ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹ ಕಡೆದ ಫ್ರೀಸ್ಟೈಲ್ ವ್ಯಾಯಾಮ

Last Updated 26 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಪ್ರತಿದಿನ ಒಂದು ಬಟ್ಟಲಲ್ಲಿ ಗೋಡಂಬಿ ತುಂಬಿಕೊಂಡು ಮೆಲ್ಲುತ್ತಾ ಓಡಾಡುತ್ತಿದ್ದ ಅಯೇಷಾ ಅದನ್ನು ನಿಲ್ಲಿಸಿದ್ದಾರಂತೆ. ಅದರ ಪ್ರತಿಫಲದಿಂದ ಎಂಟು ಕೆಜಿ ದೇಹ ತೂಕ ಕಡಿಮೆಯಾಗಿರುವುದು ಅವರ ಉತ್ಸಾಹಕ್ಕೆ ಕಾರಣ. ಸದ್ಯಕ್ಕೆ `ಭೈರವಿ' ಮತ್ತು `ಸಿಡಿಲಮರಿ' ಚಿತ್ರಗಳ ಚಿತ್ರೀಕರಣ ಪೂರೈಸಿರುವ ಅವರು ತೆಲುಗು ಚಿತ್ರವೊಂದರ ಕತೆ ಕೇಳಿದ್ದಾರೆ. ಅದನ್ನು ಒಪ್ಪಿಕೊಳ್ಳುವ ಸಾಧ್ಯತೆ ಇದೆಯಂತೆ.

ಕನ್ನಡದ ಕರಾಟೆ ಹುಡುಗಿ ಎಂದೇ ಪ್ರಸಿದ್ಧರಾಗಿರುವ ಅಯೇಷಾ ಥ್ರಿಲ್ಲರ್ ಮಂಜು ಅವರ `ಜಯಹೇ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದವರು. ನಂತರದಲ್ಲಿ ತಾವೇ ಪ್ರಧಾನ ನಾಯಕಿಯಾಗಿದ್ದ ಸಿನಿಮಾಗಳಲ್ಲಿ ನಟಿಸಿದರು. ಮಾಸ್ ಜನರನ್ನು ಸೆಳೆಯುವಲ್ಲಿ ಅವರ ಆಕ್ಷನ್ ಪ್ರಧಾನ ಚಿತ್ರಗಳು ಯಶಸ್ವಿಯಾಗಿದ್ದವು. ಇದೀಗ ತಮ್ಮ ತಂದೆ ನಿರ್ಮಿಸಿರುವ `ಸಿಡಿಲಮರಿ' ಮತ್ತು ಹ.ಸೂ.ರಾಜಶೇಖರ್ ನಿರ್ದೇಶನದ `ಭೈರವಿ' ಚಿತ್ರಗಳ ಬಿಡುಗಡೆಗೆ ಕಾಯುತ್ತಿದ್ದಾರೆ. ಸದ್ಯ ಆಕ್ಷನ್ ಸಿನಿಮಾಗಳಲ್ಲೇ ಹೆಚ್ಚಾಗಿ ನಟಿಸಿ ಬೇಸರ ಬಂದಿರುವುದರಿಂದ ಎಕ್ಸ್‌ಪೋಸ್ ಇಲ್ಲದ ಗ್ಲಾಮರ್ ಪಾತ್ರಗಳನ್ನು ಅಪೇಕ್ಷಿಸುತ್ತಿದ್ದಾರಂತೆ.

ಸಣ್ಣಂದಿನಿಂದ ಅಪ್ಪನ ಕರಾಟೆ ಗರಡಿಯಲ್ಲಿ ಪಳಗಿದ ಅಯೇಷಾ ಎಂದಿಗೂ ಅದನ್ನು ತ್ಯಜಿಸಿದವರಲ್ಲ. ಇಷ್ಟದ ಆಹಾರ ತಿನ್ನುತ್ತಾ ವ್ಯಾಯಾಮ ಮಾಡುತ್ತಾ ದೇಹದ ಸಮತೋಲನ ಕಾಯ್ದುಕೊಂಡಿದ್ದ ಅವರಿಗೆ ಇತ್ತೀಚೆಗೆ ದಪ್ಪ ಆದಂತೆ ಅನಿಸಿದೆ. ಹಾಗಾಗಿ ಇಷ್ಟದ ಬಿರಿಯಾನಿ, ಗೋಡಂಬಿಯನ್ನು ಕಷ್ಟಪಟ್ಟು ಬಿಟ್ಟಿದ್ದಾರೆ. ಅದರ ಪ್ರತಿಫಲವನ್ನೂ ಕಾಣುತ್ತಿದ್ದಾರೆ.

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಒಂದು ಗಂಟೆ ಕ್ರಂಚಸ್, ಸಿಟಪ್, ಕಿಕ್, ಪಂಚಸ್ ಹೀಗೆ ಕರಾಟೆ ಅಭ್ಯಾಸವನ್ನಷ್ಟೇ ಮಾಡುವ ಅವರು ಜಿಮ್‌ಗೆ ಹೋಗಲ್ಲ. ತಾವು ಮಾಡುವ ಫ್ರೀಸ್ಟೈಲ್ ವ್ಯಾಯಾಮ ಜಿಮ್‌ಗೆ ಹೋಗುವುದಕ್ಕಿಂತ ಒಳ್ಳೆಯದು ಎನ್ನುವ ಅಯೇಷಾ, ಇದರಿಂದ ಹೆಚ್ಚು ದೇಹಕ್ಕೆ ನೋವಾಗುವುದಿಲ್ಲ ಎನ್ನುತ್ತಾರೆ. `ಜಿಮ್‌ಗೆ ಹೋಗುವುದನ್ನು ಅಭ್ಯಾಸ ಮಾಡಿಕೊಂಡರೆ ಆ ಸಾಧನ ಸಲಕರಣೆಗಳಿಗೆ ದೇಹ ಒಗ್ಗಿ ಹೋಗುತ್ತದೆ. ನನಗೆ ಯಾವುದೇ ಸಾಧನ, ಸಲಕರಣೆಗಳ ಅಗತ್ಯ ಇಲ್ಲ' ಎನ್ನುತ್ತಾರೆ.

ಇದೀಗ ಊಟದ ವಿಚಾರದಲ್ಲಿ ಹೆಚ್ಚು ಎಚ್ಚರಿಕೆ ವಹಿಸಿರುವ ಅಯೇಷಾ ಡಯಟೀಶಿಯನ್ ನೆರವಿಲ್ಲದೆ ಇಂಟರ್‌ನೆಟ್‌ನಲ್ಲಿ ಓದಿ ಕ್ಯಾಲರಿಗಳ ಬಗ್ಗೆ ತಿಳಿದುಕೊಂಡಿದ್ದಾರಂತೆ. ಅನ್ನ, ಚಪಾತಿ ತಿನ್ನುವುದನ್ನು ಕಡಿಮೆ ಮಾಡಿರುವ ಅವರು ಹೆಚ್ಚಾಗಿ ಹಣ್ಣುಗಳು, ಸಮುದ್ರದ ಆಹಾರ, ಚಿಕನ್ ತಿನ್ನುತ್ತಿದ್ದಾರಂತೆ. ಅದರಿಂದ ದೇಹಕ್ಕೆ ಶಕ್ತಿಯೂ ಸಿಕ್ಕಿ, ಕೊಬ್ಬಿನ ಅಂಶ ಹೆಚ್ಚಾಗಿ ದೇಹಕ್ಕೆ ಸೇರುತ್ತಿಲ್ಲ ಎಂಬುದು ಅವರ ಖುಷಿಗೆ ಕಾರಣ. ಜಂಕ್‌ಫುಡ್ ಇಷ್ಟಪಡದ ಅಯೇಷಾ ಪೇಸ್ಟ್ರಿ, ಚಾಕೊಲೇಟ್, ಐಸ್‌ಕ್ರೀಮ್‌ಗಳನ್ನು ವಾರಕ್ಕೊಮ್ಮೆ ತಿನ್ನುತ್ತಾರೆ. ಅಷ್ಟೇ ಅಲ್ಲ, ನಿತ್ಯವೂ ವ್ಯಾಯಾಮದ ಮೂಲಕ ಬೆವರು ಸುರಿಸುತ್ತಾರೆ. ಅದರಿಂದಲೇ ಅವರ ದೇಹ ಸಪೂರವಾಗಿದೆ.

ಸಿನಿಮಾಗಳಲ್ಲಿ ಸಾಹಸ ಮಾಡುವುದರಿಂದ ಆರೋಗ್ಯದಲ್ಲಿ ಇದುವರೆಗೂ ಯಾವುದೇ ಏರುಪೇರು ಆಗಿಲ್ಲ ಎನ್ನುವ ಅಯೇಷಾ, `ಸಿನಿಮಾದಲ್ಲಿ ಸಾಹಸ ನಿರ್ದೇಶಕರು ಹುಡುಗಿ ಮಾಡಬಹುದಾದ ಆಕ್ಷನ್‌ಗಳನ್ನು ಮಾತ್ರ ನನ್ನಿಂದ ಮಾಡಿಸುತ್ತಾರೆ. ಅದರಿಂದ ತೊಂದರೆ ಆಗಿಲ್ಲ. ಕೆಲವೊಮ್ಮೆ ಮೈಮೇಲೆ ರಕ್ತಹೆಪ್ಪುಗಟ್ಟಿದ ಗುರುತು ಕಾಣಿಸುತ್ತದೆ. ಸಣ್ಣಪುಟ್ಟ ಏಟಾಗುತ್ತದೆ. ಅದೆಲ್ಲಾ ಮಾಮೂಲಿ' ಎನ್ನುತ್ತಾರೆ. ಕನ್ನಡ ಕಲಿತು ತಮ್ಮ ಸಿನಿಮಾಗಳಿಗೆ ತಾವೇ ಡಬ್ಬಿಂಗ್ ಮಾಡುವುದು ಅವರ ಮುಂದಿನ ಗುರಿ. ಅಂದಹಾಗೆ, ಅಯೇಷಾ ಊರು ಆಂಧ್ರಪ್ರದೇಶದ ತಿರುಪತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT