ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಹುಡುಗರ ಪರದೇಶಿ ಕಥನ (ಹಿಂದಿ ಚಿತ್ರ: ದೇಸಿ ಬಾಯ್ಸ)

Last Updated 26 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬಾಲಿವುಡ್‌ನಲ್ಲಿ ತುಂಟ ಹುಡುಗರ ಜೀವನದ ಕತೆ ಹೇಳುವ ಹಾಸ್ಯ ಸಿನಿಮಾಗಳ ಹಂಗಾಮ `ದೇಸಿ ಬಾಯ್ಸ~ ಮೂಲಕವೂ ಮುಂದುವರಿದಿದೆ. ಅಕ್ಷಯ್ ಕುಮಾರ್, ಜಾನ್ ಅಬ್ರಹಾಂ ನಾಯಕರಾಗಿರುವ ಈ ಸಿನಿಮಾ ಇವರಿಬ್ಬರ ಹರೆಯದ ಹುಡುಗರು ಮಾಡುವ `ಲೀಲೆ~ಗಳಿಂದ, ಅವರ ಕೋಡಂಗಿತನದ ನಟನೆಯಿಂದ ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ.

ಅಮೆರಿಕದಲ್ಲಿ ಇತ್ತೀಚೆಗೆ ಆದ ಆರ್ಥಿಕ ಕುಸಿತ ಲಂಡನ್‌ನಲ್ಲಿ ಕೆಲಸ ಮಾಡುವ, ಅಲ್ಲೇ ತಮ್ಮ ಬದುಕನ್ನು ಹುಡುಕಿಕೊಂಡ ಇಬ್ಬರು ಭಾರತೀಯರ ಬದುಕಿನಲ್ಲಿ ಯಾವೆಲ್ಲ ಪರಿಣಾಮ ಬೀರುತ್ತದೆ, ಅದರಿಂದ ಈ ಯುವಕರಿಬ್ಬರ ಬದುಕಿನ ನಾವೆ ಎತ್ತ ಹರಿಯುತ್ತದೆ ಎನ್ನುವುದು ಸಿನಿಮಾದ ಕಥಾಹಂದರ.

ಸ್ನೇಹಿತರಾಗಿರುವ ನಾಯಕರಿಬ್ಬರಲ್ಲಿ ಒಬ್ಬ ಹೆಚ್ಚು, ಇನ್ನೊಬ್ಬ ಕಡಿಮೆ ಓದಿದವನು. ಇವರಿಬ್ಬರೂ ಲಂಡನ್‌ನಲ್ಲಿ ಕೆಲಸ ಕಳೆದುಕೊಂಡು ಮದುವೆಗಾಗಿ, ಮಗನಿಗಾಗಿ, ಒಟ್ಟಾರೆ ಬದುಕಿಗಾಗಿ ಪಡುವ ಪಾಡು ಇಲ್ಲಿದೆ. ಕೆಲಸವೇ ಸಿಗದೆ ಅವರು ಅಲ್ಲಿ ನಿಜಕ್ಕೂ `ಪರದೇಶಿ~ಗಳಾಗುತ್ತಾರೆ.

ಇದು ಸಾಮಾನ್ಯ ಕತೆಯೇ. ಆದರೆ ನಾಯಕರು ಪಡುವ ಪಾಡಿನಲ್ಲಿ ಹೊಸತನವಿದೆ. ಅವರಿಗೆ ಒಪ್ಪದ ಆದರೆ ಹಣಕ್ಕಾಗಿ ಹೆಂಗಳೆಯರನ್ನು ಹಾಡು, ನೃತ್ಯಗಳಿಂದ `ಖುಷಿಪಡಿಸುವ~ ಕೆಲಸದಿಂದ ತಪ್ಪಿಸಿಕೊಳ್ಳಲಾ ಗುವುದಿಲ್ಲ. ಇದೇ ಮುಂದೆ ಅವರಿಬ್ಬರ ಬದುಕಿನಲ್ಲಿ ಬಿರುಗಾಳಿ ಎಬ್ಬಿಸುತ್ತದೆ.

ಅದು ಏನು ಎಂಬುದನ್ನು ತೆರೆಯ ಮೇಲೆ ನೋಡಿಯೇ ಆನಂದಿಸಬೇಕು. ಇದನ್ನು ಮನಮೋಹವಾಗಿ, ಮನಕ್ಕೆ ಮುಟ್ಟುವ, ತಟ್ಟುವ ರೀತಿಯಲ್ಲಿ ನಿರ್ದೇಶಕ ರೋಹಿತ್ ಧವನ್ ಹೇಳುವಲ್ಲಿ ಸಿನಿಮಾದ ವಿಶಿಷ್ಟತೆ ಇದೆ. ಇದಕ್ಕೆ ನಿರ್ದೇಶಕ ರೋಹಿತ್‌ರದೇ ಕತೆ, ವೇಗವಾದ ಚಿತ್ರಕತೆ ಉಂಟು. ಇದೇ ಸಿನಿಮಾವನ್ನು ನೋಡುವಂತೆ ಮಾಡುವಲ್ಲಿನ ಪ್ರಮುಖ ಅಂಶ.

ಹಾಗೆಂದು ಹೊಸಬಗೆಯ ನಿರೂಪಣೆಯಾಗಲಿ, ಕತೆಯಾಗಲಿ ಇಲ್ಲಿ ಇಲ್ಲ. ಇರುವುದನ್ನೇ ಬೇರೆ ಪರಿಸರ, ಹಿನ್ನೆಲೆಯಲ್ಲಿ ತಂದೆ ಮಗನ ಸಂಬಂಧ, ಗೆಳೆಯರ ಆತ್ಮೀಯತೆಯಲ್ಲಿ ಕಾಣಿಸಲಾಗಿದೆ. ಜೀವನೋ ಪಾಯಕ್ಕೆ ಬೇಕಾದ ಹಣ ಯಾವೆಲ್ಲ ಪ್ರಭಾವವನ್ನು ಜೀವನದಲ್ಲಿ ಮಾಡುತ್ತದೆ ಎಂಬುದಕ್ಕೆ ತಮಾಷೆಯ ಲೇಪವನ್ನು ಕೊಟ್ಟುಕೊಂಡೇ ಈ ಸಿನಿಮಾ ರೂಪುಗೊಂಡಿದೆ.

ಹಾಗೆಂದು ಸಿನಿಮಾದಲ್ಲಿ ಋಣಾತ್ಮಕ ಅಂಶಗಳೇ ಇಲ್ಲವೆಂದಲ್ಲ. ಎಲ್ಲ ಸನ್ನಿವೇಶಗಳನ್ನೂ ತಮಾಷೆಯಾಗಿ ಚಿತ್ರಸಬೇಕೆನ್ನುವ ನಿರ್ದೇಶಕರ ಗೀಳು ಪ್ರೇಕ್ಷಕರ ಕಿರಿಕಿರಿಗೆ ಕಾರಣವಾಗಬಲ್ಲದು.

ಇದಕ್ಕೆ ಒಳ್ಳೆಯ ಉದಾಹರಣೆ, ಸಿನಿಮಾದ ಕೊನೆಯಲ್ಲಿ ಬರುವ ನ್ಯಾಯಾಲಯದ ದೃಶ್ಯದಲ್ಲಿ ಹುಡುಗಿಯರನ್ನು ಖುಷಿಪಡಿಸುವ ಕಂಪೆನಿ `ದೇಸಿ ಬಾಯ್ಸ~ನ ಬಾಸ್ ಸಂಜಯ್‌ದತ್ ಬೇಕಾಬಿಟ್ಟಿಯಾಗಿ ಮಾತನಾಡುತ್ತ ಮಹಿಳಾ ನ್ಯಾಯಾಧೀಶರ ಮೇಲೂ ಪ್ರಭಾವ ಬೀರುವುದು ಆಭಾಸವಾಗಿ ಕಾಣುತ್ತದೆ.

ಸಿನಿಮಾದಲ್ಲಿ ನಿಜವಾದ ದೇಸಿ ಬಾಯ್ ಎಂದರೆ ಅಕ್ಷಯ್ ಕುಮಾರ್. ಅಕ್ಷಯ್ ಹಾಗೂ ಮುಖದಲ್ಲಿ ಹೆಚ್ಚೇನೂ ಭಾವನೆಗಳನ್ನು ತೋರದ ಜಾನ್ ಕಥೆಯ ಜೀವಾಳ. ನಮ್ಮ `ಕೋಲು ಸುಂದರಿ~ ಕನ್ನಡತಿ ದೀಪಿಕಾ ಪಡುಕೋಣೆ, ಬಳುಕುವ ಚಿತ್ರಾಂಗದಾ ಸಿಂಗ್ ಕೊಂಚ ಮಿಂಚು ಹರಿಸುತ್ತಾರೆ.
 
ಚಿತ್ರಾಂಗದಾ ಸಿನಿಮಾದ ಎರಡನೇ ಭಾಗದಲ್ಲಿ ಬರುವುದರಿಂದ ಅವರ ಕೆಲಸ ಸಿನಿಮಾದಲ್ಲಿ ಅಷ್ಟಾಗಿ ಕಾಣುವುದಿಲ್ಲ. ಅನುಪಮ್ ಖೇರ್, ಸಂಜಯ್‌ದತ್ ಪುಟ್ಟ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಂಜಯ್ ಪಾತ್ರ ಮಾತ್ರ ವಿಶಿಷ್ಟವಾಗಿದೆ.
 
ಪ್ರೀತಂ ಅವರ ಸಂಗೀತ ಸಿನಿಮಾವನ್ನು ಮೀರಿ ಪ್ರೇಕ್ಷಕರನ್ನು ತಾಕುವುದಿಲ್ಲ. ಅದು ಕತೆಯ ವೇಗಕ್ಕೆ ಚುರುಕನ್ನು ಕೊಟ್ಟಿದ್ದು, ಪಡ್ಡೆಗಳು ಕೊಂಚ ಕಾಲು ಕುಣಿಸುವಂತೆ ಮಾಡುತ್ತದೆ.

ಕನ್ನಡ ಸಿನಿಮಾದ ನಾಯಕರು ಇನ್ನೂ ಬಾಡಿದ ಗುಲಾಬಿಯನ್ನೇ ನಾಯಕಿಗೆ ಕೊಡುತ್ತ, ತುಕ್ಕು ಹಿಡಿದ ಮಚ್ಚು ಹಿಡಿದುಕೊಂಡು, ತಮ್ಮ ತೋಳ್ಬಲವನ್ನು ತೆರೆಯ ಮೇಲೆ ತೋರುತ್ತಿದ್ದಾರೆ. ಕನ್ನಡದ `ದೇಸಿ ಬಾಯ್ಸ~ಗಳಾದ ಗಣೇಶ್, ವಿಜಯ್, ದರ್ಶನ್, ಸುದೀಪ್, ಯಶ್ ಮತ್ತಿತರರು ಈ ಬಗೆಯ ಸಿನಿಮಾಕ್ಕೆ ಪ್ರಯತ್ನಿಸುವ ಅಗತ್ಯ ಖಂಡಿತ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT