ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೌರ್ಜನ್ಯ ಕಾಯ್ದೆ ದುರುಪಯೋಗವಾಗದಿರಲಿ

Last Updated 29 ನವೆಂಬರ್ 2011, 19:30 IST
ಅಕ್ಷರ ಗಾತ್ರ

ರಾಮನಗರ: ಮಹಿಳಾ ಸಮುದಾಯದ ಸಂರಕ್ಷಣೆಗೆಂದು ಜಾರಿಗೊಳಿಸಿರುವ ಕೌಟುಂಬಿಕ ದೌರ್ಜನ್ಯ ಕಾಯ್ದೆ-2005 ಅತ್ಯಂತ ಪರಿಣಾಮಕಾರಿಯಾಗಿದ್ದು, ಇದು ದುರುಪಯೋಗ ಆಗದಂತೆ ನೋಡಿಕೊಳ್ಳಬೇಕಿದೆ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ರುದ್ರಮುನಿ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಎಂ.ಎಚ್.ಕಾನೂನು ಕಾಲೇಜು ಮತ್ತು ಸರ್ಕಾರಿ ಕಾನೂನು ಕಾಲೇಜು ಜಂಟಿಯಾಗಿ ಎಂ.ಎಚ್.ಕಾನೂನು ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ `ಕೌಟುಂಬಿಕ ದೌರ್ಜನ್ಯ ಕಾಯ್ದೆ 2005~ ಕುರಿತು ವಿಚಾರ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಈ ಕಾಯ್ದೆ ಸದುಪಯೋಗವಾದರೆ ಮಹಿಳೆಯರು ಮತ್ತು ಇಡೀ ಕುಟುಂಬದಲ್ಲಿ ನೆಮ್ಮದಿ ಮೂಡುತ್ತದೆ. ಒಂದು ವೇಳೆ ಇದು ದುರುಪಯೋಗವಾದರೆ ಅಪಯಾಕಾರಿಯಾಗುತ್ತದೆ ಎಂದು ಅವರು ಸೂಕ್ಷ್ಮವಾಗಿ ತಿಳಿಹೇಳಿದರು.

ಮಹಿಳಾ ದೌರ್ಜನ್ಯ ತಡೆಯಲು ಭಾರತೀಯ ದಂಡ ಸಂಹಿತೆಯಲ್ಲಿ (498-ಎ) ಅವಕಾಶ ಇದ್ದರೂ, ಇದರ ವ್ಯಾಪ್ತಿ ಸಂಕುಚಿತವಾಗಿರುತ್ತದೆ. ಇದು ಕೇವಲ ಪತ್ನಿಗೆ ಸೀಮಿತವಾದಂತೆ ನಿಯಮಗಳನ್ನು ಒಳಗೊಂಡಿದೆ.

ಕುಟುಂಬದಲ್ಲಿನ ತಾಯಿ, ಅಕ್ಕ, ತಂಗಿಯರು ಇದರಡಿ ಬರುವುದಿಲ್ಲ. ಆದ್ದರಿಂದ ಈ ಕುರಿತು  ಪರಿಶೀಲಿಸಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಕುಟುಂಬದ ಎಲ್ಲ ಮಹಿಳೆಯರೂ ಇದರ ವ್ಯಾಪ್ತಿಗೆ ಬರುತ್ತಾರೆ ಎಂದು ಅವರು ಮಾಹಿತಿ ನೀಡಿದರು.

ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಪ್ರಕಾರ, ಪತ್ನಿಯನ್ನು ಹೆಸರಿಡಿದು ಕರೆಯುವಂತಿಲ್ಲ. ಗಂಡ ತಡವಾಗಿ ಮನೆಗೆ ಬರುವಂತಿಲ್ಲ. ಮನೆ ಖರ್ಚಿಗೆ ಅಗತ್ಯವಿರುವಷ್ಟು ಹಣವನ್ನು ಪತಿಯಾದನು ಪತ್ನಿಗೆ ನೀಡಬೇಕು ಇವೇ ಮೊದಲಾದ ಅಂಶಗಳನ್ನು ಇದು ಒಳಗೊಂಡಿದೆ. ಆದ್ದರಿಂದ ಇವುಗಳು ದುರುಪಯೋಗ ಆಗದಂತೆ ನೋಡಿಕೊಳ್ಳಬೇಕಾದ ಅಗತ್ಯ ಇದೆ ಎಂದು ಅವರು ಪ್ರತಿಪಾದಿಸಿದರು.

ಈ ಕಾಯ್ದೆ ದುರ್ಬಳಕೆ ಆಗದಂತೆ ನೋಡಿಕೊಳ್ಳಲು ನ್ಯಾಯಾಲಯಗಳಲ್ಲಿ ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದ್ದು, ಅವರು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಶಿಫಾರಸು ಮಾಡುತ್ತಾರೆ. ಅದರ ಆಧಾರದ ಮೇಲೆ ವಿಚಾರಣೆ ನಡೆಯಲಿದೆ ಎಂದು ಅವರು ತಿಳಿಸಿದರು.

ಚರ್ಚೆ ನಡೆಯಬೇಕು: ಕಾನೂನು ಕಾಲೇಜುಗಳಲ್ಲಿ ವಿವಿಧ ವಿಷಯಗಳ ಕುರಿತು ಕಾಲ ಕಾಲಕ್ಕೆ ಚರ್ಚೆ, ವಿಚಾರಗೋಷ್ಠಿಗಳು ನಡೆಯುತ್ತಿರಬೇಕು. ವಾರಕ್ಕೊಮ್ಮೆ ಇಂತಹ ಚರ್ಚೆಗಳು ನಡೆಯುತ್ತಿದ್ದರೆ ವಿದ್ಯಾರ್ಥಿಗಳಲ್ಲಿ ವಿಷಯಗಳ ವಿಲೇವಾರಿ ಆಗುತ್ತದೆ. ಆ ಮೂಲಕ ಅವರಲ್ಲಿ ಮಾತನಾಡುವ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಮೂಡುತ್ತದೆ ಎಂದು ಅವರು ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಕಿವಿಮಾತು ಹೇಳಿದರು.

ರಾಷ್ಟ್ರೀಯ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಇತರ ಕಾನೂನು ಕಾಲೇಜಿನ ವಿದ್ಯಾರ್ಥಿಗಳನ್ನು ನೋಡಿದರೆ ಇಬ್ಬರ ನಡುವಿರುವ ಅಜಗಜಾಂತರ ಕಂಡು ಬರುತ್ತದೆ. ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ವಾರಕ್ಕೊಮ್ಮೆ ಉಪನ್ಯಾಸ, ವಿಚಾರಗೋಷ್ಠಿಗಳನ್ನು ಏರ್ಪಡಿಸಲಾಗುತ್ತದೆ. ಅಲ್ಲದೆ ಕಾನೂನು ಪದವಿ ಮುಗಿಸುವುದರೊಳಗೆ ವಿದ್ಯಾರ್ಥಿಗಳು 50ಕ್ಕೂ ಹೆಚ್ಚು ಅಣಕು ನ್ಯಾಯಾಲಯದಲ್ಲಿ ಭಾಗವಹಿಸುತ್ತಾರೆ. ಇದರಿಂದ ಅವರು ಕಾಲೇಜಿನಿಂದ ಹೊರ ಬರುವ ಮೊದಲೇ ವಕೀಲರಾಗಿರುತ್ತಾರೆ ಎಂದು ನ್ಯಾಯಾಧೀಶರು ತಿಳಿಸಿದರು.

ಇಂಗ್ಲಿಷ್ ಭಾಷಾ ಸಮಸ್ಯೆ, ಗ್ರಾಮೀಣ ಮೂಲ ಇವೇ ಮೊದಲಾದ ಕಾರಣಗಳಿಂದ ಹಿಂಜರಿಕೆ, ಆತ್ಮ ವಿಶ್ವಾಸದ ಕೊರತೆಯನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೊಂದಿರುತ್ತಾರೆ. ಇವುಗಳನ್ನು ಹೋಗಲಾಡಿಸಲು ಪದೇ ಪದೇ ಚರ್ಚಾ ಸ್ಪರ್ಧೆಗಳನ್ನು ಕಾಲೇಜು ಮಟ್ಟದಲ್ಲಿ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ನ್ಯಾಯಾಧೀಶರಾದ ಕೆ.ಎನ್.ರೂಪಾ, ಎಂ.ಎಚ್.ಕಾನೂನು ಕಾಲೇಜಿನ ಪ್ರಾಚಾರ್ಯ ಆರ್.ಅಶೋಕ್, ಸರ್ಕಾರಿ ಕಾನೂನು ಕಾಲೇಜಿನ ಪ್ರಾಚಾರ್ಯ ಎ. ಗೋಪಾಲ್, ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ಜಯರಾಮಯ್ಯ, ವಕೀಲ ಅಂಬರೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT