ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಮ್ಮತಾಯಿಗೆ ಭಕ್ತಿ ಸಮರ್ಪ: ಬಂಡಿ ಜಾತ್ರೆಗೆ ಹರಿದು ಬಂದ ಜನಸಾಗರ

Last Updated 2 ಜನವರಿ 2012, 9:30 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಎಲ್ಲಿ ನೋಡಿದರಲ್ಲಿ ಜನಸಾಗರ. ಅಲಂಕೃತ ಬಂಡಿಗಳ ವೈಭವ. ಚಿಕ್ಕಮಕ್ಕಳ ಮನದಲ್ಲಿ ಸಂಭ್ರಮದ ಪುಳಕ. ಸಾಲುಗಟ್ಟಿ ಬರುತ್ತಿದ್ದ ಭಕ್ತರು. ಅಲಂಕೃತ ಬಂಡಿ ಬಂದಾಗ ಕೇಕೇ ಹಾಕುತ್ತ ಹುರಿದುಂಬಿ ಸುತ್ತಿದ್ದರು. ಬಳಿಕ ದೊಡ್ಡಮ್ಮತಾಯಿಯ ದರ್ಶನ ಪಡೆದು ನೆರಳಿನಲ್ಲಿ ಕಾರಪುರಿ, ಸಿಹಿತಿನಿಸು ಮೆಲ್ಲುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸಮೀಪದ ಕಸ್ತೂರು ಗ್ರಾಮದಲ್ಲಿ ಭಾನುವಾರ ದೊಡ್ಡಮ್ಮ ತಾಯಿಯ ಬಂಡಿ ಜಾತ್ರೆ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಭಕ್ತರು ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾದರು. ಕಳೆದ ಎರಡು ದಿನಗಳಿಂದ ಅವಾಂತರ ಸೃಷ್ಟಿಸಿದ್ದ `ಥೇನ್~ ಚಂಡಮಾರುತದ ಭೀತಿ ಇರಲಿಲ್ಲ. ತುಂತುರು ಮಳೆ ಮುಂದುವರಿದರೆ ಜಾತ್ರೆಗೆ ಮಂಕು ಕವಿಯಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಬೆಳಿಗ್ಗೆಯೇ ವರುಣ ಪಕ್ಕಕ್ಕೆ ಸರಿದಿದ್ದ. ನೇಸರನ ಕಿರಣಗಳು ನೆತ್ತಿಯ ಮೇಲೆ ಬೀಳುವ ವೇಳೆಗೆ ಬಂಡಿ ಜಾತ್ರೆಯೂ ರಂಗೇರಿತ್ತು.

ಒಂದೊಂದೇ ಊರಿನಿಂದ ಅಲಂಕೃತ ಬಂಡಿಗಳು ಬರಲಾರಂಭಿಸಿದವು. ಭಕ್ತರ ಜಯಘೋಷವೂ ಮುಗಿಲು ಮುಟ್ಟಿತ್ತು. ಹಣ್ಣು-ಧವನ ಎಸೆದು ಕೇಕೆ ಹಾಕಿದರು.

ಚಾಮರಾಜನಗರ ತಾಲ್ಲೂಕಿನ 16 ಗ್ರಾಮ ಗಳಿಂದ ಅಲಂಕೃತ ಬಂಡಿಗಳು ಜಾತ್ರೆಗೆ ಬರುವುದು ವಾಡಿಕೆ. ಆದರೆ, ಕಸ್ತೂರು ಗ್ರಾಮದ ಅಕ್ಕಪಕ್ಕದ 23 ಗ್ರಾಮಗಳಲ್ಲೂ ಜಾತ್ರೆಯ ಸಡಗರ ಮೇಳೈಸಿತ್ತು. ಗ್ರಾಮಗಳಲ್ಲಿ ತಳಿರುತೋರಣ ಕಟ್ಟಿದ್ದರು. ಮನೆಯ ಮುಂದೆ ಹೆಂಗಳೆಯರು ರಂಗೋಲಿ ಇಟ್ಟು ಅಲಂಕರಿಸಿದ್ದರು. ಮಧುವಣಗಿತ್ತಿಯಂತೆ ಗ್ರಾಮಗಳು ಅಲಂಕೃತಗೊಂಡಿದ್ದವು.

ಕಸ್ತೂರು, ಭೋಗಾಪುರ, ತೊರವಳ್ಳಿ, ಹೆಗ್ಗವಾಡಿ, ಮರಿಯಾಲ, ಮರಿಯಾಲದ ಹುಂಡಿ, ಆನಹಳ್ಳಿ, ಮೂಕಹಳ್ಳಿ, ಹೊನ್ನೇಗೌಡನಹುಂಡಿ, ಪುಟ್ಟಯ್ಯನಹುಂಡಿ, ದೊಡ್ಡ ಹೊಮ್ಮ- ಚಿಕ್ಕಹೊಮ್ಮ, ಕೆಲ್ಲಂಬಳ್ಳಿ, ಬಸವನಪುರ, ಅಂಕುಶರಾಯನಪುರ, ಕಿರಗಸೂರು ಮತ್ತು ಸಪ್ಪಯ್ಯನಪುರ ಗ್ರಾಮದಿಂದ ಅಲಂಕೃತ ಬಂಡಿಗಳು ಮಧ್ಯಾಹ್ನದ ವೇಳೆಗೆ ಜಾತ್ರಾ ಅಂಗಳಕ್ಕೆ ಬಂದವು.

ಬಂಡಿಗಳಿಗೆ ಬಣ್ಣದ ಬಟ್ಟೆ, ವಿವಿಧ ಬಗೆಯ ಹೂವಿನ ಹಾರ, ಎಳನೀರು, ಬಾಳೆ ಗೊನೆ, ಕಬ್ಬಿನ ಸೋಗು ಕಟ್ಟಿ ಶೃಂಗಾರ ಗೊಳಿಸಲಾಗಿತ್ತು. ಕೆಲವು ಬಂಡಿಗಳಿಗೆ ತರಕಾರಿಯಿಂದಲೂ ಅಲಂಕರಿಸಲಾಗಿತ್ತು. ಎತ್ತುಗಳ ಕೊಂಬುಗಳಿಗೆ ಬಣ್ಣದ ದಾರ, ಬಲೂನು ಕಟ್ಟಿದ್ದರು. ಮಧ್ಯಾಹ್ನದ ವೇಳೆಗೆ ಅಲಂಕೃತ ಬಂಡಿಗಳು ಜಾತ್ರೆಯ ಆವರಣಕ್ಕೆ ಬಂದಾಗ ಸಾರ್ವಜನಿಕರು ಬಂಡಿ ಕಂಡು ಪುಳಕಿತಗೊಂಡರು. ತಮ್ಮೂರಿನ ಬಂಡಿ ಬಂದಾಗ ಸಂಭ್ರಮದಲ್ಲಿ ಮುಳುಗುತ್ತಿದ್ದರು.

ದೊಡ್ಡಮ್ಮತಾಯಿ ದೇವಸ್ಥಾನವನ್ನು ಪ್ರದಕ್ಷಿಣೆ ಹಾಕಿದ ನಂತರ ಮುಂಭಾಗ ಬಂಡಿಗಳು ಬಂದು ನಿಂತವು. ಭಕ್ತರು ಭಕ್ತಿ ಸಮರ್ಪಿಸಿದರು. ಬಂಡಿಯ ಚಕ್ರಗಳಿಗೆ ತೆಂಗಿನಕಾಯಿ ಒಡೆದು ಪುನೀತರಾದರು. ಪಕ್ಕದಲ್ಲಿದ್ದ ಮಹದೇಶ್ವರಸ್ವಾಮಿ       ದೇವಸ್ಥಾನ ದಲ್ಲೂ ವಿಶೇಷ ಪೂಜೆ ಸಲ್ಲಿಸಲಾಯಿತು. ಹೆಂಗಸರು ಸಾಲುಗಟ್ಟಿ ನಿಂತು ದೀವಟಿಗೆ ಸೇವೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಭರ್ಜರಿ ವ್ಯಾಪಾರ: ಕಾರಪುರಿ, ಕಜ್ಜಾಯ, ತಿಂಡಿತಿನಿಸು ಸೇರಿದಂತೆ ಮಕ್ಕಳ ಆಟಿಕೆಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು. ತರೇಹವಾರಿ ಆಟಿಕೆ ಖರೀದಿಸಲು ಚಿಣ್ಣರು ತಂದೆ- ತಾಯಿಯನ್ನು ಪೀಡಿಸುತ್ತಿದ್ದರು.    ನೆರೆಯ ಮೈಸೂರು, ಮಂಡ್ಯ ಸೇರಿದಂತೆ ಹೊರ ಜಿಲ್ಲೆ ಗಳಿಂದಲೂ ಭಕ್ತರು ಜಾತ್ರೆಗೆ ಆಗಮಿಸಿದ್ದರು.

ಸಂತೇಮರಹಳ್ಳಿ ಹಾಗೂ ಚಾಮರಾಜ ನಗರದ ಜಿಲ್ಲಾ ಕೇಂದ್ರದಿಂದ ಜಾತ್ರೆಗೆ ಬಂದ ಭಕ್ತರು ವಾಪಸ್ ಊರುಗಳಿಗೆ ತೆರಳಲು ಖಾಸಗಿ ಬಸ್ ಸಂಚಾರದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT