ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ದೂರ ಶಿಕ್ಷಣ ಮಹತ್ವವಾದುದು

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಹಿಂದುಳಿದ ವರ್ಗದ ಜನರು, ದಲಿತರು, ಮಹಿಳೆಯರು ಶಿಕ್ಷಣ ಪಡೆಯಲು ಸಾಧ್ಯವಾಗದ ಭಾರತದಂತಹ ದೇಶಕ್ಕೆ ದೂರ ಶಿಕ್ಷಣ ಮಹತ್ವವಾದುದು. ವಯಸ್ಸಿನ ಹಂಗಿಲ್ಲದೆ ನಿರಂತರ ಕಲಿಕೆಗೆ ಇದು ಸಹಾಯ ಮಾಡುತ್ತದೆ~ ಎಂದು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಟ್ಯಾಗೋರ್ ಅಧ್ಯಯನ ಪೀಠದ ಗೌರವ ಅಧ್ಯಕ್ಷ ಡಾ. ಯು.ಆರ್. ಅನಂತಮೂರ್ತಿ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯವು ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 24ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

`ಹಣಕಾಸಿನ ಬಿಕ್ಕಟ್ಟು, ಕೌಟುಂಬಿಕ ಜವಾಬ್ದಾರಿಗಳಿಂದಾಗಿ ವ್ಯಾಸಂಗ ಮಾಡಲಾಗದ ಅನೇಕರಿಗೆ ದೂರಶಿಕ್ಷಣ ನೆರವಾಗುತ್ತದೆ. ಕೌಟುಂಬಿಕ ಕಾರಣಗಳಿಂದಾಗಿ ಕೆಲವರು ನಿಧಾನ ಗತಿಯಲ್ಲಿ ಕಲಿಯುತ್ತಾರೆ. ಆದರೂ ಅವರು ಕಲಿಯುತ್ತಿರುತ್ತಾರೆ. ಅಂತಹವರಿಗೆ ಇದು ಉತ್ತಮ ವೇದಿಕೆ ಒದಗಿಸುತ್ತದೆ~ ಎಂದರು.

`ಏಕಲವ್ಯ ಪ್ರತ್ಯಕ್ಷವಾಗಿ ಗುರುವನ್ನು ಪಡೆಯದೆಯೂ ವಿದ್ಯೆ ಪೂರೈಸಿದ. ಅದೇ ರೀತಿ ದೂರ ಶಿಕ್ಷಣ ಎಂಬುದು ಏಕಲವ್ಯ ಕಲಿಕೆ ಇದ್ದಂತೆ. ಪದವಿ ಪಡೆದ ಮಾತ್ರಕ್ಕೆ ಕಲಿಕೆ ನಿಂತು ಹೋಗಬಾರದು. ಒಂದರ್ಥದಲ್ಲಿ ಇಡೀ ಶಿಕ್ಷಣವೇ ನಿರಂತರ ಕಲಿಕೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಅಮೆರಿಕದಲ್ಲಿ ಅಧ್ಯಾಪಕನಾಗಿದ್ದಾಗ 85 ವರ್ಷದ ಮಹಿಳೆಯೊಬ್ಬರು ಭಾರತೀಯ ಸಾಹಿತ್ಯವನ್ನು ಅಧ್ಯಯನ ಮಾಡುತ್ತಿದ್ದರು. ನಿರಂತರ ಕಲಿಕೆ ಹೀಗಿರಬೇಕು~ ಎಂದು ತಿಳಿಸಿದರು.

`ಹಿಂದಿನಂತೆ ಉತ್ತಮ ಗುರುಗಳು ಈಗ ಲಭಿಸುತ್ತಿಲ್ಲ. ಮೇಧಾವಿಗಳು ವಿದ್ಯಾರ್ಥಿಗಳಿಂದ ದೂರ ಉಳಿಯುತ್ತಿದ್ದಾರೆ. ಕೆಲವರು ರಾಜಕೀಯ ಪ್ರಭಾವ ಬಳಸಿ ಬೋಧಕ ವೃತ್ತಿ ಪಡೆಯುತ್ತಿರುವುದು ದುರದೃಷ್ಟಕರ ಬೆಳವಣಿಗೆ~ ಎಂದು ವಿಷಾದ ವ್ಯಕ್ತಪಡಿಸಿದರು.

`ಶಿಕ್ಷಕರು ನಿರಂತರವಾಗಿ ಬೋಧನೆಯಲ್ಲಿ ತೊಡಗಿದ್ದಾಗ ಮಾತ್ರ ಜೀವಂತವಾಗಿರುತ್ತಾರೆ. ನನ್ನ ಅತ್ಯಂತ ಪ್ರಿಯವಾದ ಆಯ್ಕೆ ಎಂದರೆ ಬೋಧನೆ. ಕೊಟ್ಟಾಯಂನ ಮಹಾತ್ಮಗಾಂಧಿ ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿದ್ದ ಸಂದರ್ಭದಲ್ಲಿ ಕೂಡ ಕಾಲೇಜುಗಳಿಗೆ ತೆರಳಿ ಪಾಠ ಮಾಡುತ್ತಿದ್ದೆ. ಹಾಗಾಗಿಯೇ ವಿಶ್ವವಿದ್ಯಾಲಯದಲ್ಲಿ ಲವಲವಿಕೆಯಿಂದ ಆಡಳಿತ ನಡೆಸುವುದು ಸಾಧ್ಯವಾಯಿತು~ ಎಂದರು.

`ಗಾಂಧಿವಾದಿ, ಧಾರ್ಮಿಕ ನಾಯಕ ದಲೈಲಾಮ ಅವರಿಗೆ ವಿವಿ ಈ ಬಾರಿ ಗೌರವ ಡಾಕ್ಟರೇಟ್ ನೀಡಿ ತನ್ನ ಘನತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಪ್ಯಾಲಸ್ಟೇನ್‌ನಂತಹ ದೇಶಗಳು ಸ್ವಾತಂತ್ರ್ಯಕ್ಕಾಗಿ ಹಿಂಸಾತ್ಮಕ ಮಾರ್ಗ ಹಿಡಿದಿರುವಾಗ ದಲೈಲಾಮ ಟಿಬೆಟ್‌ಗಾಗಿ ಅಹಿಂಸಾತ್ಮಕ ಹೋರಾಟ ನಡೆಸಿದರು. ಅವರ ಸತ್ಯದ ಹಾದಿಗೆ ಜಯ ದೊರೆಯುತ್ತದೆ ಎಂಬ ನಂಬಿಕೆ ನನ್ನದು~ ಎಂದು ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ವಿವಿಯ ಪ್ರಾದೇಶಿಕ ನಿರ್ದೇಶಕ ಡಾ.ಎಂ.ಎಸ್.ಪಾರ್ಥಸಾರಥಿ, `ದೇಶದಲ್ಲಿ ಒಟ್ಟು 3 ಲಕ್ಷ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಒಟ್ಟು 70 ಲಕ್ಷ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ. ರಾಜ್ಯದಲ್ಲಿ 2460 ವಿದ್ಯಾರ್ಥಿಗಳಿಗೆ ಪದವಿ ಹಾಗೂ ಡಿಪ್ಲೊಮಾ ಪ್ರಮಾಣಪತ್ರ ನೀಡಲಾಗುತ್ತಿದೆ. ಎಂದರು.

`ಈ ವರ್ಷ ಒಟ್ಟು ಮೂರು ಘಟಿಕೋತ್ಸವಗಳನ್ನು ವಿವಿ ವತಿಯಿಂದ ನಡೆಸಲಾಗಿದೆ. ಪರೀಕ್ಷೆ ಮುಗಿದ ಕೇವಲ 45 ದಿನಗಳ ಒಳಗಾಗಿ ಫಲಿತಾಂಶ ನೀಡಲು ಸಾಧ್ಯ ಎಂಬುದನ್ನು ಈ ಘಟಿಕೋತ್ಸವಗಳು ಸಾಬೀತುಪಡಿಸಿವೆ.

ರಾಜ್ಯದಿಂದ ವಿದ್ಯಾರ್ಥಿನಿಯರಾದ ಅನುಭಾ ಝಾ ಮತ್ತು ಪರುಲ್ ಚವಾಣ್ ಚಿನ್ನದ ಪದಕ ಪಡೆದಿದ್ದಾರೆ. ಒಟ್ಟು 258 ವಿದ್ಯಾರ್ಥಿಗಳಿಗೆ ಖುದ್ದಾಗಿ ಸಮಾರಂಭದಲ್ಲಿ ಪ್ರಮಾಣಪತ್ರ ಸ್ವೀಕರಿಸಿದ್ದಾರೆ~ ಎಂದು ತಿಳಿಸಿದರು.

ಇದೇ ವೇಳೆ ನವದೆಹಲಿಯಲ್ಲಿ ನಡೆದ ಘಟಿಕೋತ್ಸವದ ನೇರ ಪ್ರಸಾರ ಮಾಡಲಾಯಿತು. ವಿವಿಯ ಪ್ರಾದೇಶಿಕ ಸಹಾಯಕ ನಿರ್ದೇಶಕರಾದ ಜಿ.ಎಚ್.ಇಮ್ರಾಪುರ, ಪಿ.ಎಂ.ಸೌಜನ್ಯ, ವಿವಿಯ ಬಿಜಾಪುರ ಕೇಂದ್ರದ ಪ್ರಾದೇಶಿಕ ನಿರ್ದೇಶಕಿ ಡಾ.ಜೆ.ದೊರೋತಿ, ಸಹಾಯಕ ರಿಜಿಸ್ಟ್ರಾರ್ ಜೆ.ತಿರುಮುರುಗನ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT