ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೌರ್ಬಲ್ಯವನ್ನೂ ಅಪ್ಪಿಕೊಳ್ಳಿ

Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕೆಲ ವರ್ಷಗಳಿಂದ ನೀವು ಆರೋಗ್ಯಕರ ಅಭ್ಯಾಸಗಳನ್ನು ಅಪ್ಪಿಕೊಂಡಿರಬಹುದು. ಆದರೆ, ಎಲ್ಲ ಸಲವೂ ಇದನ್ನು ಮಾಡಲು ಸಾಧ್ಯವಾಗುವುದಿಲ್ಲ. ವ್ಯಾಯಾಮ ಶಿಕ್ಷಕರಿಗೆ ತಿಂಗಳಿಡೀ ವ್ಯಾಯಾಮ ಮಾಡಲು ಸಾಧ್ಯವಾಗದೇ ಆಲಸ್ಯ ಹುಟ್ಟುಬಹುದು. ತೆಳ್ಳಗಾಗಲು ಸಲಹೆ ನೀಡುವ ಡಯಟೀಷಿ­ಯನ್ ದಪ್ಪಗಾಗಬಹುದು. ಖಿನ್ನತೆಗೆ ಒಳ­ಗಾ­ದ­ವರಿಗೆ ಸಲಹೆ ನೀಡುವ ಆಪ್ತ ಸಮಾಲೋಚಕರು ಪಾಲ­ಕರ ಮರಣದಿಂದ ದುಃಖದ ಮಡುವಿನಲ್ಲಿ ಮುಳುಗಿ­ಹೋಗಬ­ಹುದು. ಒಂದು ನಿಮಿಷವೂ ತಡವಾಗಿ ಕಚೇರಿಗೆ ಬರದ ಬಾಸ್ ಒಂದು ದಿನ ಅರ್ಧ ಗಂಟೆ ತಡವಾಗಿ ಬರಬಹುದು.

ಇದು ಸತ್ಯ, ಹಲವು ವರ್ಷಗಳಿಂದ ಬೆಳೆಸಿಕೊಂಡು ಬಂದ ಅಭ್ಯಾಸ, ಒಂದೇ ಒಂದು ಕ್ಷಣದಲ್ಲಿ ತಪ್ಪಿಹೋಗಬಹುದು. ಶನಿವಾರದ ಪಾರ್ಟಿಯ ಅಮಲಿನಲ್ಲಿ ಹೊಟ್ಟೆಬಿರಿಯ ತಿನ್ನು­ವಾಗ ಕಷ್ಟಪಟ್ಟು ತೂಕ ಕಳೆದುಕೊಂಡಿದ್ದು ಮರೆತು­ಹೋಗ­ಬಹುದು. ಈವರೆಗೆ ಮಾಡಿದ್ದೆಲ್ಲ ವ್ಯರ್ಥ ಎನಿಸಬ­ಹುದು. ಕಚೇರಿಗೆ ತಡವಾಗಿ ಬಂದಿದ್ದಕ್ಕೆ ನಾಚಿಕೊಂಡು ಬಾಸ್ ಕೆಲಸಕ್ಕೆ ರಾಜೀ­ನಾಮೆ ನೀಡಬಹುದು. ಆಪ್ತ ಸಮಾಲೋಚ­ಕರು ತಮ್ಮ ಕೆಲಸವನ್ನೇ ಬಿಡಬಹುದು. ವ್ಯಾಯಾಮ ಶಿಕ್ಷಕರು ಹಾಗೂ ಡಯಟೀಷಿಯನ್ ಸಹ ವೃತ್ತಿಯಿಂದ ದೂರ ಸರಿಯಬಹುದು.

ಇದು ದಿಗಿಲು ಬೀಳುವ ಸಮಯವಲ್ಲ. ಹತಾಶೆಯಿಂದ ಕೈಚೆಲ್ಲುವ ಸಮಯವೂ ಅಲ್ಲ. ನಮ್ಮನ್ನು ನಾವು ಮನುಷ್ಯರು ಎಂದು ಅರಿತುಕೊಳ್ಳುವ ಕಾಲ. ಬೇರೆಯವರು ಎಷ್ಟು ಕಷ್ಟ ಅನುಭವಿಸುತ್ತಾರೆ ಎಂದು ಅರ್ಥ ಮಾಡಿಕೊಳ್ಳುವ ಕಾಲ. ನಮ್ಮ ಅಹಂಕಾರ, ಅಭಿಮಾನವನ್ನು ಬದಿಗಿಟ್ಟು ನಮ್ಮ ಮತ್ತೊಂದು ಮುಖವನ್ನು ಸ್ವೀಕರಿಸುವ ಕಾಲ.

ಈ ಮತ್ತೊಂದು ಮುಖ ಯಾವುದು? ಏನನ್ನೂ ಮಾಡದೇ ಇರುವುದು. ಯಾವುದನ್ನೂ ವ್ಯಾವಹಾರಿಕವಾಗಿ ಲೆಕ್ಕಾಚಾರ ಹಾಕದೇ ಇರುವುದು. ಮನಃಶಾಸ್ತ್ರಜ್ಞರ ಪ್ರಕಾರ ಈ ಮನಸ್ಸು ಮುಕ್ತವಾಗಿ, ಹಗುರವಾಗಿ ಇರುತ್ತದೆ. ಇಂತಹ ಮನಸ್ಸಿಗೆ ಯಾವುದೇ ಹಿಂಜರಿಕೆ ಇರುವುದಿಲ್ಲ.

ಚಿಕ್ಕವರಿದ್ದಾಗ ಹಾಸಿಗೆಯಲ್ಲಿ ಮೂತ್ರ ಮಾಡಿದ್ದು ಇದೇ ನಾವಾಗಿರುತ್ತೇವೆ. ದಪ್ಪಗಾಗಿದ್ದಕ್ಕೆ ನಾಚಿಕೊಳ್ಳದೇ ಇರುವುದು,  ಹೋಂವರ್ಕ್‌ ಮಾಡದೇ ಬೈಸಿಕೊಂಡಿದ್ದು, ಶಾಲೆಗೆ ಚಕ್ಕರ್ ಹಾಕಿದ್ದು ಇದೇ ನಾವಾಗಿರುತ್ತೇವೆ. ಆದರೆ, ಇದೇ ನಾವು ಬೈಸಿಕೊಂಡು, ನಿರಂತರವಾಗಿ ತಿದ್ದಿಕೊಂಡು ಶಿಸ್ತುಬದ್ಧ ವ್ಯಕ್ತಿತ್ವ­ವನ್ನು ರೂಢಿಸಿಕೊಂಡಿರುತ್ತೇವೆ. ನಮ್ಮ ಆ ಹಳೆಯ ವ್ಯಕ್ತಿತ್ವ ನಮ್ಮ ನೆರಳಾಗಿರುತ್ತದೆ.

ನಮ್ಮ ಈಗಿನ ವ್ಯಕ್ತಿತ್ವದ ಅಡಿ ಒಳ­ಗೆಲ್ಲೋ ಮರೆಯಾಗಿರುತ್ತದೆ. ಆದರೂ ಅದು ನಮ್ಮ ಮನಸ್ಸಿನ ಭಾಗವಾಗಿರುತ್ತದೆ. ನಮ್ಮ ಮೇಲೆ, ನಮ್ಮ ಅಭ್ಯಾಸ­ಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದಕ್ಕಾಗಿ ನಾವು ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳುತ್ತೇವೆ. ಆದರೂ ಆಗಾಗ ಈ ತುಂಟ ಮನಸ್ಸು ಹೊರಗೆ ಇಣುಕುತ್ತದೆ. ತೂಕ ಇಳಿಸಲು ಪಥ್ಯ ಮಾಡುತ್ತಿದ್ದವರು ಕೇಕ್ ಅನ್ನೋ, ಇಷ್ಟದ ಸಿಹಿ ತಿಂಡಿಯನ್ನೋ ತಿಂದು ಬಿಡುತ್ತೇವೆ. ಆಗ ತಪ್ಪಿತಸ್ಥ ಭಾವನೆ ನಮ್ಮಲ್ಲಿ ಇಣುಕುತ್ತದೆ. ಒಂದು ದಿನ ನಮ್ಮ ನಿಯಂತ್ರಣವೆಲ್ಲ ಕರಗಿ ಹಳೆಯ ಅನಾರೋಗ್ಯಕರ ಅಭ್ಯಾಸವನ್ನೇ ಅಪ್ಪಿಕೊಳ್ಳುತ್ತೇವೆ.

ನಮ್ಮೊಳಗೆ ನೆರಳಿನಂತೆ ಇರುವ ಆ ವ್ಯಕ್ತಿತ್ವವನ್ನು ನಿರಾಕರಿಸಿದಂತೆಲ್ಲ ನಮ್ಮಲ್ಲಿ ಹತಾಶೆ ಹೆಚ್ಚುತ್ತಾ ಹೋಗುತ್ತದೆ. ದೇಹ ಕುಸಿಯುತ್ತದೆ. ಆರೋಗ್ಯ ಸ್ವಾಸ್ಥ್ಯದ ಬೆಳಕಿನ ಬದಲಾಗಿ ಕಪ್ಪು ನೆರಳಿನಲ್ಲಿ ಹುದುಗಿಹೋಗುತ್ತದೆ. ಆರೋಗ್ಯದ ಕಾಂತಿಯಿಂದ ಹೊಳೆಯಬೇಕಾದ ದೇಹ ಉಸಿರುಗಟ್ಟಿಸುವ ಅಂಧಕಾರದಿಂದ ಅನಾರೋಗ್ಯದತ್ತ ಜಾರುತ್ತದೆ.

ಸಮಾಜದ, ಕುಟುಂಬದ ಎದುರು ನಮ್ಮ ಆ ದುರ್ಬಲ ಮನಸ್ಸನ್ನು, ಮುಕ್ತ ಮನಸ್ಸನ್ನು ಮರೆಮಾಚಲು, ಹತ್ತಿಕ್ಕಲು ನಾವು ನಮ್ಮ ಶಕ್ತಿಯ­ನ್ನೆಲ್ಲಾ ವ್ಯಯಿಸುತ್ತೇವೆ. ಹೊರಲೋಕಕ್ಕೆ ಪರಿಪೂರ್ಣ ಬಾಸ್, ಪರಿ­ಪೂರ್ಣ ಟೀಚರ್ ಆಗಿ ಕಾಣಿಸಿಕೊಳ್ಳುತ್ತೇವೆ. ಈ ಪರಿ­ಪೂರ್ಣ­ತೆಯ ಮುಖವಾಡದ ಒಳಗಿರುವ ಮನಸ್ಸು ತಾನೇ ತಾನಾ­ಗಿರಲು ಬಯಸುತ್ತದೆ. ಸಮತೋಲನಕ್ಕಾಗಿ ತುಡಿಯುತ್ತಿ­ರು­ತ್ತದೆ. ಆದರೂ ನಾವು ನಗುತ್ತಲೇ ಆ ಕಠಿಣ ಅಭ್ಯಾಸಗಳನ್ನು ಮುಂದುವರಿಸುತ್ತೇವೆ. ಮುಖವಾಡವನ್ನು ಮತ್ತಷ್ಟು ಗಟ್ಟಿ­ಯಾಗಿ ಪ್ರದರ್ಶಿಸುತ್ತೇವೆ. ಒಳಗೊಳಗೇ ಮನಸ್ಸು ಕುಸಿಯುತ್ತಿರುತ್ತದೆ.

ಈ ಸಮಸ್ಯೆಗೆ ಪರಿಹಾರ ಸರಳವಾಗಿದೆ. ಮಾತನಾಡು­ವುದು. ನಿಮ್ಮನ್ನು ನಂಬುವ, ನಿಮ್ಮನ್ನು ಹೇಗಿದ್ದರೂ ಒಪ್ಪಿಕೊ­ಳ್ಳುವ ವ್ಯಕ್ತಿಯ ಬಳಿ ಮುಕ್ತವಾಗಿ ಮಾತನಾಡಿ. ನಿಮ್ಮ ದೌರ್ಬ­ಲ್ಯದ ಬಗ್ಗೆ ಹೇಳಿಕೊಳ್ಳಿ. ಆ ವ್ಯಕ್ತಿ ಯಾವುದೇ ಪೂರ್ವಗ್ರಹವಿ­ಲ್ಲದೇ ನಿಮ್ಮನ್ನು ಸ್ವೀಕರಿಸಿದಾಗ ನಿಮ್ಮ ವ್ಯಕ್ತಿತ್ವದ ಆ ಕಪ್ಪು ಭಾಗ ಬೆಳಕಿನಲ್ಲಿ ಒಂದಾಗಿ ಹೋಗುತ್ತದೆ. ಇದು ಪೂರ್ಣತ್ವ.

ನೀವು ಅನುಸರಿಸುವ ಉತ್ತಮ ಅಭ್ಯಾಸಗಳು ನಿಮಗೆ ಮತ್ತಷ್ಟು ಅನುಕೂಲ ತಂದುಕೊಡುತ್ತವೆ. ಪರಿಪೂರ್ಣ ವ್ಯಕ್ತಿತ್ವ ಮತ್ತು ಆದರ್ಶಮಯ ವ್ಯಕ್ತಿತ್ವದ ನಡುವೆ ಗೊಂದಲ ಮೂಡಿ­ದಾಗ ಹೀಗೆ ಆಗುತ್ತದೆ. ಪರಿಪೂರ್ಣ ವ್ಯಕ್ತಿತ್ವ ಹೊಂದಿದಾಗ ನಾವು ಎಲ್ಲವನ್ನೂ ಲೆಕ್ಕಾಚಾರ ಹಾಕುತ್ತೇವೆ. ಬೇರೆಯವರ ಜತೆ ಹಂಚಿಕೊಳ್ಳಲು ಬಯಸುವುದಿಲ್ಲ. ಆದರೆ, ಆದರ್ಶಮಯ ವ್ಯಕ್ತಿತ್ವ ಹೊಂದಿದ್ದಾಗ ನಾವು ವ್ಯಾವಹಾರಿಕ ಆಗಿರುವುದಿಲ್ಲ. ಬೆಳೆಯುತ್ತಲೇ ಹೋಗುತ್ತೇವೆ.

ಹೀಗೆ ಪರಿಪೂರ್ಣ ವ್ಯಕ್ತಿತ್ವ ಹೊಂದಿದವರು ಒತ್ತಡಕ್ಕೆ ಒಳಗಾಗುವುದನ್ನು ನಾನು ನೋಡಿದ್ದೇನೆ. ಅವರ ಚರ್ಮ ಕಪ್ಪಗಾಗುವುದನ್ನು, ಆರೋಗ್ಯ ಕುಸಿಯುವುದನ್ನು ನೋಡಿದ್ದೇನೆ. ಪರಿಪೂರ್ಣ ವ್ಯಕ್ತಿತ್ವದ ಗುಂಗಿನಲ್ಲಿ ತಮ್ಮ ಸುತ್ತ ಕೋಟೆ ಕಟ್ಟಿಕೊಂಡು, ಬದುಕಿನ ಅದಮ್ಯ ವಿಸ್ಮಯಗಳತ್ತ, ಸಂತಸ ತರುವ ಸಂಗತಿಗಳತ್ತ ಅವರು ಕುರುಡಾಗಿರುತ್ತಾರೆ.

ಈ ಪರಿಪೂರ್ಣ ವ್ಯಕ್ತಿತ್ವವೇ ಅವರಿಗೆ ಜೈಲಾಗಿರುತ್ತದೆ. ಆ ಕಾರಾಗೃಹದಿಂದ ತಪ್ಪಿಸಿಕೊಂಡು ಬಂದಾಗ ಮಾತ್ರ ನಿಸರ್ಗದ ಸೌಂದರ್ಯವನ್ನು ಆಸ್ವಾದಿಸಲು ಸಾಧ್ಯ. ಫುಟ್‌ಪಾತ್‌ನಲ್ಲಿ ಇಣುಕಿದ ಗರಿಕೆಯನ್ನು, ತಂಪಾಗಿ ಬೀಸುವ ಗಾಳಿಯನ್ನು ಗುರುತಿಸಲು ಸಾಧ್ಯ. ಮಾರುಕಟ್ಟೆಯಲ್ಲೂ ಶಾಂತ ಮನಃಸ್ಥಿತಿ­ಯಲ್ಲಿ ಇರಲು ಸಾಧ್ಯ.

ಮುಕ್ತವಾಗಿ ಪ್ರೀತಿಯನ್ನು ಕೊಡುವ, ಪ್ರೀತಿ­ಯನ್ನು ಸ್ವೀಕರಿಸುವ ಸ್ವಾತಂತ್ರ್ಯ ಬೆಳೆಸಿಕೊಳ್ಳಬೇಕು. ಆಗ ವೃತ್ತಿ­ ನಿಮ್ಮ ಬದುಕಿನ ಧ್ಯೇಯವಾಗಿ ಬದಲಾಗುತ್ತದೆ. ಯಾವುದೋ ಉದ್ದೇಶ ಇಟ್ಟುಕೊಂಡು ಕಚೇರಿ ಪ್ರವೇಶಿಸಿದ ವೃತ್ತಿಪರನೊಬ್ಬ ವಿಶಾಲ ಅಂತಃಪ್ರಜ್ಞೆಯುಳ್ಳ ಬುದ್ಧನಾಗಿ ಬದಲಾಗುವುದು ಹೀಗೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT