ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ₨ 12.72 ಲಕ್ಷ ಪರಿಹಾರ

ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ವೆಂಕಟೇಶ್ ಹೇಳಿಕೆ
Last Updated 27 ಸೆಪ್ಟೆಂಬರ್ 2013, 8:44 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ  ೨೨ ಪ್ರಕರಣ ದಾಖಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ₨ ೧೨.೭೨ ಲಕ್ಷ ಪರಿಹಾರ ನೀಡಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ವೆಂಕಟೇಶ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ  ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಈ ೨೨ ಪ್ರಕರಣಗಳ ಪೈಕಿ ೧೭ ಪರಿಶಿಷ್ಟಜಾತಿ ಹಾಗೂ ೫ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಂತ್ರಸ್ಥರಾಗಿದ್ದಾರೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಅಸ್ಪೃಷ್ಯತೆ ಆಚರಣೆ, ಜಾತಿನಿಂದನೆ ಹಾಗೂ ದೌರ್ಜನ್ಯ ಪ್ರಕರಣಗಳು ನಡೆಯದಂತೆ ಜಿಲ್ಲಾ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗಿದ್ದು, ಗ್ರಾಮೀಣ ಭಾಗದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈಗಾಗಲೇ ತಾಲ್ಲೂಕು ಮಟ್ಟದಲ್ಲಿ ದೌರ್ಜನ್ಯ ನಡೆದ ಸ್ಥಳಗಳಲ್ಲಿ
ಅಸ್ಪೃಷ್ಯ ಆಚರಣೆ ಶಿಕ್ಷಾರ್ಹ ಅಪರಾಧ ಎನ್ನುವ ಬಗ್ಗೆ ನಾಗರಿಕರಲ್ಲಿ ಅರಿವು ಉಂಟಾಗಿದೆ ಎಂದು ಹೇಳಿದರು. 

ನಂತರ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಮಾತನಾಡಿ, ಪರಿಶಿಷ್ಟ ಜಾತಿಯ ಎಲ್ಲ ಮಕ್ಕಳಿಗೂ ಶಿಕ್ಷಣ ಕಲ್ಪಿಸಿಕೊಡುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚುವರಿ ವಿದ್ಯಾರ್ಥಿ ನಿಲಯಗಳು ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸಲು ಅಗತ್ಯ ಮಾಹಿತಿ, ಪ್ರಸ್ತಾವ ಸಿದ್ಧಪಡಿಸಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ೩೪ ಹಾಸ್ಟೆಲ್‌ಗಳನ್ನು ಪ್ರಾರಂಭಿಸುವ ಸಲುವಾಗಿ ಸೂಕ್ತ ಜಾಗವನ್ನು ಕಲ್ಪಿಸಬೇಕಾಗಿದೆ. ಆದ್ದರಿಂದ ಜಾಗವನ್ನು ಒದಗಿಸುವಂತೆ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸೂಚನೆ ನೀಡಿದರು.

ದೌರ್ಜನ್ಯ ನಿಯಂತ್ರಣ ಕಾಯ್ದೆ ಅಡಿಯಲ್ಲಿ ದಾಖಲಾಗುವ ದೌರ್ಜನ್ಯ ಪ್ರಕರಣಗಳ ಕುರಿತಂತೆ ಪ್ರಥಮ ಮಾಹಿತಿ ವರದಿ ತಯಾರಿಸುವಲ್ಲಿ ಪ್ರಕರಣದ ಸ್ವರೂಪದ ಬಗ್ಗೆ ಸ್ಪಷ್ಟವಾಗಿ ಮಾಹಿತಿ ವರದಿಯನ್ನು ದಾಖಲಿಸಿದಲ್ಲಿ ಪ್ರಕರಣದ ಸ್ವರೂಪದ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಸಹಾಯವಾಗುವುದು ಎಂದು ಸಮಿತಿ ಸದಸ್ಯರು ಸಭೆಯ ಗಮನಕ್ಕೆ ತಂದರು.

ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೈ.ಎಸ್‌. ರವಿಕುಮಾರ್ ಮಾತನಾಡಿ, ದೌರ್ಜನ್ಯ ಪ್ರಕರಣ ಕುರಿತಂತೆ ಪ್ರಥಮ ಮಾಹಿತಿ ವರದಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಭೆಯಲ್ಲಿ ಸಮಿತಿ ಸದಸ್ಯರಾದ ಸರ್ವಶ್ರೀ ಎಚ್.ಸಿ. ನಿರಂಜನಕುಮಾರ್, ವೈ.ತಿಪ್ಪೇಸ್ವಾಮಿ, ನಾಗಾನಾಯ್ಕ, ರಮೇಶ್, ಜಾಕೀರ್‌ಹುಸೇನ್, ವಿ.ನಾಗಪ್ಪ, ನೇಹಾಮಲ್ಲೇಶ್, ಬೈಲಮ್ಮ, ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಲಕ್ಷ್ಮೀನಾರಾಯಣ, ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT