ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಸೆ ದರ್ಬಾರ್

Last Updated 11 ಜೂನ್ 2012, 19:30 IST
ಅಕ್ಷರ ಗಾತ್ರ

ವೈನಾಗಿ ತರಹೇವಾರಿ ದೋಸೆಗಳನ್ನು ಜೋಡಿಸಿಡಲಾಗಿತ್ತು. ಘಮ್ಮೆನ್ನುತ್ತಿದ್ದ ಕೊಂಗನಾಡು ಮಸಾಲೆ ಪುಡಿ ಎಲ್ಲರ ಬಾಯಲ್ಲೂ ನೀರೂರಿಸಿತ್ತು. ಆಯ್ಕೆಗಿಟ್ಟಿದ್ದ ಒಗ್ಗರಣೆಯ ಚಟ್ನಿಗಳಂತೂ ದೋಸೆಗೆ ಜೊತೆಯಾಗಲು ಕಾಯುತ್ತಿದ್ದವು. ಇದು ಮಾವಿನ ಕಾಲವಾದ್ದರಿಂದ ಮಾವಿನ ಹುಳಿ ಚಟ್ನಿಗೂ ಇಲ್ಲಿ ಜಾಗವಿತ್ತು. ದೋಸೆ ಜೊತೆ ಬೆರೆಸಿದ್ದ ತುಪ್ಪದ ಪರಿಮಳ ಮೂಗಿಗೆ ಬಡಿಯುತ್ತಿತ್ತು.

ಹೋಟೆಲ್‌ನ ಅಡುಗೆ ಕೋಣೆಯಲ್ಲಿ ದೋಸೆಗಳನ್ನು ಚಕಾಚಕ್ ಮಗುಚಿ ಹಾಕುತ್ತಿದ್ದ ಬಾಣಸಿಗನ ಕೈಗಳು ಅದನ್ನು ಚುರುಕಾಗಿ ಸಿಂಗಾರಗೊಳಿಸುತ್ತಿದ್ದವು. ಹಂಚಿನ ಮೇಲೆ ಉಬ್ಬುತ್ತಿದ್ದ ದೋಸೆಗಳಿಗೆ ರುಚಿಗೆ ತಕ್ಕಂತೆ ಮಸಾಲೆ, ತರಕಾರಿ, ಟೊಮೆಟೊ, ಈರುಳ್ಳಿ ಇನ್ನಿತರ ಸಾಮಗ್ರಿಗಳನ್ನು ಬೆರೆಸುತ್ತಿದ್ದ ವೇಗವನ್ನು ನೋಡುವುದೇ ಸೋಜಿಗ. ದೋಸೆ ಮಧ್ಯೆ ಪಲ್ಯ ಬೆರೆಸಿ, ಬ್ರೆಡ್‌ನಂತೆ ಸುರುಳಿ ಸುತ್ತಿ, ಕತ್ತರಿಸಿ ಎಲ್ಲರಿಗೂ ನೀಡಿದ ಬಾಣಸಿಗರ ಮುಖದಲ್ಲಿ ರುಚಿ ಹೇಗಿದೆಯೋ ಎಂಬ ಪ್ರಶ್ನೆ. ಆದರೆ ಬಾಯಿಗಿಟ್ಟ ಮಂದಿ `ಆಹಾ~ ಎಂದು ಉದ್ಗಾರ ಹೊಮ್ಮಿಸಿದ ನಂತರ ಅವರ ಮುಖದಲ್ಲಿ ಸಾರ್ಥಕ್ಯ ಭಾವ.

ಒಂದೊಂದು ದೋಸೆಗೂ ಒಂದೊಂದು ಹೆಸರು; ಚಟ್ನಿ, ಚಟ್ನಿ ಪುಡಿಗಳಿಗೂ. ಇದೇನಪ್ಪಾ ದೋಸೆಯಲ್ಲೂ ಇಷ್ಟೊಂದು ಬಗೆಯಿದೆಯಾ ಎಂದು ಸಿಂಗಾರಗೊಂಡಿದ್ದ ದೋಸೆಗಳನ್ನು ನೋಡುತ್ತಿದ್ದರೆ ಅನಿಸುತ್ತಿತ್ತು.

“ಆಹಾರದಲ್ಲಿ ಈಗ ಆಯ್ಕೆಗಳು ನೂರು. ಆದರೆ ದೋಸೆಗೇ ಏಕೆ ಹಬ್ಬದ ಹೆಸರು ಎಂಬ ಪ್ರಶ್ನೆಗೆ, ದೋಸೆ ದಕ್ಷಿಣ ಭಾರತದ ಅತಿ ಪ್ರಸಿದ್ಧ ಖಾದ್ಯ. ಆದರೆ ಈಗ ಜನರು ಪ್ರತಿ ಆಹಾರದಲ್ಲೂ ರುಚಿ ಬಯಸುವುದರಿಂದ ದೋಸೆಯಲ್ಲೂ ಏಕೆ ವಿಭಿನ್ನ ರುಚಿ ಪರಿಚಯಿಸಬಾರದು ಎಂಬ ಯೋಚನೆ ಹೊಳೆದದ್ದೇ ಈ `ದೋಸೆ ಹಬ್ಬ~ದ ಪ್ರೇರಣೆ” ಎನ್ನುತ್ತಾರೆ ಜೆಪಿ ಸೆಲೆಶಿಯಲ್ ಹೋಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಪಾಂಟ್.

ಇದು ದೋಸೆ ಸೀಸನ್. ಏಕೆಂದರೆ ಮಳೆ ಆರಂಭವಾಗುವ ಈ ಸಮಯದಲ್ಲಿ ಬಿಸಿಬಿಸಿ ದೋಸೆ ತಿಂದರೆ ನಾಲಿಗೆಗೂ ರುಚಿ, ಮನಸ್ಸಿಗೂ ಹಿತ. ಅದಕ್ಕಾಗಿ `ನಿಮ್ಮ ಮನ ಮೆಚ್ಚುವ ಫ್ಲೇವರ್‌ನೊಂದಿಗೆ ದೋಸೆ ಸವಿಯಿರಿ~ ಎಂದು ಜೆಪಿ ಸೆಲೆಶಿಯಲ್ ಹೋಟೆಲ್ ಹತ್ತು ದಿನಗಳ ಕಾಲ ದೋಸೆ ಹಬ್ಬ ನಡೆಸುತ್ತಿದೆ. ಜೂನ್ 8ರಿಂದ ಆರಂಭಗೊಂಡಿರುವ ಈ ಹಬ್ಬ 17ರವರೆಗೂ ಮುಂದುವರೆಯುತ್ತದೆ. ಮಧ್ಯಾಹ್ನ ಒಂದು ಗಂಟೆಗೆ ತೆರೆದರೆ ರಾತ್ರಿ 10ರವರೆಗೂ ಪ್ರವೇಶ ಲಭ್ಯ. ದಿನಕ್ಕೆ 20 ವಿಭಿನ್ನ ಬಗೆಯ ದೋಸೆಗಳನ್ನು ಪರಿಚಯಿಸಲಾಗುತ್ತದೆ. 10 ದಿನಗಳಲ್ಲಿ ಬರೋಬ್ಬರಿ 200 ಬಗೆಯ ದೋಸೆಗಳ ರುಚಿ ಸವಿಯುವ ಅವಕಾಶ ಗ್ರಾಹಕರ ಮುಂದಿದೆ.

`ದೋಸೆ ಎಂದಾಕ್ಷಣ ಕೇವಲ ಸಸ್ಯಾಹಾರಿ ಎಂದುಕೊಳ್ಳಬೇಕಿಲ್ಲ. ಮಾಂಸಾಹಾರಿಗಳಿಗೂ ಆಯ್ಕೆಯಿದೆ. ಆದರೆ ಎರಡನ್ನೂ ಪ್ರತ್ಯೇಕವಾಗಿ ಇರಿಸುವ ಜಾಗ್ರತೆ ವಹಿಸಿ ತಯಾರಿಸುತ್ತೇವೆ. ಜನರು ಇಷ್ಟ ಬಂದದ್ದನ್ನು ಯಾವುದೇ ಗೊಂದಲವಿಲ್ಲದೆ ಸೇವಿಸಬಹುದು ಎಂದು ಆಶ್ವಾಸನೆಯನ್ನೂ~ ನೀಡುತ್ತಾರೆ ಬಾಣಸಿಗ ವಿಜಯ್.

ಹಲವು ವರ್ಷಗಳಿಂದ ಪಾಕ ಪ್ರವೀಣರಾಗಿರುವ ವಿಜಯ್ ಈ ದೋಸೆ ಹಬ್ಬದ ಮುಖ್ಯ ಬಾಣಸಿಗ. `ಆಹಾರದಲ್ಲಿ ಸದಾ ಹೊಸತನ್ನು ಕಂಡುಹಿಡಿಯುತ್ತಿರಬೇಕು, ಜನರ ನಾಲಗೆಯನ್ನು ತಣಿಸಬೇಕು ಅದೇ ನಮ್ಮ ಉದ್ದೇಶ. ಈ ಕಾರಣಕ್ಕೇ ದೋಸೆಯ ಹಲವು ಬಗೆಗಳನ್ನು ಇಲ್ಲಿ  ಪರಿಚಯಿಸುತ್ತಿರುವುದು~ ಎಂಬುದು ಅವರ ಉಮೇದು.

`ಒಂದೊಂದು ದೋಸೆಯೂ ವಿಭಿನ್ನ. ಈ ಹತ್ತು ದಿನಗಳಲ್ಲಿ ಒಂದೂ ಪುನರಾವರ್ತನೆ ಆಗುವುದಿಲ್ಲ. ನಿಮ್ಮ ಬಾಯಿಗೆ ರುಚಿ ಹತ್ತುವುದು ಗ್ಯಾರಂಟಿ~ ಎಂಬುದು ವಿಜಯ್ ನೀಡುವ ಆಶ್ವಾಸನೆ. `ಕೇವಲ ಅಕ್ಕಿಹಿಟ್ಟು, ಉದ್ದಿನ ಬೇಳೆಯಿಂದ ದೋಸೆ ತಯಾರಿಸುವುದಿಲ್ಲ. ಅದರೊಟ್ಟಿಗೆ ತರಕಾರಿ, ಹಣ್ಣು, ಒಣಹಣ್ಣುಗಳನ್ನು ಕೂಡ ಹದವಾಗಿ ಬೆರೆಸಲಾಗುತ್ತದೆ~ ಎಂದರು.

ಮೆನು ನೋಡಿದರೆ ಕಂಡೂ ಕೇಳರಿಯದ ಹಲವಾರು ದೋಸೆಗಳ ಪಟ್ಟಿ ಕಣ್ಣಿಗೆ ರಾಚುತ್ತದೆ. ಫಲಪ್ರಿಯರಿಗೆಂದು ಸ್ಟ್ರಾಬೆರಿ ದೋಸೆ, ಪರಂಗಿಹಣ್ಣು ದೋಸೆ, ಪೈನಾಪಲ್ ದೋಸೆ, ಹಲವು ಹಣ್ಣುಗಳ ಬೆರೆಸಿದ ದೋಸೆ ಇವು ಬಾಯಲ್ಲಿ ನೀರೂರಿಸುವ ಬಗೆಗಳು. ತರಕಾರಿ ಇಷ್ಟಪಡುವವರಿಗೆ ಕುಂಬಳ ಕಾಯಿ ದೋಸೆ, ಶುಂಠಿ ದೋಸೆ, ಕ್ಯಾರೆಟ್ ದೋಸೆ, ಅವರೆಕಾಯಿ ದೋಸೆ, ಬೀಟ್‌ರೂಟ್ ದೋಸೆ ಇನ್ನೂ ಹಲವು ಆಯ್ಕೆಗಳಿವೆ. ಮೊಸರಿನ ದೋಸೆ, ಪಾವ್ ಭಾಜಿ ದೋಸೆ, ಬೆಂಗಳೂರು ಮಸಾಲಾ ದೋಸೆ, ಶಿಮ್ಲೋ ದೋಸೆ, ಮಶ್ರೂಮ್ ಮಸಾಲಾ ದೋಸೆ, ಪಾಲಾಕ್ ದೋಸೆ, ಆಲೂ ಚೀಸ್ ದೋಸೆ...  ಹೀಗೆ ಮೆನು ಬೆಳೆಯುತ್ತಾ ಹೋಗುತ್ತದೆ.

ಇನ್ನು ಮಾಂಸಾಹಾರಿಗಳಿಗೆ ಆಯ್ಕೆ ಕೆಲವೇ ಕೆಲವು. ರುಚಿಯಲ್ಲಿ ಹೆಚ್ಚು ವೈವಿಧ್ಯ ಇಲ್ಲ. ಚಿಕನ್ ದೋಸೆ, ಮಂಗಳೂರಿಯನ್ ಚಿಕನ್ ಸುಕ್ಕಾ, ರೋಸ್ಟ್ ಚಿಕನ್ ದೋಸೆ, ಚಿಲ್ಲಿ ಫಿಶ್ ದೋಸೆ, ಎಗ್‌ಬುರ್ಜಿ ದೋಸೆ- ಇಷ್ಟು ಆಯ್ಕೆಗಳಿವೆ. ದೋಸೆಯಲ್ಲಿ ಹೊಸತನ ಹುಡುಕುವವರಿಗೆ ಸಾಲ್ಸಾ ದೋಸೆ, ಪಿಜ್ಜಾ ದೋಸೆ, ಶೆಜವಾನ್ ದೋಸೆ, ಮೆಕ್ಸಿಕನ್ ದೋಸೆ, ಚಾಪ್‌ಸ್ಯೂ ದೋಸೆಗಳಿವೆ.
 
ಬರೀ ದೋಸೆಗಳಲ್ಲಿ ಮಾತ್ರವಲ್ಲ, ನೆಂಚಿಕೊಂಡು ತಿನ್ನುವ ಸಾಂಬಾರ್, ಚಟ್ನಿ, ಪಲ್ಯ, ತೊಕ್ಕು, ಚಟ್ನಿ ಪುಡಿ ಎಲ್ಲವೂ ಇಲ್ಲಿ ಹೊಸ ರುಚಿ ಪಡೆದುಕೊಂಡಿವೆ. ದೋಸೆ ಹಬ್ಬಕ್ಕೊಮ್ಮೆ ಭೇಟಿ ಕೊಟ್ಟರೆ ದಕ್ಷಿಣ ಭಾರತದ ಒಂದೊಂದು ರಾಜ್ಯದ ರುಚಿಯೂ ಪರಿಚಯವಾದಂತೆನಿಸುತ್ತದೆ.

ಟ್ಯಾಕ್ಸ್ ಒಳಗೊಂಡಂತೆ ಒಬ್ಬ ವ್ಯಕ್ತಿಗೆ 250 ರೂ. ನಾಲ್ಕೈದು ಜನರೊಂದಿಗೆ ಹೋದರೆ ರಿಯಾಯಿತಿ ಇದೆ. ನೀವೂ ಒಮ್ಮೆ ದೋಸೆ ಹಬ್ಬಕ್ಕೆ ಭೇಟಿ ನೀಡಿ ನಿಮ್ಮ ಫ್ಲೇವರ್‌ನ ದೋಸೆ ರುಚಿ ಸವಿದು ಬರಬಹುದು.

ಸ್ಥಳ: ನಂ 5, 43, ರೇಸ್‌ಕೋರ್ಸ್ ರಸ್ತೆ, ಫಾರ್ಚ್ಯುನ್ ಪಾರ್ಕ್, ಜೆ. ಪಿ. ಸೆಲೆಶಿಯಲ್.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT