ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡ, ಕುಮಾರಸ್ವಾಮಿಯೇ ಎದುರಾಳಿ: ಅಂಬರೀಷ್

Last Updated 13 ಏಪ್ರಿಲ್ 2013, 4:07 IST
ಅಕ್ಷರ ಗಾತ್ರ

ಮಂಡ್ಯ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ನನ್ನ ಎದುರಾಳಿಗಳು ಎಂದು ಮಂಡ್ಯ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಬರೀಷ್ ಹೇಳಿದರು.

ನಗರದಲ್ಲಿ ಪಕ್ಷದ ವಿವಿಧ ಮುಖಂಡರ ಮನೆಗೆ ಶುಕ್ರವಾರ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಜಿಲ್ಲೆಯವರೇ ನಾಯಕತ್ವ ವಹಿಸಿಕೊಳ್ಳಬೇಕು ಎಂಬುದು ನನ್ನ ಆಶಯ. ಈ ನಿಟ್ಟಿನಲ್ಲಿ ಹೋರಾಟ ನಡೆಸಬೇಕಿದೆ. ಜೆಡಿಎಸ್ ಪಕ್ಷದಿಂದ ಯಾರೇ ನಿಲ್ಲಲಿ. ಎದುರಾಳಿಗಳು ಅವರೇ ಆಗಿರುತ್ತಾರೆ ಎಂದರು.

ಜಿಲ್ಲೆಯ ಅಭಿವೃದ್ಧಿಗಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ. ಕೆಲಸ ಮಾಡಲು ಅವಕಾಶ ಕೇಳಿ ಸ್ಪರ್ಧೆಗೆ ಇಳಿಯುತ್ತಿದ್ದೇನೆ. ಜನರೂ ಅವಕಾಶ ನೀಡಲಿದ್ದಾರೆ ಎಂಬ ಭರವಸೆ ನನಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬಂಡಾಯದ ಬಗ್ಗೆ ನನಗೆ ಮಾಹಿತಿ ಇಲ್ಲ. ಬಂಡಾಯವಾಗಿ ನಿಲ್ಲುವವರ ಬಗ್ಗೆ ಜನರೇ ತೀರ್ಮಾನ ಮಾಡುತ್ತಾರೆ. ನಮ್ಮ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಎಸ್. ಆತ್ಮಾನಂದ ಅವರ ಮನೆಗೆ ಹೋಗಲು ಯಾವುದೇ ತೊಂದರೆ ಇಲ್ಲ. ನಾಳೆ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ. ಅದಕ್ಕೆ ಮುನ್ನವೇ ಅವರ ಮನೆಗೆ ಹೋದರೆ ಇರಿಸು-ಮುರಿಸಾಗಬಾರದು ಎಂದು ಹೋಗಲಿಲ್ಲ ಎಂದರು.

ಮಂಡ್ಯದಿಂದ ಸ್ಪರ್ಧಿಸುವುದು ಶೇ 99 ರಷ್ಟು ಖಚಿತವಾಗಿದೆ. ಬಿ. ಫಾರಂ ಸಿಗಬೇಕಷ್ಟೇ. ಏ.15 ರಂದು ನಾಮಪತ್ರ ಸಲ್ಲಿಸುತ್ತೇನೆ. ಆ ನಂತರ ಮನೆ, ಮನೆಗೆ ತೆರಳಿ ಪ್ರಚಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಇಂಥವರಿಗೆ ಟಿಕೆಟ್ ನೀಡಿ ಎಂದು ಹೈಕಮಾಂಡ್‌ಗೆ ಹೇಳಿಲ್ಲ ಎಂದ ಅವರು ಶ್ರೀರಂಗಪಟ್ಟಣದಲ್ಲಿ ಕಳೆದ ಎರಡು ಚುನಾವಣೆಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ರವೀಂದ್ರ ಶ್ರೀಕಂಠಯ್ಯ ಅವರಿಗೆ ಟಿಕೆಟ್ ನೀಡಿದರೆ ತಪ್ಪಾಗುತ್ತದೆ ಎಂದು ಹೇಳಿದರು.

ಮಾಜಿ ಸಂಸದ ಜಿ. ಮಾದೇಗೌಡ, ನಗರಸಭೆ ಸದಸ್ಯ ಹೊಸಳ್ಳಿ ಬೋರೇಗೌಡ, ಮಾಜಿ ಸದಸ್ಯ ಮುನಾವರ್‌ಖಾನ್, ನಾಗಮಣಿ ಸೇರಿದಂತೆ ಹಲವು ಹಾಲಿ ಹಾಗೂ ಮಾಜಿ ಸದಸ್ಯರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.

ಮುಖಂಡರಾದ ಅಮರಾವತಿ ಚಂದ್ರಶೇಖರ್, ಪಿ.ಎಂ. ಸೋಮಶೇಖರ್, ಹನಕೆರೆ ಶಶಿಕುಮಾರ್, ಯುವ ಘಟಕದ ಜಿಲ್ಲಾ ಅಧ್ಯಕ್ಷ ಎಂ.ಎಸ್. ಚಿದಂಬರ್, ಶಿವಾನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT