ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನ ಕಳವಿಗೆ ಸಂಚು: ಆರೋಪಿಗಳ ಸೆರೆ

Last Updated 16 ಡಿಸೆಂಬರ್ 2012, 19:57 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ಊಜುಗಲ್ಲು ಮತ್ತು ಚೀಲೂರು ಬೆಟ್ಟದ ತಪ್ಪಲಿನಲ್ಲಿರುವ ನಾಗಶೆಟ್ಟಿಹಳ್ಳಿಯ ದಾಖಲೆ ಹುಲಿಯಪ್ಪನ ಗೊಲ್ಲರಹಟ್ಟಿಯ ಜುಂಜಪ್ಪನ ದೇವಾಲಯದಲ್ಲಿ ಕಳ್ಳತನ ಮಾಡಲು ಸಂಚು ರೂಪಿಸಿದ್ದ ಕಳ್ಳರನ್ನು ಗೊಲ್ಲರಹಟ್ಟಿಯ ನಿವಾಸಿಗಳು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಆರೋಪಿಗಳನ್ನು ಪೀಣ್ಯಾದಾಸರಹಳ್ಳಿಯ ಮರಿಸ್ವಾಮಯ್ಯ, ರಾಜಾಜಿನಗರ 6ನೇ ಬ್ಲಾಕ್‌ನ ಮಂಜುನಾಥ್, ಆಟೋ ಚಾಲಕ ಗೋರಿಪಾಳ್ಯದ ಆಲ್ತಾಬ್, ದಯಾನಂದ್ ಎಂದು ಗುರುತಿಸಲಾಗಿದೆ. ಶನಿವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಆಟೋರಿಕ್ಷಾದಲ್ಲಿ ಜುಂಜಪ್ಪನ ದೇವಾಲಯಕ್ಕೆ ಭಕ್ತರ ನೆಪದಲ್ಲಿ ಹರಕೆ ತೀರಿಸಲು ಈ ನಾಲ್ವರು ಬಂದಿದ್ದರು. ಉಮಾಗೋಲ್ಡ್‌ನಿಂದ ತಯಾರಿಸಿದ್ದ ಆಭರಣಗಳನ್ನು ಮತ್ತು ದೇವಾಲಯದ ಜೀರ್ಣೋದ್ಧಾರಕ್ಕೆಂದು  4 ಲಕ್ಷದ ಚೆಕನ್ನು ದೇವಸ್ಥಾನದ ಪೂಜಾರಿಗೆ ನೀಡಿದ್ದಾರೆ.

`ನನಗೆ ಸೇರಿದ್ದ 4 ಎಕರೆ ಜಮೀನನ್ನು ಮಾರಿದ್ದರಿಂದ ರೂ.8 ಕೋಟಿ ಹಣ ಬಂದಿದೆ. ಜುಂಜಪ್ಪನ ಭಕ್ತನಾದ ನಾನು ದೇವರಿಗೆ ಜಮೀನು ಮಾರಾಟವಾದರೆ ಕಾಣಿಕೆ ನೀಡುವುದಾಗಿ ಹರಕೆ ಹೊತ್ತಿದ್ದೆ. ದೇವರ ದಯೆಯಿಂದ ಜಮೀನು ಮಾರಾಟವಾಗಿದೆ. ದೇವಾಲಯದ ಜೀರ್ಣೋದ್ಧಾರ ಮಾಡಿಸಿ ಮತ್ತು ಈ ಬಂಗಾರದ ಆಭರಣಗಳನ್ನು ದೇವರಿಗೆ ಹಾಕಿ ಪೂಜೆ ಮಾಡಿ' ಎಂದು ಮರಿಸ್ವಾಮಯ್ಯ ದೇವಸ್ಥಾನದ ಪೂಜಾರಿ ಯಳನಾಗಯ್ಯನಿಗೆ ಹೇಳಿದ್ದಾನೆ.  ನಂತರ ಈದಿನ ರಾತ್ರಿ ದೇವಸ್ಥಾನದಲ್ಲಿ ಮಲಗಿ ಬೆಳಿಗ್ಗೆ ಹೋಗುವುದಾಗಿ ಆರೋಪಿಗಳು ವಿನಂತಿಸಿಕೊಂಡಿದ್ದಾರೆ. ಯಳನಾಗಯ್ಯ ದೇವಸ್ಥಾನದಲ್ಲಿ ಉಳಿದುಕೊಳ್ಳಲು ಇವರಿಗೆ ಅನುಮತಿ ನೀಡಿದನಾದರೂ ಅವರ ವರ್ತನೆಯಿಂದ ಯಳನಾಗಯ್ಯನಿಗೆ ಅನುಮಾನ ಬಂದಿದೆ.

ಹಾಗಾಗಿ ತನ್ನ ಮಗನಾದ ಮಹಲಿಂಗಯ್ಯನಿಗೆ ಒಡವೆ ತೆಗೆದುಕೊಂಡು ಹೋಗಿ ಅಕ್ಕಸಾಲಿಗರ ಬಳಿ ತಪಾಸಣೆ ಮಾಡಿಸಿಕೊಂಡು ಬರುವಂತೆ ತಿಳಿಸಿದ್ದಾನೆ. ತಪಾಸಣೆ ಮಾಡಿದ ಅಕ್ಕಸಾಲಿಗರು ಒಡವೆಗಳು ನಕಲಿ ಎಂದು ತಿಳಿಸಿದ್ದಾರೆ. ಊರಿಗೆ ಹಿಂತುರಿಗಿದ ಮಹಲಿಂಗಯ್ಯ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾನೆ.
ಎಲ್ಲರೂ ಸೇರಿ ಆರೋಪಿಗಳನ್ನು ಹಿಡಿದು ಮರಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ನಾಲ್ವರ ಪೈಕಿ ದಯಾನಂದ್ ತಪ್ಪಿಸಿಕೊಂಡಿದ್ದಾನೆ. ಆರೋಪಿಗಳು ಗೊಲ್ಲರಹಟ್ಟಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇರುವ ವೀರಶೈವರನ್ನು ವಂಚಿಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಅದಕ್ಕಾಗಿ ಸಿದ್ದಗಂಗೆಯ ಡಾ. ಶಿವಕುಮಾರ ಸ್ವಾಮೀಜಿ ಅವರ ಜತೆಯಲ್ಲಿರುವ ಭಾವಚಿತ್ರದ ಗ್ರಾಫಿಕ್ಸ್ ಮಾಡಿಸಿದ್ದಾರೆ. ಮಾಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT