ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ದೇಶದ ಸ್ವಾವಲಂಬನೆ, ಸ್ವಾಭಿಮಾನಕ್ಕೆ ಧಕ್ಕೆ'

ಸಿಐಟಿಯು ದ್ವಿತೀಯ ಜಿಲ್ಲಾ ಸಮ್ಮೇಳನ
Last Updated 25 ಡಿಸೆಂಬರ್ 2012, 10:29 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: `ಮಾನವ ಸಂಪನ್ಮೂಲ ಬಳಕೆಯ ಮೂಲಕ  ಆರ್ಥಿಕವಾಗಿ ಪ್ರಗತಿಪಥದಲ್ಲಿ ಸಾಗುತ್ತಿರುವ ಭಾರತದ ಮೇಲೆ ಹಿಡಿತ ಸಾಧಿಸಲು ಅಮೆರಿಕದ ಬಂಡವಾಳಶಾಹಿಗಳು ಮತ್ತು  ವಿಶ್ವಬ್ಯಾಂಕ್‌ನವರು ಪ್ರಯತ್ನಿಸುತ್ತಿದ್ದಾರೆ. ಹೋರಾಟವನ್ನು ಮಣಿಸುವ ಮತ್ತು ಹೋರಾಟಗಾರರ ದಿಕ್ಕನ್ನು ಬದಲಾಯಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ' ಎಂದು ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಎಸ್.ವರಲಕ್ಷ್ಮೀ ಆರೋಪಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ಸಿಐಟಿಯು ದ್ವಿತೀಯ ಜಿಲ್ಲಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, `ಬಗೆಬಗೆಯ ಷರತ್ತುಗಳನ್ನು ವಿಧಿಸುತ್ತಿರುವ ಬಂಡವಾಳಶಾಹಿಗಳು ಮತ್ತು ವಿಶ್ವಬ್ಯಾಂಕ್‌ನವರು ನಮ್ಮ ದೇಶದ ಸ್ವಾಭಿಮಾನ ಮತ್ತು ಸ್ವಾವಲಂಬನೆ ಕುಸಿಯುವಂತೆ ಮಾಡುತ್ತಿದ್ದಾರೆ' ಎಂದರು.

`ವಿದೇಶಿ ನೇರ ಬಂಡವಾಳ ಹೂಡಿಕೆಯ ಮೂಲಕ ದೇಶವನ್ನು ಪ್ರವೇಶಿಸುತ್ತಿರುವ ಬಂಡವಾಳಶಾಹಿ ಕಂಪೆನಿಗಳು ದೇಶೀಯ ಕಂಪೆನಿಗಳನ್ನು ಮುಚ್ಚುವಂತೆ ಮಾಡುತ್ತಿವೆ. ಸರ್ಕಾರಿ ಸಂಘಸಂಸ್ಥೆಗಳು ಮತ್ತು ಇಲಾಖೆಗಳನ್ನು ಖಾಸಗೀಕರಣಗೊಳಿಸಿದಲ್ಲಿ ಮಾತ್ರವೇ ಸಾಲಸೌಲಭ್ಯ ಕೊಡುವುದಾಗಿ ವಿಶ್ವ ಬ್ಯಾಂಕ್‌ನವರು ಬೆದರಿಸುತ್ತಿದ್ದಾರೆ. ಜನರ ಹಿತದೃಷ್ಟಿಯಿಂದ ನಿರ್ಣಯ ತೆಗೆದುಕೊಳ್ಳಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂಡವಾಳಶಾಹಿಗಳು ಮತ್ತು ವಿಶ್ವ ಬ್ಯಾಂಕ್‌ನವರು ಹೇಳಿದಂತೆ ವರ್ತಿಸುತ್ತಿವೆ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

`ಉದ್ಯೋಗ ಅಭದ್ರತೆಯಲ್ಲೇ ಕೆಲಸ ಮಾಡುತ್ತಿರುವ ಕಾರ್ಮಿಕರ ಉದ್ಯೋಗ ಕಾಯಂಗೊಳಿಸುವುದರ ಬದಲು ವಿದೇಶಿ ಸಂಸ್ಥೆಗಳನ್ನು ಆಹ್ವಾನಿಸಲು ದುಂದುವೆಚ್ಚ ಮಾಡಲಾಗುತ್ತಿದೆ. ಗುತ್ತಿಗೆಯಾಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸರ್ಕಾರಿ ಸೌಲಭ್ಯಗಳನ್ನು ಕೊಟ್ಟು ಕಾಯಂಗೊಳಿಸುವ ಬದಲು ಹೊರಗುತ್ತಿಗೆ ಪದ್ಧತಿಯನ್ನು ಜಾರಿಗೆ ತಂದು ಇರುವ ಕೆಲಸವನ್ನೇ ಕಳೆದುಕೊಳ್ಳುವಂತಹ ಸ್ಥಿತಿ ಉಂಟು ಮಾಡಲಾಗುತ್ತಿದೆ. ಉದ್ಯೋಗಾವಕಾಶ ಕಲ್ಪಿಸುವ ಬದಲು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನೇ ಮುಚ್ಚುವ ಪ್ರಯತ್ನ ಮಾಡಲಾಗುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿದರು.

`ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಸರ್ಕಾರ ಆತಂಕ ವ್ಯಕ್ತಪಡಿಸುತ್ತದೆ. ಆದರೆ ಮಕ್ಕಳ ಉತ್ತಮ ಪೋಷಣೆಗೆ ಅಗತ್ಯ ಸೌಕರ್ಯ ಮತ್ತು ನೆರವು ನೀಡಲು ಹಿಂಜರಿಯುತ್ತದೆ. ದೀನದಲಿತ, ನಿರ್ಗತಿಕ ಕುಟುಂಬಗಳಿಗೆ ಉತ್ತಮ ಗುಣಮಟ್ಟದ ಆಹಾರ ಲಭ್ಯವಾಗದಿರುವಾಗ ಮಕ್ಕಳಲ್ಲಿ ಪೌಷ್ಟಿಕಾಂಶ ನಿರೀಕ್ಷಿಸುವುದಾದರೂ ಹೇಗೆ? ಶಾಲೆಗಳನ್ನು ನಡೆಸುವುದು ತನ್ನ ಜವಾಬ್ದಾರಿ ಅಲ್ಲ ಎಂಬಂತೆ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರವು ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡಲು ಹೇಗೆ ಸಾಧ್ಯ' ಎಂದು ಪ್ರಶ್ನಿಸಿದರು.

ಸಿಐಟಿಯು ಅಕ್ಷರದಾಸೋಹ ನೌಕರರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ನೌಕರರು, ಗ್ರಾಮಪಂಚಾಯಿತಿ ನೌಕರರು, ಬೀಡಿ ಕಾರ್ಮಿಕರು, ಹಮಾಲಿ ಕೂಲಿಕಾರ್ಮಿಕರು, ಕೆಎಸ್‌ಆರ್‌ಟಿಸಿ ನೌಕರರು, ಖಾಸಗಿ ಬಸ್ ಮಾಲೀಕರು, ನೌಕರರು ಮುಂತಾದವರು ಪಾಲ್ಗೊಂಡಿದ್ದರು. ಸಿಐಟಿಯು ಮುಖಂಡರಾದ ಬಿ.ಎನ್.ಮುನಿಕೃಷ್ಣಪ್ಪ, ಸಿದ್ದಗಂಗಪ್ಪ, ವೆಂಕಟೇಶಬಾಬು, ಲಕ್ಷ್ಮಿದೇವಮ್ಮ, ಭಾಗ್ಯಮ್ಮ, ರಾಜಮ್ಮ ಸಿಪಿಎಂ ಮುಖಂಡರಾದ ಎಂ.ಪಿ.ಮುನಿವೆಂಕಟಪ್ಪ, ಚನ್ನರಾಯಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT