ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಪ್ರದಕ್ಷಿಣೆಗೆ ಸಜ್ಜಾಗಿದೆ ಪುಷ್ಪಕ ವಿಮಾನ

Last Updated 12 ಫೆಬ್ರುವರಿ 2011, 6:00 IST
ಅಕ್ಷರ ಗಾತ್ರ

ಯಲಹಂಕ ವಾಯುನೆಲೆ: ಭಾರತೀಯ ಭೂಸೇನೆಯ ವೈಮಾನಿಕ ಪಡೆಯ ರಜತ ವರ್ಷಾಚರಣೆಯ ಸಂಭ್ರಮಕ್ಕೆ ಮೆರುಗು ನೀಡಲು ವಿಶ್ವದ ಅತ್ಯಂತ ಹಳೆಯ ವಿಮಾನಗಳಲ್ಲಿ ಒಂದಾಗಿರುವ ‘ಪುಷ್ಪಕ’ ವಿಮಾನವು ದೇಶ ಪ್ರದಕ್ಷಿಣೆ ಹಾಕಲು ಸಜ್ಜಾಗಿದೆ. ಯಲಹಂಕ ವಾಯುನೆಲೆಯಿಂದ ಇದು ಭಾನುವಾರ ಆಕಾಶಕ್ಕೆ ನೆಗೆಯಲಿದೆ. ಐವತ್ತು ವರ್ಷಗಳಷ್ಟು ಹಳೆಯದಾದ ಈ ವಿಮಾನವು ಇಂದಿಗೂ ಕಾರ್ಯಚಟುವಟಿಕೆಯಿಂದ ಇರುವುದು ಹೆಗ್ಗಳಿಕೆಗೆ ಪಾತ್ರವಾಗಿದೆ.

ದೇಶದ ಗಡಿಸುತ್ತ ಸುಮಾರು 10 ಸಾವಿರ ಕಿ.ಮೀ ದೂರವನ್ನು ಈ ಪುಟ್ಟ ವಿಮಾನವು ಕೇವಲ 20 ದಿನಗಳಲ್ಲಿ ಪೂರೈಸಲಿದೆ. ಅಂದರೆ ದಿನಕ್ಕೆ 500 ಕಿ.ಮೀ ದೂರವನ್ನು ಕ್ರಮಿಸಲಿದೆ. ಬೆಂಗಳೂರಿನಿಂದ ಹೊರಡುವ ‘ದಂಡಯಾತ್ರೆ’ ಮಾರ್ಚ್ 5ರಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸಮಾಪ್ತಿಯಾಗಲಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ಪುಷ್ಪಕ ವಿಮಾನವು 1961ರಲ್ಲಿ ತಯಾರಾದದ್ದು. ಆಗ ಅದನ್ನು ವಾಯುಪಡೆಗೆ ಸೇರಿಸಲಾಗಿತ್ತು. 1965 ಹಾಗೂ 1971ರ ಪಾಕಿಸ್ತಾನ ಯುದ್ಧದಲ್ಲಿ ಇದನ್ನು ಬಳಸಲಾಗಿತ್ತು. ಮುಖ್ಯವಾಗಿ ಇದನ್ನು ಗಡಿ ವೀಕ್ಷಣೆಗಾಗಿ ಉಪಯೋಗಿಸಲಾಗಿತ್ತು. ಭೂಸೇನೆಗೂ ತನ್ನದೇ ಆದ ವೈಮಾನಿಕ ಪಡೆಯ ಅವಶ್ಯಕತೆ ಇದೆ ಎಂದು ಕೇಂದ್ರ ಸರ್ಕಾರವು 1986ರಲ್ಲಿ ಭೂಸೇನಾ ವೈಮಾನಿಕ ಪಡೆಯನ್ನು ಸ್ಥಾಪಿಸಿತು. ಆ ಸಂದರ್ಭದಲ್ಲಿ ಪುಷ್ಪಕ ವಿಮಾನವು ಹೊಸ ಪಡೆಗೆ ಸೇರ್ಪಡೆಯಾಯಿತು.

‘ಅಂದಿನಿಂದ ಇಂದಿಗೂ ಅದು ಸಶಕ್ತವಾಗಿದೆ. ಹಿಂದಿನ ಕಾಲದಲ್ಲಿ ನಮ್ಮಲ್ಲಿದ್ದ ಸದೃಢ ರಕ್ಷಣಾ ಶಕ್ತಿಯ ಪರಂಪರೆಯನ್ನು ನೆನಪಿಸಿಕೊಳ್ಳುವ ದೃಷ್ಟಿಯಿಂದ ಈ ಯಾತ್ರೆಯನ್ನು ಆಯೋಜಿಸಲಾಗಿದೆ. ಬ್ರಿಗೇಡಿಯರ್ ದರ್ಜೆಯ ಸೇನಾಧಿಕಾರಿ ಪುಷ್ಪಕ ವಿಮಾನವನ್ನು ಹಾರಿಸಲಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸೇನಾಧಿಕಾರಿ ತಿಳಿಸಿದರು.

‘ಈ ವಿಮಾನದಲ್ಲಿ ಒಬ್ಬನೇ ಚಾಲಕನಿಗೆ ಸ್ಥಳಾವಕಾಶ ಇರುತ್ತದೆ. ದಂಡಯಾತ್ರೆಯ ವೇಳೆಯಲ್ಲಿ ಪುಷ್ಪಕ ವಿಮಾನವು ಹಳೆಯ ವಾಯುನೆಲೆಗಳಿಗೆ ಭೇಟಿ ನೀಡಲಿದೆ’ ಎಂದು ಅವರು ತಿಳಿಸಿದರು.

ಮಾರ್ಗ: ಪುಷ್ಪಕ ದಂಡಯಾತ್ರೆಯು ಯಲಹಂಕ ವಾಯುನೆಲೆ (ಬೆಂಗಳೂರು), ಪುಣೆ, ಸೂರತ್, ವಡೋದರಾ, ಜೋಧಪುರ, ಲೂಧಿಯಾನ, ದೆಹಲಿ, ಲಖನೌ, ಪಟ್ನಾ, ಗುವಾಹಟಿ, ಕೋಲ್ಕತ್ತಾ, ಬೆಂಗಳೂರು ಮೂಲಕ ಹಾದು ನಾಸಿಕ್‌ನಲ್ಲಿ ಕೊನೆಗೊಳ್ಳಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT