ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಪಾಂಡೆ ಉಚ್ಚಾಟನೆಗೆ ಕ್ರೈಸ್ತ ಒಕ್ಕೂಟಗಳ ಆಗ್ರಹ

Last Updated 9 ಅಕ್ಟೋಬರ್ 2012, 10:35 IST
ಅಕ್ಷರ ಗಾತ್ರ

ಕಾರವಾರ: ಹಿರಿಯ ರಾಜಕಾರಣಿ ಆರ್.ವಿ.ದೇಶಪಾಂಡೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದರೆ ಮಾತ್ರ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿದೆ ಎಂದು ಕ್ರೈಸ್ತ ಸಂಘಗಳ ಒಕ್ಕೂಟದ ಮುಖಂಡರು ಹೇಳಿದರು.

ಇಲ್ಲಿಯ ಗ್ರೀನ್‌ಸ್ಟ್ರೀಟ್‌ನಲ್ಲಿರುವ ಕರ್ನಾಟಕ ಕ್ರೈಸ್ತ ಸಂಘಗಳ ಅಂತರರಾಷ್ಟ್ರೀಯ ಒಕ್ಕೂಟದ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ದೇಶಪಾಂಡೆ ಅವರನ್ನು ಪಕ್ಷದಿಂದ ಕೈಬಿಡದೇ ಇದ್ದಲ್ಲಿ ನಾವೇ ಅವರಿಗೆ ತಕ್ಕಪಾಠ ಕಲಿಸುತ್ತೇವೆ ಎಂದು ಗುಡುಗಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಹಿಂದುಳಿದ ~ಬ~ವರ್ಗಕ್ಕೆ ಮೀಸಲಾಗಿದ್ದರಿಂದ ಜಿ.ಪಂ. ಸದಸ್ಯರ ಅಲ್ಬಟ್ ಡಿಕೋಸ್ತಾ ಅಧ್ಯಕ್ಷರಾಗಲು ಒಳ್ಳೆಯ ಅವಕಾಶವಿತ್ತು. ಡಿಕೋಸ್ತಾ ಅವರಿಗೆ ಅಲ್ ದಿ ಬೆಸ್ಟ್ ಎಂದು ಹೇಳಿದ ದೇಶಪಾಂಡೆಯವರು  ಕೊನೆ ಕ್ಷಣದಲ್ಲಿ ಮೋಸ ಮಾಡಿ ಕ್ರೈಸ್ತರಿಗೆ ಅನ್ಯಾಯ ಮಾಡಿದ್ದಾರೆ. ಇದು ಕ್ರೈಸ್ತ ಸಮುದಾಯಕ್ಕೆ ನೋವುಂಟು ಮಾಡಿದೆ ಎಂದು ಮುಖಂಡರು ಹೇಳಿದರು.

ಒಕ್ಕೂಟದ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸ್ಯಾಮಸನ್ ಡಿಸೋಜಾ ಮಾತನಾಡಿ, ದೇಶಪಾಂಡೆಯವರು ಕಾಂಗ್ರೆಸ್ ಪಕ್ಷವನ್ನು ತಮ್ಮ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಯುವಕರನ್ನು ಬೆಳೆಯಲು ಅವರು ಬಿಡಲೇ ಇಲ್ಲ. ಪಕ್ಷದಲ್ಲಿ ಅವರದ್ದು ~ಒನ್ ಮ್ಯೋನ್ ಶೋ~ ಆಗಿದೆ ಎಂದು ಟೀಕಿಸಿದರು.

ನಾವು ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ ಆದರೆ, ದೇಶಪಾಂಡೆಯವರ ವಿರುದ್ಧ ಪಕ್ಷದ ಕ್ರಮಕೈಗೊಳ್ಳದೇ ಇದ್ದಲ್ಲಿ ಚುನಾವಣೆ ಸಂದರ್ಭದಲ್ಲಿ ನಾವೇ ಅವರ ಕ್ಷೇತ್ರಕ್ಕೆ ಹೋಗಿ ಅವರ ವಿರುದ್ಧ ಪ್ರಚಾರ ಮಾಡಿ ಅವರನ್ನು ಸೋಲಿಸುತ್ತೇವೆ ಎಂದು ಅವರು ಸವಾಲು ಹಾಕಿದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸೋನಿಯಾ ಗಾಂಧಿಯವರು ಇದೇ 18ರಂದು ಮಂಗಳೂರಿಗೆ ಬರಲಿದ್ದಾರೆ. ಕ್ರೈಸ್ತ ಸಂಘಟನೆಗಳು ಮುಖಂಡರು ಅಲ್ಲಿಗೆ ಹೋಗಿ ದೇಶಪಾಂಡೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸುತ್ತೇವೆ ಎಂದು ಸ್ಯಾಮ್‌ಸನ್ ಹೇಳಿದರು.

ಕಾರವಾರ ಧರ್ಮಪ್ರಾಂತ್ಯದ ಕ್ಯಾಥೊಲಿಕ್ ಸಂಘದ ಅಧ್ಯಕ್ಷ ಬರ್ನಾಡ್ ಲೂವಿಸ್ ಮಾತನಾಡಿ, ಇಷ್ಟುವರ್ಷಗಳ ಕಾಲ ಕ್ರೈಸ್ತರನ್ನು ಮತಬ್ಯಾಂಕ್ ಆಗಿ ಬಳಸಿಕೊಂಡ ಕಾಂಗ್ರೆಸ್ ಪಕ್ಷ ಸಮಾಜಕ್ಕೆ ಸಿಕ್ಕ ಏಕೈಕ್ ಅವಕಾಶವನ್ನು ಕಸಿದುಕೊಳ್ಳುವ ಮೂಲಕ ದ್ರೋಹ ಬಗೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ರಕ್ಷಣೆ ಮತ್ತು ಸಾಮಾಜಿಕ ನ್ಯಾಯದ ವಿಷಯದಲ್ಲಿ ಯಾರಿಗೂ ಎರಡು ಬಗೆದಿಲ್ಲ ಎಂದು ಹೇಳುವ ಕಾಂಗ್ರೆಸ್ ಪಕ್ಷದ ಬಣ್ಣ ಈಗ ಬಯಲಾಗಿದೆ. ಪಕ್ಷಕ್ಕಾಗಿ ಹಗಲಿರುಳು ದುಡಿದ ಕಾರ್ಯಕರ್ತರಿಗೆ ಸಾಮಾಜಿಕ ನ್ಯಾಯಾ ನೀಡದೇ ಪಕ್ಷ ಅನ್ಯಾಯ ಮಾಡಿದೆ ಎಂದು ದೂರಿದರು.

ಲೂಯಿಸ್ ಫೆರೆರಾ ಮಾತನಾಡಿ, ದೇಶಪಾಂಡೆಯವರು ಕ್ರೈಸ್ತ ಸಮುದಾಯಕ್ಕೆ ಸೇರಿದವರನ್ನು ಕೇವಲ ಗ್ರಾಮ ಪಂಚಾಯಿತಿ ಕ್ಷೇತ್ರಕ್ಕಷ್ಟೇ ಸಿಮೀತಗೊಳಿಸಿದ್ದಾರೆ. ನಮ್ಮ ಸಮುದಾಯದವರು ರಾಜಕೀಯವಾಗಿ ಮೇಲೆ ಬರಲು ಅವರು ಬಿಡಲೇ ಇಲ್ಲ ಎಂದರು.

ಪ್ರ್ಯಾಂಕಿ ಫರ್ನಾಂಡೀಸ್ ಮಾತನಾಡಿ, ಅಲ್ಬರ್ಟ್ ಅವರಿಗೆ ಅವಕಾಶ ಮಾಡಿಕೊಡಬೇಕು ಎಂದು ಈಚೆಗೆ ಕಾರವಾರಕ್ಕೆ ಆಗಮಿಸಿದ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಮನವಿ ನೀಡಲಾಗಿತ್ತು. ಆಗ ದೇಶಪಾಂಡೆ ಅವರತ್ತ ಬೊಟ್ಟು ಮಾಡಿದ ಖರ್ಗೆ ~ಅವರು ಮನಸ್ಸು ಮಾಡಬೇಕು~ ಎಂದು ನಮ್ಮ ಬಳಿ ಹೇಳಿದ್ದರು ಎಂದರು.

ಒಕ್ಕೂಟದ ಪದಾಧಿಕಾರಿ ಗ್ಯಾಬ್ರಿಲ್ ಸಿಡ್ನಿ,  ರೊಮಾ ಫರ್ನಾಂಡೀಸ್, ಪ್ರ್ಯಾಂಕ್ ಪರ್ನಾಂಡೀಸ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT