ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಪುರದಬೈಗಳ ಹಬ್ಬ

Last Updated 1 ಜೂನ್ 2011, 19:30 IST
ಅಕ್ಷರ ಗಾತ್ರ

ಅಶ್ಲೀಲ ಭಾಷೆ ಬಳಸಿ ದೇವರು ಹಾಗೂ ನೋಡುಗರನ್ನು ಬೈಯ್ಯುವ ವಿಲಕ್ಷಣ ಹಬ್ಬವೊಂದು ಕೊಡಗಿನ ದೇವರಪುರದಲ್ಲಿ ಕಳೆದ ವಾರ (ಮೇ 25 ಮತ್ತು 26ರಂದು) ನಡೆಯಿತು.

ಈ ಹಬ್ಬಕ್ಕೆ ಬೇಡು ಹಬ್ಬ ಎಂಬ ಹೆಸರಿದೆ. ಹಿಂದುಳಿದ ಪಂಗಡದವರು ಮತ್ತು ಬುಡಕಟ್ಟು ಜನಾಂಗದವರು ಕುಣಿದು ಸಂಭ್ರಮಿಸುವ ಈ ಹಬ್ಬದಲ್ಲಿ ದೇವರು ಹಾಗೂ ಜನರನ್ನು ಬಾಯಿಗೆ ಬಂದ ಮಾತುಗಳಲ್ಲಿ ನಿಂದಿಸುತ್ತಾರೆ.

ದಕ್ಷಿಣ ಕೊಡಗಿನ ಗೋಣಿಕೊಪ್ಪಲಿನಿಂದ ಆರು ಕಿ.ಮೀ. ದೂರದ ದೇವರಪುರ (ಒಂಟಿಯಂಗಡಿ)ದಲ್ಲಿ ನಡೆದ ಬೈಗುಳ ಹಬ್ಬದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಗೋಣಿಕೊಪ್ಪ ಸುತ್ತಮುತ್ತಲಿನ ಹಿಂದುಳಿದ ಪಂಗಡದವರು ಮತ್ತು ಬುಡಕಟ್ಟು ಜನರು ಪಾಲ್ಗೊಳ್ಳುವ ಈ ಹಬ್ಬ ಕೊಡಗಿನ ಪಾಲಿಗೆ ಸಂಭ್ರಮದ ಹಬ್ಬ.

ಕಾಫಿಯ ತೋಟಗಳಲ್ಲಿ ದುಡಿಯುವ ಜನರು ಒಂದು ದಿನ ಹಬ್ಬದಲ್ಲಿ ಸಂಭ್ರಮದಿಂದ ಕುಣಿದು ಕುಪ್ಪಳಿಸಿ ವಾಚಾಮಗೋಚರವಾಗಿ ಬೈದಾಡಿಕೊಂಡು ತಮ್ಮದೇ ರೀತಿಯಲ್ಲಿ ಖುಷಿಯಿಂದ ಕಳೆಯುತ್ತಾರೆ. ಹಬ್ಬದ ದಿನ  ನಡೆಯುವ ಮೆರವಣಿಗೆ ನೋಡಲು ಹೋದವರಿಗೆ ಬೈಯಿಸಿಕೊಳ್ಳುವ ತಾಳ್ಮೆ ಇರಬೇಕು.

ಕೊಡಗಿನ ಮೂಲ ನಿವಾಸಿಗಳಾದ ಕುರುಬ ಸಮುದಾಯದವರ ಪ್ರಮುಖ ಹಬ್ಬ ಇದು. ಅಯ್ಯಪ್ಪ, ಭದ್ರಕಾಳಿ. ಬೇಟೆ ಕರುಂಬ ದೇವರುಗಳಿಗೆ ಹರಕೆ ಹೊತ್ತ ವೇಷಧಾರಿ ಭಕ್ತರು ಊರಿನ ಸರಹದ್ದಿನ ಒಳಗಿರುವ ಮನೆ ಮನೆಗೆ ತೆರಳಿ ದೇವರಿಗೆ ಕಾಣಿಕೆ ಬೇಡುವುದು ದೇವರಪುರದಲ್ಲಿ ನಡೆಯುವ ಬೇಡು ಹಬ್ಬದ ವಿಶೇಷ.

ಕಾಡನ್ನು ರಕ್ಷಿಸುವ ನಿಟ್ಟಿನಲ್ಲಿ ಅಯ್ಯಪ್ಪ, ಭದ್ರಕಾಳಿ ಮತ್ತು ಬೇಟೆ ಕರುಂಬ ದೇವರನ್ನು (ಕಾಡಿನ ದೇವರು) ಪೂಜಿಸುತ್ತಾ ಕಾಡಿನ ಬಗ್ಗೆ ಪ್ರೀತಿ, ಮತ್ತು ಬೆಲೆಬಾಳುವ ವನ್ಯಸಂಪತ್ತನ್ನು ಸಂರಕ್ಷಿಸುವ ಕಾಳಜಿಯಿಂದ ದೇವರ ಕಾಡಿನಲ್ಲಿ ಬೇಡು ಹಬ್ಬವನ್ನು ತಲೆತಲಾಂತರದಿಂದ ಆಚರಿಸುತ್ತಿದ್ದಾರೆ.

ಹಬ್ಬದಲ್ಲಿ ಭಾಗವಹಿಸುವ ಹಲವಾರು ಬುಡಕಟ್ಟುಗಳ ಜನರು ತಮ್ಮ ಮೈಗೆ ಚಿತ್ರವಿಚಿತ್ರ ಬಣ್ಣ ಬಳಿದುಕೊಂಡು ಸೊಪ್ಪು ಬಲೂನು, ಹೂವು ಮತ್ತಿತರ ವಸ್ತುಗಳಿಂದ ಸಿಂಗರಿಸಿಕೊಂಡು ಕೈಯಲ್ಲಿ ಬಣ್ಣದ ಪುಡಿ ಎರಚಿಕೊಂಡು ಹಬ್ಬಕ್ಕೆ ರಂಗು ನೀಡುತ್ತಾರೆ.
ಈ ಹಬ್ಬಕ್ಕೆ ಸಾಂಪ್ರದಾಯಿಕ ಮುಖವೂ ಇದೆ. ದೇವರಪುರದ ಸಣ್ಣುವಂಡ ಕುಟುಂಬಸ್ಥರ ಮೂಲ ಮನೆಯಿಂದ ಹಬ್ಬದ ದಿನ ಭದ್ರಕಾಳಿಯ ಉತ್ಸವ ಮೂರ್ತಿಯನ್ನು ಅಯ್ಯಪ್ಪ ದೇವಾಲಯಕ್ಕೆ ತಂದು ಪೂಜಿಸುತ್ತಾರೆ. ಆ ದಿನ ದೇವಸ್ಥಾನದಲ್ಲಿ ಸಣ್ಣುವಂಡ ಕುಟುಂಬದವರ ಪರವಾಗಿ ಪೂಜೆ ಸಲ್ಲಿಸುವ  ಪದ್ಧತಿ ಇದೆ.
 
ಇಡೀ ದಿನ ಎದುರಿಗೆ ಸಿಕ್ಕವರಲ್ಲದೆ ದೇವರನ್ನೂ ಬಿಡದೆ ಬೈಯ್ಯುತ್ತಾ ನಲಿದು ಸಂಭ್ರಮಿಸುತ್ತಾರೆ. ಸಂಜೆಯ ಹೊತ್ತಿಗೆ ಭದ್ರಕಾಳಿಯ ದೇವಸ್ಥಾನಕ್ಕೆ ತೆರಳಿ ಬೈದುದಕ್ಕೆ ಕ್ಷಮೆ ಕೇಳಿ ತಪ್ಪಾಯಿತೆಂದು ಗೊಣಗುತ್ತ ಮನೆಯ ಹಾದಿ ಹಿಡಿಯುತ್ತಾರೆ.ಬೈಗಳ ಹಬ್ಬಕ್ಕೆ ಧಾರ್ಮಿಕ ಹಿನ್ನೆಲೆ ಇದ್ದರೂ ಇದು ಶುದ್ಧ ಮನರಂಜನೆಯ ಹಬ್ಬವಾಗಿ ಖ್ಯಾತಿ ಪಡೆಯುತ್ತಿದೆ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT