ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋನಿ ಹಣೆಯಲ್ಲಿ ನಿಟ್ಟುಸಿರಿನ ಗೆರೆ

ಕ್ರಿಕೆಟ್: ಪದಾರ್ಪಣೆ ಪಂದ್ಯದಲ್ಲಿ ಜಡೇಜಾ ಕೈಚಳಕ, ಮೊದಲ ದಿನ ಭಾರತ ಮೇಲುಗೈ
Last Updated 13 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ನಾಗಪುರ: ಹೊಡೆದ ಏಟನ್ನು ಮರೆಯಬಹುದು. ಆದರೆ ಹೊಡೆಸಿಕೊಂಡ ಏಟನ್ನು ಮರೆಯುವುದು ಕಷ್ಟ. ಜಾಮ್ತಾ ಅಂಗಳದಲ್ಲಿ ಆತಿಥೇಯರು ಗುರುವಾರ ತೋರಿದ ಹುರುಪಿನ ಆಟವೇ ಅದಕ್ಕೆ ಸಾಕ್ಷಿ. ಸತತ ಸೋಲುಗಳ ಬಳಿಕ ಕಾರ್ಮೋಡ ಕವಿದಿದ್ದ ಮನಗಳಲ್ಲಿ ಕೊನೆಗೂ ಬೆಳ್ಳಿ ಗೆರೆ ಮೂಡುವ ಲಕ್ಷಣಗಳು ಗೋಚರಿಸುತ್ತಿವೆ.

ಪರಿಣಾಮ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದ ಮೊದಲ ದಿನ ದೋನಿ ಬಳಗ ಮೇಲುಗೈ ಸಾಧಿಸಿದೆ. ಆದರೆ ಐತಿಹಾಸಿಕ ಕ್ಷಣಕ್ಕಾಗಿ ಎದುರು ನೋಡುತ್ತಿರುವ ಆಂಗ್ಲರ ಬಳಗ ಭಾರತ ತಂಡದ ಯುವ ಬೌಲರ್‌ಗಳ ಎದುರು ತಡಬಡಾಯಿಸಿತು.

ಪ್ರವಾಸಿ ತಂಡದವರು ಪ್ರಥಮ ಇನಿಂಗ್ಸ್‌ನಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ 97 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿದ್ದಾರೆ. ಸೋಲಿನ ಕಾರಣ ಟೀಕೆಗೆ ಒಳಗಾಗಿರುವ ಭಾರತ ತಂಡದಲ್ಲಿ ಈಗ ಆಗಿರುವ ಕೆಲ ಬದಲಾವಣೆ ಯಶಸ್ಸೆಂಬ ಗೆರೆಯನ್ನು ಮುಟ್ಟುವ ಸುಳಿವನ್ನು ನೀಡಿವೆ. ಆದರೆ ಇದಿನ್ನೂ ಆರಂಭ ಎಂಬುದನ್ನು ಮರೆಯುವಂತಿಲ್ಲ.

ಸರಣಿಯಲ್ಲಿ ಇದುವರೆಗೆ ಆಡಿದ ಪಿಚ್‌ಗಳಿಗಿಂತ ಭಿನ್ನವಾಗಿರುವ ಇಲ್ಲಿ ಆಂಗ್ಲರು `ನಿಧಾನವೇ ಪ್ರಧಾನ' ಎಂಬ ಸೂತ್ರಕ್ಕೆ ಮೊರೆ ಹೋದರು. ಹಾಗಾಗಿ ಈ ತಂಡದ ರನ್‌ರೇಟ್ ಕೇವಲ 2.05. ಈ ಪಿಚ್‌ನಲ್ಲಿ ಬ್ಯಾಟಿಂಗ್ ತುಂಬಾ ಕಷ್ಟವಿದೆ.

ಕ್ಯಾಪ್ ನೀಡಿದ ಸಚಿನ್: ಪ್ರಥಮ ದಿನ ಗಮನ ಸೆಳೆದಿದ್ದು ಪದಾರ್ಪಣೆ ಮಾಡಿದ ರವೀಂದ್ರ ಜಡೇಜಾ. ಸಚಿನ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ ಜಡೇಜಾ 11 ತಿಂಗಳ ಮಗು. ವಿಶೇಷವೆಂದರೆ ಜಡೇಜಾ ಅವರ ಹೆಗಲ ಮೇಲೆ ಕೈಹಾಕಿಕೊಂಡು ಅಂಗಳಕ್ಕಿಳಿದ ತೆಂಡೂಲ್ಕರ್ 24 ವರ್ಷ ವಯಸ್ಸಿನ ಈ ಆಟಗಾರನಿಗೆ ಟೆಸ್ಟ್ ಕ್ಯಾಪ್ ನೀಡಿದರು. ಈ ಮೂಲಕ ಅವರು ಟೆಸ್ಟ್ ಆಡಿದ ಭಾರತದ 275ನೇ ಆಟಗಾರ ಎನಿಸಿದರು.

ಆಲ್‌ರೌಂಡರ್ ಜಡೇಜಾ (25-13-34-2) ತಮ್ಮ ಮೇಲಿಟ್ಟಿದ ಭರವಸೆಯನ್ನು ಉಳಿಸಿಕೊಂಡರು. ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಾದ ಟ್ರಾಟ್ ಹಾಗೂ ಪೀಟರ್ಸನ್ ವಿಕೆಟ್ ಕಬಳಿಸಿದ್ದೇ ಅದಕ್ಕೊಂದು ಸಾಕ್ಷಿ. ಅಷ್ಟೇನು ತಿರುವು ನೀಡದ ಈ ಪಿಚ್‌ನಲ್ಲಿ ಒಟ್ಟು 150 ಎಸೆತ ಹಾಕಿದ ಅವರು 133 ಎಸೆತಗಳಲ್ಲಿ ಯಾವುದೇ ರನ್ ಕೊಡಲಿಲ್ಲ.

ನಾಲ್ಕು ವರ್ಷಗಳ ಬಳಿಕ ಟೆಸ್ಟ್ ಆಡಿದ ಚಾವ್ಲಾ ಒಂದು ವಿಕೆಟ್ ಪಡೆದರು.ಆದರೆ ಅಪರೂಪಕ್ಕೆ ಎಂಬಂತೆ ಸ್ವದೇಶದ ಪಿಚ್‌ನಲ್ಲಿ ಇಶಾಂತ್ ಅಪಾಯಕಾರಿಯಾಗಿದ್ದದ್ದು ಕಂಡುಬಂತು. ಚೆಂಡು ಕೆಳಮಟ್ಟದಲ್ಲಿ ನುಗ್ಗುತ್ತಿತ್ತು. ಇದು ಎದುರಾಳಿ ನಾಯಕ ಕುಕ್ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿತು. ಇಶಾಂತ್ ಎರಡು ವಿಕೆಟ್ ಕೂಡ ಕೆಡವಿದರು. ಮತ್ತೊಬ್ಬ ವೇಗಿಯನ್ನು ಆತಿಥೇಯರು ಕಣಕ್ಕಿಳಿಸಿದ್ದರೆ ಪಂದ್ಯದ ಕಥೆ ಬೇರೆಯಾಗಿರುತಿತ್ತೇನೊ?

ಪೀಟರ್ಸನ್-ಟ್ರಾಟ್ ಆಸರೆ: 16 ರನ್‌ಗಳಿಗೆ 2 ವಿಕೆಟ್ ಪತನವಾಗಿದ್ದಾಗ ಕ್ರಿಸ್‌ಗೆ ಆಗಮಿಸಿದ ಪೀಟರ್ಸನ್ (73; 188 ಎ.,10 ಬೌಂ.) ತಂಡದ ಪಾಲಿಗೆ ಆಸರೆಯಾಗಿ ನಿಂತರು. ವಿಚಿತ್ರವಾಗಿ ವರ್ತಿಸುತ್ತಿದ್ದ ಪಿಚ್‌ನಲ್ಲಿ ಎಚ್ಚರಿಕೆಯ ಹಾಗೂ ನಿಧಾನಗತಿಯ ಆಟಕ್ಕೆ ಮುಂದಾದರು.

ಕೆವಿನ್ ನೀಡಿದ ಕ್ಯಾಚ್‌ವೊಂದನ್ನು ಪೂಜಾರ ಕೈಬಿಟ್ಟಿದ್ದರು. ಆಗ ಅವರು 61 ರನ್ ಗಳಿಸಿದ್ದರು. ಆದರೆ ಅದೇನು ದುಬಾರಿಯಾಗಲಿಲ್ಲ. ಏಕೆಂದರೆ ಮಿಡ್ ವಿಕೆಟ್‌ನಲ್ಲಿ ಓಜಾ ಪಡೆದ ಉತ್ತಮ ಕ್ಯಾಚ್ ಪೀಟರ್ಸನ್‌ಗೆ ಪೆವಿಲಿಯನ್ ದಾರಿ ತೋರಿಸಿತು. ಟ್ರಾಟ್ ಜೊತೆ ಅವರು ಮೂರನೇ ವಿಕೆಟ್‌ಗೆ ಅಮೂಲ್ಯ 86 ರನ್ ಸೇರಿಸಿದರು.

ಪ್ರಯೋರ್ ಹಾಗೂ ಜೋ ರೂಟ್ ತಂಡವನ್ನು ಸದ್ಯ ಅಪಾಯದಿಂದ ಪಾರು ಮಾಡಿದ್ದಾರೆ. ಇವರಿಬ್ಬರು ಮುರಿಯದ ಆರನೇ ವಿಕೆಟ್‌ಗೆ 60 ರನ್ ಕೂಡಿಹಾಕಿದ್ದಾರೆ. ಆದರೆ ಅವರ ಮುಂದೆ ದೊಡ್ಡ ಸವಾಲಿದೆ.

ನಾಲ್ವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕೆ: ಈ ಪಂದ್ಯಕ್ಕೆ ಭಾರತ ನಾಲ್ವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿದ್ದು ಅಚ್ಚರಿ ಮೂಡಿಸಿದೆ. ಎಡಗೈ ಸ್ಪಿನ್ನರ್ ಓಜಾ, ಆಫ್ ಸ್ಪಿನ್ನರ್ ಅಶ್ವಿನ್, ಲೆಗ್ ಸ್ಪಿನ್ನರ್ ಚಾವ್ಲಾ ಹಾಗೂ ಎಡಗೈ ಸ್ಪಿನ್ನರ್ ಜಡೇಜಾ ಅವರನ್ನು ದೋನಿ ಪ್ರಯೋಗಿಸಿದರು. ಹಾಗಾಗಿ ನಾಯಕನಿಗೆ ಸಾಕಷ್ಟು ಆಯ್ಕೆಗಳಿವೆ. ಆದರೆ ಓಜಾ ಹಾಗೂ ಅಶ್ವಿನ್ ಮೊದಲ ದಿನ ಯಶಸ್ಸು ಕಾಣಲಿಲ್ಲ.

ಮೊದಲ ಬಾರಿ ಎಡವಿದ ಕುಕ್: ಈ ಸರಣಿಯಲ್ಲಿ ಮೊದಲ ಬಾರಿ ಟಾಸ್ ಗೆದ್ದ ನಾಯಕ ಕುಕ್ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದರು. ನಾಯಕರಾದ ಮೇಲೆ ಆಡಿದ ಎಲ್ಲಾ ಪಂದ್ಯಗಳಲ್ಲಿ ಶತಕ ಗಳಿಸಿದ್ದ ಅವರು ಇಲ್ಲಿ ಮೊದಲ ಇನಿಂಗ್ಸ್‌ನಲ್ಲಿ ವಿಫಲರಾದರು. ಅವರನ್ನು ಇಶಾಂತ್ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಅಷ್ಟರಲ್ಲಿ 28 ಎಸೆತ ಎದುರಿಸಿದ್ದ ಅವರು ಗಳಿಸಿದ ರನ್ ಕೇವಲ 1.

ಅಂಪೈರ್ ಕುಮಾರ ಧರ್ಮಸೇನಾ ಕೆಲ ಎಲ್‌ಬಿಡಬ್ಲ್ಯು ಮನವಿಯನ್ನು ಪುರಸ್ಕರಿಸಲಿಲ್ಲ. 7 ರನ್ ಗಳಿಸಿದ್ದಾಗ ಟ್ರಾಟ್ ಅಂಥ ಒಂದು ಅಪಾಯದಿಂದ ಪಾರಾಗಿದ್ದರು. ಆಗ ಇಶಾಂತ್ ನಿರಾಶೆಗೆ ಒಳಗಾದರು.

ಆದರೆ ತಕ್ಷಣವೇ ಅವರ ನಿರಾಶೆಗೆ ಧರ್ಮಸೇನಾ ಸ್ಪಂದಿಸಿದರು. ಏಕೆಂದರೆ ಕುಕ್ ವಿರುದ್ಧ ಇಶಾಂತ್ ಎಲ್‌ಬಿಡಬ್ಲ್ಯು ಮನವಿ ಮಾಡಿದ ತಕ್ಷಣ ಕೈ ಮೇಲೆತ್ತಿದರು. ಅದು ಔಟಾಗಿರಲಿಲ್ಲ.ಚೆನ್ನಾಗಿಯೇ ಆಡುತ್ತಿದ್ದ ಟ್ರಾಟ್ (44) ಎಡವಟ್ಟು ಮಾಡಿಕೊಂಡರು. ಜಡೇಜಾ ಎಸೆತವನ್ನು ಹೊರಬಿಡಲು ಬ್ಯಾಟ್ ಮೇಲೆತ್ತಿದರು. ಆದರೆ ಅವರ ಅದೃಷ್ಟ ಸರಿ ಇರಲಿಲ್ಲ ಎನಿಸುತ್ತದೆ. ಚೆಂಡು ಆಫ್ ಸ್ಪಂಪ್‌ಗೆ ಅಪ್ಪಳಿಸಿತು. ಇದು ಜಡೇಜಾಗೆ ಲಭಿಸಿದ ಚೊಚ್ಚಲ ವಿಕೆಟ್.

ರೂಟ್ ಪದಾರ್ಪಣೆ: ಈ ಪಂದ್ಯದಲ್ಲಿ ಪದಾರ್ಪಣೆ ಮತ್ತೊಬ್ಬ ಆಟಗಾರ ಜೋ ರೂಟ್. 21 ವರ್ಷ ವಯಸ್ಸಿನ ರೂಟ್‌ಗೆ ಕ್ಯಾಪ್ ನೀಡಿದ್ದು ಮಾಜಿ ಆಟಗಾರ ಕಾಲಿಂಗ್‌ವುಡ್. ಅವರು ಕೂಡ ಎಚ್ಚರಿಕೆ ಆಟದ ಮೂಲಕ ತಮ್ಮ ಆಯ್ಕೆ ಸಮರ್ಥಸಿಕೊಂಡಿದ್ದಾರೆ.

ವಿಶೇಷವೆಂದರೆ ಇದೇ ನಗರದಲ್ಲಿ 2006ರಲ್ಲಿ ಕುಕ್ ಪದಾರ್ಪಣೆ ಮಾಡಿದ್ದರು. ಆಗ ಅವರ ವಯಸ್ಸು 21 ವರ್ಷ. ಕುಕ್ ಈಗ ಇಂಗ್ಲೆಂಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ರೂಟ್ (ಬ್ಯಾಟಿಂಗ್ 31; 110 ಎ, 1 ಬೌಂ) ಒಮ್ಮೆ ರನ್‌ಔಟ್ ಆಗುವ ಅಪಾಯದಿಂದ ಪಾರಾಗಿದ್ದರು. ಓಜಾ ಅವರು ಎಸಗಿದ ಎಡವಟ್ಟಿನ ಕಾರಣ ಅವರಿಗೆ ಜೀವದಾನ ಲಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT