ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಾದ್ಯಂತ ಮೊಬೈಲ್ ರೋಮಿಂಗ್ ಉಚಿತ

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮೊಬೈಲ್ ಬಳಕೆದಾರರಿಗೆ ರೋಮಿಂಗ್ ಶುಲ್ಕದಿಂದ ವಿನಾಯ್ತಿ ನೀಡುವ ಮತ್ತು ದೇಶದ ಯಾವುದೇ ಭಾಗದಲ್ಲಿ ಸೇವಾ ಸಂಸ್ಥೆ ಬದಲಿಸಿದರೂ, ಮೊಬೈಲ್  ಸಂಖ್ಯೆ ಬದಲಿಸುವ ಅಗತ್ಯ ಇರದ  (ಎಂಎನ್‌ಪಿ) ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರು ಸೋಮವಾರ ಪ್ರಕಟಿಸಿರುವ, `ಕರಡು ಹೊಸ ದೂರಸಂಪರ್ಕ ನೀತಿ-2011~ (ಎನ್‌ಟಿಪಿ) ಯು ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಜಾರಿಗೆ ಬರುತ್ತಿದ್ದಂತೆ, ಮೊಬೈಲ್ ಗ್ರಾಹಕರು ರೋಮಿಂಗ್ ಶುಲ್ಕದ ಹೊರೆಯಿಂದ ಮುಕ್ತರಾಗಲಿದ್ದಾರೆ.

ದೇಶವ್ಯಾಪಿ ಯಾವುದೇ ದೂರಸಂಪರ್ಕ ವೃತ್ತದಲ್ಲಿ `ಎಂಎನ್‌ಪಿ~ ಸೌಲಭ್ಯ ಪಡೆಯಲಿದ್ದಾರೆ.
`ಒಂದು ದೇಶ- ಒಂದು ಲೈಸೆನ್ಸ್~, ಕಾರ್ಯಸೂಚಿ ಅನ್ವಯ, `ಒಂದು ದೇಶ - ಉಚಿತ ರೋಮಿಂಗ್~ ಸೌಲಭ್ಯದಡಿ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳ  ಮಧ್ಯೆ ಇರುವ ಅಂತರ ಕೊನೆಗೊಳ್ಳಲಿದೆ. 

`ಒಂದು ದೇಶ- ಪೂರ್ಣ ಪ್ರಮಾಣದ ಮೊಬೈಲ್ ನಂಬರ್ ಪೋರ್ಟೆಬಿಲಿಟಿ~ ಸೌಲಭ್ಯ ಜಾರಿಗೆ ತರಲಾಗುವುದು. ಹೊಸ ನೀತಿ ಜಾರಿಗೆ ಸದ್ಯಕ್ಕೆ ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ.  ಎಲ್ಲ ಪ್ರಸ್ತಾವಗಳನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುವುದು ಎಂದು ಸಿಬಲ್ ಸ್ಪಷ್ಟಪಡಿಸಿದ್ದಾರೆ.

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಎಲ್ಲ ನಾಗರಿಕರು ಬೇಡಿಕೆ ಸಲ್ಲಿಸುತ್ತಿದ್ದಂತೆ ಬ್ರಾಡ್‌ಬ್ಯಾಂಡ್ ಸೌಲಭ್ಯ ಒದಗಿಸುವಂತಾಗಲು ದೂರಸಂಪರ್ಕ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುವುದು. ಈ ಮೂಲಕ ದೇಶದಾದ್ಯಂತ ಇಂಟರ್‌ನೆಟ್  ಸೌಲಭ್ಯವನ್ನು ಎಲ್ಲರಿಗೂ ಸಮಾನ ನೆಲೆಯಲ್ಲಿ ಒದಗಿಸಲು ಉದ್ದೇಶಿಸಲಾಗಿದೆ ಎಂದರು.

ಒಂದೇ ಲೈಸೆನ್ಸ್: ಪಾರದರ್ಶಕ ನೀತಿ ಅನ್ವಯ ಮೊಬೈಲ್ ಸೇವಾ ಸಂಸ್ಥೆಗಳಿಗೆ ಒಂದೇ ಲೈಸೆನ್ಸ್ ನೀತಿ ಅನ್ವಯಗೊಳ್ಳಲಿದೆ. ಸಂಸ್ಥೆಗಳು ದೇಶದ ವಿವಿಧ ಭಾಗಗಳಲ್ಲಿ (ದೂರಸಂಪರ್ಕ ವೃತ್ತ) ಸೇವೆ ಆರಂಭಿಸಲು ಪ್ರತ್ಯೇಕ ಲೈಸೆನ್ಸ್ ಪಡೆಯಬೇಕಾದ ಅಗತ್ಯ ಇರುವುದಿಲ್ಲ.

ಮೊಬೈಲ್ ಸೇವಾ ಸಂಸ್ಥೆಗಳು ಹೊಸ ಲೈಸೆನ್ಸ್ ಪಡೆಯುವ, ಹೊಸ ಲೈಸೆನ್ಸ್‌ಗೆ ವಲಸೆ ಹೋಗುವ ಮತ್ತು ಸೇವೆಯಿಂದ ಹೊರ ನಡೆಯುವ ಬಗ್ಗೆ ಸರ್ಕಾರವು, ಭಾರತೀಯ ದೂರಸಂಪರ್ಕ ನಿಯಂತ್ರಣ  ಪ್ರಾಧಿಕಾರದ (ಟ್ರಾಯ್) ಸಲಹೆ ಕೇಳಲಿದೆ ಎಂದು ಸಿಬಲ್ ನುಡಿದರು.

`2ಜಿ~ ಹಗರಣದ ಹಿನ್ನೆಲೆಯಲ್ಲಿ, ತರಂಗಾಂತರ ಹಂಚಿಕೆಯಲ್ಲಿ ಗರಿಷ್ಠ ಪಾರದರ್ಶಕತೆ ಅಳವಡಿಸಿಕೊಳ್ಳಲು ಲೈಸೆನ್ಸ್  ನೀಡುವುದನ್ನು ಪ್ರತ್ಯೇಕಗೊಳಿಸಲಾಗುವುದು. ರೇಡಿಯೊ ತರಂಗಗಳನ್ನು ಮಾರುಕಟ್ಟೆ ಬೆಲೆ ಆಧರಿಸಿಯೇ  ಹಂಚಿಕೆ ಮಾಡಲಾಗುವುದು ಎಂದು ಸಿಬಲ್ ಹೇಳಿದ್ದಾರೆ.

ದೂರಸಂಪರ್ಕ ವಲಯದಲ್ಲಿ ಹೆಚ್ಚುವರಿ ಬಂಡವಾಳ ಆಕರ್ಷಿಸಲು, `ಹೂಡಿಕೆದಾರ ಸ್ನೇಹಿ~ ವಾತಾವರಣ ನಿರ್ಮಿಸಲು `ಒಂದು ದೇಶ - ಒಂದು ಲೈಸೆನ್ಸ್~ ನೀತಿ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ.

ಮೊಬೈಲ್, ಬಹುಮಾಧ್ಯಮ, ಟಿವಿ ಪ್ರಸಾರ ಸಂಗಮ: ಗ್ರಾಹಕರಿಗೆ ಉತ್ಕೃಷ್ಟ ಸೇವೆ ಒದಗಿಸಲು ಮೊಬೈಲ್, ಬಹುಮಾಧ್ಯಮ ಮತ್ತು ಟೆಲಿವಿಷನ್ ಕಾರ್ಯಕ್ರಮ ಪ್ರಸಾರಗಳ ಸಂಗಮವೂ ಹೊಸ ನೀತಿಯ ಉದ್ದೇಶವಾಗಿದೆ.

ಸಂಪರ್ಕ ಸಾಧನವಾಗಿರುವ ಮೊಬೈಲ್ ಅನ್ನು ಸಂವಹನ, ಗುರುತಿನ ದಾಖಲೆ, ಸಂಪೂರ್ಣ ಸುರಕ್ಷತೆಯ ಹಣಕಾಸು ಸೇವೆ, ಬಹುಭಾಷೆಗಳಲ್ಲಿ ಸೇವೆ ಮತ್ತಿತರ ವಹಿವಾಟು ನಡೆಸಲು ಸಾಧ್ಯವಾಗುವಂತೆ ಮಾಡಿ ಸಾಕ್ಷರತೆಯ ಅಂತರ ದೂರ ಮಾಡಲೂ ಸರ್ಕಾರ ಉದ್ದೇಶಿಸಿದೆ. ಮೊಬೈಲ್ ಫೋನ್, ಟಿವಿ, ಕಂಪ್ಯೂಟರ್ ಮತ್ತಿತರ ಸಂಪರ್ಕ ಸಾಧನಗಳಲ್ಲಿ ಒಂದೇ ಬಗೆಯ ಸೌಲಭ್ಯಗಳು ದೊರೆಯುವಂತೆ ಮಾಡಲಾಗುವುದು  ಎಂದೂ ಸಿಬಲ್ ನುಡಿದರು.

ಉದ್ಯಮದ ಸ್ವಾಗತ: ಹೊಸ ದೂರಸಂಪರ್ಕ ನೀತಿಯನ್ನು ಸ್ವಾಗತಿಸಿರುವ ಮೊಬೈಲ್ ಸೇವಾ ಸಂಸ್ಥೆಗಳು, ತರಂಗಾಂತರಗಳು ಕೈಗೆಟುಕುವ ಬೆಲೆಗೆ ಲಭ್ಯವಾಗುವ ಮತ್ತು ತೆರಿಗೆಗಳು ಇತರ ದೇಶಗಳ ಮಟ್ಟದಲ್ಲಿ ಇರುವ ಬಗ್ಗೆಯೂ ವಿಶ್ವಾಸ ವ್ಯಕ್ತಪಡಿಸಿವೆ.

ಹೊಸ ನೀತಿಯು ಸರಿಯಾದ ದಿಕ್ಕಿನಲ್ಲಿ ಇಟ್ಟ ಸ್ವಾಗತಾರ್ಹ ಹೆಜ್ಜೆಯಾಗಿದ್ದು, ಬ್ರಾಡ್‌ಬ್ಯಾಂಡ್ ಸೌಲಭ್ಯ ಮತ್ತು ವೈವಿಧ್ಯಮಯ ಸೇವೆಗಳ ಸಂಗಮಕ್ಕೆ ಸರ್ಕಾರ ಹೆಚ್ಚು ಒತ್ತು ಕೊಟ್ಟಿರುವುದು ಸ್ಪಷ್ಟವಾಗುತ್ತದೆ ಎಂದು ಭಾರ್ತಿ ಏರ್‌ಟೆಲ್‌ನ ವಕ್ತಾರ ಪ್ರತಿಕ್ರಿಯಿಸಿದ್ದಾರೆ.

ಹೆಚ್ಚುವರಿ ತರಂಗಾಂತರ ವಿತರಣೆ, ರೇಡಿಯೊ ಅಲೆಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವುದು ಮತ್ತು ಮಾರುಕಟ್ಟೆ ಬೆಲೆ ಆಧರಿಸಿ ಪಾರದರ್ಶಕವಾಗಿ ಹಂಚಿಕೆ ಮಾಡಲು ನಿರ್ಧರಿಸಿರುವುದು ಪ್ರಗತಿಪರ  ನಿರ್ಧಾರಗಳಾಗಿವೆ. ದೂರಸಂಪರ್ಕ ಹಣಕಾಸು ನಿಗಮ ಸ್ಥಾಪನೆ, ಮೂಲಸೌಕರ್ಯ ಸ್ಥಾನಮಾನ ನೀಡುವುದನ್ನೂ ಉದ್ಯಮವು ಸ್ವಾಗತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT