ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಭಕ್ತಿ ಬಡಿದೆಬ್ಬಿಸಿದ ಸಂಗೀತ ಸಂಜೆ

Last Updated 14 ಮಾರ್ಚ್ 2011, 7:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಮೂರುಸಾವಿರ ಮಠದ ಮೈದಾನದಲ್ಲಿ ಹಾಕಿದ್ದ ಭವ್ಯ ವೇದಿಕೆಯಿಂದ ಭಾನುವಾರ ಸಂಜೆ ದೇಶಭಕ್ತಿ ಗೀತೆಗಳು ಅಲೆ-ಅಲೆಯಾಗಿ ತೇಲಿ ಬರುತ್ತಿದ್ದರೆ ಎದುರಿಗೆ ಕುಳಿತಿದ್ದ ಸಾವಿರ-ಸಾವಿರ ಸಂಖ್ಯೆಯ ಶ್ರೋತೃಗಳ ಹೃದಯಗಳು ದೇಶಪ್ರೇಮದ ಹೊನಲಿನಲ್ಲಿ ಮಿಂದೆದ್ದವು.

ವಿಶ್ವ ಹಿಂದೂ ಪರಿಷತ್ ತನ್ನ ಜ್ಞಾನಗಂಗಾ ಯೋಜನೆಗೆ ಆರ್ಥಿಕ ಸಹಾಯ ಪಡೆಯುವ ಉದ್ದೇಶದಿಂದ ಕೊಲ್ಲಾಪುರದ ಸ್ವರನಿನಾದ ತಂಡದಿಂದ ‘ಜಾಗೋ ಹಿಂದುಸ್ತಾನಿ’ ಕಾರ್ಯಕ್ರಮವನ್ನು ಆಯೋಜಿಸಿತ್ತು. ದೇಶಭಕ್ತಿಯನ್ನು ಉದ್ದೀಪನಗೊಳಿಸುವ ಗೀತೆ, ಮಧ್ಯೆ ಒಂದಿಷ್ಟು ದೇಶಪ್ರೇಮದ ಮಾತು, ಮತ್ತೊಂದು ಗೀತೆ ಹೀಗೇ ಸಾಗಿತ್ತು ಕಾರ್ಯಕ್ರಮ.

ಆರಂಭದಲ್ಲಿ ‘ಇತನಿ ಶಕ್ತಿ ಹಮೆ ದೇನಾ ದಾತಾ...’ ಗೀತೆ ಹಾಡಿದ ತಂಡ, ನಂತರ ಒಂದರ ಬೆನ್ನಹಿಂದೆ ಒಂದರಂತೆ ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿತು. ‘ಸಾರೇ ಜಹಾನ್‌ಸೇ ಅಚ್ಛಾ, ಹಿಂದುಸ್ತಾನ್ ಹಮಾರಾ ಹಮಾರಾ’ ಗೀತೆ ಮುಗಿದಾಗ ಚಪ್ಪಾಳೆ ಸದ್ದು ಜೋರಾಗಿತ್ತು. ಹಾಡುಗಳ ಮಧ್ಯೆ ಒಂದಿಷ್ಟು ಮಾತುಗಳನ್ನೂ ಆಲಿಸುತ್ತಿದ್ದ ಕೇಳುಗರು ಅವುಗಳ ಅಂತರ್ಯದಲ್ಲಿ ಹೊಂದಿದ್ದ ಮಾಧುರ್ಯಕ್ಕೆ ಮಾರುಹೋದರು. ಎಲ್ಲರ ಮನ-ಮನಗಳಲ್ಲಿ ದೇಶಪ್ರೇಮದ ಕಿಡಿ ಹೊತ್ತಿ ಬೆಳಗಿತು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬಾಲೆಹೊಸೂರು ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ‘ಸಂಕಲ್ಪ ಶಕ್ತಿಯನ್ನು ಉದ್ದೀಪನಗೊಳಿಸಿಕೊಂಡು ಬೆಳೆಯಬೇಕು. ದೇಶವಿದ್ದರೆ ಮಾತ್ರ ನಾವು. ದೇಶದ ಉಳಿವಿಗಾಗಿ ಕಂಕಣಬದ್ಧರಾಗಬೇಕು’ ಎಂದು ಕರೆ ನೀಡಿದರು.

ಸಂಕಲ್ಪ ಶಕ್ತಿಯಿಂದ ಬಾನೆತ್ತರಕ್ಕೆ ಬೆಳೆದ ಹಲವರ ಕಥೆಗಳನ್ನು ಹೇಳಿದ ಸ್ವಾಮೀಜಿ ಯುವಕರನ್ನು ಉದಾತ್ತ ಚಿಂತನೆ ಕಡೆಗೆ ಹೊರಳುವಂತೆ ಮಾಡಿದರು. ಮಕ್ಕಳಿಗೆ ಆಸ್ತಿ ಮಾಡುವುದು ಬೇಡ. ಮಕ್ಕಳೇ ಆಸ್ತಿ ಆಗುವಂತೆ ಬೆಳೆಸಿ. ನೀವು ಎಷ್ಟೇ ಆಸ್ತಿ ಮಾಡಿದರೂ ನಿಮ್ಮ ಮಕ್ಕಳು ಸಂಸ್ಕಾರರಹಿತರಾದರೆ ಅವರಿಗೆ ಎಷ್ಟು ಆಸ್ತಿ ಇದ್ದರೂ ಸಾಲುವುದಿಲ್ಲ. ಸಂಸ್ಕಾರ ಹೊಂದಿದ ಮಕ್ಕಳಿಗೆ ಹೆಚ್ಚಿನ ಆಸ್ತಿ ಬೇಕಿಲ್ಲ’ ಎಂದು ಹೇಳಿದರು.

‘ನನ್ನಂತೆ ನೀನಾಗು’ ಎಂದು ಮಕ್ಕಳಿಗೆ ಮಾದರಿ ಎನಿಸುವಂತಹ ಉತ್ತಮ ವ್ಯಕ್ತಿತ್ವವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಹಸಿವು, ಬಡತನದ ಅನುಭವ ಮಕ್ಕಳಿಗೂ ದೊರೆಯುವಂತೆ ಮಾಡಬೇಕು. ದೇಶಕ್ಕೆ ಉತ್ತಮ ಭವಿಷ್ಯವಿದ್ದರೂ ಅಷ್ಟೇ ಅಪಾಯ ಇರುವುದನ್ನು ಮರೆಯುವಂತಿಲ್ಲ’ ಎಂದು ತಿಳಿಸಿದರು.

ಸಮಾರಂಭ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ‘ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶಭಕ್ತರ ಕಥೆಗಳನ್ನು ಮಕ್ಕಳಿಗೆ ಹೇಳಬೇಕು’ ಎಂದು ಪಾಲಕರಿಗೆ ಕಿವಿಮಾತು ಹೇಳಿದರು. ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಭರತ ಭಂಡಾರಿ, ಚಂದ್ರಶೇಖರ ಗೋಕಾಕ, ನರೇಂದ್ರ ರಾಂಕಾ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT