ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಿ ಕಲಾ ಸೊಗಡು ಸಂಪೂರ್ಣ

Last Updated 12 ಜನವರಿ 2011, 10:55 IST
ಅಕ್ಷರ ಗಾತ್ರ

ಮತ್ತೆ ಹೊಸ ವರುಷ ಬಂದೇ ಬಿಟ್ಟಿದೆ. ಹೊಸ ಭರವಸೆ ಹುಟ್ಟಿಸುವ, ಹೊಸ ಕನವರಿಕೆಗಳನ್ನು ಬಿತ್ತುವ ಹೊಸ ವರುಷದ ಸ್ವಾಗತಕ್ಕೆ ಮತ್ತೆ ಸಜ್ಜಾಗಿದ್ದೇವೆ.
ಈ ವರುಷ ಹೇಗೆ ಪ್ರಾರಂಭಿಸಬೇಕು ಎಂದು ಅನೇಕರು ಯೋಚಿಸುತ್ತಿರಬಹುದು. ಕೆಲವರು ಪ್ರವಾಸ ಕೈಗೊಂಡರೆ, ಇನ್ನು ಕೆಲವರು ನೆಂಟರಿಷ್ಟರ ಜೊತೆ ಸಂಭ್ರಮಿಸುವು ದುಂಟು, ಇನ್ನು ಕೆಲವರು ಪಾರ್ಟಿ, ಡಾನ್ಸ್ ಎಂದು ನಲಿಯುವುದುಂಟು,

ಇದೆಲ್ಲದರ ಹೊರತಾಗಿ ಮತ್ತೊಂದು ವರ್ಗದ ಜನರಿದ್ದಾರೆ. ಅವರು ಗೃಹಾಲಂಕಾರ, ಉಡುಗೆ ತೊಡುಗೆಗಳ ಖರೀದಿ ಮತ್ತು ಸಂಗ್ರಹದ ಮೂಲಕ ಹೊಸ ವರ್ಷ ಸ್ವಾಗತಿಸುವವರು. ಅಂಥ ಕಲಾರಸಿಕರ ಮನ ಮೆಚ್ಚಿಸಲು ನಡೆಯುತ್ತಿದೆ ಸಂಪೂರ್ಣ ಕಲಾಮೇಳ. ಕಲಾವಿದರು ಮತ್ತು ಕುಶಲಕರ್ಮಿಗಳ ಏಳಿಗೆಗೆ ಶ್ರಮಿಸುತ್ತಿರುವ ಬೆಂಗಳೂರು ಮೂಲದ ಸ್ವಯಂಸೇವಾ ಸಂಸ್ಥೆ ‘ಸಂಪೂರ್ಣ’ ಈ ಮೇಳ ಆಯೋಜಿಸಿದೆ.

ಹೌದು, ಕರಕುಶಲ ಕಲೆ ಎಂಥವರನ್ನೂ ಸೆಳೆಯುವಂಥದ್ದು. ಅದಕ್ಕೆ ಮಾಂತ್ರಿಕ ಶಕ್ತಿಯಿದೆ. ಮನಸ್ಸಿಗೆ ಆಹ್ಲಾದ, ಉಲ್ಲಾಸ, ಉತ್ಸಾಹವನ್ನು ತುಂಬುವ ಸಾಮರ್ಥ್ಯವಿದೆ. ಸಂಸ್ಕೃತಿ, ಜನಪದ, ಆಚಾರ-ವಿಚಾರ, ಯೋಚನಾ ಕ್ರಮ ಹಾಗೂ ಬದುಕಿನ ರೀತಿ-ನೀತಿಗಳನ್ನು ಪ್ರತಿಬಿಂಬಿಸುವ ಪರಿಣಾಮಕಾರಿ ಮಾಧ್ಯಮ ಅದು. ಭಾಷೆ, ದೇಶ ಹಾಗೂ ಕಾಲವನ್ನೂ ಮೀರಿ ಸ್ಪಂದಿಸುವ ಗುಣ ಇರುವುದರಿಂದಲೇ ಕರಕುಶಲ ಕಲೆಗೆ ಎಲ್ಲಿಲ್ಲದ ಬೇಡಿಕೆ.

ಈ ಹಿನ್ನೆಲೆಯಲ್ಲಿಯೇ ಸಂಪೂರ್ಣ ಮೇಳ ಹೊಸ ವರ್ಷಕ್ಕೆ ಹೊಸ ಆಕರ್ಷಣೆ ನೀಡುತ್ತದೆ. ಹೊಸ ಬೆರಗು, ಹೊಸ ಹೊಸ ಅನುಭವ. ಈ ಎಲ್ಲದರ ಅಭೂತಪೂರ್ವ ಅನುಭವ ಕಟ್ಟಿಕೊಡುತ್ತದೆ. ಎಲ್ಲಾ ದೇಶಿಯ ಸಂಸ್ಕೃತಿಯ ಗುಣಮಟ್ಟದ ಕರಕುಶಲ ವಸ್ತುಗಳನ್ನು ಒಂದೇ ವೇದಿಕೆಗೆ (ಮಾರುಕಟ್ಟೆಗೆ) ತರುವ ಪ್ರಯೋಗ ಇಲ್ಲಿದೆ.

ಇದು ಭಾಷೆ, ಸಂಸ್ಕೃತಿಯ ಬೆಸುಗೆ. ಇಲ್ಲಿ ದೇಶದ 24 ರಾಜ್ಯಗಳ ನೂರಕ್ಕೂ ಹೆಚ್ಚು ಪಾರಂಪರಿಕ ಕಲಾ ಕುಟುಂಬಗಳು ತಮ್ಮ ವೈವಿಧ್ಯಮಯ ಕರಕುಶಲ ವಸ್ತುಗಳನ್ನು ತಂದಿದ್ದಾರೆ. ಹೀಗಾಗಿ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಉತ್ಪಾದಕರಿಂದಲೇ ಖರೀದಿಸುವ ಅವಕಾಶವಿದೆ.

ಭಾರತ ದೇಶದ ಸೊಗಡನ್ನು ವಿವರಿಸುವ ಉತ್ಪನ್ನಗಳು ಗಮನ ಸೆಳೆಯುತ್ತವೆ. ಆಧುನಿಕ ಜನಜೀವನದ ಅಗತ್ಯಕ್ಕೆ ತಕ್ಕಂತೆ ಗೃಹ ಅಲಂಕಾರ, ಉಡುಪು ಹಾಗೂ ಸೌಂದರ್ಯೋತ್ಪನ್ನಗಳೂ ಇಲ್ಲಿವೆ.

ಬಿದಿರಿನ ಉತ್ಪನ್ನಗಳು, ಜೈಪುರದ ಪಾಟರಿ, ಪಶ್ಚಿಮ ಬಂಗಾಲದ ದೋಕ್ರಾ, ಉತ್ತರ ಪ್ರದೇಶದ ಅಮೃತಶಿಲೆ, ತಂಜಾವೂರು ಕಲಾ ಪ್ರಕಾರಗಳು, ಮೈಸೂರು ಚಿತ್ರಕಲೆ ಹಾಗೂ ಬೇರೆ ಬೇರೆ ರಾಜ್ಯಗಳ ಕೈಮಗ್ಗ, ಮಹಿಳೆಯರಿಗಾಗಿ ಅಲಂಕಾರಿಕ ವಸ್ತುಗಳು, ಬಟ್ಟೆಗಳು, ಪೀಠೋಪಕರಣಗಳು, ಫ್ಯಾಷನ್ ಮತ್ತು ಸಾಂಪ್ರದಾಯಿಕ ಶೈಲಿಯ ಆಭರಣಗಳು ಇಲ್ಲಿನ ಆಕರ್ಷಣೆ.

ಸ್ಥಳ: ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ, ಮೇಳ ಡಿಸೆಂಬರ್ 26ಕ್ಕೆ ಮುಕ್ತಾಯ. ಬೆಳಿಗ್ಗೆ 10 ರಿಂದ ಸಂಜೆ 7.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT