ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಿ ಕ್ರೀಡೆಗೆ ಆದ್ಯತೆ ನೀಡಿ: ಶೆಟ್ಟರ್

Last Updated 20 ಸೆಪ್ಟೆಂಬರ್ 2011, 7:00 IST
ಅಕ್ಷರ ಗಾತ್ರ

ಮೈಸೂರು: `ಕ್ರೀಡೆ ಎಂದರೆ ಕ್ರಿಕೆಟ್ ಮಾತ್ರವಲ್ಲ. ದೇಶಿ ಕ್ರೀಡೆಗಳಾದ ಕುಸ್ತಿ, ಕಬಡ್ಡಿ, ಮಲ್ಲಯುದ್ಧಗಳಿಗೂ ಯುವಕರು ಆದ್ಯತೆ ನೀಡಬೇಕು~ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ನಂಜನಗೂಡು ತಾಲ್ಲೂಕಿನ ನಂಜುಂಡೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸೋಮವಾರ `ಗ್ರಾಮೀಣ ದಸರಾ~ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

`ಯುವಜನತೆಗೆ ಕ್ರೀಡೆ ಎಂದರೆ ಕ್ರಿಕೆಟ್ ಮಾತ್ರ ಎಂಬಂತಾಗಿದೆ. ದೇಶಿ ಕ್ರೀಡೆಗಳನ್ನು ಕಡೆಗಣಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ದಸರಾ ಕ್ರೀಡಾಕೂಟಗಳನ್ನು ಆಯೋಜಿಸಿ, ಆ ಮೂಲಕ ದೇಶಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕಲೆ, ಸಂಪ್ರದಾಯ ಮತ್ತು ಸಂಸ್ಕೃತಿ ಹಾಗೂ ಭಾಷಾಸೊಗಡು ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲೇ ಹಾಸುಹೊಕ್ಕಾಗಿದೆ. ಆದ್ದರಿಂದ, ಗ್ರಾಮೀಣ ಭಾಗದ ಯುವಜನತೆ ಕಲೆ, ಸಂಸ್ಕೃತಿ ಹಾಗೂ ದೇಶಿ ಕ್ರೀಡೆಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು~ ಎಂದು ಅಭಿಪ್ರಾಯಪಟ್ಟರು.

`ನಾಡಹಬ್ಬ ದಸರಾ ವೀಕ್ಷಿಸಲು ದೇಶ ವಿದೇಶಗಳಿಂದ ಲಕ್ಷಾಂತರ ಜನ ಆಗಮಿಸುತ್ತಾರೆ. 1974ರ ವರೆಗೆ ದಸರಾವನ್ನು ಮೈಸೂರು ಅರಸರೇ ಆಚರಿಸುತ್ತಿದ್ದರು. 1975ರಿಂದ ಸರ್ಕಾರ `ನಾಡಹಬ್ಬ~ವಾಗಿ ಆಚರಿಸುತ್ತಿದೆ. ದಸರಾ ಇಂದು ಮೈಸೂರಿಗೆ ಮಾತ್ರ ಸೀಮಿತವಾಗಿರದೆ ದೇಶ-ವಿದೇಶಗಳಲ್ಲೂ ಮನೆ ಮಾತಾಗಿದೆ~ ಎಂದರು.

`ಈ ಹಿಂದೆ ಶೇ 70ರಷ್ಟು ಜನರು ಗ್ರಾಮಗಳಲ್ಲಿ ವಾಸಿಸುತ್ತಿದ್ದರು. ಆದರೆ, ಈ ಸಂಖ್ಯೆ ಕಾಲಕ್ರಮೇಣ ಕಡಿಮೆ ಆಗುತ್ತಿದ್ದು ನಗರ ಪ್ರದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗಕ್ಕೆ ಮೂಲ ಸೌಕರ್ಯ, ಕುಡಿಯುವ ನೀರು, ಉತ್ತಮ ರಸ್ತೆ, ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಒದಗಿಸುವ ಅಗತ್ಯವಿದೆ~ ಎಂದ ಅವರು, `ಸರ್ಕಾರ ಈ ಕುರಿತು ಗಂಭೀರವಾಗಿ ಚರ್ಚಿಸಿ, ಹಲವಾರು ವಿನೂತನ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ~ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎ. ರಾಮದಾಸ್, ಜಿ.ಪಂ. ಅಧ್ಯಕ್ಷೆ ಸುನೀತಾ ವೀರಪ್ಪಗೌಡ, ಶಾಸಕ ವಿ.ಶ್ರೀನಿವಾಸ್ ಪ್ರಸಾದ್ ಮಾತನಾಡಿದರು. ಎಂ. ಸತ್ಯನಾರಾಯಣ, ಉಪಾಧ್ಯಕ್ಷ ಡಾ .ಶಿವರಾಮು, ಜಿ.ಪಂ. ಸಿಇಓ ಜಿ.ಸತ್ಯವತಿ, ನಂಜನಗೂಡು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚಿಕ್ಕೀರಮ್ಮ, ಉಪಾಧ್ಯಕ್ಷ ಚಿಕ್ಕಮಾದಪ್ಪ, ತಹಶೀಲ್ದಾರ್ ನವೀನ್ ಜೋಸೆಫ್, ಗ್ರಾಮೀಣ ದಸರಾ ಉಪಸಮಿತಿ ಉಪಾಧ್ಯಕ್ಷರಾದ              ಎಚ್.ಸಿ.ಲಕ್ಷ್ಮಣ್, ಎಚ್.ಎನ್. ಮಂಜುನಾಥ್, ಸದಸ್ಯ ಕಾರ್ಯದರ್ಶಿ ಡಾ.ಕೆ.ಶಂಕರೇಗೌಡ ಉಪಸ್ಥಿತರಿದ್ದರು.

ಮೋದಿ ನನ್ನ ರಾಜಕೀಯ ಗುರು: ರಾಮದಾಸ್
ಮೈಸೂರು: `ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನನ್ನ ರಾಜಕೀಯ ಗುರುವಾಗಿದ್ದು, ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಗುಜರಾತ್‌ಗೆ ತೆರಳಿದ್ದೆ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಹೇಳಿದರು.

ನಂಜನಗೂಡಿನಲ್ಲಿ ಗ್ರಾಮೀಣ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ದಸರಾ ಉತ್ಸವಕ್ಕೆ ಮೋದಿ ಅವರನ್ನು ಆಹ್ವಾನಿಸಲು ಹೋಗಿದ್ದೀರಾ?~ ಎಂಬ ಪ್ರಶ್ನೆಗೆ, `ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಸರ್ಕಾರದ ಪರವಾಗಿ ಅಧಿಕೃತ ಆಹ್ವಾನ ನೀಡಿದ್ದಾರೆ. ಮೋದಿ ಬರುವ ಬಗ್ಗೆ ಇನ್ನೂ ಖಚಿತ ವಾಗಿಲ್ಲ. ಆದಾಗ್ಯೂ ಬರುವ ಸಾಧ್ಯತೆ ಇದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಶಾಸಕ ವಿ.ಶ್ರೀನಿವಾಸ್‌ಪ್ರಸಾದ್, `ರಾಮದಾಸ್ ಅಧಿಕೃತವಾಗಿಯೇ ಆಹ್ವಾನ ನೀಡಲು ಹೋಗಿದ್ದರು~ ಎಂದು ಖಾರವಾಗಿಯೇ ಹೇಳಿದರು. ಇದನ್ನು ನಿರಾಕರಿಸಿದ ರಾಮದಾಸ್, `ಅಧಿಕೃತ ಆಹ್ವಾನ ನೀಡಿದ್ದು ಸದಾನಂದಗೌಡ ಅವರು. ನಾನು ಹುಟ್ಟುಹಬ್ಬಕ್ಕೆ ಶುಭಾ ಶಯ ಕೋರಲು ಮಾತ್ರ ಹೋಗಿದ್ದೆ~ ಎಂದು ಪುನರುಚ್ಚರಿಸಿದರು.
 

56 ಹಳ್ಳಿಗೆ ಮೊದಲು ನೀರು ಕೊಡಿ: ಪ್ರಸಾದ್
ನಂಜನಗೂಡು: `56 ಹಳ್ಳಿಗಳಿಗೆ ಮೊದಲು ಕುಡಿಯುವ ನೀರು ಕೊಡಿ. ನಂತರ ಎರಡನೇ ಹಂತದ 124 ಹಳ್ಳಿಗೆ ನೀರು ಒದಗಿಸುವ ಯೋಜನೆ ಬಗ್ಗೆ ಮಾತನಾಡಿ~ ಎಂದು ಶಾಸಕ ವಿ.ಶ್ರೀನಿವಾಸಪ್ರಸಾದ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮೀಣ ದಸರಾ ಉದ್ಘಾಟನಾ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ್ ಶೆಟ್ಟರ್ ತಮ್ಮ ಭಾಷಣದಲ್ಲಿ `ಈ ತಾಲ್ಲೂಕಿನ 124 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಸಿದ್ಧಗೊಳ್ಳುತ್ತಿದೆ~ ಎಂದು ಹೇಳಿದ್ದಕ್ಕೆ ಪ್ರತಿಯಾಗಿ ಶಾಸಕರು ಮೇಲಿನಂತೆ ಹೇಳಿದರು.

`ನಾವು ಶುರು ಮಾಡಿದ್ದ ಬರಪೀಡಿತ ಕೌಲಂದೆ ಹೋಬಳಿಯ 56 ಹಳ್ಳಿಗಳಿಗೆ ಕಪಿಲಾ ನದಿಯಿಂದ ನೀರು ಒದಗಿಸುವ ಕಾಮಗಾರಿ  ಈಗಾಗಲೇ ಮುಗಿದಿದೆ. ಆದರೆ, ಯಾವ ಕಾರಣಕ್ಕೆ ಚಾಲನೆಗಿಲ್ಲ ಎಂಬುದು ಗೊತ್ತಾಗಿಲ್ಲ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ರಾಮದಾಸ್ ತಕ್ಷಣವೇ ಗಮನ ಹರಿಸಬೇಕು~ ಎಂದರು.

`ಪಟ್ಟಣದಲ್ಲಿ ರಸ್ತೆಗಳು ಹಾಳಾಗಿವೆ. ದಸರಾ ಮೆರವಣಿಗೆಯಲ್ಲಿ ಕಲಾವಿದರು ನೃತ್ಯ ಪ್ರದರ್ಶನ ಮಾಡುವ ಅಗತ್ಯವಿಲ್ಲ. ಯಾಕೆಂದರೆ ರಸ್ತೆಯ ಹಳ್ಳ, ಕೊಳ್ಳಗಳೇ ನರ್ತನ ಮಾಡಿಸಿ ಬಿಡುತ್ತವೆ~ ಎಂದು ಹಾಸ್ಯ ಚಟಾಕಿ ಹಾರಿಸಿದರು.

`ಒಳಚರಂಡಿ ಕಾಮಗಾರಿ ಶುರುವಾಗಿ 4 ವರ್ಷ ಕಳೆದಿದೆ. ಆದಾಗ್ಯೂ, ಇದುವರೆಗೂ ಪೂರ್ಣಗೊಂಡಿಲ್ಲ. ಈ ಬಗ್ಗೆಯೂ ಉಸ್ತುವಾರಿ ಸಚಿವರು ಗಮನ ಹರಿಸಬೇಕು. ಹಿಡಿದ ಕೆಲಸ ಪೂರ್ಣಗೊಳಿಸದೆ ಹೊಸ ಯೋಜನೆ ಪ್ರಕಟಿಸುವುದರಲ್ಲಿ ಅರ್ಥವಿಲ್ಲ~ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT