ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ

ಅನುವಾದಿತ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಭೈರಪ್ಪ ಅಭಿಮತ
Last Updated 8 ಡಿಸೆಂಬರ್ 2013, 20:06 IST
ಅಕ್ಷರ ಗಾತ್ರ

ಬೆಂಗಳೂರು: ‘ಈ ದೇಶದಲ್ಲಿ ನಿಜವಾಗಿಯೂ ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದಿಲ್ಲ. ಸತ್ಯಾನ್ವೇಷಣೆಗೆ ಒಳಪಟ್ಟ ಹಲವು ಧರ್ಮ ಸೂಕ್ಷ್ಮಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಇಲ್ಲಿ ಅವಕಾಶವಿಲ್ಲ’ ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಸಾಹಿತ್ಯ ಸಿಂಧು ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಅನುವಾದಿತ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

‘ಎಲ್ಲಾ ಧರ್ಮಗಳ ತತ್ವ ಒಂದೇ ಎಂದು ಹುಯಿಲೆಬ್ಬಿಸಲಾಗುತ್ತಿದೆ. ಧರ್ಮಗಳು ನಿಜವಾಗಿಯೂ ಏನು ಹೇಳುತ್ತವೆ ಎಂಬುದನ್ನು ಅರಿಯಬೇಕಿದೆ. ಅರಿತವರು ಧರ್ಮಗಳಲ್ಲಿರುವ ಲೋಪದೋಷಗಳನ್ನು ಹೇಳಲು ಆಗದೇ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ತಿಳಿಸಿದರು.

‘ಮುಸ್ಲಿಂ ಧರ್ಮವನ್ನು ಒಪ್ಪದೇ ಇರುವವರನ್ನು ಕೊಲ್ಲಬೇಕು ಎಂದು ಕುರಾನ್ ಧರ್ಮಗ್ರಂಥದಲ್ಲಿ 23 ಕಡೆಗಳಲ್ಲಿ ಉಲ್ಲೇಖಿಸಲಾಗಿದೆ. ಹೀಗಿರುವಾಗ ಈ ಧರ್ಮವನ್ನು ಹಿಂದೂಧರ್ಮಕ್ಕೆ ಹೋಲಿಕೆ ಮಾಡುವುದು ನ್ಯಾಯವೇ?’ ಎಂದು ಪ್ರಶ್ನಿಸಿದರು.

‘ಎಲ್ಲ ಧರ್ಮಗಳ ಸಾರ ಒಂದೇ ಎಂಬುದೇ ದೊಡ್ಡ ಮಿಥ್ಯ. ಇದನ್ನು ಭೇದಿಸಲು ಹೊರಟಿರುವ ಸತ್ಯಾನ್ವೇಷಣೆಯ  ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ  ಜನರನ್ನು ತಲುಪಬೇಕು’ ಎಂದು ಅಭಿಪ್ರಾಯಪಟ್ಟರು.

‘ಉಪನಿಷತ್‌ ಹಾಗೂ ಬೈಬಲ್‌ ಕೃತಿಗಳ ಸಾರ ಒಂದೇ ಎಂದು ವಾದಿಸುವವರಿದ್ದಾರೆ. ಆದರೆ ಉಪನಿಷತ್ ಎಂದೂ ವ್ಯಕ್ತಿ ಕೇಂದ್ರಿತ ಅಲ್ಲ. ಹುಸಿ ಜಾತ್ಯತೀತ ವಾದ ಮಾಡುತ್ತಿರುವವರು ಸತ್ಯವನ್ನು ತಿರುಚುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾಮವನ್ನು ತಡೆದಿಟ್ಟ ಯುವಕರೆಲ್ಲರೂ ಸ್ವರ್ಗದಲ್ಲಿನ ಸಖಿಯರ  ಆಸೆಗಾಗಿ ತಾಲಿಬಾನ್‌ಗೆ ಸೇರ್ಪಡೆಯಾಗುತ್ತಿದ್ದಾರೆ. ಯುವಕರ ಮನಸ್ಥಿತಿಯನ್ನು ಬದಲಾಯಿಸಬೇಕಾದ ಧರ್ಮಗುರುಗಳೇ ವಿಷ ತುಂಬುತ್ತಿದ್ದಾರೆ. ಇದನ್ನು ವಾಮಪಂಥಿಯರು ಸಮರ್ಥಿಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಬ್ರಿಟಿಷರು ಭಾರತೀಯರಲ್ಲಿ ಕೀಳರಿಮೆಯ ಬೀಜವನ್ನು ಬಿತ್ತುವ ಸಲುವಾಗಿಯೇ ಇತಿಹಾಸ ರಚಿಸಿದರು. ಅದನ್ನೇ ನಂಬಿಕೊಂಡು, ನಮ್ಮತನ ತ್ಯಜಿಸಿದ್ದೇವೆ. ಸಂಶೋಧಕರಾದ ಸೀತಾರಾಮ ಗೋಯಲ್ ಹಾಗೂ ರಾಮಸ್ವರೂಪ ಅವರ ಪುಸ್ತಕಗಳನ್ನು ಓದಬೇಕು’  ಎಂದು ತಿಳಿಸಿದರು.

‘ಜಾತ್ಯತೀತ ಹಾಗೂ ವಿಚಾರವಾದದ  ಹುಸಿತನಕ್ಕೆ ಚಂದಾದಾರರಾಗಿರುವರಿಗೆ ಮಾತ್ರ ಶೈಕ್ಷಣಿಕ ಹಾಗೂ ಸಾಹಿತ್ಯಿಕ  ವಲಯಗಳಲ್ಲಿ  ಮನ್ನಣೆ ದೊರೆಯುತ್ತದೆ. ಇಂತಹವರಿಗೆ ಯೂನಿರ್ವಸಿಟಿಗಳಲ್ಲಿ ಪ್ರಾಧ್ಯಾಪಕ ಹುದ್ದೆ, ಬಡ್ತಿ ಎಲ್ಲವೂ ಲಭ್ಯ’ ಎಂದು ಟೀಕಿಸಿದರು.

ಸತ್ಯಾನ್ವೇಷಣೆಯೇ ನನ್ನ ಉತ್ತರ: ‘ಸಮರ್ಪಕ ಆಧಾರಗಳನ್ನು ಇಟ್ಟುಕೊಂಡೇ ‘ಆವರಣ’ ಕಾದಂಬರಿ ರಚಿಸಿದ್ದೇನೆ. ಹಾಗೂ ಈ ಆಧಾರಗ್ರಂಥಗಳ ಹೆಸರನ್ನು ಪುಸ್ತಕದಲ್ಲಿ ಉಲ್ಲೇಖಿಸಿದ್ದೇನೆ. ಹೀಗಿದ್ದರೂ ಈ ಕಾದಂಬರಿ ಬರೆಯುವ ಅಗತ್ಯವೇನಿತ್ತು? ಎಂದು ಕೇಳುವವರಿಗೆ ‘ಸತ್ಯಾನ್ವೇಷಣೆ’ ಎಂಬುದಷ್ಟೆ ನನ್ನ ಉತ್ತರ’ ಎಂದು ಸಮರ್ಥಿಸಿದರು.ಲೇಖಕ ಡಾ.ಅಜಕ್ಕಳ ಗಿರೀಶ ಭಟ್, ‘ಸಾಮ್ರಾಜ್ಯಶಾಹಿ ಧೋರಣೆಯ ಭಾಗವಾಗಿದ್ದ ಮತಾಂತರ, ಕ್ರಮೇಣ ಧಾರ್ಮಿಕ ಸ್ವಾತಂತ್ರ್ಯದ ಸ್ವರೂಪ ಪಡೆದಿರುವುದನ್ನು ‘ಕ್ರೈಸ್ತ ಕ್ರೌರ್ಯ ಪರಂಪರೆ’ ಪುಸ್ತಕವು ಪ್ರಬುದ್ಧವಾಗಿ ನಿರೂಪಿಸಿದೆ’ ಎಂದು ಶ್ಲಾಘಿಸಿದರು.

ಮಂಜುನಾಥ ಅಜ್ಜಂಪುರ ಅವರ ‘ಮಹಾನ್ ಇತಿಹಾಸಕಾರರು’ (ಮೂಲ– ಅರುಣ್ ಶೌರಿ), ‘ಆತ್ಮರಕ್ಷಣೆಯೆಡೆಗೆ ಹಿಂದೂ ಸಮಾಜ’ (ಮೂಲ–ಸೀತಾರಾಮ ಗೋಯಲ್), ಟಿ.ಎ.ಪಿ ಶೆಣೈ ಅವರ ‘ಕ್ರೈಸ್ತ ಕ್ರೌರ್ಯ ಪರಂಪರೆ’, ಶ್ರೀನಿವಾಸ ಸುಬ್ರಹ್ಮಣ್ಯಂ ಅವರ ‘ಹುಸಿ ಜಾತ್ಯತೀತವಾದ’(ಮೂಲ –ಸೀತಾರಾಮ ಗೋಯಲ್) ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT