ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ಹಿತ– ಸಣ್ಣ ಹಿಡುವಳಿದಾರರಿಗೆ ಕಷ್ಟ

ಆರ್ಥಿಕ ಸುಧಾರಣೆಗೆ 25
Last Updated 12 ಆಗಸ್ಟ್ 2016, 7:09 IST
ಅಕ್ಷರ ಗಾತ್ರ

ಜಾಗತೀಕರಣದಿಂದ ಕೃಷಿ ವಲಯದಲ್ಲಿ ಒಳ್ಳೆಯದ್ದು ಮತ್ತು ಕೆಟ್ಟದ್ದು ಎರಡೂ ಆಗಿವೆ. ಆದರೆ, ದೇಶದಲ್ಲಿ ಸಣ್ಣ ಹಿಡುವಳಿದಾರರ ಸಂಖ್ಯೆ ಹೆಚ್ಚು ಇರುವ ಕಾರಣ ಅವರ ಮೇಲೆ ದೊಡ್ಡ ಮಟ್ಟದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.  ಇದೇ ವೇಳೆಗೆ ಜಾಗತೀಕರಣ ದೇಶಕ್ಕೆ ಹಿತಕರವಾಗಿರುವ ಅನುಭೂತಿಯನ್ನೂ  ನೀಡುತ್ತಿದೆ.

ಜಾಗತೀಕರಣವೆಂದರೆ ಒಂದು ದೃಷ್ಟಿಯಲ್ಲಿ ವಾಣಿಜ್ಯೀಕರಣ. ಕೃಷಿ, ಪುರಾತನ ಕಾಲದಿಂದ ಮಾಡಿಕೊಂಡ ಬಂದ ಕಸಬು. ಮೊದಲು ಹೇಗಿತ್ತೆಂದರೆ ರೈತ ತನ್ನ ಉಪಯೋಗಕ್ಕೆ ಏನು ಬೇಕು ಅಷ್ಟನ್ನು ಬೆಳೆದುಕೊಳ್ಳುತ್ತಿದ್ದ. ಆದರೆ, ಕಳೆದ ಎರಡು ದಶಕಗಳಿಂದ ಕೃಷಿ ವಲಯದಲ್ಲಿ ಬಹಳಷ್ಟು ಬದಲಾವಣೆ  ಆಗಿದ್ದು, ಕೃಷಿ ವ್ಯಾಪಾರೀಕರಣದ ಆಯಾಮ ಪಡೆದುಕೊಂಡಿದೆ. ಈಗ ರೈತ ತನಗೆ ಏನು ಬೇಕು ಎನ್ನುವುದಕ್ಕಿಂತ ಹೆಚ್ಚಿನ ಲಾಭ ಯಾವುದರಲ್ಲಿ ಇದೆಯೋ ಅಂತಹ ವಾಣಿಜ್ಯ ಬೆಳೆಯನ್ನು ಪೈಪೋಟಿ ಮೇಲೆ ಬೆಳೆಯ ತೊಡಗಿದ್ದಾನೆ.

ಈ ಪ್ರಕ್ರಿಯೆಯಲ್ಲಿ ರೈತ ಏನು ಮಾಡುತ್ತಾನೆಂದರೆ ಹೋದ ವರ್ಷ ಯಾವ ಬೆಳೆಗೆ ಹೆಚ್ಚಿನ ಬೆಲೆ ಬಂದಿತ್ತೋ ಅದಕ್ಕೆ ಈ ವರ್ಷವೂ ಹೆಚ್ಚಿನ ಬೆಲೆ ದೊರೆಯಬಹುದು ಎಂಬ ಆಸೆಯಿಂದ ಸಾಲಸೋಲ ಮಾಡಿ ಆ ಬೆಳೆಯನ್ನೆ ಬೆಳೆಯುತ್ತಾನೆ. ಆದರೆ, ದೇಶದಲ್ಲಿ ಏನಾಗಿದೆ ಎಂದರೆ ಬೀಜದಿಂದ ಹಿಡಿದು ಬೆಳೆಯ ಮೌಲ್ಯವರ್ಧನೆ, ಮಾರುಕಟ್ಟೆ ಹೊಂದಾಣಿಕೆಯು (ಮಾರ್ಕೆಟ್‌ ಲಿಂಕೇಜ್‌)  ಸಣ್ಣ ಮತ್ತು ದೊಡ್ಡ ವ್ಯಾಪಾರಿಗಳಿಂದ ಹಿಡಿದು, ರಫ್ತು ಮಾಡುವ ಸಂಘ– ಸಂಸ್ಥೆಗಳ ಹಿಡಿತದಲ್ಲಿದೆ.

ಆದ್ದರಿಂದ ಸರ್ಕಾರಗಳಿಗೆ ಬೆಳೆಗೆ ವೈಜ್ಞಾನಿಕವಾದ ಮತ್ತು ನಿರ್ದಿಷ್ಟ ಬೆಲೆ ನಿಗದಿ ಮಾಡುವ ಅಧಿಕಾರ ಇಲ್ಲ. ಆದ ಕಾರಣ ರೈತನಿಗೆ ಜಾಸ್ತಿ ಬೆಳೆದರೂ ನಷ್ಟ ವಾಗುತ್ತಿದೆ. ಕಡಿಮೆ ಬೆಳೆದರೂ ನಷ್ಟವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಜಾಗತೀಕರಣ.

ಈ ನಿಟ್ಟಿನಲ್ಲಿ ಎರಡು ಉದಾಹರಣೆಗಳನ್ನು ನೋಡೋಣ: ಹೋದ ವರ್ಷ ತೊಗರಿ ದರ ಒಂದು ಕ್ವಿಂಟಲ್‌ಗೆ ₹ 10 ಸಾವಿರದವರೆಗೂ ಏರಿಕೆ ಕಂಡಿತು. ಏಕೆಂದರೆ ಅದರ ಹಿಂದಿನ ವರ್ಷ ಬಿ.ಟಿ. ಹತ್ತಿ ಜಾಸ್ತಿ ಬೆಳೆದು, ತೊಗರಿ ಬೆಳೆ ಪ್ರಮಾಣ ಕಡಿಮೆ ಇತ್ತು. ಜೊತೆಗೆ ಮಳೆ ಪ್ರಮಾಣವು ಕಡಿಮೆ ಇದ್ದ ಕಾರಣ  ತೊಗರಿ ಇಳುವರಿಯೂ ಕಡಿಮೆ ಇತ್ತು. ಆದ್ದರಿಂದ ಒಮ್ಮಿಂದೊಮ್ಮೆಲೆ ತೊಗರಿ ದರ ಏರಿತು.

ರೈತನಿಂದ ಪ್ರತಿ ಕ್ವಿಂಟಲ್‌ಗೆ ₹ 5– 6 ಸಾವಿರ ದರಕ್ಕೆ ತೊಗರಿ ಖರೀದಿ ಮಾಡಿದ ಮಧ್ಯವರ್ತಿಗಳು ಅದನ್ನು ತಮ್ಮ ತಮ್ಮ ತಾಕತ್ತಿಗೆ ತಕ್ಕಂತೆ ದಾಸ್ತಾನು ಮಾಡಿ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿದರು. ಇದರಿಂದ ದರ ₹ 10 ಸಾವಿರದ ವರೆಗೆ ಏರಿಕೆ ಆಯಿತು. ಮಧ್ಯವರ್ತಿಗಳ ಈ ಉಪಟಳದಿಂದ  ಕೇಂದ್ರ ಸರ್ಕಾರ ಪಾರಾಗಬೇಕಿತ್ತು. ಈ ಸಂದರ್ಭದಲ್ಲಿ ಜಾಗತೀಕರಣದ ಅನುಕೂಲತೆ ಕೇಂದ್ರ ಸರ್ಕಾರಕ್ಕೆ ಒದಗಿಬಂತು.

50 ಲಕ್ಷ ಕ್ವಿಂಟಲ್‌ ತೊಗರಿಯನ್ನು ಆಮದು ಮಾಡಿಕೊಂಡಿತು. ಸಾಗಣೆ ವೆಚ್ಚವೂ ಸೇರಿದಂತೆ ಒಂದು ಕ್ವಿಟಂಲ್‌ಗೆ ₹9,300 ತಗುಲಿತು. ಇದರಿಂದ ಮಧ್ಯವರ್ತಿಗಳಿಗೆ ಕಡಿವಾಣ ಬಿತ್ತು. ಗ್ರಾಹಕನಿಗೆ ಲಾಭ ಆಯಿತು. ಆದರೆ, ರೈತನಿಗೆ ಯಾವುದೇ ಪ್ರಯೋಜನ ಆಗಲಿಲ್ಲ.

ಪ್ರತಿನಿತ್ಯ ಬಹುಪಾಲು ಜನರು ಬಳಕೆ ಮಾಡುವ ಈರುಳ್ಳಿಗೆ ಸರ್ಕಾರಗಳನ್ನೆ ಬದಲಿಸುವ ಶಕ್ತಿ ಇದೆ. ದೇಶದ ಒಟ್ಟು ಈರುಳ್ಳಿ ಬೆಳೆಯುವ ಪ್ರಮಾಣದಲ್ಲಿ ಶೇ65ರಷ್ಟನ್ನು ಮಹಾರಾಷ್ಟ್ರ, ಗುಜರಾತ್‌ ಮತ್ತು ಕರ್ನಾಟಕಗಳಲ್ಲಿ  ಬೆಳೆಯಲಾಗುತ್ತದೆ. ಈ ರಾಜ್ಯಗಳಲ್ಲಿ ಉತ್ಪಾದನೆ ಕೈಕೊಟ್ಟರೆ ದೇಶದಲ್ಲಿ ಅಲ್ಲೋಲ ಕಲ್ಲೋಲವೇ ಆಗುತ್ತದೆ.  2013–14ರಲ್ಲಿ ಹೀಗೆಯೇ ಆಯಿತು.

ಈ ರಾಜ್ಯಗಳಲ್ಲಿ ಈರುಳ್ಳಿ ಉತ್ಪಾದನೆ ಬಹಳಷ್ಟು ಕಡಿಮೆ ಆಯಿತು. ಅದರ ಸುಳಿವೂ ಮೊದಲೇ ಇತ್ತು. ಆದರೆ, ಜಾಗತೀಕರಣದ ಹಿನ್ನೆಲೆಯಲ್ಲಿ ಆದ ದ್ವಿಪಕ್ಷೀಯ ಒಪ್ಪಂದದಂತೆ ನಮ್ಮ ದೇಶದಿಂದ ಬ್ರೆಜಿಲ್‌, ಪಾಕಿಸ್ತಾನ, ಕೊಲ್ಲಿ ರಾಷ್ಟ್ರಗಳಿಗೆ ನಿಗದಿತ ಪ್ರಮಾಣದಲ್ಲಿ ಈರುಳ್ಳಿಯನ್ನು ರಫ್ತು ಮಾಡಲೇ ಬೇಕಾಗಿತ್ತು. 2012–13ರಲ್ಲಿ ಈರುಳ್ಳಿ ದಾಸ್ತಾನು ಹೆಚ್ಚಿದ್ದ ಕಾರಣ 2013ರ ಜನವರಿಯಲ್ಲಿ 50 ಲಕ್ಷ ಕ್ವಿಂಟಲ್‌ ರಫ್ತು ಆಯಿತು.

ಆದರೆ, ಇತ್ತ ಕಡೆ ಈರುಳ್ಳಿ ಇಳುವರಿ ಕುಸಿದ ಕಾರಣ ಮಾರುಕಟ್ಟೆಗೆ ಈರುಳ್ಳಿ ಆವಕ ಕಡಿಮೆಯಾಗಿ, ಫೆಬ್ರುವರಿ ತಿಂಗಳಲ್ಲೇ ದೇಶದೆಲ್ಲೆಡೆ ಅಭಾವ ಕಾಣಿಸಿತು. ಈರುಳ್ಳಿ ದರ ಪ್ರತಿ ಕೆ.ಜಿ.ಗೆ ₹120ರವರೆಗೂ ಹೋಯಿತು. ಆದ್ದರಿಂದ ಕೇಂದ್ರ ಸರ್ಕಾರ ಅನಿವಾರ್ಯವಾಗಿ ಬೇರೆ ದೇಶದಿಂದ ಈರುಳ್ಳಿ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂತು.

ದುರಂತವೆಂದರೆ, ಎರಡು ತಿಂಗಳ ಹಿಂದೆ ರಫ್ತು ಮಾಡಿದ್ದ ದರಕ್ಕಿಂತ ಒಂದೂವರೆ ಪಟ್ಟು ಹೆಚ್ಚಿನ ದರ ನೀಡಿ 40 ಲಕ್ಷ ಕ್ವಿಂಟಲ್‌ ಈರುಳ್ಳಿಯನ್ನು ಖರೀದಿ ಮಾಡಿಕೊಳ್ಳಬೇಕಾಯಿತು. ಕೃಷಿ ಸಚಿವಾಲಯ ಮತ್ತು ವಾಣಿಜ್ಯ ಸಚಿವಾಲಯಗಳ ಮಧ್ಯೆ ಹೊಂದಾಣಿಕೆ ಇಲ್ಲದ ಕಾರಣ ರೈತರು ಮತ್ತು ಗ್ರಾಹಕರು ಕಷ್ಟ ಅನುಭವಿಸಬೇಕಾಯಿತು. ಈ ಎರಡು ಉದಾಹರಣೆಗಳನ್ನು ನೋಡಿದರೆ ಜಾಗತೀಕರಣದಿಂದ ತೊಂದರೆಯೂ ಆಗುತ್ತಿದೆ. ಅನುಕೂಲವೂ ಆಗುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ.

ಜಾಗತೀಕರಣದ ಪ್ರಭಾವವನ್ನು ಹೆಚ್ಚುಕಡಿಮೆ ನಮ್ಮ ದೇಶದಂತೆಯೇ ಹವಾಮಾನ ಇರುವ ಮತ್ತು ನಮಗಿಂತ ಹೆಚ್ಚು ಜನಸಾಂದ್ರತೆ ಇರುವ ನೆರೆಯ ಚೀನಾ ಹೇಗೆ ನಿಭಾಯಿಸುತ್ತಿದೆ ಎಂಬುದನ್ನು ನೋಡೋಣ: ಚೀನಾದಲ್ಲಿ ಯಾವ ಬೆಳೆ ಯಾವ ಪ್ರದೇಶಕ್ಕೆ ಸೂಕ್ತ ಎನ್ನುವುದನ್ನು ವೈಜ್ಞಾನಿಕವಾಗಿ ಗುರುತಿಸಲಾಗಿದೆ. ಗುರುತಿಸಿರುವ ಪ್ರದೇಶವನ್ನು 1.25 ಲಕ್ಷ ಎಕರೆಗೆ ಒಂದೊಂದು ಪ್ರಾಂತ್ಯಗಳನ್ನಾಗಿ ವಿಂಗಡಿಸಲಾಗಿದೆ.

ಈ ಪ್ರಾಂತ್ಯಗಳಿಗೆ ಯಾವ ಬೆಳೆ ಸೂಕ್ತ ಎಂದು ನಿಗದಿ ಮಾಡಲಾಗಿದೆಯೋ ಅಂತಹದ್ದನ್ನೆ ರೈತ ಬೆಳೆಯಬೇಕು. ಇದನ್ನು ರೈತರ ಸಂಘಗಳೇ ನಿರ್ಧಾರ ಮಾಡುತ್ತವೆ ಮತ್ತು ಸರ್ಕಾರದಿಂದ ಬೆಳೆ ಬೆಳೆಯಲು ಲೈಸೆನ್ಸ್‌ ನೀಡಲಾಗುತ್ತದೆ ಮತ್ತು ಬೆಳೆಗಳ ಬಿತ್ತನೆಯ ವೇಳೆಯಲ್ಲಿ  ಕನಿಷ್ಠ  ಬೆಲೆಯನ್ನು  ನಿಗದಿ ಮಾಡಲಾಗುತ್ತದೆ. ಇದರಿಂದ ರೈತರಿಗೆ ಅನ್ಯಾಯವಾಗುವುದಿಲ್ಲ. ಹಾಗಂತ ಅಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲವೆಂದಲ್ಲ, ಆದರೆ, ಅವರಿಗೆ ದೊರಕುವ ಲಾಭದ ಪ್ರಮಾಣ ಬಹಳ ಕಡಿಮೆ.

ಚೀನಾದಲ್ಲಿ 1.14 ಕೋಟಿ ಹೆಕ್ಟೇರ್‌ ಕೃಷಿ ಪ್ರದೇಶ ಇದೆ. ವಾರ್ಷಿಕವಾಗಿ 4.50 ಕೋಟಿ ಟನ್‌ ಆಹಾರ ಉತ್ಪಾದನೆ ಮಾಡುತ್ತಿದ್ದಾರೆ. ಇದಕ್ಕೆ ವ್ಯವಸ್ಥಿತ ಮತ್ತು ವೈಜ್ಞಾನಿಕವಾದ ಯೋಚನೆ, ಯೋಜನೆ ಮತ್ತು ಅದರ ಅನುಷ್ಠಾನ ಆಗುತ್ತಿರುವುದು ಕಾರಣ.

ಭಾರತದಲ್ಲಿ 1.42 ಕೋಟಿ ಹೆಕ್ಟೇರ್‌ ಕೃಷಿ ಭೂಮಿ ಇದೆ. ವಾರ್ಷಿಕವಾಗಿ 2.65 ಕೋಟಿ ಟನ್‌ ಆಹಾರ ಉತ್ಪಾದನೆ ಮಾಡುತ್ತಿದ್ದೇವೆ. ನಮ್ಮಲ್ಲಿ ಕೃಷಿ ನೀತಿ ವಿಫಲವಾಗಲು ಮುಖ್ಯಕಾರಣ ಮೊದಲೇ ಹೇಳಿದಂತೆ ಸಚಿವಾಲಯಗಳ ನಡುವೆ ತಾಳಮೇಳ ಇಲ್ಲದಿರುವುದು, ಮಾರುಕಟ್ಟೆ ಸರ್ಕಾರದ ಹಿಡಿತದಿಂದ ಹೊರಗಿರುವುದು ಮತ್ತು ಬೆಳೆಗಳಿಗೆ ವೈಜ್ಞಾನಿಕ ಬೆಲೆ ಇಲ್ಲದ ಕಾರಣ ರೈತರು ಸರ್ಕಾರದ ಕೃಷಿ ಮಾರ್ಗದರ್ಶಿಯನ್ನು ಪರಿಪೂರ್ಣವಾಗಿ ಪಾಲಿಸದಿರುವುದು ಮುಖ್ಯ ಕಾರಣ ಎನ್ನಬಹುದು.

ನಮ್ಮ ದೇಶದಲ್ಲೂ ಬೆಳೆಗಳಿಗೆ ಬೆಲೆ ನಿಗದಿ ಮಾಡುವುದು ಕಷ್ಟವೇನಲ್ಲ.  ಆದರೆ, ಎಷ್ಟು ಬೆಳೆ ಬೆಳೆಯುತ್ತೇವೆ ಎಂಬುದು ಪ್ರತಿಶತ 85ರಷ್ಟಾದರೂ ಮೊದಲೆ ಗೊತ್ತಾಗಬೇಕು. ಯಾವ ಬೆಳೆಯನ್ನು ಎಷ್ಟು ಪ್ರಮಾಣದಲ್ಲಿ ಬೆಳೆಯಬೇಕು ಎಂಬುದಕ್ಕೆ ಕೃಷಿ ನೀತಿ ಇದೆ. 

ಆದರೆ, ಅದು ಬರೀ ಪುಸ್ತಕಕ್ಕೆ ಸೀಮಿತವಾಗಿದೆ. ಆದರೆ, ಇದಕ್ಕೆ ಅಪವಾದ ಎಂಬಂತೆ  ಪಂಜಾಬ್‌ನಲ್ಲಿ ಮುಂಗಾರು ಹಂಗಾಮಿನಲ್ಲಿ ಮಾತ್ರ ಭತ್ತ ಬೆಳೆಯಬೇಕು ಎಂಬ ನೀತಿ ಇದೆ. ಅದನ್ನು ಆ ರಾಜ್ಯದ ಎಲ್ಲಾ ರೈತರು ಪಾಲಿಸುತ್ತಿದ್ದಾರೆ.

ಜಾಗತೀಕರಣದ ಲಾಭ ಪಡೆಯುವಲ್ಲಿ ನಾವು ಹೇಗೆ ಸೋಲುತ್ತಿದ್ದೇವೆ ಎಂಬುದಕ್ಕೆ ಇನ್ನೊಂದು ಉದಾಹರಣೆಯಂದರೆ, ಎರಡೂವರೆ ವರ್ಷದ ಹಿಂದೆ ದೆಹಲಿಯಲ್ಲಿ ಭತ್ತದ ಬಗ್ಗೆ ಒಂದು ಅಂತರರಾಷ್ಟ್ರೀಯ ಮಟ್ಟದ ಸೆಮಿನಾರ್‌ ನಡೆಯಿತು. ನಾನೂ ಭಾಗವಹಿಸಿದ್ದೆ. ಆಗಿನ ಕೃಷಿ ಸಚಿವ ಶರದ್‌ ಪವಾರ್ ಅವರು ಅಕ್ಕಿ ರಫ್ತಿನ ಸಾಧನೆ ಮತ್ತು ಅದರಿಂದ ದೇಶಕ್ಕೆ ಆದ ಲಾಭವನ್ನು ವಿವರಿಸಿದರು. ಸಭೆಯಲ್ಲಿ ಚಪ್ಪಾಳೆ ಸದ್ದು. 

ಆದರೆ, ನನ್ನ ಪಕ್ಕದಲ್ಲಿ ಕುಳಿತಿದ್ದ ಎಫ್ಎಒ ಪ್ರತಿನಿಧಿ  ಪೀಟರ್‌ ಕೆನ್‌ಮೊರ್‌ ಮೆಲ್ಲಗೆ ಕಿವಿಯಲ್ಲಿ ಉಸುರಿದ: ‘ಪಾಟೀಲ್‌, ದ್ವಿದಳ ಧಾನ್ಯ ರಫ್ತು ಮಾಡುವ ಬದಲಿಗೆ ಅಕ್ಕಿ ರಫ್ತು ಹೆಚ್ಚಳ ಮಾಡಿದ್ದು ಸರಿ ಎನಿಸುವುದೇ?’. ನಾನು ಹೇಳಿದೆ: ‘ದೇಶದಲ್ಲಿ ಭತ್ತದ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ. ಅಕ್ಕಿ ರಫ್ತು ಮಾಡುತ್ತಿದ್ದಾರೆ ತಪ್ಪೇನು ಎಂದೆ’.

‘ನೀವು (ಭಾರತೀಯರು) ಅಕ್ಕಿಯನ್ನು ರಫ್ತು ಮಾಡುತ್ತಿಲ್ಲ, ನೀರನ್ನು ರಫ್ತು ಮಾಡುತ್ತಿದ್ದೀರಿ. ಒಂದು ಕೆ.ಜಿ. ಅಕ್ಕಿ ಮಾರುಕಟ್ಟೆಗೆ ಬರಬೇಕಾದರೆ 4,500 ಲೀಟರ್‌ ನೀರು ಬೇಕು. ಅದೇ ಒಂದು ಕೆ.ಜಿ. ದ್ವಿದಳ ಧಾನ್ಯ ಉತ್ಪಾದನೆ ಮಾಡಲು 450 ಲೀಟರ್‌ ನೀರು ಸಾಕು. ಹಾಗಾಗಿ ನೀವು ನಿಮ್ಮ ಕೃಷಿ ನೀತಿಯನ್ನು ಬದಲಿಸಿಕೊಳ್ಳುವುದು ಕ್ಷೇಮ’ ಎಂದ.

‘ಆದರೆ, ಸರ್ಕಾರ ಕೃಷಿ ನೀತಿಯನ್ನು ಬದಲಾಯಿಸಿ ಬಹುಸಂಖ್ಯೆಯಲ್ಲಿ ಮತ್ತು ಬಲಾಢ್ಯರೂ ಆಗಿರುವ ಭತ್ತದ ಬೆಳೆಗಾರರನ್ನು ಎದುರುಹಾಕಿಕೊಳ್ಳುವುದು ಕಷ್ಟಸಾಧ್ಯ’ ಎಂದು ನಾನು ಮರುಜವಾಬು ನೀಡಿದೆ. ‘ಹಾಗಿದ್ದರೆ ನಿಮ್ಮ ಕೃಷಿ ನೀತಿಗೆ ಹೆಚ್ಚಿನ ಶಕ್ತಿ ಅವಶ್ಯಕವಿದೆ’ ಎಂದು ಪೀಟರ್‌ ಕೆನ್‌ಮೊರ್‌ ಒಂದೇ ಮಾತಿಗೆ ಸರ್ಕಾರದ ಮೂತಿ ತಿವಿದ.

ಒಟ್ಟಾರೆ ರೈತರು ಬೆಳೆದ ಬೆಳೆಗೆ ಎಲ್ಲಿಯವರಿಗೂ ನಿರ್ದಿಷ್ಟವಾದ ಅಥವಾ ಲಾಭ ಕೊಡುವಂತಹ ಬೆಲೆ ಸಿಗುವುದಿಲ್ಲವೋ ಅಲ್ಲಿಯವರೆಗೆ ಜಾಗತೀಕರಣ ಅಥವಾ ಬೇರೆ ಯಾವುದೇ ‘ಕರಣ’ ಬಂದರೂ ದೇಶಕ್ಕೆ ಅದು ಸೂಕ್ತವಾಗಲಾರದು.

ಆದರೆ, ಜಾಗತೀಕರಣವನ್ನು ದೇಶ ಒಪ್ಪಿಕೊಂಡು, ಅಪ್ಪಿಕೊಂಡು ಆಗಿದೆ. ಇಂತಹ ಸಂದರ್ಭದಲ್ಲಿ ರೈತ ಏನು ಮಾಡಬೇಕು ಎಂಬ ಪ್ರಶ್ನೆ ಏಳುವುದು ಸಹಜ. ಇದಕ್ಕೆ ಉತ್ತರವೆಂದರೆ ಸಮಗ್ರ ಕೃಷಿ ಪದ್ಧತಿ. ಜಮೀನನ್ನು ಸಮಪರ್ಕವಾಗಿ ವಿಂಗಡಣೆ ಮಾಡಿ ನಾಲ್ಕೈದು ಬೆಳೆ ಬೆಳೆದುಕೊಂಡರೆ ಯಾವುದಾದರೂ ಒಂದು ಬೆಳೆ ರೈತನ ಕೈಹಿಡಿಯುತ್ತದೆ.

ನಿವ್ವಳ ಆದಾಯ ಸುಸ್ಥಿರವಾಗಿ ನಷ್ಟ ಅಥವಾ ಸಾಲಸೋಲದ ಸಂಕೋಲೆಯ ಒತ್ತಡದಿಂದ ರೈತ ಆತ್ಮಹತ್ಯೆ ಹಾದಿ ಹಿಡಿಯುವುದು ತಪ್ಪುತ್ತದೆ. ಭಾರತ ಜಾಗತೀಕರಣಕ್ಕೆ ಹೋಗಿದ್ದೇ ದೇಶದ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಸ್ಥಾನ ದೊರೆಯುತ್ತದೆ. ಮತ್ತು ಇದರಿಂದ ರೈತರ  ಉದ್ದಿಮೆದಾರರ, ಮಾರಾಟಗಾರರ ಆರ್ಥಿಕ ಸ್ಥಿತಿ ವೃದ್ಧಿ ಆಗುತ್ತದೆ ಎಂಬ ಕಾರಣಕ್ಕೆ. ಇದರಿಂದ ಹಲವು ಬದಲಾವಣೆಗಳೂ ಆಗಿವೆ.

ರೈತರು ಇಂದು ಹೆಚ್ಚಾಗಿ ಆಹಾರ ಬೆಳೆಗಳಿಗಿಂತ ಹೆಚ್ಚು ಲಾಭ ತಂದುಕೊಡುವಂತಹ ವಾಣಿಜ್ಯ ಬೆಳೆಗಳತ್ತ ಮುಖಮಾಡಿದ್ದಾರೆ. ಇದನ್ನು ನಿಯಂತ್ರಿಸದಿದ್ದರೆ ಭವಿಷ್ಯದಲ್ಲಿ ಆಹಾರದ ಕೊರತೆ ಎದುರಾಗುವ ಆತಂಕ ಕೂಡ ಬರಬಹುದು.

ಈ ಪ್ರಶ್ನೆ ಮುಂದು ಮಾಡಿದಾಗ ರೈತನ ಮೂಲಭೂತ ಪ್ರಶ್ನೆಯಾದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಧುತ್ತನೆ ನಿಲ್ಲುತ್ತದೆ. ಹಾಗಿದ್ದರೆ ಸರ್ಕಾರಗಳು, ಕೃಷಿ ವಿಶ್ವವಿದ್ಯಾಲಯಗಳು ರೈತನ ಮನೋಧರ್ಮವನ್ನು ತಿಳಿದುಕೊಳ್ಳುವಲ್ಲಿ ಸೋತಿವೆಯೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಉತ್ತರ ಬಹುಮಟ್ಟಿಗೆ ಹೌದು ಎಂದೇ ಹೇಳಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT