ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಅಖಂಡತೆಗೆ ಸೈಕಲ್ ಯಾತ್ರೆ

Last Updated 22 ಫೆಬ್ರುವರಿ 2012, 10:15 IST
ಅಕ್ಷರ ಗಾತ್ರ

ಸುರತ್ಕಲ್: `ದೇಶ ಅಖಂಡವಾಗಿ ಉಳಿಯಬೇಕು. ಸ್ವಾತಂತ್ರ್ಯ ಸಂದರ್ಭದಲ್ಲಿ ಆದ ವಿಭಜನೆ ಕಹಿ ಇತಿಹಾಸವಾಗಿದ್ದು ಅಖಂಡ ಭಾರತದ ಕನಸು ನನಸಾಗಬೇಕು~ ಎಂಬ ಬಯಕೆಯನ್ನು ಹೊತ್ತು ಸೈಕಲ್ ಏರಿದವರು  ಛತ್ತೀಸಘಡದ 68 ವರ್ಷದ ಅಜ್ಜ ಬಾಬುಲಾಲ್ ಕಂಕ್ರವಾಲಾ.

ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರಿಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಲು ಅವರು ದೇಶವಿಡೀ ಸೈಕಲ್ ತುಳಿಯುತ್ತಿದ್ದಾರೆ. ಯೌವನದಲ್ಲಿದ್ದಾಗ ಇಂದಿರಾಗಾಂಧಿ ಅವರನ್ನು ಭೇಟಿಯಾಗಿದ್ದ ಕಂಕ್ರವಾಲಾ, ದೇಶದ ಅಖಂಡತೆಯ ಕನಸನ್ನು ಇಂದಿರಾಗಾಂಧಿ ಅವರಿಗೆ ಮನವರಿಕೆ ಮಾಡಿಸಿದ್ದರು. ದೇಶದಲ್ಲಿ ಶಾಂತಿ ನೆಲೆಸಬೇಕು ಬಾವೈಕ್ಯ ಮೆರೆಯಬೇಕು. ಈ ನಿಟ್ಟಿನಲ್ಲಿ ತಾನು ಸೈಕಲ್ ಮೂಲಕ ದೇಶ ಸುತ್ತುವುದಕ್ಕೆ ಸಿದ್ಧ ಎಂದು ಮಾತು ನೀಡಿದ್ದರು. ಆ ಮಾತಿಗೆ ಬದ್ಧರಾದ ಅವರು ಇಳಿವಯಸ್ಸಿನಲ್ಲಿ ಸೈಕಲ್ ಏರಿದ್ದಾರೆ. ಅವರ ಉತ್ಸಾಹ ಯುವಕರನ್ನೂ ನಾಚಿಸುವಂತಿದೆ.

ಸೈಕಲ್‌ಗೆ ಮೈಕ್ ಕಟ್ಟಲಾಗಿದೆ. ಮೈಕ್‌ನಲ್ಲಿ ದೇಶದ ಇಂದಿನ ಸ್ಥಿತಿಯ ಬಗ್ಗೆ, ದೇಶದ ಭವಿಷ್ಯದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಾರೆ. ಜನಸಂದಣಿಯಿರುವಲ್ಲಿ ಸೈಕಲ್ ನಿಲ್ಲಿಸಿ ಜನತೆಗೆ ತನ್ನ ಯಾತ್ರೆಯ ಉದ್ದೇಶ ತಿಳಿಸುತ್ತಾರೆ. ಹಿಂದೂ, ಮುಸ್ಲಿಂ, ಕ್ರೈಸ್ತರ ನಡುವೆ ಸಾಮರಸ್ಯ ಮೂಡುವಂತಾಗಬೇಕು ಎನ್ನುತ್ತಾರೆ.

ಮೂಲತ: ಛತ್ತಿಸ್‌ಘಡ ರಾಜ್ಯದ ರಾಯಗಡ ಜಿಲ್ಲೆಯ ಕುರ‌್ಸಿಯಾ ಅವರ ಊರು. ಸುಮಾರು ಮೂರು ತಿಂಗಳ ಹಿಂದೆ ಛತ್ತಿಸಘಡದಿಂದ ಸೈಕಲ್ ಸವಾರಿ ಆರಂಭಿಸಿದ ಅವರು ಸುರತ್ಕಲ್ ಮೂಲಕ ಮಂಗಳೂರು ಪ್ರವೇಶಿಸಿದ್ದಾರೆ. ಚಿತ್ರಕಲಾವಿದರೂ ಆಗಿರುವ ಅವರ ಮುಂದಿನ ಪ್ರಯಾಣ ಕಾಸರಗೋಡಿಗೆ. ದಿನಂಪ್ರತಿ 50-60 ಕಿಲೋಮೀಟರ್ ಸಂಚಾರ.

ದಾನಿಗಳ, ಹೋಟೇಲ್ ಮಾಲಿಕರ ಬಳಿ ನೆರವು ಕೇಳಿ ಉಚಿತ ಊಟೋಪಚಾರ, ಪೊಲೀಸ್ ಠಾಣೆ, ಮಠ, ಮಂದಿರಗಳಲ್ಲಿ ರಾತ್ರಿ ವಿಶ್ರಾಂತಿ. ಪ್ರತಿದಿನ ಬೆಳಿಗ್ಗೆಯಿಂದಲೇ ಸವಾರಿ. ಸೈಕಲ್‌ನಲ್ಲೇ ನಿತ್ಯಕ್ಕೆ ಬೇಕಾಗುವ ಬಟ್ಟೆಬರೆ ಮತ್ತಿತರ ಅಗತ್ಯ ವಸ್ತುಗಳನ್ನು ಅವರು ತಮ್ಮ ಜತೆ ಕಟ್ಟಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT