ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರೌಪದಿಯ ಸ್ವಾಗತಿಸುವ ದೀಪದಾರ

ಚೆಲ್ಲಿದರು ಮಲ್ಲಿಗೆಯ ಭಾಗ 6
Last Updated 19 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು ಕರಗ ಉತ್ಸವದ ಐದನೆಯ ದಿನವಾದ ಶನಿವಾರ (ಏ. 20) ಹಳೆಯ ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯ ಜಲಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ. ಶುದ್ಧಿಕಾರ್ಯ ಹಾಗೂ ಪುಣ್ಯಸ್ನಾನ ಕಾರ್ಯಕ್ರಮಗಳು ಇಲ್ಲಿಯ ವಿಶೇಷ. ಕರಗ ಉತ್ಸವದ ಬಹುತೇಕ ಕಾರ್ಯಕ್ರಮಗಳು ರಾತ್ರಿಯ ವೇಳೆಯಲ್ಲಿ ನಡೆದರೂ ಶಕ್ತ್ಯೋತ್ಸವದ ಸ್ನಾನ ಘಟ್ಟದ ಪೂಜೆಗಳು ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುವುದು ಹಗಲಿನಲ್ಲಿ.

ಕೆಂಪೇಗೌಡರ ಬೆಂಗಳೂರು ಕೋಟೆಯೊಳಗೆ ಹಾಗೂ ಹೊರವಲಯದಲ್ಲಿ ತೋಟಗಾರಿಕೆಯಲ್ಲಿ ನಿರತರಾಗಿದ್ದ ತಿಗಳರು ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಅಭಿವೃದ್ಧಿ ಪಡಿಸಿದ ಲಾಲ್‌ಬಾಗ್ ಆಜುಬಾಜಿನಲ್ಲಿಯೂ ಅತ್ಯುತ್ತಮ ತರಕಾರಿ ಬೆಳೆಯುವ ಕ್ಷೇತ್ರಗಳನ್ನು ಹೊಂದಿದ್ದರು. ಮೊಘಲ್ ಆಳ್ವಿಕೆಯ ಉದ್ಯಾನಗಳ ಮೋಹ ಹೊಂದಿದ್ದ ಹೈದರ್ ಹಾಗೂ ಟಿಪ್ಪು ಬೆಂಗಳೂರು ಅರಮನೆಯ ಸಮೀಪದಲ್ಲೇ ಇದ್ದ ಫಲವತ್ತಾದ ಭೂಮಿಯಲ್ಲಿ ಲಾಲ್‌ಬಾಗ್ ಎಂಬ ಮೋಹಕ ಉದ್ಯಾನವನವನ್ನು ಅಭಿವದ್ಧಿಪಡಿಸುವ ಸಂದರ್ಭದಲ್ಲಿ ಅವರಿಗೆ ನೆರವಾಗಿದ್ದು ವಹ್ನಿ ಕುಲಸ್ಥರ ತೋಟಗಾರಿಕೆ ನಿಪುಣರೇ. 

ಲಾಲ್‌ಬಾಗ್ ದೇಶ ವಿದೇಶಗಳ ಹೂಗಳ ತಾಣವಾದಂತೆ ಬೆಂಗಳೂರಿನಲ್ಲಿಯೂ ತೋಟಗಳನ್ನು ಬೆಳೆಸುವ ಹವ್ಯಾಸ ಶುರುವಾಯಿತು. ಆಗ ಹೂ, ಹಣ್ಣು, ತರಕಾರಿ ಸಸಿಗಳನ್ನು ಬೆಳೆಸಿ ಕೊಡುವ ಕಾಯಕದಲ್ಲಿ ನಿರತರಾದವರಲ್ಲಿ ಹೆಚ್ಚಿನವರು ತಿಗಳ ಜನಾಂಗದವರೇ. ಲಾಲ್‌ಬಾಗ್ ಸಿದ್ಧಾಪುರವನ್ನು ಹೊರತುಪಡಿಸಿದರೆ ಕೆಂಪುತೋಟದ ಸುತ್ತಲೂ ನರ್ಸರಿಗಳನ್ನು ಹೊಂದಿದ್ದು, ಬೆಂಗಳೂರು ಉದ್ಯಾನನಗರಿ ಎಂಬ ಹೆಸರು ಬರಲು ಕಾರಣರಾದವರಲ್ಲಿ ತಿಗಳರು ಪ್ರಮುಖರು.

ದ್ರೌಪದಿ ಕರಗ ಮಹೋತ್ಸವ ಮಹಿಳೆಯನ್ನು ಆರಾಧಿಸುವ ಉತ್ಸವವಾದರೂ ಇದರಲ್ಲಿ ಹೆಚ್ಚಿನ ಹೊಣೆಗಾರಿಕೆಯುಳ್ಳವರು ಪುರುಷರು. ಆದರೆ ಕರಗ ಉತ್ಸವದ ಪ್ರಮುಖ ಭಾಗವಾದ ದೀಪದಾರತಿ ಉತ್ಸವವನ್ನು ಮುನ್ನಡೆಸುವವರು ಮಹಿಳೆಯರು. ಈ ವರ್ಷದ ದೀಪದಾರತಿ ಉತ್ಸವ ನಡೆಯುವುದು ಭಾನುವಾರ (ಏ. 21).

ತಿಗಳ ಜನಾಂಗದ ಮಹಿಳೆಯರು ತಂಬಿಟ್ಟು ಆರತಿಗಳನ್ನು ಸಿದ್ಧಮಾಡಿಕೊಂಡು ವಿವಿಧ ಬಗೆಯ ಪುಷ್ಪಗಳಿಂದ ಅವುಗಳನ್ನು ಅಲಂಕಾರ ಮಾಡಿಟ್ಟು ಮನೆಯಲ್ಲಿಯೇ ಅದರಲ್ಲಿ ದೀಪ ಬೆಳಗಿಸಿ ದೇವರ ಮುಂದಿಟ್ಟು ಪೂಜಿಸುವರು. ರಾತ್ರಿ ಸಡಗರ ಸಂಭ್ರಮಗಳಿಂದ ದೀಪ ಆರತಿಗಳನ್ನು ದೇವಾಲಯಕ್ಕೆ ಕೊಂಡೊಯ್ಯಲು ಅನುವಾಗುವರು. 

ತಿಗಳರ ಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇಗುಲದ ನಾಲ್ಕು ದಿಕ್ಕುಗಳಿಗೂ ನಾದಸ್ವರ, ಘಂಟಾನಾದ ಮೊದಲಾದವುಗಳೊಡನೆ ಹೊರಡುವ ಪೂಜನೀಯ ತ್ರಿಶೂಲಗಳ ಮೆರವಣಿಗೆ ತಿಗಳರು ಹೆಚ್ಚು ವಾಸಿಸುವ ಮನೆಗಳ ಬಳಿಗೆ ಬರುತ್ತದೆ. ನಂತರ ಹೆಣ್ಣುಮಕ್ಕಳು ಸಿದ್ಧಮಾಡಿಟ್ಟುಕೊಂಡ ಆರತಿಗಳನ್ನು ತಮ್ಮ ತಲೆಯ ಮೇಲೆ ಹೊತ್ತುಕೊಂಡು ದೇವಾಲಯದ ಕಡೆಗೆ ಸಾಗುತ್ತಾರೆ.

ಮಲ್ಲಿಗೆಯ ಕಂಪು, ವಿಧವಿಧ ಹೂಗಳ ಅಲಂಕಾರ, ಗುಂಪು ಗುಂಪಾಗಿ ಕಣ್ಮನ ಸೆಳೆಯುವ ತಂಬಿಟ್ಟು ದೀಪಗಳು ಮೋಹಕ ದೃಶ್ಯಗಳನ್ನು ಸೃಷ್ಟಿಸುತ್ತವೆ. ಮಾವಳ್ಳಿ ಹಾಗೂ ಲಾಲ್‌ಬಾಗ್ ಸಿದ್ಧಾಪುರಗಳಿಂದ ಹೊರಡುವ ದೀಪಗಳ ಗುಂಪು ದೊಡ್ಡದು. ಮಹಿಳೆಯರು ಒಟ್ಟಾಗಿ ವಾದ್ಯಗಳೊಂದಿಗೆ ಆಲಯದ ಕಡೆಗೆ ಹೆಜ್ಜೆ ಹಾಕುತ್ತಾರೆ. 

ತಿಗಳರ ಪೇಟೆಯಲ್ಲಿ ಕುಂಜಣ್ಣ ಗರಡಿ ಹಾಗೂ ಅಣ್ಣಯ್ಯಪ್ಪ ಗರಡಿಗಳಲ್ಲಿ ಸಾಹಸ ಕ್ರೀಡೆಗಳನ್ನು ಅಭ್ಯಾಸ ಮಾಡಿದವರಿಗೂ ದೀಪದಾರತಿ ಸಂದರ್ಭದಲ್ಲಿ ಪ್ರದರ್ಶನಕ್ಕೆ ಅವಕಾಶವುಂಟು. ಆ ಜನಾಂಗದ ಯುವಕರು ಕೋಲುವರಸೆ, ಕತ್ತಿವರಸೆ, ಬಿಜಲಿ, ಬಾಕು ಯುದ್ಧ, ಪಂಜಿನ ಪ್ರದರ್ಶನ ಮೊದಲಾದ ಆತ್ಮರಕ್ಷಣಾ ಕಲೆಗಳನ್ನು ದೀಪದಾರತಿ ಉತ್ಸವದ ಮುಂಭಾಗದಲ್ಲಿ ಪ್ರದರ್ಶನ ಮಾಡುತ್ತಾ ಸಾಗಿಬರುವರು.

ನಾಲ್ಕು ದಿಕ್ಕುಗಳಿಂದ ಬರುವ ದೀಪದಾರತಿ ಮೆರವಣಿಗೆಯು ದೇವಾಲಯಕ್ಕೆ ಆಗಮಿಸಿ, ನಿಗದಿತ ರಸ್ತೆಗಳಲ್ಲಿ ಸಂಚರಿಸಿ ಮತ್ತೆ ಗುಡಿ ಸೇರುವುದು ಸಂಪ್ರದಾಯ. ದ್ರೌಪದಿ ದೇವಿಯನ್ನು ಭೂಮಿಗೆ ಸ್ವಾಗತಿಸಿ ಶಕ್ತ್ಯೋತ್ಸವಕ್ಕೆ ದೈವಿಕ ಕಳೆ ತಂದುಕೊಡುವುದು ದೀಪದಾರತಿ ಉತ್ಸವದ ಬಹುಮುಖ್ಯ ಸಂಕೇತ. 

ಕತ್ತಲಲ್ಲಿ ಮಿಂಚುವ ತಂಬಿಟ್ಟು ದೀಪಗಳ ಬೆಳಕು ಹಾದಿಯುದ್ದಕ್ಕೂ ಚೆಲ್ಲುತ್ತಾ ಬರುವ ಮನಮೋಹಕ ದೃಶ್ಯಗಳನ್ನು ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತ ಜನಸಮೂಹ ವೀಕ್ಷಿಸುತ್ತದೆ. ಬೆಳಗಿನ ಜಾವದವರೆಗೂ ನಡೆಯುವ ಆರತಿ ಉತ್ಸವ ಶಕ್ತ್ಯೋತ್ಸವದ ಪ್ರಮುಖ ಅಂಗವೂ ಹೌದು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT