ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ದ್ರೋಹ ಬಗೆದು ಹೋಗುತ್ತಿದ್ದೇನೆ, ಕ್ಷಮಿಸಿ'

Last Updated 8 ಏಪ್ರಿಲ್ 2013, 7:11 IST
ಅಕ್ಷರ ಗಾತ್ರ

ಹಾವೇರಿ: `ನನ್ನ ಸಾವಿಗೆ ನಾನೇ ಹೊಣೆಗಾರನಾಗಿದ್ದು, ಬೇರಾರೂ ಕಾರಣರಲ್ಲ. ನಾನು ನಿಮಗೆ ಒಳ್ಳೆಯ ಮಗನಾಗ ಬಯಸಿದ್ದೆ. ಆದರೆ ಆಗಲಿಲ್ಲ. ಈ ಜನ್ಮದಲ್ಲಿ ನಿಮ್ಮ ಋಣ ತೀರಿಸಲು ಸಾಧ್ಯವಾಗಿಲ್ಲ. ಮುಂದಿನ ಜನ್ಮದಲ್ಲಿ ನಿಮ್ಮ ಮಗನಾಗಿ ಹುಟ್ಟಿ ಋಣ ತೀರಿಸುವೆ. ನನ್ನ ಹೆಂಡತಿ, ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮಗೆ ದ್ರೋಹ ಬಗೆದು ಹೋಗುತ್ತಿದ್ದೇನೆ. ಅದಕ್ಕಾಗಿ ದಯವಿಟ್ಟು ನನ್ನನ್ನು ಕ್ಷಮಿಸಿ'
ಶನಿವಾರ ಬೆಳಿಗ್ಗೆ ಶಿಗ್ಗಾವಿ ತಾಲ್ಲೂಕಿನ ತಡಸ ಠಾಣೆಯಲ್ಲಿ ರೈಫಲ್‌ನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ 29 ವಯಸ್ಸಿನ ಪೊಲೀಸ್ ಪೇದೆ ಗುರುನಾಥ ಮೆಳ್ಳಿ ತಾನು ಬರೆದಿಟ್ಟ ಡೆತ್ ನೋಟ್‌ನಲ್ಲಿ ಮಾಡಿಕೊಂಡ ನಿವೇದನೆ.

ತನ್ನ ತಂದೆ ತಾಯಿಗೆ ಹಾಗೂ ಠಾಣೆಯ ಪಿಎಸ್‌ಐ ಸಗರಿ ಅವರ ಹೆಸರಿನಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಎರಡು ಡೆತ್‌ನೋಟ್ ಬರೆದಿರುವ ಗುರುನಾಥ, ಅವುಗಳನ್ನು ತಾನು ಕೆಲಸ ಮಾಡುವ ಕಂಪ್ಯೂಟರ್‌ನ ಟೇಬಲ್ ಡ್ರಾದಲ್ಲಿ ಇಟ್ಟಿರುವುದು ಭಾನುವಾರ ಬೆಳಕಿಗೆ ಬಂದಿದೆ. ಆದರೆ, ಎರಡೂ ಪತ್ರದಲ್ಲಿ ತನ್ನ ಸಾವಿಗೆ ನಿಖರ ಕಾರಣವೇನು ಎಂಬುದನ್ನು ಹೇಳಿಲ್ಲ. ಬದಲಾಗಿ ನಾನು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದಷ್ಟೆ ತಿಳಿಸಿದ್ದಾನೆ.

ಪಿಎಸ್‌ಐ ಸಗರಿ ಅವರ ಹೆಸರಿಗೆ ಬರೆದ ಪತ್ರದಲ್ಲಿ `ನೀವು ನನ್ನ ಮೇಲೆ ಸಾಕಷ್ಟು ವಿಶ್ವಾಸ ಇಟ್ಟಿದ್ದೀರಿ, ಅದನ್ನು ಉಳಿಸಿಕೊಳ್ಳಲು ಅಷ್ಟೇ ಪ್ರಮಾಣಿಕತೆಯಿಂದ ಕೆಲಸ ಮಾಡಿದ್ದೇನೆ ಎಂಬ ನಂಬಿಕೆ ನನ್ನಲ್ಲಿದೆ. ನಾನು ಸತ್ತು ಹೋದ ಮೇಲೆ ನನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ, ನನ್ನ ಹೆಂಡತಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕೊಡಿ, ನನ್ನ ಮಗ ಐಎಎಸ್, ಐಪಿಎಸ್ ಆಗಬೇಕು ಎಂಬ ಕನಸು ಹೊಂದಿದ್ದೆ. ಆದರೆ, ಕನಸು ನನಸಾಗುವ ಮುನ್ನವೇ ಲೋಕ ಬಿಟ್ಟು ಹೊರಟಿದ್ದೇನೆ. ಆ ಕನಸನ್ನು ಪೂರ್ಣ ಗೊಳಿಸಲು ಸಹಾಯ ಮಾಡಿ' ಎಂದು ಗುರುನಾಥ ಬರೆದಿಟ್ಟಿದ್ದಾರೆ. ಎರಡೂ ಪತ್ರದಲ್ಲಿ ಸಾವಿಗೆ ಕಾರಣ ತಿಳಿಸಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನಸಿಂಗ್ ರಾಠೋರ್ `ಪ್ರಜಾವಾಣಿ'ತಿಳಿಸಿದ್ದಾರೆ.

ಶನಿವಾರ ಆತ್ಮಹತ್ಯೆ: ತಡಸ ಪೊಲೀಸ್ ಠಾಣೆಯ ಕಂಪ್ಯೂಟರ್ ವಿಭಾಗದಲ್ಲಿ ರೈಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಹಾವೇರಿ ತಾಲ್ಲೂಕಿನ ಮೇವುಂಡಿ ಗ್ರಾಮದ ಗುರುನಾಥ ಗುಡ್ಡಪ್ಪ ಮೆಳ್ಳಿ (29)    ಠಾಣೆಯಲ್ಲಿ 303 ರೈಫಲ್‌ನಿಂದ  ಗುಂಡು ಹಾರಿಸಿಕೊಂಡು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT