ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶವಳ್ಳಿ: ವಾರಕ್ಕೊಮ್ಮೆ ನೀರು ಪೂರೈಕೆ

Last Updated 10 ಏಪ್ರಿಲ್ 2013, 6:43 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಮನೆಗಳ ಬಚ್ಚಲಿನ ಮೂಲಕ ಚರಂಡಿ ಸೇರಿದ ಕಲ್ಮಷ ನೀರು ಮತ್ತೆ ಮನೆಗಳಿಗೆ ನುಗ್ಗುವಂತಹ ಪರಿಸ್ಥಿತಿ ಸಮೀಪದ ದೇಶವಳ್ಳಿ ಗ್ರಾಮದಲ್ಲಿ ನಿರ್ಮಾಣವಾಗಿದೆ. ಮನೆಗಳ ಮುಂಭಾಗ ಕಲುಷಿತ ನೀರು ನಿಂತಿದೆ. ಇದ ರಿಂದ ಸೊಳ್ಳೆಗಳ ಸಂತತಿ ಹೆಚ್ಚಿದ್ದು, ನಿವಾಸಿಗಳಿಗೆ ರೋಗ ರುಜಿನಗಳು ಕಾಡುವ ಭೀತಿ ಎದುರಾಗಿದೆ. ಗ್ರಾಮದಲ್ಲಿ ಅನೈರ್ಮಲ್ಯ ಸೃಷ್ಟಿಯಾಗಿ ಕೊಳೆಗೇರಿಯಂತೆ ಕಾಣುತ್ತಿದೆ.

ದಾರಿಹೋಕರು ಮೂಗು ಮುಚ್ಚಿಕೊಂಡು ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿವಾಸಿಗಳ ಮನವಿಗೆ ಸ್ಥಳೀಯ ಆಡಳಿತ ಗಮನಹರಿಸುತ್ತಿಲ್ಲ. ಹಲವು ದಿನಗಳಿಂದಲೂ ಚರಂಡಿಯಲ್ಲಿ ಸಂಗ್ರಹವಾಗಿರುವ ಹೂಳು ತೆಗೆದಿಲ್ಲ. ಇದರ ಪರಿಣಾಮ ಕೊಚ್ಚೆ ನೀರು ಒಂದೆಡೆ ಸಂಗ್ರಹವಾಗಿದ್ದು, ದುರ್ವಾಸನೆ ಬೀರುತ್ತಿದೆ. ಈ ವಾಸನೆ ಕುಡಿದು ನಿವಾಸಿಗಳು ಬದುಕುವಂತಾಗಿದೆ.

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ಗ್ರಾಮದಲ್ಲಿರುವ ಒಂದೂವರೆ ಸಾವಿರ ದಷ್ಟು ಜನಸಂಖ್ಯೆಗೆ 3 ಕೊಳವೆಬಾವಿ ಕೊರೆಯಿಸಲಾಗಿದೆ. ಅಂತರ್ಜಲಮಟ್ಟ ಕುಸಿತ ಮತ್ತು ನೀರು ಎತ್ತುವ ಮೋಟಾರ್ ಬಿದ್ದುಹೋಗಿರುವುದರಿಂದ 2 ಕೊಳವೆಬಾವಿ ಗಳಲ್ಲಿ ನೀರು ಲಭಿಸುತ್ತಿಲ್ಲ. ಇರುವ 1 ಕೊಳವೆಬಾವಿಯಿಂದ ಒವರ್‌ಹೆಡ್ ಟ್ಯಾಂಕ್‌ಗೆ  ಸಮರ್ಪಕವಾಗಿ ನೀರು ತುಂಬುತ್ತಿಲ್ಲ. ಇದರ ಪರಿಣಾಮ ವಾರಕೊಮ್ಮೆ ಮಾತ್ರ ಟ್ಯಾಂಕ್ ತುಂಬಿಸಿ ಗ್ರಾಮದ ಎಲ್ಲ ನಿವಾಸಿಗಳಿಗೂ ನೀರು ಪೂರೈಸಲಾಗುತ್ತಿದೆ.

ಕಿರುನೀರು ಸರಬರಾಜು ಘಟಕ ಯೋಜನೆಯಡಿ ಅಳವಡಿಸಿರುವ 10 ತೊಂಬೆಗಳು ನೀರು ಕಾಣದೆ ಅನಾಥವಾಗಿ ನಿಂತಿವೆ. ಹೆಚ್ಚುವರಿಯಾಗಿ ಕೊಳವೆಬಾವಿ ಕೊರೆಯಿಸಿ ತೊಂಬೆಗಳಿಗೆ ನೀರು ತುಂಬಿಸಿ ಗ್ರಾಮಸ್ಥರು ಅನುಭವಿಸುತ್ತಿರುವ ಸಂಕಷ್ಟ ಪರಿಹರಿಸಲು ಅಧಿಕಾರಿಗಳು ಮುಂದಾಗಿಲ್ಲ. ಇನ್ನೊಂದೆಡೆ ಕೈಪಂಪ್‌ಗಳು ದುರಸ್ತಿ ಕಾಣದೆ ನಿಂತಿವೆ. ಕನಿಷ್ಠ ಕೈಪಂಪ್‌ಗಳನ್ನು ದುರಸ್ತಿ ಮಾಡಿಸಲು ಗ್ರಾಮ ಪಂಚಾಯಿತಿ ಆಡಳಿತ ಮುಂದಾಗಿಲ್ಲ ಎಂಬುದು ಗ್ರಾಮಸ್ಥರ ದೂರು.

ಜನರ ಒತ್ತಾಯದಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು 2 ವಾರದ ಹಿಂದೆ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಿದ್ದರು. ಕೇವಲ 2 ದಿನ ಮಾತ್ರ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಮತ್ತೆ ಸ್ಥಗಿತಗೊಳಿಸಲಾಗಿದೆ. ಟ್ಯಾಂಕರ್ ಮೂಲಕ ನೀರು ಒದಗಿಸುವುದನ್ನು ಮುಂದುವರಿಸದಿರುವ ಪರಿಣಾಮ ಜನರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಈಗ ಯುಗಾದಿ ಹಬ್ಬ ಬರುತ್ತಿದೆ. ಕುಡಿಯುವ ನೀರಿಲ್ಲದೆ ಹಬ್ಬ ಆಚರಿಸುವುದು ಹೇಗೆ? ಎಂಬ ಚಿಂತೆಯಲ್ಲಿ ಗ್ರಾಮಸ್ಥರು ಮುಳುಗಿದ್ದಾರೆ.

`ಗ್ರಾಮದ ಚರಂಡಿಯಲ್ಲಿ ತುಂಬಿರುವ ಹೂಳು ತೆಗೆಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕೂಡಲೇ, ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ವಿಧಾನಸಭಾ ಚುನಾವಣೆ ಬಹಿಷ್ಕರಿಸಲಾಗುವುದು' ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕರೀಂ ಸಾಬ್, ಮುಖಂಡ ಡಿ.ಎಸ್. ರಾಜು ಎಚ್ಚರಿಕೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT