ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ಜಾತ್ರೆಯಲ್ಲಿ ಜನ ಸಾಗರ

Last Updated 18 ಮಾರ್ಚ್ 2011, 10:25 IST
ಅಕ್ಷರ ಗಾತ್ರ

ನಂಜನಗೂಡು: ಇಲ್ಲಿನ ಪ್ರಸಿದ್ಧ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ದೊಡ್ಡಜಾತ್ರೆ ಅಂಗವಾಗಿ ಗುರುವಾರ  ನಡೆದ ಪಂಚ ರಥಗಳ ಮಹಾ ಉತ್ಸವದಲ್ಲಿ ಪಾಲ್ಗೊಳ್ಳಲು ರಾಜ್ಯ ಮತ್ತು ಹೊರ ರಾಜ್ಯಗಳಿಂದ ಜನಸಾಗರವೇ  ಹರಿದು ಬಂದಿತ್ತು.ರಥೋತ್ಸವ ಜರುಗಿದ ಸಂದರ್ಭದಲ್ಲಿ ದೇವಾಲಯದ ಸುತ್ತಮುತ್ತ ಎತ್ತ ನೋಡಿದರೂ ಜನವೋ ಜನ. ಬುಧವಾರ ಮಧ್ಯಾಹ್ನ ಶುರುವಾದ ಜನ ಪ್ರವಾಹ ಗುರುವಾರ ಸಂಜೆ ವರೆಗೂ ನಿರಂತರವಾಗಿತ್ತು.

ಗುರುವಾರ ಬೆಳಿಗ್ಗೆ 5.50 ರಿಂದ 6.25ರ ಮುಹೂರ್ತದಲ್ಲಿ ರಥೋತ್ಸವ ಜರುಗುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ರಾತ್ರಿಯೇ ದೇವಾಲಯದ ಆವರಣದಲ್ಲಿ ತಂಗಿದ್ದ ಮತ್ತು ಬೆಳಗಿನ ಜಾವ ಆಗಮಿಸಿದ ಸಹಸ್ರಾರು ಭಕ್ತರು ರಥ ಎಳೆದು ಭಕ್ತಿಯ ಪರಕಾಷ್ಟೆ ಮೆರೆದರು. ಮಾರ್ಗದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಅಸಂಖ್ಯಾತ ಜನರು ರಥದ  ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಉತ್ಸವಮೂರ್ತಿಗೆ ಹಣ್ಣು-ಜವನ ಎಸೆದು ಸಂಭ್ರಮಿಸಿದರು. ಪಡ್ಡೆ ಹುಡುಗರ ಕೆಲ  ಗುಂಪು ಮಾರ್ಗದ ಉದ್ದಕ್ಕೂ ಕುಣಿದು ಕುಪ್ಪಳಿಸಿದರು.

ಮೈಸೂರು, ಚಾಮರಾಜನಗರ, ಮಂಡ್ಯ, ಬೆಂಗಳೂರು, ಕೋಲಾರ ಜಿಲ್ಲೆಗಳು ಸೇರಿದಂತೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಲಕ್ಷಕ್ಕೂ ಅಧಿಕ ಸಂಖ್ಯೆಯ ಭಕ್ತರು ಜಾತ್ರೆಗೆ ಆಗಮಿಸಿದ್ದರು ಎಂದು ಅಂದಾಜಿಸಲಾಗಿದೆ.

ದೇವಾಲಯದ ದಾಸೋಹ ಭವನದಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಿಗ್ಗೆ, ಮಧ್ಯಾಹ್ನ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ಇದಲ್ಲದೆ ಬೆಂಗಳೂರಿನ ಶ್ರೀಕಂಠೇಶ್ವರ ಸೇವಾ ಸಂಘ, ಪಟ್ಟಣದ ವೈಷ್ಣವ ಸಭಾ, ಮಹದೇಶ್ವರ ಪ್ಯಾಲೇಸ್ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಲಘು ಉಪಾಹಾರ, ಭೋಜನ, ನೀರು ಮಜ್ಜಿಗೆ, ಪಾನಕ ಮುಂತಾದ ತಿನಿಸುಗಳನ್ನು ಜನರಿಗೆ ಉಚಿತವಾಗಿ ಉಣ ಬಡಿಸಿದರು. ರಾಜಸ್ತಾನ ಸಮಾಜದ ವತಿಯಿಂದ ಸುಮಾರು 50 ಸಾವಿರ ಲಾಡುಗಳನ್ನು ವಿತರಿಸಲಾಯಿತು.

ಸೌಕರ್ಯ: ದೇವರ ದರ್ಶನಕ್ಕೆ ಈ ಬಾರಿ ಧರ್ಮ ದರ್ಶನದ ಮೂಲಕ ಮಾತ್ರ ಪ್ರವೇಶವಿತ್ತು. ಟಿಕೆಟ್ ಮೂಲಕ ಪ್ರವೇಶ ರದ್ದು ಪಡಿಸಲಾಗಿತ್ತು. ವಾಹನ ನಿಲುಗಡೆ ಉಚಿತವಾಗಿತ್ತು. ದೇವಾಲಯದ ಹೊರಭಾಗ ಮತ್ತು ಸರತಿ ಸಾಲಿನಲ್ಲಿ  ನಿಂತವರು ವೀಕ್ಷಿಸಲು ಟಿವಿಗಳನ್ನು ಅಳವಡಿಸಲಾಗಿತ್ತು. ವಿವಿಧ ಕಡೆ ತಾತ್ಕಾಲಿಕ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಕಪಿಲಾ ನದಿಯಲ್ಲಿ ಸ್ನಾನ ಮಾಡಿದ ಮಹಿಳೆಯರು ಬಟ್ಟೆ ಬದಲಿಸಲು 2 ಹಾಲ್ ನಿರ್ಮಿಸಲಾಗಿತ್ತು. ಸಾಮಾನು ಇಡುವ ಕೊಠಡಿ, ದೇವಾಲಯದ ಎರಡು ಕಡೆ, ಸರ್ಕಾರಿ ಬಸ್ ನಿಲ್ದಾಣದಲ್ಲಿ ಸಹಾಯವಾಣಿ ತೆರೆಯಲಾಗಿತ್ತು.

ರಥಗಳು ಸಾಗುವ ಮತ್ತು ನಿಲ್ಲುವ ರಸ್ತೆ ಬದಿಗಳಲ್ಲಿ ವ್ಯಾಪಾರಕ್ಕೆ ಮುಕ್ತ ಅವಕಾಶ ನೀಡಿದ್ದರಿಂದ ಜನರು ಹಣ್ಣು-ಜವನ ಎಸೆಯಲು ಮತ್ತು ಸಂಚಾರಕ್ಕೆ ತೊಡಕಾಯಿತು. ಮೈಸೂರು ಬಸ್ ನಿಲ್ದಾಣದಿಂದ ನಂಜನಗೂಡು ದೇವಾಲಯಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನೇರ ಬಸ್  ಸೌಕರ್ಯ  ಒದಗಿಸಿತ್ತು. ರೈಲ್ವೆ ಇಲಾಖೆ ಮೈಸೂರು- ನಂಜನಗೂಡು ನಡುವಣ ದೈನಂದಿನ ರೈಲಿಗೆ ಎರಡು  ಹೆಚ್ಚುವರಿ ಬೋಗಿ ಅಳವಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT