ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ಗಣಪತಿ

Last Updated 1 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಬಸವನಗುಡಿ ಪ್ರದೇಶದಲ್ಲಿರುವ ಶ್ರೀ ದೊಡ್ಡಗಣಪತಿ ದೇವಸ್ಥಾನಕ್ಕೆ ಚಾರಿತ್ರಿಕ ಮಹತ್ವವಿದೆ. ಈ ಗಣಪತಿ ಮೂರ್ತಿಯನ್ನು ಬೆಂಗಳೂರಿನ ನಿರ್ಮಾತೃಗಳಾದ  ಕೆಂಪೇಗೌಡರು 1536ರಲ್ಲಿ ಪ್ರತಿಷ್ಠಾಪಿಸಿದರು. ಈ ಬೃಹತ್ ಮೂರ್ತಿಗೆ  ದೇವಸ್ಥಾನವನ್ನೂ ಅವರೇ ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ.
 
ಕೆಂಪೇಗೌಡರ ಕಾಲದಿಂದಲೂ ಈ ಗಣಪತಿ ಮೂರ್ತಿ ಬೆಂಗಳೂರು ನಾಗರಿಕರ ಇಷ್ಟ ದೇವತೆ. ಇದು ರಾಜ್ಯದ ಪ್ರಮುಖ ಗಣಪತಿ ದೇವಸ್ಥಾನಗಳಲ್ಲಿ ಒಂದು. ದೇವಸ್ಥಾನದ ಸುತ್ತಲಿನ ಪರಿಸರ ಇಂದಿಗೂ ವಿಶಿಷ್ಟವಾಗಿದೆ. ಲೌಕಿಕ ಜಂಜಾಟದ ಬದುಕಿನ ನೆಮ್ಮದಿಯನ್ನು ಕಳೆದುಕೊಂಡವರು ಗಣಪತಿಗೆ ಪೂಜೆ ಸಲ್ಲಿಸಿ ನೆಮ್ಮದಿ ಪಡೆಯುತ್ತಾರೆ.

ದೊಡ್ಡಗಣಪತಿ ಮೂರ್ತಿ 18 ಅಡಿ ಎತ್ತರ ಹಾಗೂ 16 ಅಡಿ ಅಗಲವಿದೆ. ಒಂದೇ ಶಿಲೆಯಲ್ಲಿ ಕೆತ್ತಿದ ಮೂರ್ತಿ ಇದು. ಇಡೀ ಕರ್ನಾಟಕದಲ್ಲಿ ಇಷ್ಟು ದೊಡ್ಡ ಗಾತ್ರದ ಗಣಪತಿ ಇಲ್ಲ. ಬೃಹದಾಕಾರದಿಂದಲೇ ಈ ಮೂರ್ತಿ  ಜನರ ಗಮನ ಸೆಳೆಯುತ್ತದೆ.

ನೂರಾರು ವರ್ಷಗಳಿಂದ ಬೆಂಗಳೂರಿನ ನಾಗರಿಕರು ಮಾತ್ರವಲ್ಲದೆ, ದಕ್ಷಿಣ ಭಾರತೀಯರು ಹಾಗೂ ಬೆಂಗಳೂರಿಗೆ ಬರುವ ವಿದೇಶಿ ಪ್ರವಾಸಿಗರು ಗಣಪತಿ ಮೂರ್ತಿಯನ್ನು ನೋಡಲು ಬರುತ್ತಾರೆ. ಹಿಂದೂಗಳಿಗೆ ದೊಡ್ಡ ಗಣಪತಿ ಆರಾಧ್ಯ ದೈವ. ಈ ಮೂರ್ತಿಯನ್ನು ನೋಡುವುದೇ ಕಣ್ಣಿಗೊಂದು ಹಬ್ಬ. 

ದೊಡ್ಡಗಣಪತಿ ಮುಖದಲ್ಲಿ ಪ್ರಸನ್ನತೆ ಇದೆ. ವಿಶೇಷ ಪೂಜೆ ಸಂದರ್ಭಗಳಲ್ಲಿ ದೊಡ್ಡಗಣಪತಿಗೆ ಬೆಳ್ಳಿಯ ಕವಚ ತೊಡಿಸುತ್ತಾರೆ. ಬೆಣ್ಣೆ ಅಲಂಕಾರ ಮಾಡಿದಾಗ ಗಣಪತಿಯ ಸೌಂದರ್ಯ ಹೆಚ್ಚುತ್ತದೆ. ಈ ಸಂದರ್ಭಕ್ಕೆ ಸಾವಿರಾರು ಭಕ್ತರು
ಸಾಕ್ಷಿಯಾಗುತ್ತಾರೆ. ಸಾವಿರಾರು ಕಡುಬುಗಳಿಂದ ಗಣಪತಿಯನ್ನು ಅಲಂಕರಿಸುವ ಪೂಜಿಸುವ ಪದ್ಧತಿ ಈ ದೇವಸ್ಥಾನದ ವಿಶೇಷ.

ವಿನಾಯಕ ಚೌತಿ, ಕಾರ್ತಿಕ ಅಮಾವಾಸ್ಯೆ, ಕಡಲೆಕಾಯಿ ಪರಿಷೆ ಮೊದಲಾದ  ಸಂದರ್ಭಗಳಲ್ಲಿ ಗಣಪತಿಯ ದರ್ಶನಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಬರುತ್ತಾರೆ.

ಭಕ್ತರು ಹೊಸದಾಗಿ ಖರೀದಿಸಿದ ವಾಹನಗಳನ್ನು  ದೇವಸ್ಥಾನಕ್ಕೆ ತಂದು  ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಹೀಗಾಗಿ ದೊಡ್ಡ ಗಣಪತಿಗೆ ವಾಹನ ಗಣಪತಿ ಎಂಬ ಹೆಸರೂ ಇದೆ. ಕನ್ನಡ ಚಲನ ಚಿತ್ರಗಳ ಮಹೂರ್ತಗಳು ಈ ದೇವಸ್ಥಾನದಲ್ಲಿ ನಡೆಯುತ್ತವೆ. ಬೇಡಿಕೆಗಳನ್ನು ಈಡೇರಿಸುವ ಗಣಪತಿ ಎಂಬ ನಂಬಿಕೆ ಜನರದು ಎನ್ನುತ್ತಾರೆ  ಪ್ರಧಾನ ಅರ್ಚಕ ವಿ.ಗುರುರಾಜ್.

ಈ ದೇವಸ್ಥಾನದ ಪಕ್ಕದಲ್ಲಿ ಬ್ಯೂಗಲ್‌ರಾಕ್ ಉದ್ಯಾನವಿದೆ. ಇದೇ ಪರಿಸರದಲ್ಲಿರುವ ದೊಡ್ಡ ಬಸವಣ್ಣನ ದೇವಸ್ಥಾನ ಮತ್ತು ಆಂಜನೇಯ ಸ್ವಾಮಿ ದೇವಸ್ಥಾನಗಳೂ ಇವೆ.ಗಣಪತಿಯ ದರ್ಶನಕ್ಕೆ ಬಂದವರು ಈ ದೇವಸ್ಥಾನಗಳಿಗೂ ಭೇಟಿ ನೀಡುತ್ತಾರೆ.

ದೊಡ್ಡಗಣಪತಿ ದೇವಸ್ಥಾನ ಈಗ ಮುಜರಾಯಿ ಇಲಾಖೆ ವಶದಲ್ಲಿದೆ. ಇಲಾಖೆಯ  ದೇವಸ್ಥಾನವನ್ನು ಅಭಿವೃದ್ಧಿ ಪಡಿಸಿದೆ.  ದೇವಸ್ಥಾನಕ್ಕೆ  ಸುಂದರ ಹಾಗೂ ಆಕರ್ಷಕ ರಾಜಗೋಪುರ ನಿರ್ಮಿಸಲಾಗಿದೆ. ಬಸವನ ಗುಡಿಯ ಪ್ರದೇಶದ ಎಲ್ಲಾ ಪ್ರಮುಖ ದೇವಸ್ಥಾನಗಳು ಕೆಂಪೇಗೌಡರ ಕಾಲದಲ್ಲಿಯೇ ನಿರ್ಮಾಣವಾಗಿವೆ ಎಂಬ ಪ್ರತೀತಿ ಇದೆ ಎನ್ನುತ್ತಾರೆ ದೇವಸ್ಥಾನದ ಅಧೀಕ್ಷಕ ವೆಂಕಟರತ್ನ ಶೆಟ್ಟರು.

ದೇವಸ್ಥಾನ ಬೆಳಿಗ್ಗೆ ಆರಕ್ಕೆ ತೆರೆಯುತ್ತದೆ. ಬೆಳಿಗ್ಗೆ 7ರಿಂದ 12.30, ಸಂಜೆ 5.30ರಿಂದ ರಾತ್ರಿ 8.30ರ ವರೆಗೆ ಜನರು ದರ್ಶನ ಮಾಡಬಹುದು ಮತ್ತು ಪೂಜೆ ಸಲ್ಲಿಸಬಹುದು.
ಕೆಂಪೇಗೌಡ ಬಸ್ ನಿಲ್ದಾಣದಿಂದ ನಗರ ಸಾರಿಗೆ ಬಸ್‌ಗಳ ಮೂಲಕ ದೇವಸ್ಥಾನಕ್ಕೆ ಹೋಗಬಹುದು. ಹೆಚ್ಚಿನ ಮಾಹಿತಿಗೆ: 88612 13814.

ಸೇವಾ ವಿವರ
* ಬೆಣ್ಣೆ ಅಲಂಕಾರ-            28,000 ರೂ
* ಪಂಚಾಮೃತ ಅಭಿಷೇಕ-         150 ರೂ
* ಕ್ಷೀರಾಭಿಷೇಕ-                      75 ರೂ
* ಸಂಕಷ್ಟಹರ ಚತುರ್ಥಿ-             30 ರೂ
* ಕಡುಬಿನ ಸೇವೆ 108ಕ್ಕೆ -        150 ರೂ
* ವಡೆ ಸರದ ಸೇವೆ 108ಕ್ಕೆ-      125 ರೂ
* ಗಣ ಯಾಗ(ಸಾಮಗ್ರಿರಹಿತ )   200 ರೂ
* ಸಿಹಿ ಪೊಂಗಲ್ ನೈವೇದ್ಯ-      125 ರೂ
* ಪುಳಿಯೋಗರೆ ನೈವೇದ್ಯ-       125 ರೂ
* ದ್ವಿಚಕ್ರ ವಾಹನ ಪೂಜೆ-            10 ರೂ
* ಭಾರಿ ವಾಹನ-                     25 ರೂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT