ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕಾಗಿ ಯಾತ್ರೆ; ಸ್ವಂತ ಲಾಭಕ್ಕೆ ಅಲ್ಲ

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): `ಜನಚೇತನ~ ರಥಯಾತ್ರೆ ತಮ್ಮ ರಾಜಕೀಯ ಜೀವನದ ಪುನರ್‌ಸ್ಥಾಪನೆಯ ಪ್ರಯತ್ನ ಎಂಬ ಟೀಕೆಗಳನ್ನು ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಗುರುವಾರ ಬಲವಾಗಿ ತಳ್ಳಿಹಾಕಿದ್ದಾರೆ.

`ಈ ಯಾತ್ರೆಯಿಂದ ಎಲ್.ಕೆ.ಅಡ್ವಾಣಿಗಾಗಲೀ ಅಥವಾ ಬಿಜೆಪಿಗಾಗಲೀ ಆಗಬೇಕಾದ್ದು ಏನೂ ಇಲ್ಲ. ಅಥವಾ ಮುಂದಿನ ಚುನಾವಣೆಯ ದೂರದೃಷ್ಟಿಯ ಯಾತ್ರೆಯೂ ಇದಲ್ಲ. ಖಂಡಿತವಾಗಿಯೂ ಈ ಯಾತ್ರೆ ಭಾರತಕ್ಕೆ ಇಂದು ಅಗತ್ಯವಿರುವ ಭ್ರಷ್ಟಾಚಾರದ ವಿರುದ್ಧದ ಜನಜಾಗೃತಿಯ ರಥಯಾತ್ರೆ~ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದೀಪಾವಳಿ ನಿಮಿತ್ತ ಯಾತ್ರೆಗೆ ಎರಡು ದಿನಗಳ ವಿಶ್ರಾಂತಿ ನೀಡ್ದ್ದಿದ ಅವರು ಈ ಕುರಿತಂತೆ ತಮ್ಮ ಬ್ಲಾಗ್‌ನಲ್ಲಿ ವಿವರಿಸಿದ್ದಾರೆ.

ಯುಪಿಎ ಸರ್ಕಾರದ ವೈಫಲ್ಯಗಳನ್ನು ನೋಡುತ್ತಿರುವ ಭಾರತೀಯ ದೇಶದ ವೈಭವದ ಬಗೆಗೆ ಕನಸು ಕಾಣುವ ತನ್ನ ವಿಶ್ವಾಸವನ್ನೇ ಕಳೆದುಕೊಂಡಿದ್ದಾನೆ. ಆದ್ದರಿಂದ ಈ ಯಾತ್ರೆ ನಿರುತ್ಸಾಹಗೊಂಡಿರುವ ಭಾರತೀಯರ ಮನದಲ್ಲಿ ಚೈತನ್ಯ ಚಿಗುರಿಸಲು ಮತ್ತು ವಿಶ್ವಾಸ ತುಂಬಲು ನಡೆಸುತ್ತಿರುವುದಾಗಿದೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ದಶಕಗಳಲ್ಲಿ ಭಾರತ ಬಲಿಷ್ಟ ಪ್ರಜಾಸತ್ತಾತ್ಮಕ ರಾಷ್ಟ್ರ ಎಂಬ ಹೆಸರು ಗಳಿಸಿದೆ. 21ನೇ ಶತಮಾನದಲ್ಲಿ ವಿಶ್ವದ ಸದೃಢ ಆರ್ಥಿಕ ವ್ಯವಸ್ಥೆ ಹೊಂದಿದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಮುಂದಾಗುತ್ತಿದೆ. ಆದರೆ ಯುಪಿಎ ಸರ್ಕಾರದ ಹಗರಣಗಳಿಂದಾಗಿ ಇದಕ್ಕೆಲ್ಲಾ ಮಸಿ ಅಂಟಿದೆ ಎಂದು ಅಡ್ವಾಣಿ ಟೀಕಿಸಿದ್ದಾರೆ.

ತಮ್ಮ ಜನಚೇತನ ಯಾತ್ರೆಗೆ ಎಲ್ಲೆಡೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಅಂದಿನ ತಮ್ಮ ರಾಮರಥ ಯಾತ್ರೆಗಿಂತಲೂ ಹೆಚ್ಚಿನ ರೀತಿಯಲ್ಲಿ ಜನರು ಇದನ್ನು ಸಂತೋಷದಿಂದ ಬರಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ.

ಎಲ್ಲ ದೇವರಿಗಿಂತಲೂ ಭಾರತಾಂಬೆಯೇ ನಮ್ಮ ನೆಚ್ಚಿನ ಆರಾಧ್ಯ ದೇವತೆ ಎಂಬ ವಿವೇಕಾನಂದರ ವಾಣಿಯ ಮನನ ಈಗ ಅವಶ್ಯವಿದೆ ಎಂದು ಹೇಳಿರುವ ಅವರು, ರಾಮಭಕ್ತಿಗಿಂತಲೂ ರಾಷ್ಟ್ರಭಕ್ತಿಗೆ ಮೊದಲ ಆದ್ಯತೆ ಎಂದು ಬಿಜೆಪಿ ನಂಬುತ್ತದೆ.

ಯಾವುದೇ ಪಕ್ಷನಿಷ್ಠೆಗಿಂತಲೂ ನಮಗೆ ಭಾರತೀಯತೆಯ ಮುಖ್ಯವಾಗಬೇಕು ಎಂದು ತಿಳಿಸಿದ್ದಾರೆ. ಅಡ್ವಾಣಿ ಗುರುವಾರ ತಮ್ಮ 38 ದಿನಗಳ ಜನಚೇತನ ರಥಯಾತ್ರೆಯ ಎರಡನೇ ಪರ್ವವನ್ನು ಆರಂಭಿಸಿದರು. ಅವರ ಜೀವನದಲ್ಲಿ ಇದು ಆರನೇ ರಾಜಕೀಯ ರಥಯಾತ್ರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT