ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ದೇಸಿ ಭಾಷೆಗಳನ್ನು ಅಳಿವಿನಂಚಿಗೆ ತಳ್ಳಿದ ಇಂಗ್ಲಿಷ್'

Last Updated 14 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಬೆಂಗಳೂರು: `ಸಂವಹನಕ್ಕಾಗಿಯೇ ಬಳಸಲಾಗುತ್ತಿರುವ ಇಂಗ್ಲಿಷ್ ಭಾಷೆಯೂ ದೇಸಿ ಭಾಷೆಗಳನ್ನು ಅಳಿವಿನಂಚಿಗೆ ತಂದಿರುವುದಲ್ಲದೇ, ಈ ನೆಲದ ವಿಚಾರಗಳನ್ನು ಅಸಡ್ಡೆಯಿಂದ ನೋಡುವಂತೆ ಮಾಡಿರುವುದು ಭಾಷಾಲೋಕದ ದುರಾದೃಷ್ಟ' ಎಂದು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ವಿಷಾದಿಸಿದರು.

ಸಾಹಿತ್ಯ ಅಕಾಡೆಮಿಯು ಅರಮನೆ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ಬೆಂಗಳೂರು ಸಾಹಿತ್ಯೋತ್ಸವ' ಸಮಾರಂಭದಲ್ಲಿ ಅವರು ಮಾತನಾಡಿದರು.`ಸಾಹಿತ್ಯವನ್ನು ಸೃಷ್ಟಿಸುವ ಸಂದರ್ಭದಲ್ಲಿ ಇಂಗ್ಲಿಷ್ ಮಾದರಿಯನ್ನೇ ಹೆಚ್ಚು ಅನುಕರಿಸಲಾಗುತ್ತಿದೆ.  ಆದರೆ, ಇಂಗ್ಲಿಷ್ ಸಾಹಿತ್ಯದ ಮಾದರಿಗಳು ಬರಿದಾಗುತ್ತಿದ್ದು, ದೇಸಿಯ ಭಾಷೆಗಳು ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ಸೃಜನಶೀಲತೆಯನ್ನು ಹುಟ್ಟುಹಾಕಬೇಕು' ಎಂದು ತಿಳಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ವಿಶ್ವನಾಥ ಪ್ರಸಾದ್ ತಿವಾರಿ, `ಪಕ್ಷಿಗಾದ ನೋವನ್ನು ವಾಲ್ಮೀಕಿ ಹೇಳಿದಂತೆ, ಎಲೆಗೂ ಜೀವವಿರುವುದನ್ನು ಕಬೀರ್‌ದಾಸ್ ವರ್ಣಿಸುವಂತೆ ಸಾಹಿತಿಗಳು ಇತರರಿಗೆ ಕ್ಷುಲಕವೆನಿಸುವ ವಿಚಾರಗಳಿಗೂ ಜೀವಂತಿಕೆಯ ಆಯಾಮ ನೀಡಬೇಕು. ಆಗ ಮಾತ್ರ ಸಾಹಿತ್ಯ ಲೋಕಕ್ಕೆ ಜೀವಕಳೆಯನ್ನು ನೀಡಲು ಸಾಧ್ಯ' ಎಂದು ಹೇಳಿದರು.
`ಸಾಹಿತಿಗಳ ಮಾರ್ಗದರ್ಶನ ಪಡೆಯುವ ಸಮಾಜ ಎಂದಿಗೂ ಸುವ್ಯವಸ್ಥೆಯಿಂದ ಕೂಡಿರುತ್ತದೆ. ಸಾಹಿತಿಗಳ ವಿಭಿನ್ನ ವಿಚಾರಧಾರೆಗಳು ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಲೋಕದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ' ಎಂದು ಅಭಿಪ್ರಾಯಪಟ್ಟರು.

ಹಿರಿಯ ಸಾಹಿತಿ ಡಾ.ಸೀತಾಕಾಂತ ಮಹಾಪಾತ್ರ, `ಕೇವಲ ಇಂಗ್ಲಿಷ್ ಭಾಷೆಯಲ್ಲಿರುವ ಸಾಹಿತ್ಯವನ್ನು ದೇಶೀಯ ಭಾಷೆಗಳಿಗೆ ಭಾವಾನುವಾದ ಮಾಡುವುದು ಮಾತ್ರವಲ್ಲ. ಪರಸ್ಪರ ಪ್ರಾದೇಶಿಕ ಭಾಷೆಗಳೂ ಭಾವಾನುವಾದದ ಪ್ರಕ್ರಿಯೆಗೆ ಒಳಗಾಗಬೇಕು. ಆಗ ಮಾತ್ರ ಭಾರತದ ಸಾಹಿತ್ಯ ಶ್ರೀಮಂತಗೊಳ್ಳಲು ಸಾಧ್ಯ' ಎಂದು ಹೇಳಿದರು.

`ದೇಶದ ಸಾಹಿತ್ಯಕ್ಕೆ ಸಂಬಂಧಪಟ್ಟ ಕರ್ನಾಟಕದ ಸಾಹಿತ್ಯಲೋಕವೂ ವಿಶೇಷ ಮನ್ನಣೆಯನ್ನು ಗಳಿಸಿದೆ. ಭಾಷೆಯನ್ನು ಪ್ರೀತಿಸುವ ಜನರು ಇರುವವರೆಗೂ ಸಾಹಿತ್ಯವೂ ಉಳಿಯುತ್ತದೆ. ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯುತ್ತಿರುವ ಕನ್ನಡ ಸಾರಸ್ವತಲೋಕವೇ ಅದಕ್ಕೆ ಉತ್ತಮ ಉದಾಹರಣೆ' ಎಂದು ಶ್ಲಾಘಿಸಿದರು.

ಕಂಬಾರರ `ಶಿವರಾತ್ರಿ' ನಾಟಕ, ಸಾಹಿತಿ ದೇವನೂರ ಅವರ `ಎದೆಗೆ ಬಿದ್ದ ಅಕ್ಷರ' ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಹಿರಿಯ ಸಾಹಿತಿ ಡಾ.ಎಂ.ಟಿ.ವಾಸುದೇವನ್ ನಾಯರ್, ವಿಮರ್ಶಕ ಪ್ರೊ.ಒ.ಎಲ್.ನಾಗಭೂಷಣ ಸ್ವಾಮಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT