ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನದಲ್ಲಿ ಸ್ಫೋಟ, ಬೆಚ್ಚಿ ಬಿದ್ದ ಜನ

Last Updated 1 ಡಿಸೆಂಬರ್ 2013, 19:52 IST
ಅಕ್ಷರ ಗಾತ್ರ

ಬೆಂಗಳೂರು: ಬನಶಂಕರಿ ಎರಡನೇ ಹಂತದ ಕಾವೇರಿ ನಗರದ (ಅಂಬೇಡ್ಕರ್‌ ನಗರ) 14ನೇ ಅಡ್ಡರಸ್ತೆಯಲ್ಲಿರುವ ಮಾದುರ್ಗಾ ಪರಮೇಶ್ವರಿ ದೇವಸ್ಥಾನ­ದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭಾರಿ ಸ್ಫೋಟದಿಂದ ನೆರೆಹೊರೆಯ ಜನ ಕೆಲಕಾಲ ಆತಂಕಕ್ಕೀಡಾಗಿದ್ದರು.
ರಾತ್ರಿ 9 ಗಂಟೆಯ ಹೊತ್ತಿಗೆ  ದೇವ­ಸ್ಥಾನದ ಗರ್ಭಗುಡಿಯಲ್ಲಿ ಸಂಭವಿಸಿದ ಸ್ಫೋಟದ ತೀವ್ರತೆಗೆ ಮುಖ್ಯದ್ವಾರ ಛಿದ್ರವಾಗಿದೆ.

ಬಾಗಿಲುಗಳ ಕಬ್ಬಿಣದ ಸರಳುಗಳು ತುಂಡರಿಸಿವೆ. ದೇವಸ್ಥಾನದ ಗೋಡೆ ಹಾಗೂ  ಕಂಪೌಂಡ್‌ನಲ್ಲಿ ಬಿರುಕು ಬಿಟ್ಟಿದೆ.
ದೇವಸ್ಥಾನದಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಎರಡು ಹೊತ್ತು ಪೂಜೆ ನಡೆಯುತ್ತದೆ. ಎಂದಿನಂತೆ ರಾತ್ರಿ 8.30ರ ಸುಮಾರಿಗೆ ಅರ್ಚಕ ಮಹೇಶ್‌ ಭಟ್‌ ಅವರು ಗರ್ಭಗುಡಿಯಲ್ಲಿ ಪೂಜೆ ಮುಗಿಸಿ, ದೀಪ ಬೆಳಗಿಸಿ ಕಿಟಕಿ–ಬಾಗಿಲು ಮುಚ್ಚಿ ಹೋಗಿದ್ದಾರೆ. ಇದಾದ ಸುಮಾರು ಅರ್ಧ ಗಂಟೆ ಬಳಿಕ ಸ್ಫೋಟ ಸಂಭವಿಸಿದೆ. ಸ್ಫೋಟದ ಭಾರಿ ಸದ್ದು ಕೇಳಿ ದೇವಸ್ಥಾನದ ಸುತ್ತಲಿನ ನಿವಾಸಿಗಳು ಬೆಚ್ಚಿ ಬಿದ್ದಿದ್ದರು. ಕೂಡಲೇ ಮನೆಗಳಿಂದ ಹೊರ ಬಂದು ದೇವಸ್ಥಾನದ ಬಳಿ ಜಮಾಯಿಸಿದ್ದರು.

ಬಾಂಬ್‌ ನಿಷ್ಕ್ರಿಯ ದಳ, ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ಪ್ರಾಥಮಿಕ ತನಿಖೆ ಪ್ರಕಾರ, ‘ಅನಿಲ ಸ್ಫೋಟದಿಂದ ಈ ಘಟನೆ ನಡೆದಿದೆ. ಇಂಗಾಲದ ಮಾನಾಕ್ಸೈಡ್‌ನಿಂದ ಸ್ಫೋಟ ಉಂಟಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ. ಇದು ಅಪರಾಧ ಕೃತ್ಯವಲ್ಲ. ಖಂಡಿತವಾಗಿಯೂ ಇದು ಅನಿಲ ಸ್ಫೋಟ’ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ನಗರ ಪೊಲೀಸ್‌ ಆಯುಕ್ತ ರಾಘವೇಂದ್ರ ಔರಾದಕರ್‌ ಅವರು ತಿಳಿಸಿದ್ದಾರೆ.

‘ದೇವಸ್ಥಾನದಲ್ಲಿ  ಪ್ರಸಾದ ಕೂಡ ಹೊರಗಡೆ ತಯಾರಿಸಿಕೊಂಡು ತರು­ತ್ತಿದ್ದರು. ಆದರೆ, ಗರ್ಭಗುಡಿಯ ಸಮೀ­ಪದ ಕೊಣೆಯಲ್ಲಿ ಸಿಲಿಂಡರ್‌ ಇತ್ತು. ಇದರಿಂದ ಅನಿಲ ಸೋರಿಕೆ­ಯಾಗಿ­ರುವ ಸಾಧ್ಯತೆಯೂ ಇದೆ’ ಎಂದು  ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಹೇಳಿದ್ದಾರೆ.

‘ಊಟ ಮಾಡಲು ಕುಳಿತಿದ್ದಾಗ ಭಾರಿ ಸ್ಫೋಟ ಸಂಭವಿಸಿತ್ತು. ಇದರಿಂದ ಮನೆ ಅಲುಗಾಡಿದ ಅನುಭವವಾ­ಯಿತು. ಹೊರಗಡೆ ಬಂದು ನೋಡಿ­ದಾಗ ದೇವಸ್ಥಾನದಲ್ಲಿ ಬಿರುಕು ಬಿಟ್ಟಿ­ರುವುದು ಕಂಡು ಬಂತ್ತು’ ಎಂದು ದೇವಸ್ಥಾನ ಸಮೀಪದಲ್ಲೇ ಇರುವ ಮನೆಯ ಸದಸ್ಯರೊಬ್ಬರು ಹೇಳಿದರು.

ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿ­ಗಳು, ಕೇಂದ್ರ ಗುಪ್ತಚರ ದಳ, ಶ್ವಾನ ದಳ, ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬನಶಂಕರಿ ಠಾಣೆಯಲ್ಲಿ ಆಕಸ್ಮಿಕ­ವಾಗಿ ಅಗ್ನಿ ಅನಾಹುತ ಸಂಭವಿಸಿದ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT