ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊರೆಯದ ಉತ್ಕೃಷ್ಟ ದರ್ಜೆ ಮಿಲಿಟರಿ ತಂತ್ರಜ್ಞಾನ

Last Updated 7 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು:  ‘ಯಾವ ದೇಶವೂ ನಮಗೆ ಇಲ್ಲಿಯವರೆಗೆ ಅತ್ಯುತ್ಕೃಷ್ಟ ದರ್ಜೆಯ ಮಿಲಿಟರಿ ತಂತ್ರಜ್ಞಾನ ನೀಡಿಲ್ಲ. ನಮ್ಮೊಂದಿಗೆ ಎಷ್ಟೇ ಸ್ನೇಹದಿಂದಿದ್ದರೂ ಆ ದೇಶಗಳು ನಮಗೆ ನೀಡಿರುವುದು ಎರಡನೇ ದರ್ಜೆಯ ತಂತ್ರಜ್ಞಾನವನ್ನೇ. ರಕ್ಷಣಾ ತಂತ್ರಜ್ಞಾನದಲ್ಲಿ ಗಟ್ಟಿಯಾದ ನೆಲೆ ಸ್ಥಾಪಿಸದಿದ್ದರೆ ಭಾರತ ಬೆಳೆಯಲು ಸಾಧ್ಯವಿಲ್ಲ.’

- ಇದು ರಕ್ಷಣಾ ಸಚಿವ ಎ.ಕೆ. ಆಂಟನಿ ಅವರ ನೇರ ಮಾತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ (ಎಎಸ್‌ಐ) ಜಂಟಿಯಾಗಿ ಬೆಂಗಳೂರಿನಲ್ಲಿ ಆಯೋಜಿಸಿರುವ ‘ವೈಮಾಂತರಿಕ್ಷ ತಂತ್ರಜ್ಞಾನ - ಜಾಗತಿಕ ಸಹಕಾರದ ಮೂಲಕ ಯಶಸ್ಸು’ ಎಂಬ ಮೂರು ದಿನಗಳ ವಿಚಾರ ಸಂಕಿರಣವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಏರೋ ಇಂಡಿಯಾ-2011’ ವೈಮಾನಿಕ ಪ್ರದರ್ಶನದ ಪೂರ್ವಭಾವಿಯಾಗಿ ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
‘ತಂತ್ರಜ್ಞಾನ ವರ್ಗಾವಣೆಯ ಹೆಸರಿನಲ್ಲಿ ನಮಗೆ ಸಿಕ್ಕಿರುವುದು ಕೆಳ ದರ್ಜೆಯ ಉಪಕರಣಗಳು’ ಎಂದು ಹೇಳಿದ ಅವರು, ‘ನಾವೂ ಕ್ರಮೇಣ ನಮ್ಮದೇ ಆದ ತಾಂತ್ರಿಕ ನೆಲೆಯನ್ನು ಸ್ಥಾಪಿಸಿಕೊಳ್ಳಬೇಕು’ ಎಂದರು.

ಡಿಆರ್‌ಡಿಒ, ಕೈಗಾರಿಕಾ ರಂಗ ಮತ್ತು ವಿಶ್ವವಿದ್ಯಾಲಯಗಳು ಒಂದಾಗಿ ರಕ್ಷಣಾ ತಂತ್ರಜ್ಞಾನದಲ್ಲಿ ಸಂಶೋಧನೆಗಳನ್ನು ಕೈಗೊಳ್ಳಬೇಕು. ಇದಕ್ಕೆ ಸರ್ಕಾರ ನೂರಕ್ಕೆ ನೂರರಷ್ಟು ಬೆಂಬಲ ನೀಡಲಿದೆ ಎಂದು ಘೋಷಿಸಿದರು.

ಕಳೆದ ಜನವರಿಯಲ್ಲಿ ಆರಂಭಿಕ ಹಾರಾಟಕ್ಕೆ ಅನುಮತಿ ಪಡೆದ ಲಘು ಯುದ್ಧ ವಿಮಾನ ‘ತೇಜಸ್’ ಬಗ್ಗೆ ಪ್ರಸ್ತಾಪಿಸಿದ ಆಂಟನಿ, ‘ಈ ಯುದ್ಧ ವಿಮಾನದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಆದ ವಿಳಂಬದ ಕುರಿತಂತೆ ನಾವು ಹಲವಾರು ಟೀಕೆಗಳನ್ನು ಎದುರಿಸಿದ್ದೇವೆ. ಆದರೆ ನಾವು ಎದುರಿಸಿದ ತಾಂತ್ರಿಕ ಅಡೆತಡೆಗಳನ್ನು ಗಮನಿಸಿದರೆ ತೇಜಸ್ ಅಭಿವೃದ್ಧಿಪಡಿಸುವಲ್ಲಿ ವಿಳಂಬ ಆಗಿಲ್ಲ ಎಂಬುದು ತಿಳಿಯುತ್ತದೆ’ ಎಂದರು.

ತೇಜಸ್ ವಿಮಾನಕ್ಕೆ ಅಗತ್ಯವಿದ್ದ ತಂತ್ರಜ್ಞಾನ ನೀಡಲು ಹಲವರು ನಿರಾಕರಿಸಿದರು, ಈ ಅಡೆತಡೆಗಳನ್ನು ಸಮರ್ಥವಾಗಿ ಮೆಟ್ಟಿನಿಂತ ಎಚ್‌ಎಎಲ್ ಮತ್ತು ಡಿಆರ್‌ಡಿಒ ವಿಜ್ಞಾನಿಗಳು ತೇಜಸ್ ವಿಮಾನ ಆರಂಭಿಕ ಹಾರಾಟ ಅನುಮತಿ ಪಡೆಯುವಲ್ಲಿ ಸಫಲರಾದರು ಎಂದು ಶ್ಲಾಘಿಸಿದರು.

ಐಟಿಯಿಂದ ರಕ್ಷಣಾ ಕ್ಷೇತ್ರಕ್ಕೆ: ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಡಾ.ವಿ.ಕೆ. ಸಾರಸ್ವತ್ ಮಾತನಾಡಿ, ‘ನಮ್ಮಲ್ಲಿ ಯುವ ತಂತ್ರಜ್ಞರಿಗೆ ಬರವಿಲ್ಲ. ಆದರೆ ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಿಂದ ರಕ್ಷಣಾ ಕ್ಷೇತ್ರದೆಡೆಗೆ ಗಮನಹರಿಸುವಂತೆ ಮಾಡಬೇಕು’ ಎಂದರು.

ಭಯೋತ್ಪಾದನೆ-ತಂತ್ರಜ್ಞಾನ: ‘ಭಯೋತ್ಪಾದನೆಗೆ ಇಂದು ಜಾಗತಿಕ ಆಯಾಮವಿದೆ. ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡುವುದೇ ಅದರ ಉದ್ದೇಶ. ತಂತ್ರಜ್ಞಾನವನ್ನು ಹಂಚಿಕೊಳ್ಳುವ ಔದಾರ್ಯವನ್ನು ವಿಶ್ವದ ರಾಷ್ಟ್ರಗಳು ತೋರದಿದ್ದರೆ ಭಯೋತ್ಪಾದನೆಯ ದಮನ ಅಸಾಧ್ಯ’ ಎಂದು ವಾಯು ಪಡೆ ಮುಖ್ಯಸ್ಥ ಪಿ.ವಿ. ನಾಯಕ್ ಹೇಳಿದರು.

ಸೂಕ್ಷ್ಮ ತಂತ್ರಜ್ಞಾನವನ್ನು ಸಂಪೂರ್ಣವಾಗಿ ದೇಶದಲ್ಲೇ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಜಾಗತಿಕ ಸಹಕಾರದೊಂದಿಗೆ ದೇಶೀಯವಾಗಿ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ತೊಡಗಬೇಕು ಎಂದರು.

ರಕ್ಷಣಾ ಖಾತೆಯ ರಾಜ್ಯ ಸಚಿವ ಡಾ.ಎಂ.ಎಂ. ಪಲ್ಲಂ ರಾಜು ಮಾತನಾಡಿ, ‘ವೈಮಾಂತರಿಕ್ಷ ಕ್ಷೇತ್ರದಲ್ಲಿ ಭಾರತ ತೋರಿಸಿದ ಸಾಧನೆ ಮತ್ತು ಗುಣಮಟ್ಟ ಒಂದೇ ಪ್ರಮಾಣದಲ್ಲಿ ಇಲ್ಲ. ರಕ್ಷಣಾ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರುವ ಸಂಸ್ಥೆಗಳು ಗುಣಮಟ್ಟಕ್ಕೆ ಆದ್ಯತೆ ನೀಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು’ ಎಂದು ಕರೆನೀಡಿದರು.

‘ಏರೋ ಇಂಡಿಯಾ-2011’ ವೈಮಾನಿಕ ಪ್ರದರ್ಶನದ ಸ್ಮರಣಿಕೆಯನ್ನು ಆಂಟನಿ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ರಕ್ಷಣಾ ಉತ್ಪಾದನೆ ಇಲಾಖೆಯ ಕಾರ್ಯದರ್ಶಿ ರಾಜ್‌ಕುಮಾರ್ ಸಿಂಗ್, ವಿಚಾರ ಸಂಕಿರಣ ಆಯೋಜನಾ ಸಮಿತಿಯ ಅಧ್ಯಕ್ಷ ಡಾ.ಕೆ. ತಮಿಳುಮಣಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT