ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಷಪೂರಿತ ಬೀಜ ವಾಪಸ್

Last Updated 23 ಜೂನ್ 2011, 6:20 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ವಿವಿಧೆಡೆ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸಲಾದ ಧಾರವಾಡದ ಟಿನ್ನಾ ಅಗ್ರೋ ಕಂಪೆನಿಯ ಸೋಯಾ ಬೀಜ ವಾಪಸ್ ಪಡೆದು ಹೊಸ ಬಗೆಯ ಬೀಜ ವಿತರಿಸಲಾಗುತ್ತಿದೆ.

ರಾಜ್ಯದ ಕೆಲವೆಡೆ ಈಗಾಗಲೇ ಬಿತ್ತಲಾದ ಟಿನ್ನಾ ಕಂಪನಿ ಸೋಯಾ ಬೀಜದ ಮೊಳಕೆ ಸರಿಯಾಗಿ ನಾಟಿಲ್ಲ. ಮೊಳಕೆ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಇಲ್ಲಿಯ ರೈತರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಟಿನ್ನಾ ಕಂಪೆನಿ ಬೀಜ ವಾಪಸ್ ಪಡೆದು ಎಎಸ್‌ಸಿ ಕಂಪನಿಯ ಬೀಜ ವಿತರಿಸಲಾಗುತ್ತಿದೆ ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಲ್ಲೂಕಿನ ಮುಂಗನಾಳ ಗ್ರಾಮವೊಂದರಲ್ಲೇ ಸುಮಾರು 360 ಚೀಲ ಟಿನ್ನಾ ಕಂಪೆನಿಯ ಸೋಯಾ ಬೀಜ ವಿತರಿಸಲಾಗಿದೆ. ಬೀಜ ನಿಗಮದವರು ಬುಧವಾರ ಗ್ರಾಮದಲ್ಲಿ ಡೊಂಗರ ಸಾರಿ ರೈತರಿಂದ ಟಿನ್ನಾ ಕಂಪನಿ ಬೀಜ ವಾಪಸ್ ಪಡೆದು ಹೊಸ ಬಗೆಯ ಬೀಜ ವಿತರಿಸಿದ್ದಾರೆ.

ಔರಾದ್ ಹೋಬಳಿಯಲ್ಲಿ ಬರುವ ಕೊಳ್ಳೂರ್‌ನಲ್ಲಿ 150 ಚೀಲ, ದುಡಕನಾಳದಲ್ಲಿ 100 ಚೀಲ, ನಾರಾಯಣಪುರದಲ್ಲಿ 100 ಚೀಲ ಟಿನ್ನಾ ಕಂಪನಿ ಸೋಯಾ ಬೀಜ ವಿತರಿಸಿದ್ದು, ನಾಳೆ ಸಂಜೆ ವೇಳೆಗೆ ಅವು ವಾಪಸ್ ಪಡೆದು ಬೇರೆ ಬೀಜ ವಿತರಿಸಲಾಗುವುದು ಎಂದು ಇಲ್ಲಿಯ ಬೀಜ ವಿತರಣೆ ಅಧಿಕಾರಿಗಳು ತಿಳಿಸಿದ್ದಾರೆ. ವಡಗಾಂವ್ ಮತ್ತು ಸುಂದಾಳ ವಿತರಣಾ ಕೇಂದ್ರಕ್ಕೂ ಇಂಥ ಬೀಜ ರವಾನೆಯಾಗಿದೆ.

ಬೀಜ ನಿಗಮದವರ ಹೇಳಿಕೆ ಪ್ರಕಾರ ಜಿಲ್ಲೆಯಲ್ಲಿ ಟಿನ್ನಾ ಕಂಪನಿಯ 1000 ಚೀಲ ಸೋಯಾ ಬೀಜ ವಿತರಣೆಯಾಗಿದೆ. ಇವುಗಳಲ್ಲಿ ಈಗಾಗಲೇ 800 ಚೀಲ ವಾಪಸ್ ಪಡೆದು ಬೇರೆ ಬೀಜ ವಿತರಿಸಿದ್ದಾರೆ. ಈ ಬೀಜ ಕಳಪೆ ಅಲ್ಲ ಎಂದು ಸ್ಪಷ್ಟಪಡಿಸಿದ ಅಧಿಕಾರಿಗಳು ಇಳುವರಿ ಮಾತ್ರ ಕಡಿಮೆ ಬರುತ್ತದೆ ಎಂದು ತಿಳಿಸಿದ್ದಾರೆ.

ರೈತರಲ್ಲಿ ಆತಂಕ: ಸೋಯಾ ಬೀಜ ವಾಪಸ್ ಪಡೆಯುತ್ತಿರುವ ಹಿನ್ನೆಲೆಯಲ್ಲಿ ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಉದ್ದಿಗೆ  ಗೊಡ್ಡು ರೋಗ ಬಂದು ಅನೇಕ ರೈತರು ಹಾನಿ ಅನುಭವಿಸಿದ್ದಾರೆ. ಈ ವರ್ಷ ದೋಷಪೂರಿತ ಸೋಯಾ ವಿತರಿಸಿರುವುದು ಸಬ್ಸಿಡಿ ಬೀಜದ ಬಗ್ಗೆ ರೈತರಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ರೈತ ಸಂಘ ಆಗ್ರಹ: ದೋಷಪೂರಿತ ಸೋಯಾ ಬೀಜ ವಿತರಣೆ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ರೈತರು ಆಗ್ರಹಿಸಿದ್ದಾರೆ. ವಿತರಿಸಿದ ಬೀಜ ವಾಪಸ್ ಪಡೆದು ಬೇರೆ ಬೀಜ ಕೊಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಈಗಾಗಲೇ ಜಿಲ್ಲೆಯ ಕೆಲ  ಕಡೆ ರೈತರು ಸೋಯಾ ಬಿತ್ತಿದ್ದಾರೆ. ಅಂಥ ರೈತರ ಪಾಡೇನು ಎಂದು ಎಪಿಎಂಸಿ ಸದಸ್ಯ ಗೋವಿಂದ ಇಂಗಳೆ ಪ್ರಶ್ನೆ ಮಾಡಿದ್ದಾರೆ. ಬಹಳಷ್ಟು ರೈತರಿಗೆ ಸೋಯಾ ಬೀಜದಲ್ಲಿ ದೋಷ ಇದೆ ಎಂಬುದೇ ಗೊತ್ತಿಲ್ಲ. ಜಿಲ್ಲಾಡಳಿತ ಕೂಡಲೇ ಮಧ್ಯೆ ಪ್ರವೇಶಿಸಿ ಈ ಬಗ್ಗೆ ತನಿಖೆ ನಡೆಸಿ ರೈತರಿಗೆ ಆಗುವ ಹಾನಿ ತಪ್ಪಿಸುವಂತೆ ರೈತ ಮುಖಂಡರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT