ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಂದ್ರೂ ಸಿಂಗ್ ಕನಸು ಭಗ್ನ

Last Updated 9 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಒಲಿಂಪಿಕ್ಸ್ ಬಾಕ್ಸಿಂಗ್‌ನಲ್ಲಿ ಭಾರತದ ಹೋರಾಟ ಅಂತ್ಯಗೊಂಡಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಎಲ್.ದೇವೇಂದ್ರೂ ಸಿಂಗ್ ಅವರು ಸೋಲು ಕಾಣುತ್ತಿದ್ದಂತೆ ಈ ಬಾರಿ ಪದಕದೊಂದಿಗೆ ಹಿಂತಿರುಗುವ ಪುರುಷರ ತಂಡದ ಕನಸು ಭಗ್ನಗೊಂಡಿತು. ಆದರೆ ಮಹಿಳೆಯರ ವಿಭಾಗದಲ್ಲಿ ಮೇರಿ ಕೋಮ್ ಕಂಚು ಗೆದ್ದಿದ್ದು ಕೊಂಚ ಸಮಾಧಾನ ನೀಡಿದೆ.

ಎಕ್ಸ್‌ಸೆಲ್ ಅರೆನಾದಲ್ಲಿ ಬುಧವಾರ ರಾತ್ರಿ ನಡೆದ ಲೈಟ್ ಫ್ಲೈವೇಟ್ (49ಕೆ.ಜಿ.) ವಿಭಾಗದ ಎಂಟರ ಘಟ್ಟದ ಹೋರಾಟದಲ್ಲಿ ದೇವೇಂದ್ರೂ 18-23 ಪಾಯಿಂಟ್‌ಗಳಿಂದ ಐರ್ಲೆಂಡ್‌ನ ಪ್ಯಾಡಿ ಬೇರ್ನ್ಸ್ ಎದುರು ಪರಾಭವಗೊಂಡರು.

ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚು ಹಾಗೂ 2010ರ ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನ ಗೆದ್ದಿದ್ದ ಬೇರ್ನ್ಸ್ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡರು. ದೇವೇಂದ್ರೂ ಕೂಡ ತಿರುಗೇಟು ನೀಡಲು ಹಲವು ಬಾರಿ ಪ್ರಯತ್ನಿಸಿದರು. ಆದರೆ ಐರ್ಲೆಂಡ್‌ನ ಅನುಭವಿ ಬಾಕ್ಸರ್ ಯಾವುದೇ ಅವಕಾಶ ನೀಡಲಿಲ್ಲ.

ದೇವೇಂದ್ರೂ ಪ್ರೀ ಕ್ವಾರ್ಟರ್ ಫೈನಲ್ ಹೋರಾಟದಲ್ಲಿ ಮಂಗೋಲಿಯದ ಸೆರ್ದಾಂಬಾ ಪರೆಡೊರ್ಜ್ ಅವರನ್ನು ಮಣಿಸಿದ್ದರು. ಹಾಗಾಗಿ ಅವರ ಮೇಲೆ ಪದಕದ ಭರವಸೆ ಇಡಲಾಗಿತ್ತು. ಏಕೆಂದರೆ ಮಾಜಿ ವಿಶ್ವ ಚಾಂಪಿಯನ್ ಹಾಗೂ ಬೀಜಿಂಗ್   ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಸೆರ್ದಾಂಬಾ ಅವರನ್ನು 20ರ ಹರೆಯದ ದೇವೇಂದ್ರೂ ಸೋಲಿಸಿದ್ದು ವಿಶೇಷ. ಆದರೆ ನಿರೀಕ್ಷೆ ಸುಳ್ಳಾಯಿತು. ಈ ಹೋರಾಟ ಪ್ರತಿ ಕ್ಷಣ ಕುತೂಹಲ ಕೆರಳಿಸುತ್ತಾ ಹೋಯಿತು. ಈ ಪೈಪೋಟಿಯ ಸ್ಕೋರಿಂಗ್ ವಿಧಾನದ ಬಗ್ಗೆ ಭಾರತ ತಂಡದ ಆಡಳಿತ ನಿರಾಶೆ ವ್ಯಕ್ತಪಡಿಸಿತು. ಬೇರ್ನ್ಸ್ ಮೊದಲ ಸುತ್ತಿನಲ್ಲಿ 7-5 ಪಾಯಿಂಟ್‌ಗಳಿಂದ ಮುನ್ನಡೆ ಸಾಧಿಸಿದರು. ಉಭಯ ಬಾಕ್ಸರ್‌ಗಳು ಆಕ್ರಮಣಕಾರಿ ಮೂಡಿನಲ್ಲಿಯೇ ಇದ್ದರು.

ಎರಡನೇ ಸುತ್ತಿನಲ್ಲಿ ದೇವೇಂದ್ರೂಗೆ ರೆಫರಿ ಎಚ್ಚರಿಕೆ ನೀಡಿದರು. ಹಾಗಾಗಿ ಎದುರಾಳಿ ಬಾಕ್ಸರ್‌ಗೆ ಹೆಚ್ಚಿನ ಪಾಯಿಂಟ್ ಲಭಿಸಿತು. ಅಷ್ಟು ಮಾತ್ರವಲ್ಲದೇ, ಬೇರ್ನ್ಸ್ 10-5 ಪಾಯಿಂಟ್‌ಗಳ ಮುನ್ನಡೆ ಸಾಧಿಸಿದರು. ಹಾಗಾಗಿ ಈ ಸುತ್ತು ಟರ್ನಿಂಗ್ ಪಾಯಿಂಟ್ ಎನಿಸಿತು. ಮತ್ತೆ ಚೇತರಿಸಿಕೊಳ್ಳಲು ಭಾರತದ ಬಾಕ್ಸರ್‌ಗೆ ಸಾಧ್ಯವಾಗಲಿಲ್ಲ. ಮೂರನೇ ಹಾಗೂ ಕೊನೆಯ ಸುತ್ತಿನಲ್ಲಿ ದೇವೇಂದ್ರೂ 8-6 ಪಾಯಿಂಟ್‌ಗಳಿಂದ ಮುನ್ನಡೆ ಸಾಧಿಸಿದರೂ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು.

`ನಮ್ಮ ಬಾಕ್ಸರ್ ದೇವೇಂದ್ರೂ ಎದುರು ಸ್ಕೋರ್ ಹಾಕುವಾಗ ಸಾಕಷ್ಟು ತಪ್ಪು ಎಸಗಲಾಗಿದೆ. ಐರ್ಲೆಂಡ್‌ನ ಬಾಕ್ಸರ್ ಸರಿಯಾದ ಭಾಗಕ್ಕೆ ಪಂಚ್ ಮಾಡುತ್ತಿರಲಿಲ್ಲ. ಆದರೂ ಅವರಿಗೆ ಪಾಯಿಂಟ್ ಸಿಗುತಿತ್ತು. ಇದು ಅನ್ಯಾಯ~ ಎಂದು ಭಾರತ ತಂಡದ ವಿದೇಶಿ ಕೋಚ್ ಬಿ.ಐ.ಫರ್ನಾಂಡೀಸ್ ಆಕ್ರೋಶ ವ್ಯಕ್ತಪಡಿಸಿದರು.

`ರೆಫರಿ ಗುಣಮಟ್ಟ ತುಂಬಾ ಕೆಟ್ಟದಾಗಿದೆ. ಈ ಬೌಟ್‌ನಲ್ಲಿ ಮಾತ್ರವಲ್ಲ; ಭಾರತದ ಹೆಚ್ಚಿನ ಬಾಕ್ಸರ್‌ಗೆ ಈ ರೀತಿ ಅನ್ಯಾಯವಾಗಿದೆ. ಇದು ತುಂಬಾ ಬೇಸರ ತರಿಸಿದೆ. ಆದರೆ ನಾವೇನು ಮಾಡಲು ಸಾಧ್ಯ~ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

`ಈ ಬಾರಿ ಭಾರತದ ಬಾಕ್ಸರ್‌ಗಳು ನೀಡಿದ ಪ್ರದರ್ಶನದ ಬಗ್ಗೆ ನನಗೆ ಖುಷಿ ಇದೆ. ಆದರೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಮಹಿಳೆಯರ ವಿಭಾಗದಲ್ಲಿ ಮೇರಿ ಕೋಮ್ ಪದಕ ಗೆದ್ದು ನಿರಾಶೆಯನ್ನು ಕೊಂಚಮಟ್ಟಿಗೆ ಕಡಿಮೆ ಮಾಡಿದ್ದಾರೆ~ ಎಂದು ಭಾರತ ತಂಡದ ಕೋಚ್ ಗುರುಬಕ್ಷ್ ಸಿಂಗ್ ಸಂಧು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT