ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಿ ದರ್ಶನ ವರ್ಷಕ್ಕೆ 36 ಗಂಟೆ ಮಾತ್ರ!

ಇಂದಿನಿಂದ ಚೌಡೇಶ್ವರಿದೇವಿ ಜಾತ್ರೆ
Last Updated 4 ಏಪ್ರಿಲ್ 2013, 5:51 IST
ಅಕ್ಷರ ಗಾತ್ರ

ಮದ್ದೂರು: ವರ್ಷಕ್ಕೊಮ್ಮೆ ಕೇವಲ 36 ಗಂಟೆಗಳ ಕಾಲ ಭಕ್ತಾದಿಗಳಿಗೆ ದರ್ಶನ ಭಾಗ್ಯ ನೀಡುವ ಶಕ್ತಿ ದೇವತೆ ಹೆಮ್ಮನಹಳ್ಳಿ ಶ್ರೀ ಚೌಡೇಶ್ವರಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಏ.4 ಹಾಗೂ 5ರಂದು ನಡೆಯಲಿದೆ.

ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ಸಾವಿರಾರು ಭಕ್ತರಿಗಾಗಿ ಅಗತ್ಯ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಹಾಗೂ ಸಂಭ್ರಮದ ವಾರ್ಷಿಕ ಜಾತ್ರಾಮಹೋತ್ಸವಕ್ಕಾಗಿ  ಇಡೀ ಗ್ರಾಮವೇ ಸಜ್ಜಾಗಿದೆ. ಹೊಯ್ಸಳ ಶೈಲಿಯಲ್ಲಿ ನಿರ್ಮಿಸಲಾಗಿರುವ ಸುಂದರ ದೇಗುಲವನ್ನು ವಿಶೇಷ ದೀಪಗಳಿಂದ ಅಲಂಕರಿಸಲಾಗಿದೆ.

ಏ.4ರ ಮುಂಜಾನೆ ಸಲ್ಲುವ ಶುಭಲಗ್ನದಲ್ಲಿ ಗಣಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಅಷ್ಟಲಕ್ಷ್ಮಿಹೋಮ ನವದುರ್ಗಹೋಮ, ಮಾತೃಕ ಹೋಮ, ಶಾಂತಿ ಹೋಮದೊಂದಿಗೆ ಲೋಕ ಕಲ್ಯಾಣಾರ್ಥವಾಗಿ ಮಹಾಚಂಡಿಹೋಮ ನಡೆಯಲಿದೆ.

ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಅಮ್ಮನವರ ಅಮೃತ ಮಣ್ಣಿನ ಗರ್ಭಗುಡಿ ದ್ವಾರವನ್ನು ವಿಧಿ ವಿಧಾನಗಳೊಂದಿಗೆ ಆಗಮಿಕರ ಮೂಲಕ ತೆರೆಯಲಾಗುತ್ತಿದ್ದು, ಕಳೆದ ವರ್ಷ ಹಚ್ಚಿಟ್ಟಿದ್ದ ನಂದಾದೀಪದಲ್ಲಿ ದೇವಿಯ ದರ್ಶನ ದೊರಕಲಿದೆ. ಈ ಬಳಿಕ ದೇವಿಯನ್ನು ವಿವಿಧ ಚಿನ್ನಾಭರಣಗೊಳೊಂದಿಗೆ ಅಲಂಕರಿಸಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು.

ಸಂಜೆ 4 ಗಂಟೆಗೆ ಗ್ರಾಮದ ಯುವಕರಿಂದ ಆಕರ್ಷಕ ಬಂಡಿ ಉತ್ಸವ ನಡೆಯಲಿದೆ. ಸಂಜೆ 5 ಗಂಟೆಗೆ ದೇವಿಗೆ ವಿಶೇಷ ಮಹಾಭಿಷೇಕ ನಡೆಯಲಿದೆ. ತುಮಕೂರು ರಾಮಕೃಷ್ಣ ಆಶ್ರಮದ ವಿರೇಶಾನಂದ ಸರಸ್ವತಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಂಜೆ ದೇಗುಲ ಆವರಣದಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ದಾನಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ. ಮಧ್ಯರಾತ್ರಿ 12 ಗಂಟೆಗೆ ಅಮ್ಮನ ಕರಗ ಉತ್ಸವ ನಡೆಯಲಿದ್ದು, ಕೊಂಡಕ್ಕೆ ಅಗ್ನಿಸ್ಪರ್ಶ ನಡೆಯಲಿದೆ.

ಏ.5ರ ಶುಕ್ರವಾರ ಮುಂಜಾನೆ 4ಗಂಟೆಗೆ ದೇವಿಯ ಕೊಂಡೋತ್ಸವ ನಡೆಯಲಿದೆ. ಮಧ್ಯಾಹ್ನ ಬ್ರಹ್ಮರಥೋತ್ಸವ ನಡೆಯಲಿದೆ. ಸಂಜೆ ದೇವಿಗೆ ವಿಶೇಷ ಪೂಜೆ ಅಲಂಕಾರ ನಡೆಯಲಿದ್ದು, ಆಗಮಿಸುವ ಭಕ್ತಾದಿಗಳ ದರ್ಶನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ರಾತ್ರಿ 12 ಗಂಟೆ ವೇಳೆಗೆ ದೇವಿಯ ಗರ್ಭಗುಡಿಯಲ್ಲಿ ನಂದಾದೀಪ ಹಚ್ಚಿಟ್ಟು, ಎಳೆನೀರಿನಿಂದ ಕಲೆಸಲಾದ ಅಮೃತ ಮಣ್ಣಿನಿಂದ ದೇವಿಯ ಗರ್ಭಗುಡಿಯ ದ್ವಾರವನ್ನು ಮುಚ್ಚುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದು ದೇಗುಲ ಟ್ರಸ್ಟ್ ಸಮಿತಿ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT