ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಕಲೆ -ಸಾಹಿತ್ಯಕ್ಕೆ ಮನ್ನಣೆ: ಕುಶಾಲ್‌ಪಾಟೀಲ್

Last Updated 6 ಜೂನ್ 2011, 8:20 IST
ಅಕ್ಷರ ಗಾತ್ರ

ಬೀದರ್: `ಬೀದರ್ ಉತ್ಸವ~ದಲ್ಲಿ ಜಿಲ್ಲೆಯ ಕಲೆ- ಸಾಹಿತ್ಯಕ್ಕೆ ಮನ್ನಣೆ ದೊರತದ್ದೇ ಕಡಿಮೆ ಎಂದು ಅಭಿಪ್ರಾಯಪಟ್ಟ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕುಶಾಲ್ ಪಾಟೀಲ್ ಗಾದಗಿ ಅವರು ಆ ಕೊರತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿರುವ ಸಮ್ಮೇಳನ ತುಂಬಲಿದೆ ಎಂದು ಹೇಳಿದರು.

ನಾಲ್ಕಾರು ವರ್ಷಗಳಿಂದ ನಡೆಯುತ್ತಿರುವ ಉತ್ಸವಗಳು ಅಧಿಕಾರಿಗಳ ವರ್ಚಸ್ಸು ಹೆಚ್ಚಿಸುವುದಕ್ಕಾಗಿ ನಡೆಸದಂತಾಗಿದೆ. ಬೀದರ್ ಜಿಲ್ಲೆಯ ಕಲೆ- ಸಂಸ್ಕೃತಿ ಬಿಂಬಿಸಬೇಕಾಗಿದ್ದ ಉತ್ಸವಗಳು ಕೇವಲ ಆಡಂಬರದ ಪ್ರದರ್ಶನಗಳಾಗಿವೆ. ಸ್ಥಳೀಯ ಪ್ರತಿಭೆಗಳಿಗೆ ಯಾವುದೇ ರೀತಿಯ ಮನ್ನಣೆ ದೊರೆಯುತ್ತಿಲ್ಲ. ಪರಿಷತ್ತು ಸ್ಥಳೀಯ ಪ್ರತಿಭೆಗಳಿಗೆ ಮನ್ನಣೆ ನೀಡುವ ಮೂಲಕ ಮಹತ್ವದ ಕೆಲಸ ಮಾಡಿದೆ. ಬೀದರ್‌ನ ದೇಸಿ ಕಲೆ- ಸಂಸ್ಕೃತಿಯ ಅನಾವರಣ ಸಾಹಿತ್ಯ ಸಮ್ಮೇಳನದಲ್ಲಿ ಆಗಲಿದೆ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ತಿಂಗಳ 11 ಮತ್ತು 12ರಂದು ನಡೆಯಲಿರುವ 11ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಮ್ಮೇಳನವನ್ನು ಹಿರಿಯ ಕವಿ, ನಾಟಕಕಾರ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಅಧ್ಯಕ್ಷತೆಯನ್ನು ಶಿವಶರಣಪ್ಪ ವಾಲಿ ಅವರು ವಹಿಸಲಿದ್ದಾರೆ ಎಂದು ಪರಿಷತ್ತಿನ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ವಿವರಿಸಿದರು.

ಎರಡು ದಿನಗಳ ಸಮ್ಮೇಳನದಲ್ಲಿ ಒಟ್ಟು ಆರುಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಬೀದರ್ ಜಿಲ್ಲೆಯ    ಸಾಹಿತ್ಯ- ಸಂಸ್ಕೃತಿಯನ್ನು ಅನಾವರಣಗೊಳಿಸುವುದರ ಜೊತೆಗೆ ಸಮಕಾಲೀನ ಸಾಹಿತ್ಯ, ಅಭಿವೃದ್ಧಿ ಕುರಿತ ಚಿಂತನೆ ನಡೆಯಲಿದೆ. ಸಮ್ಮೇಳನದ ಉದ್ಘಾಟನೆಯ ಸಮಾರಂಭದಲ್ಲಿ ಜಾನಪದ ಸಾಹಿತ್ಯ ಕುರಿತ ಪುಸ್ತಕವನ್ನು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಿಡುಗಡೆ ಮಾಡಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ರೇವು ನಾಯಕ ಬೆಳಮಗಿ ಅವರು ಪುಸ್ತಕ ಮಳಿಗೆ ಉದ್ಘಾಟಿಸಿದರೆ ಸಂಸದ ಎನ್. ಧರಂಸಿಂಗ್ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು ಎಂದು ಹೇಳಿದರು.

`ಬೀದರ್ ಜಿಲ್ಲೆಯ ಜಾನಪದ ಸಾಹಿತ್ಯ~ ಮತ್ತು `ಬೀದರ್ ಜಿಲ್ಲಾ ಸಮಗ್ರ ಅಭಿವೃದ್ಧಿ~, `ಕವಿಗೋಷ್ಠಿ~, `ವಚನ ಸಾಹಿತ್ಯ~, `ಮಕ್ಕಳ ಸಾಹಿತ್ಯ ಗೋಷ್ಠಿ~ ಹಾಗೂ `ಚುಟುಕು ಕವಿಗೋಷ್ಠಿ~ಗಳನ್ನು ಏರ್ಪಡಿಸಲಾಗಿದೆ. ಹಾಗೆಯೇ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನ ಹಾಗೂ ಬೀದರ್ ಜಿಲ್ಲೆಯ ಭಾಷೆ- ಸಾಹಿತ್ಯ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದ ಪ್ರಮುಖರನ್ನು ಸನ್ಮಾನಿಸಲಾಗುತ್ತದೆ.

ಧಾರವಾಡದ ಹಿರಿಯ ಕವಿ ಡಾ. ಪಂಚಾಕ್ಷರಿ ಹಿರೇಮಠ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಅವರು ಹೇಳಿದರು.

 ಸಮ್ಮೇಳನದ ಮೊದಲನೇ ದಿನ ಬೆಳಿಗ್ಗೆ ನಗರದ ಬಿ.ವಿ.ಬಿ. ಕಾಲೇಜಿನಿಂದ ಸಮ್ಮೇಳನ ನಡೆಯುವ ರಂಗಮಂದಿರದ ವರೆಗೆ ಮೆರವಣಿಗೆ ನಡೆಸಲಾಗುತ್ತದೆ. ರಥದಲ್ಲಿ ಮೆರವಣಿಗೆ ನಡೆಸಲಾಗುತ್ತದೆ. 11 ಎತ್ತಿನ ಬಂಡಿ ಮತ್ತು 11 ಒಂಟೆಗಳು, ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ ಎಂದು ಸುರೇಶ ಚೆನಶೆಟ್ಟಿ ಹೇಳಿದರು.

ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಎಂ.ಎಸ್.ಮನೋಹರ್, ಶಿವಕುಮಾರ ಕಟ್ಟೆ, ಸಂಜೀವಕುಮಾರ ಅತಿವಾಳೆ, ವೀರಶೆಟ್ಟಿ ಬಾವುಗೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT