ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಿ ಭತ್ತದ ಬೀಜ ಖಜಾನೆ

Last Updated 16 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಕಿತ್ತೂರಿನಿಂದ ಖಾನಾಪೂರಕ್ಕೆ ಹೋಗುವ ಮಾರ್ಗದ ಉದ್ದಕ್ಕೂ ಗದ್ದೆಗಳಲ್ಲಿ ಭತ್ತ, ಕಬ್ಬು ಬೆಳೆದಿರುವುದನ್ನು ಕುತೂಹಲದಿಂದ ನೋಡುತ್ತಿದ್ದಾಗ ಸಹ ಪ್ರಯಾಣಿಕರಾದ ಸ್ಥಳೀಯ ರೈತ ಮಲ್ಲಪ್ಪ ಇಲ್ಲಿ ಬೆಳೆದಿರುವುದು ದೇಶಿ ತಳಿಯ ಭತ್ತಗಳು ಎಂದು ಹೆಳಿದಾಗ ಅಚ್ಚರಿಯಾಯಿತು.
 
ರೈತರು ದೇಶಿ ತಳಿಯ ಬೀಜಗಳನ್ನು ಎಲ್ಲಿಂದ ತಂದರು ಎಂದು ಕೇಳಿದಾಗ ಅವರು ಖಾನಾಪೂರ ತಾಲ್ಲೂಕಿನ ಗುಂಡ್ಯಾನಟ್ಟಿ ಗ್ರಾಮದ ಶಂಕರ ಲಂಗಟಿ ಎಂಬ ರೈತರ ಬಳಿ ಸುಮಾರು 60 ದೇಶಿ ತಳಿಯ ಭತ್ತದ ಬೀಜಗಳ ಖಜಾನೆಯೇ ಇದೆ! ಎಂದರು.

ಖಾನಾಪುರಕ್ಕೆ ಹೋಗುವ ಬದಲು ಗುಂಡ್ಯಾನಟ್ಟಿ ಗ್ರಾಮಕ್ಕೆ ಹೋದೆ. ಶಂಕರಪ್ಪ ಅವರನ್ನು ಕಂಡು  ಅವರ ಭತ್ತದ ಬೀಜಗಳ ಸಂಗ್ರಹ ನೋಡುವ ಮನಸ್ಸಾಯಿತು.
ಒಮ್ಮೆ ಅವರು ಧರ್ಮಸ್ಥಳಕ್ಕೆ ಹೋಗಿದ್ದಾಗ ಅಲ್ಲಿ ದೇಶಿ ಬೀಜಗಳ ಪ್ರದರ್ಶನ ನಡೆದಿತ್ತಂತೆ.

ಅದನ್ನು ನೋಡಿ ಅಲ್ಲಿಂದ 20 ಜವಾರಿ ತಳಿಗಳ ಭತ್ತದ ಬೀಜಗಳನ್ನು ಖರೀದಿಸಿ ತಂದು ಅವರ ಗದ್ದೆಯಲ್ಲಿ ಬೆಳೆಸಿದರಂತೆ. ಅಲ್ಲಿಂದ ಶುರುವಾಯಿತು ಅವರ  ದೇಶಿ ಭತ್ತದ ಬೀಜ ಸಂಗ್ರಹಿಸುವ ಹವ್ಯಾಸ ಎಂದರು ಶಂಕರಪ್ಪ.

ಧರ್ಮಸ್ಥಳದಿಂದ ತಂದು ಬೆಳೆಸಿದ್ದ ಭತ್ತದ ಪೈರುಗಳನ್ನು ನೋಡಿದ ಧಾರವಾಡ ಸಮೀಪದ ಮುಗದ ಭತ್ತದ ಸಂಶೋಧನಾ ಕೇಂದ್ರದ ತಜ್ಞ ರಾಘವೇಂದ್ರ ಅವರು ಇನ್ನೂ 24 ದೇಶಿ ತಳಿಗಳ ಬೀಜಗಳನ್ನು ನೀಡಿದರು.

ನಂತರ ಖಾನಾಪೂರದ ಗುಡ್ಡಗಾಡಿನಲ್ಲಿ ಅಲೆದಾಡಿ `ಕರೆ ಹಕ್ಕಲಸಾಲಿ~ ಮೊದಲಾದ ಅಪರೂಪದ ತಳಿಗಳನ್ನು ನಾನೇ ಹುಡುಕಿದೆ ಎನ್ನುತ್ತಾರೆ ಶಂಕರಪ್ಪ. ಅವರ ಸಂಗ್ರಹದಲ್ಲಿ ಓಡಿಶಾದ ರಾಮಗಲ್ಲಿ ಎಂಬ ವಿಶೇಷ  ತಳಿಯೂ ಇದೆ. 

 ಶಂಕರಪ್ಪ ಅವರ ಈ ಉತ್ಸಾಹ ನೋಡಿ ಅದೇ ಊರಿನ ಶಿವನಗೌಡ ಪಾಟೀಲ, ಈರಪ್ಪ ಅಂಗಡಿ ಮತ್ತಿತರರು ಸೇರಿಕೊಂಡು ಸಿದ್ಧಾರೂಢ ಸಾವಯವ ಬಳಗ ಮತ್ತು ದೇಶಿ ಬೀಜ ಬ್ಯಾಂಕನ್ನು ಸ್ಥಾಪಿಸಿದರು. ದೇಶಿ ಭತ್ತದ ಬೀಜಗಳ ರಕ್ಷಣೆಗೆ 40 ರೈತ ಸದಸ್ಯರು ಕೈಜೋಡಿಸಿದರು. ಈ ಎಲ್ಲಾ ರೈತರೂ ತಲಾ ಎರಡು ತಳಿಗಳ ಭತ್ತಗಳನ್ನು ಬೆಳೆಸುವ ನಿರ್ಧಾರ ಮಾಡಿದರು.
 
ಬೀಜ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಒಂದು ಕೇಜಿ ಬೀಜಗಳನ್ನು ಕೊಟ್ಟು  ಬೆಳೆದನಂತರ ಎರಡು ಕೇಜಿ ಬೀಜಗಳನ್ನು ಹಿಂದಿರುಗಿಸುವ ಒಪ್ಪಂದದ ಮೇಲೆ ಬೀಜ ವಿನಿಮಯ ಮಾಡಿಕೊಂಡರು. ಬೀಜಗಳ ರಕ್ಷಣೆಯ ಉಸ್ತುವಾರಿಯನ್ನು ಆನಂದ ತೇಗೂರ ನೋಡಿಕೊಳ್ಳುತ್ತಾರೆ.

ವಿಶೇಷ ಅಂದರೆ ಎಲ್ಲ ಬೀಜಗಳನ್ನೂ ಸಂಪೂರ್ಣ ಸಾವಯವದಲ್ಲಿ ಬೆಳೆದಿದ್ದಾರೆ! ಇವರ ಸಂಗ್ರಹದ ದೇಶಿ ಬೀಜಗಳು ಈಗ ನಾಲ್ಕು ಜಿಲ್ಲೆಗಳಲ್ಲಿ ಬಳಕೆಯಾಗುತ್ತಿವೆಯಂತೆ. ಇವುಗಳಲ್ಲಿ ಕಡಿಮೆ ಮಳೆ ಬೀಳುವ ಪ್ರದೇಶಕ್ಕೆ ಹೊಂದಿಕೆಯಾಗುವ ಬರ ನಿರೋಧಕ ಭತ್ತದ ತಳಿಗಳೂ ಇವೆ.

ಪ್ರಮುಖ ತಳಿಗಳು: ಸಿದ್ಧಾರೂಢ ಸಾವಯವ ಬಳಗದ ಬೀಜ ಬ್ಯಾಂಕಿನಲ್ಲಿರುವ ತಳಿಗಳ ಪೈಕಿ ಮುಗದ ದೊಡಗ್ಯಾ, ಮುಗದ ಸಿರಿ, ಕುಂಕುಮಸಾಲಿ, ಕಾಗಸಾಳಿ, ಡಾಂಬರಸಾಳಿ, ಕುಮುದ, ಕೃಷ್ಣಕುಮುದ, ಬಂಗಾರಕಡ್ಡಿ, ರತ್ನಚೂಡಿ, ಗಂಧಸಾಳಿ, ಚಂಪಕಸಾಳಿ, ಕರೆಕಾಲ ದೊಡಗ್ಯಾ, ಚಂಡಿಕ್ಯಾ ಮುಗದ, ಬೆಳಗಾಂವ ಮುಗದ, ವೈಪೋರ್, ಮೈಸೂರ ಮಲ್ಲಿಗೆ, ಕರೆಗಜವಿಲಿ, ಬರ್ಮಾಕಪೋಕಿ, ಮತ್ತು ಒಡಿಶಾದ ರಾಮಗಲ್ಲಿ ತಳಿಗಳು ಪ್ರಮುಖವಾದವು.

 ದೇಶಿಯ ಭತ್ತಗಳ ಅಕ್ಕಿ ಸದೃಢ ಆಹಾರ. ಅವುಗಳಲ್ಲಿ ಪೋಷಕಾಂಶಗಳು ಹೆಚ್ಚಾಗಿವೆ. ಕುಂಕುಮ ಸಾಳಿ ಭತ್ತಕ್ಕೆ ವಿಶಿಷ್ಟ ಸುವಾಸನೆ ಇದೆ. ಅದರಿಂದ ಪಲಾವ್ ತಯಾರಿಸಬಹುದು. ಕರಿ ಭತ್ತ ರೋಗಕ್ಕೆ ನಿರೋಧಕ ಗುಣವಿದೆ. ಕರಿ ಗಜವಿಲಿ ಭತ್ತದಲ್ಲಿ ಕಬ್ಬಿಣದ ಅಂಶ ಹೇರಳವಾಗಿದ್ದು ಬಾಣಂತಿಯರಿಗೆ ಅದರ ಅನ್ನ ಉತ್ತಮ ಆಹಾರ.
 
ಬರ್ಮಾ ಕಪ್ಪು ತಳಿಯ ಅಕ್ಕಿ ಮೂಲವ್ಯಾಧಿಗೆ ಔಷಧ. ಸ್ವರಟಾ ತಳಿ ಅವಲಕ್ಕಿಗೆ, ಕರಿ ಹಕ್ಕಳಸಾಲಿ ಅನ್ನ ಶೀತ ಜ್ವರದಿಂದ ಬಳಲುವವರಿಗೆ  ಔಷಧವಾಗಿ ಕೆಲಸ ಮಾಡುತ್ತದೆ. 
ಹಣದ ಬೆನ್ನು ಹತ್ತಿ ನಮ್ಮ ರೈತರು ದೇಶಿ ಭತ್ತಗಳನ್ನು ಬೆಳೆಯುವುದನ್ನು ನಿಲ್ಲಿಸಿದರು. ಈಗ ಕೆಲವು ರೈತರಿಗೆ ಪಶ್ಚಾತ್ತಾಪವಾಗಿದೆ. ದೇಶಿ ತಳಿಯ ಭತ್ತಗಳನ್ನು ಉಳಿಸಿಕೊಳ್ಳಬೇಕು ಮತ್ತು ಬೆಳೆಯಬೇಕು ಎಂಬ ಬಯಕೆ ಮೂಡುತ್ತಿದೆ. ಬೀಜ ಬ್ಯಾಂಕ್‌ಗಳನ್ನು ಆರಂಭಿಸಿ ಅಪರೂಪದ ತಳಿಗಳನ್ನು ಉಳಿಸಿಕೊಳ್ಳುವ ಅಲ್ಲಲ್ಲಿ ಪ್ರಯತ್ನ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ.

ಆಸಕ್ತರು ಶಂಕರಪ್ಪ ಲಂಗಟಿ ಅವರನ್ನು  ಸಂಪರ್ಕಿಸಿ ಮಾತನಾಡಬಹುದು. ಅವರ ಮೊಬೈಲ್ ನಂಬರ್-  9972150378.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT