ನೂಕಾಚೆ ದೂರ ಮಾಡಿವೆ. ಅವನನ್ನು ಆಚೆ ನೂಕಲು ಬೇಕಾದ ಬಲವೇ ಈ ದೇವಕಣ ವೆಂಬ ಹಿಗ್ಸ್ ಬೋಸಾನ್‌ನಲ್ಲಿ ಅವಿತಿದೆಯೆಂತಲೂ ಹೇಳಬಹುದು. ಅಥವಾ ನಮ್ಮ ಕಣಕಣದಲ್ಲೂ ಪ್ರತಿ ಉಸಿರಿನಲ್ಲೂ ದೈವೀಶಕ್ತಿ ಅವಿತಿದೆ ಎಂತಲೂ ಹೇಳಬಹುದು. ಅದು ಅವರವರ ಭಾವಕ್ಕೆ ಬಿಟ್ಟ ಪ್ರಶ್ನೆ.

ವಿಶ್ವವೆಂಬ ಉತ್ತರ ನಮ್ಮೆದುರಿಗಿದೆ, ಅದರ ಹಿಂದಿರುವ ಪ್ರಶ್ನೆ ಏನು? ಎಂದು ದೇವಕಣಕ್ಕೆ ಆ ಹೆಸರು ಕೊಟ್ಟ ಗ್ರಂಥದಲ್ಲಿ ಲೆಡರ್ಮ್ಯೋನ್ ಉದ್ದನ್ನ ಉಪಶೀರ್ಷಿಕೆ ಕೊಟ್ಟಿದ್ದಾನೆ. ಪ್ರಶ್ನೆಗಳ ಹೊಸ ಸರಮಾಲೆಗಳೇ ಈಗ ತೆರೆದುಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT