ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಾದ್ಯಂತ ಸ್ವಾತಂತ್ರ್ಯ ಸಂಭ್ರಮ: ಸಂಪ್ರದಾಯ ಮುರಿದ ದೀದಿ

Last Updated 15 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಐಎಎನ್‌ಎಸ್): ಪಶ್ಚಿಮ ಬಂಗಾಳದಲ್ಲಿ 1948ರಿಂದಲೂ ಮುಖ್ಯಮಂತ್ರಿಯಾಗಿದ್ದವರು ಸಚಿವಾಲಯ ಕಟ್ಟಡದಲ್ಲೇ ಧ್ವಜಾರೋಹಣ ಮಾಡುತ್ತಿದ್ದರು. ಆದರೆ ಈ ಬಾರಿ ಮಮತಾ ಬ್ಯಾನರ್ಜಿ ಅವರು `ಕೆಂಪು ಬೀದಿ~ ಎಂದೇ ಖ್ಯಾತವಾಗಿರುವ ಇಂದಿರಾಗಾಂಧಿ ಸರಾನಿಯಲ್ಲಿಯಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಸಂಪ್ರದಾಯವನ್ನು ಮುರಿದರು.

ಕೋಲ್ಕತ್ತ ಪೋಲಿಸರು, ಪಶ್ಚಿಮ ಬಂಗಾಳ ಪೋಲಿಸರು ಮತ್ತು ಕ್ಷಿಪ್ರ ಕಾರ್ಯಪಡೆ ಮತ್ತು ಶಾಲಾ ವಿದ್ಯಾರ್ಥಿಗಳಿಂದ ಗೌರವ ವಂದನೆಯನ್ನೂ ಸ್ವೀಕರಿಸಿದರು. `ಕೆಂಪು ಬೀದಿ~ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.

ಶಸ್ತ್ರ ತ್ಯಜಿಸಲು ಮಾವೊವಾದಿಗಳಿಗೆ ಕರೆ: ಶಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬರುವ ಮಾವೋವಾದಿಗಳಿಗೆ ಆಕರ್ಷಕವಾದ ಪುನರ್ವಸತಿಯ ಪ್ಯಾಕೇಜ್ ನೀಡಲಾಗುವುದು ಎಂದು ಮಮತಾ ಭರವಸೆ ನೀಡಿದರು.

ಕಪ್ಪು ಧ್ವಜಾರೋಹಣ
ಪಾಟ್ನಾ (ಐಎಎನ್‌ಎಸ್):
ಸ್ವಾತಂತ್ರ್ಯ ದಿನ ಆಚರಣೆ ವೇಳೆ ಬುಧವಾರ ಬಿಹಾರದ ಎಂಟು ಜಿಲ್ಲೆಗಳಲ್ಲಿ ಮಾವೊವಾದಿಗಳು ಕಪ್ಪು ಧ್ವಜಾರೋಹಣ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ಗಯಾ, ಔರಂಗಾಬಾದ್, ಜೆಹನಾಬಾದ್, ಅರವಾಳ್, ವೈಶಾಲಿ, ಸಿತಾಮರಿ, ಪೂರ್ವ ಚಂಪಾರಣ್ ಮತ್ತು ಮುಜಫರಪುರ ಜಿಲ್ಲೆಗಳ ಶಾಲೆಗಳು ಮತ್ತು ಕೆಲವು ಕಟ್ಟಡಗಳ ಮೇಲೆ ಕಪ್ಪು ಧ್ವಜ ಹಾರಾಟ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈ ವರದಿ: ದೇಶಕ್ಕೆ ಸ್ವಾತಂತ್ರ್ಯ ದೊರೆತ  ಆಗಸ್ಟ್ 15ನೇ ದಿನವನ್ನು ದೇಶದಾದ್ಯಂತ ಜನರು ಸಡಗರದಿಂದ ಆಚರಿಸಿದರೆ, ತಮಿಳುನಾಡಿನ ಕೂಡುಂಕುಳುಂ ಅಣು ವಿದ್ಯುತ್ ಸ್ಥಾವರದ ಸುತ್ತಮುತ್ತಲಿನ ಗ್ರಾಮಗಳು ಮಾತ್ರ ಸಂಭ್ರಮಿಸಬೇಕಾದ ಈ ದಿನವನ್ನು `ಕಪ್ಪು ದಿನ~ವನ್ನಾಗಿ ಆಚರಿಸಿದರು.

ಕೂಡುಂಕುಳುಂ ಸೇರಿದಂತೆ ಸ್ಥಾವರದ ಸುತ್ತಮುತ್ತಲಿನ ಇದಿಂತಾಕರೈ, ಪೆರುಮನಾಳ್, ಕೂಟಪುಲ್ಲಿ, ಮತ್ತು ಕೂತೆನ್‌ಕೊಹಿ ಗ್ರಾಮಗಳ ಜನರು ತಮ್ಮ ಮನೆ, ಬೀದಿ ಮತ್ತು ಮೀನುಗಾರಿಕಾ ದೋಣಿಗಳಲ್ಲಿ ಕಪ್ಪು ಬಾವುಟ ಹಾರಿಸುವ ಮೂಲಕ ಕೂಡುಂಕುಳುಂ ಸ್ಥಾವರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ ಎಂದು ಕೂಡುಂಕುಳುಂ ಅಣು ವಿದ್ಯುತ್ ಸ್ಥಾವರ ವಿರೋಧಿ ಚಳವಳಿಯ ಕಾರ್ಯಕರ್ತ ಎಂ. ಪುಷ್ಪರಾಯನ್  ತಿಳಿಸಿದ್ದಾರೆ.

ಸರಳ ಸ್ವಾತಂತ್ರ್ಯ ದಿನ
ನವದೆಹಲಿ (ಪಿಟಿಐ):
ಕೇಂದ್ರ ಸಚಿವ ವಿಲಾಸರಾವ್ ದೇಶ್‌ಮುಖ್ ನಿಧನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸ್ವಾತಂತ್ರ್ಯ ದಿನವನ್ನು ಸರಳವಾಗಿ ಆಚರಿಸಲಾಯಿತು. ಅಧ್ಯಕ್ಷೆ ಸೋನಿಯಾ ಗಾಂಧಿ ರಾಷ್ಟ್ರ ಧ್ವಜಾರೋಹಣ ಮಾಡಿದರು. ನಂತರ ಶ್ರದ್ಧಾಂಜಲಿ ಸೂಚಿಸುವ ಗೊತ್ತುವಳಿಯನ್ನು ಅಂಗೀಕರಿಸಲಾಯಿತು. ದೇಶ್‌ಮುಖ್ ಹಠಾತ್ ನಿಧನದಿಂದ ಕೇವಲ ಮಹಾರಾಷ್ಟ್ರ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಷ್ಟೇ ಅಲ್ಲದೆ ಇಡೀ ದೇಶಕ್ಕೆ ನಷ್ಟವಾಗಿದೆ ಎಂದು ಕಾಂಗ್ರೆಸ್ ಪದಾಧಿಕಾರಿಗಳು ಸ್ಮರಿಸಿದರು.

ಪ್ರತಿ ವರ್ಷ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಿಹಿ ಹಂಚಿಕೆ ಈ ಬಾರಿ ರದ್ದುಪಡಿಸಲಾಗಿತ್ತು. ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಕೇಂದ್ರದ ಬಹುತೇಕ ಸಚಿವರು ಪಾಲ್ಗೊಂಡಿದ್ದರು.

ಶುಭಾಶಯ ವಿನಿಮಯ
ಅಮೃತಸರ (ಐಎಎಎನ್‌ಎಸ್):
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬುಧವಾರ ಭಾರತ-ಪಾಕ್ ಗಡಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಪಾಕಿಸ್ತಾನದ ಗಡಿ ಭದ್ರತಾ ಪಡೆಯ ಯೋಧರು  ಬಿಎಸ್‌ಎಫ್‌ನ ಯೋಧರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು.

ಗಡಿಯಲ್ಲೂ ಸಂಭ್ರಮ
ನಾಥು ಲಾ (ಸಿಕ್ಕಿಂ):
ಭಾರತ- ಚೀನಾ ಗಡಿಯಲ್ಲೂ ಸ್ವಾತಂತ್ರ್ಯ ದಿನದ ಸಂಭ್ರಮ ಕಂಡು ಬಂತು. ಚೀನಾ ಸೇನೆಯ ನಿಯೋಗದ ಅಧಿಕಾರಿಗಳು `ನಾಥು ಲಾ~ ದಲ್ಲಿನ ಭಾರತದ ಗಡಿ ಭದ್ರತಾ ಪಡೆಯ ಠಾಣೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲೊ ಪಾಲ್ಗೊಂಡಿದ್ದರು.

ಸೇನೆಯ ಹಿರಿಯ ಅಧಿಕಾರಿ ವಾಂಗ್ ಜಿ ಪಿಂಗ್ ನೇತೃತ್ವದ ಚೀನಾ ನಿಯೋಗವು 14,130 ಅಡಿ ಎತ್ತರದ ಭಾರತೀಯ ಗಡಿ ಚೌಕಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತಸದಿಂದಲೇ ಪಾಲ್ಗೊಂಡಿತ್ತು. ಉಭಯ ದೇಶಗಳ ಧ್ವಜಗಳನ್ನೂ ಹಾರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT