ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ಸಾಲಗಾರರತ್ತ ಗಮನ ಹರಿಸಿ

ಎನ್‌ಪಿಎ ಸಂಕಟ; ಬ್ಯಾಂಕ್‌ಗಳಿಗೆ ಚಿದಂಬರಂ ಕಿವಿಮಾತು
Last Updated 3 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಸೂಲಿ ಆಗದ ಸಾಲದ ಪ್ರಮಾಣ ಹೆಚ್ಚುತ್ತಲೇ ಇದ್ದು, ಬ್ಯಾಂಕಿಂಗ್ ವಲಯದ ಹಿನ್ನಡೆಗೆ ಕಾರಣವಾಗುತ್ತಿರುವ ಬಗ್ಗೆ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಕಳವಳ ವ್ಯಕ್ತಪಡಿಸಿದರು.

ದೊಡ್ಡ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿರುವ ಗ್ರಾಹಕರತ್ತ ಹೆಚ್ಚು ಗಮನ ಹರಿಸಿ, ವಸೂಲಿಗೆ ಕಠಿಣ ಕ್ರಮ ಕೈಗೊಳ್ಳಿ ಎಂದು ಬ್ಯಾಂಕ್‌ಗಳ ಆಡಳಿತಕ್ಕೆ ಸಚಿವರು ಬುದ್ಧಿಮಾತು ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಮುಖ್ಯಸ್ಥರ ಜತೆ ಬುಧವಾರ ಇಲ್ಲಿ ಸಭೆ ನಡೆಸಿದ ಅವರು, ನಂತರ ಸುದ್ದಿಗಾರರಿಗೆ ವಿವರ ನೀಡಿದರು.

ಅತ್ಯಧಿಕ ಪ್ರಮಾಣದಲ್ಲಿ ಬಾಕಿ ಉಳಿಸಿಕೊಂಡಿರುವ ಮೊದಲ 30 ಸಾಲಗಾರರತ್ತ ಪ್ರತಿ ಬ್ಯಾಂಕ್ ಆಡಳಿತವೂ ಇನ್ನು ಸೂಕ್ಷ್ಮವಾಗಿ ನಿಗಾ ಇಡಲಿದೆ. ಈ ಸಾಲಗಾರರಿಂದಾಗಿಯೇ ಬ್ಯಾಂಕ್‌ಗಳ ವಸೂಲಾಗದ ಸಾಲ ಮೊತ್ತ(ನೆಟ್ ಎನ್‌ಪಿಎ) ಕಳೆದ ಕೆಲವು ತಿಂಗಳಿಂದ ತೀವ್ರವಾಗಿ ಹೆಚ್ಚುತ್ತಾ ಇದೆ. ಇದು ದೇಶದ ಮಂದಗತಿ ಆರ್ಥಿಕ ಪ್ರಗತಿಗೂ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ) ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ)ಗೆ ಬಾಕಿಯಾಗಿರುವ ಸಾಲದ ಮೊತ್ತವೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಒಟ್ಟಾರೆ `ಎನ್‌ಪಿಎ' ಪ್ರಮಾಣದ ಶೇ 4ರಷ್ಟಿದೆ(2013ರ ಮಾರ್ಚ್ ಲೆಕ್ಕ).

ಸರ್ಕಾರಿ ಸ್ವಾಮ್ಯದ ಎಲ್ಲ ಬ್ಯಾಂಕ್‌ಗಳ ಒಟ್ಟು `ಎನ್‌ಪಿಎ' 2011ರ ಮಾರ್ಚ್ 31ರಂದು ರೂ71,080 ಕೋಟಿ ಇದ್ದುದು, 2012ರ ಡಿಸೆಂಬರ್ 31ರ ವೇಳೆಗೆ ರೂ1.55 ಲಕ್ಷ ಕೋಟಿಗೆ ಹೆಚ್ಚಳವಾಗಿತ್ತು.

ಬಡ್ಡಿ ದರ ಪರಾಮರ್ಶೆ
ಭಾರತೀಯ ರಿಸರ್ವ್ ಬ್ಯಾಂಕ್ 2012ರ ಜನವರಿಯಿಂದ ಈವರೆಗೆ ಮೂಲ ಬಡ್ಡಿದರದಲ್ಲಿ ಒಟ್ಟು ಶೇ 1.25ರಷ್ಟು ಇಳಿಕೆ ಮಾಡಿದೆ. ಆದರೆ, ಸರ್ಕಾರಿ ಬ್ಯಾಂಕ್‌ಗಳು ಕೇವಲ ಶೇ 0.30ರಷ್ಟು ಬಡ್ಡಿದರ ತಗ್ಗಿಸಿವೆ.

ಈ ವಿಚಾರದತ್ತ ಬ್ಯಾಂಕ್ ಮುಖ್ಯಸ್ಥರ ಗಮನ ಸೆಳೆದ ಚಿದಂಬರಂ, ತಕ್ಷಣವೇ ಬಡ್ಡಿದರ ಪರಾಮರ್ಶೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದೂ ಕಿವಿಮಾತು ಹೇಳಿದರು.

ಠೇವಣಿ-ಸಾಲ ಸಾಧನೆ
ಎಲ್ಲ ಬ್ಯಾಂಕ್‌ಗಳು ಆದ್ಯತಾ ವಲಯಕ್ಕೆ ನೀಡಿರುವ ಸಾಲದ ಪ್ರಮಾಣ ಹಾಗೂ ಸಂಗ್ರಹಿಸಿರುವ ಠೇವಣಿ ಮೊತ್ತದ ವಿವರವೂ ಸಭೆಯಲ್ಲಿ ಮಂಡನೆಯಾಯಿತು.

2013ರ ಮಾರ್ಚ್ 31ರ ವೇಳೆಗೆ ಒಟ್ಟಾರೆ ಠೇವಣಿ ಸಂಗ್ರಹ ಪ್ರಮಾಣ ಹಿಂದಿನ ವರ್ಷದ ಶೇ 14.4ರಿಂದ ಶೇ 14.91ಕ್ಕೆ ಹೆಚ್ಚಿದ್ದರೆ, ಸಾಲ ವಿತರಣೆ ಸಾಧನೆ ಮಾತ್ರ ಶೇ 17.76ರಿಂದ ಶೇ 15.62ಕ್ಕೆ ಕುಸಿದಿದೆ.

ಕೃಷಿ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ(ಎಸ್‌ಎಂಇ) ಹಾಗೂ ಚಿಲ್ಲರೆ ವಹಿವಾಟು ವಲಯದಿಂದ ಸಾಲಕ್ಕೆ ಭಾರಿ ಬೇಡಿಕೆ ಇದೆ. ಮೂಲ ಸೌಕರ್ಯ ಅಭಿವೃದ್ಧಿ ವಿಭಾಗದಲ್ಲಿ ರಸ್ತೆ  ನಿರ್ಮಾಣ ಮತ್ತು ಅಸಾಂಪ್ರದಾಯಿಕ ಇಂಧನ ಕ್ಷೇತ್ರದಿಂದಲೂ ಸಾಲಕ್ಕೆ ಹೆಚ್ಚಿನ ಕೋರಿಕೆ ಇದೆ. ಗೃಹ ನಿರ್ಮಾಣ ಕ್ಷೇತ್ರದಲ್ಲಿ ಸಾಲ ವಿತರಣೆ ಮತ್ತು ವಸೂಲಿಯಲ್ಲಿ ಗಮನಾರ್ಹ ಪ್ರಗತಿ ಕಂಡುಬರುತ್ತಿದೆ ಎಂದು ಸಚಿವರ ಸುದ್ದಿಗಾರರಿಗೆ ವಿವರ ನೀಡಿದರು.

ಹೊಸ ಬ್ಯಾಂಕ್‌ಗೆ 26ಅರ್ಜಿ
ಹೊಸದಾಗಿ ಬ್ಯಾಂಕ್ ಆರಂಭಿಸಲು ಅನುಮತಿ ಕೋರಿ ಈವರೆಗೆ ಒಟ್ಟು 26 ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ)ಗೆ ಅರ್ಜಿ ಸಲ್ಲಿಸಿವೆ. ನಿಗದಿತ ಎಲ್ಲ ಮಾನದಂಡ ಮತ್ತು ಷರತ್ತುಗಳನ್ನು ತೃಪ್ತಿಕರವಾಗಿ ಪೂರ್ಣಗೊಳಿಸುವ ಸಂಸ್ಥೆಗಳಿಗಷ್ಟೇ ಬ್ಯಾಂಕ್ ಆರಂಭಕ್ಕೆ `ಆರ್‌ಬಿಐ'ನಿಂದ ಹಸಿರು ನಿಶಾನೆ ದೊರೆಯಲಿದೆ. ಈ ವಿಚಾರದಲ್ಲಿ ಸರ್ಕಾರ ಸೂಚನೆ ನೀಡುವುದೇನೂ ಇಲ್ಲ ಎಂದು ಚಿದಂಬರಂ ಸ್ಪಷ್ಟಪಡಿಸಿದರು.

50,000 ಸಿಬ್ಬಂದಿ ನೇಮಕ
ವಹಿವಾಟು ವಿಸ್ತರಣೆ ಮತ್ತು ಸಾಮರ್ಥ್ಯ ಹೆಚ್ಚಳಕ್ಕಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಎಲ್ಲ ಸರ್ಕಾರಿ ಬ್ಯಾಂಕ್‌ಗಳೂ ಸೇರಿ 10,000 ಹೊಸ ಶಾಖೆ ತೆರೆಯಲಿವೆ. ಜತೆಗೆ 50,000 ಸಿಬ್ಬಂದಿಯನ್ನೂ ಹೊಸದಾಗಿ ನೇಮಿಸಿಕೊಳ್ಳಲಿವೆ ಎಂದು ಸಚಿವ ಚಿದಂಬರಂ ಹೇಳಿದರು.

2012ರಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು 23,200 ಅಧಿಕಾರಿ ಹುದ್ದೆ ಸೇರಿದಂತೆ 63,000 ಉದ್ಯೋಗ ಸೃಷ್ಟಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT