ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ದ್ವಂದ್ವಾರ್ಥ ಎಂದರೆ ಭಯ'

Last Updated 12 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ವೆರಿ ಫೇಮಸ್ ಇನ್ ಸರ್ಜರಿ ಅಂಡ್ ಭರ್ಜರಿ ಎಂದು ಕಿರುತೆರೆಯಲ್ಲಿ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದ ಡಾ. ವಿಠ್ಠಲರಾವ್ ಅಲಿಯಾಸ್ ರವಿಶಂಕರ್ ಈಗ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಮಲಯಾಳಂನ `ಬೆಸ್ಟ್ ಆಫ್ ಲಕ್' ಚಿತ್ರದ ಕನ್ನಡ ಅವತರಣಿಕೆಯಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಹೆಸರು `ಒಂದು ಚಾನ್ಸ್ ಕೊಡಿ'. ಪತ್ರಕರ್ತ ಸತ್ಯಮಿತ್ರ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮತ್ತೊಬ್ಬ ನಾಯಕ ನಟರಾಗಿ `ಪಟ್ರೆ' ಅಜಿತ್ ಕಾಣಿಸಿಕೊಳ್ಳುತ್ತಿದ್ದಾರೆ. `ಛತ್ರಿಗಳು ಸಾರ್ ಛತ್ರಿಗಳು' ಚಿತ್ರದ ನಾಯಕಿಯರಲ್ಲಿ ಒಬ್ಬರಾದ ಮಾನಸಿ ಚಿತ್ರದ ಪ್ರಮುಖ ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ. ಎಲ್ಲಾ ಅಂದುಕೊಂಡಂತೆ ಆದರೆ ಮೇ, ಜೂನ್ ಹೊತ್ತಿಗೆ ಚಿತ್ರೀಕರಣ ಆರಂಭವಾಗಲಿದೆ.

ಕನ್ನಡದಲ್ಲಿ ಹಾಸ್ಯಚಿತ್ರಗಳ ಪ್ರಯೋಗ ಕಡಿಮೆ ಎನ್ನುವವರಲ್ಲಿ ರವಿಶಂಕರ್ ಕೂಡ ಒಬ್ಬರು. ತಮಿಳು, ತೆಲುಗಿನಂತೆ ವೈವಿಧ್ಯಮಯ ಪ್ರಯೋಗಗಳು ಇಲ್ಲಿ ನಡೆಯುತ್ತಿಲ್ಲ. ತೆಲುಗಿನ ಬ್ರಹ್ಮಾನಂದಂ ಅವರಂತೆ ಕಾಯಂ ಕಮಿಡಿಯನ್‌ರನ್ನು ಹುಟ್ಟಹಾಕಲು ಇತ್ತೀಚಿನ ಕನ್ನಡ ಚಿತ್ರಗಳಿಗೆ ಸಾಧ್ಯವಾಗಿಲ್ಲ. ಹೊಸಬರಿಗೆ ಮನ್ನಣೆ ನೀಡದ ಹೊರತಾಗಿ ವೈವಿಧ್ಯ ತರಲು ಸಾಧ್ಯವಿಲ್ಲ ಎನ್ನುವ ನಂಬಿಕೆ ಅವರದು.

ಹಾಸ್ಯರಸವೇ ಇಲ್ಲದ ಸಿನಿಮಾಗಳ ಭರಾಟೆ ಒಂದೆಡೆಯಾದರೆ, ದ್ವಂದ್ವಾರ್ಥ ತುಂಬಿದ ಚಿತ್ರಗಳ  ಸಂಖ್ಯಾಸಮೃದ್ಧಿ ಇನ್ನೊಂದೆಡೆ. ಈ ಎರಡೂ ಅತಿರೇಕಗಳು ಆಗಬಾರದು ಎನ್ನುವುದು ಅವರ ಕಳಕಳಿ. ದ್ವಂದ್ವಾರ್ಥ ಹಾಸ್ಯದ ಕಟ್ಟಾ ವಿರೋಧಿ ರವಿಶಂಕರ್. ಇಂಥ ಪ್ರಯೋಗಗಳು ಹೆಣ್ಣುಮಕ್ಕಳು ಹಾಗೂ ಸಂಸಾರಸ್ಥರನ್ನು ಚಿತ್ರಮಂದಿರದಿಂದ ದೂರ ಇಡುತ್ತಿವೆ. ಮೊದಲೇ ಸಂಕಷ್ಟದಲ್ಲಿರುವ ಚಿತ್ರರಂಗ ದ್ವಂದ್ವಾರ್ಥಗಳಿಂದಾಗಿ ಮತ್ತಷ್ಟು ಪ್ರೇಕ್ಷಕರನ್ನು ಕಳೆದುಕೊಳ್ಳುವ ಅಪಾಯ ಇದೆ ಎಂಬ ಆತಂಕ ಅವರನ್ನು ಕಾಡುತ್ತಿದೆ.

ಹಾಸ್ಯ ಚಿತ್ರಗಳಲ್ಲಿ ಕಾಣಿಸಿಕೊಂಡ ಅನೇಕ ನಟರು ಹಾಸ್ಯ ಪಾತ್ರಗಳಿಗಷ್ಟೇ ಮುಡಿಪಾಗುವ ಅಪಾಯದ ಬಗ್ಗೆಯೂ ಅವರಿಗೆ ಅರಿವಿದೆ. ಆದರೆ ಹಾಸ್ಯ ಅಥವಾ ಗಂಭೀರ ಪಾತ್ರಗಳ ನಡುವೆ ತೆಳುಗೆರೆ ಇರುವುದನ್ನು ಬಲ್ಲರು. ಅಂಥ ಹಣೆಪಟ್ಟಿಯಿಂದ ಹೊರಬರುವ ಯತ್ನದಲ್ಲಿರುವ ಅವರಿಗೆ ಅನಂತ್‌ನಾಗ್ ದೊಡ್ಡ ಮಾದರಿಯಂತೆ ಕಾಣಿಸುತ್ತಿದ್ದಾರೆ. ಅನಂತ್‌ನಾಗ್ ಹಾಸ್ಯ ಹಾಗೂ ಗಂಭೀರ ಪಾತ್ರಗಳೆರಡರಲ್ಲೂ ಕಾಣಿಸಿಕೊಂಡವರು. `ಗಣೇಶನ ಮದುವೆ'ಯಲ್ಲಿ ನಕ್ಕುನಲಿಸಿದಷ್ಟೇ ಸುಲಭವಾಗಿ `ಬೆಳದಿಂಗಳ ಬಾಲೆ'ಯಂಥ ಚಿತ್ರದಲ್ಲಿಯೂ ಅವರು ಅದ್ಭುತ ಪ್ರತಿಭೆ ಮೆರೆದಿದ್ದನ್ನು ಸ್ಮರಿಸುತ್ತಾರೆ. 

ಮೂಲತಃ ರವಿಶಂಕರ್ ಹಾಡುಗಾರರು. ನಟನೆಯಷ್ಟೇ ಹಿನ್ನೆಲೆ ಗಾಯನ ಕೂಡ ತೃಪ್ತಿ ನೀಡಿದ ವೃತ್ತಿ. ಈವರೆಗೆ ಒಟ್ಟು ಐದು ಚಿತ್ರಗಳಲ್ಲಿ ಅವರ ಗಾನಮಾಧುರ್ಯ ಇದೆ. ಟೈಗರ್ ಪ್ರಭಾಕರ್‌ರ ಕೊನೆಯ ಚಿತ್ರ `ಮೈಸೂರು ಹುಲಿ'ಯಿಂದ ಆರಂಭವಾದ ಇವರ ಹಾಡಿನ ಕಾಯಕ `ದೇವ್ರಾಣೆ' ಚಿತ್ರದವರೆಗೂ ಮುಂದುವರಿದಿದೆ.

ರವಿಶಂಕರ್ ಅಭಿನಯದ `ನಗೆಬಾಂಬ್', `ಮಂಗನ ಕೈಯಲ್ಲಿ ಮಾಣಿಕ್ಯ', `ಗಲ್ ಬಸ್ಕಿ' ಚಿತ್ರಗಳು ಈಗಾಗಲೇ ಚಿತ್ರೀಕರಣ ಪೂರೈಸಿವೆ. ಹಾಸ್ಯದ ಜತೆಗೆ ಥ್ರಿಲ್ಲರ್ ತಿರುಳನ್ನೂ ಹೊಂದಿರುವ `ರೇಸ್' ಅವರ ಬತ್ತಳಿಕೆಯಲ್ಲಿರುವ ಮತ್ತೊಂದು ಬಾಣ. ಅಲ್ಲಿಗೆ ರವಿಶಂಕರ್ ಈ ವರ್ಷ ಮತ್ತಷ್ಟು ಭರ್ಜರಿ ಸರ್ಜರಿ ಮಾಡಲಿದ್ದಾರೆ ಎಂದಾಯಿತು.

`ಅಕ್ಕ ಪಕ್ಕ...'
ಪಾತರಗಿತ್ತಿ `ಪಕ್ಕಾ' ನೋಡಿದೇನೆ `ಅಕ್ಕಾ' ಎನ್ನುವಂತೆ ಕುಳಿತಿದ್ದರು `ಚಿಟ್ಟೆಸ್ವಾಮಿ'. `ದೇವ್ರಾಣೆ'ಯಲ್ಲಿ ಚಿಟ್ಟೆಸ್ವಾಮಿಯಾಗಿ ಮಿಂಚಿದ್ದ ರವಿಶಂಕರ್ `ಅಕ್ಕ ಪಕ್ಕ'ದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಏ.12ರಂದು ಚಿತ್ರ ತೆರೆಕಂಡಿದೆ. ಅಂದಹಾಗೆ `ಅಕ್ಕ ಪಕ್ಕ'ದ ಮತ್ತೊಂದು ಪ್ರಮುಖ ಪಾತ್ರ ನಿರ್ವಹಿಸಿರುವುದು ತಬಲಾ ನಾಣಿ.

ಕಿವುಡ ಮೂಗರಾಗಿರುವ ಇಬ್ಬರು ಹೇಗೋ ಗೆಳೆಯರಾಗುತ್ತಾರೆ. ಆದರೆ ಕೊಲೆ ಪ್ರಕರಣವೊಂದು ಇಬ್ಬರ ಕೊರಳಿಗೂ ಸುತ್ತಿಕೊಳ್ಳುತ್ತದೆ. ವಿಚಾರಣೆ ನಡೆಸುವ ಪೊಲೀಸರಿಗೋ ಫಜೀತಿ. ಒಬ್ಬನಿಗೆ ಕಿವಿ ಕೇಳಲ್ಲ. ಮತ್ತೊಬ್ಬನಿಗೆ ಕಣ್ಣು ಕಾಣಲ್ಲ. ಕೊನೆಗೂ ಅವರು ಕೊಲೆಗಾರರಲ್ಲ ಎಂಬುದು ಸಾಬೀತಾಗುತ್ತದೆ. ಇದಿಷ್ಟೇ ಕತೆಯಲ್ಲ. ಒಳಸುಳಿ ಬಹಳ ಇದೆಯೆಂಬ ಸುಳಿವು ಕೊಟ್ಟರು ರವಿಶಂಕರ್.

ಕಿವುಡ ಪಾತ್ರ ನಿರ್ವಹಿಸುವುದು ಅಷ್ಟೊಂದು ಸುಲಭವಲ್ಲ ಎನ್ನುವುದು ಅವರ ಅನುಭವದ ನುಡಿ. ಪಾತ್ರ ಎಲ್ಲಿಯೂ ಮುಕ್ಕಾಗದಂತೆ ನೋಡಿಕೊಳ್ಳಬೇಕಲ್ಲ? ತಬಲಾ ನಾಣಿ ಆಗ ನೆರವಾದರು. ಇಬ್ಬರ ಕ್ರಿಯೆ- ಪ್ರತಿಕ್ರಿಯೆ ಸೊಗಸಾಗಿ ಬಂದಿದ್ದು ಚಿತ್ರದುದ್ದಕ್ಕೂ ನಗುವಿನ ಹೊಳೆ ಹರಿಸಲಾಗಿದೆಯಂತೆ.

ಚಿತ್ರ ನಿರ್ದೇಶಿಸಿದ ಯು.ಕೆ. ದಾಸ್, ಂಡಕ್ಕೆ ಶುಭ ಕೋರಿದರು. ಅಂದಹಾಗೆ, `ಅಕ್ಕ ಪಕ್ಕ'ದ ಮೊದಲ ಹೆಸರು `ಹಕ್ಕ ಬುಕ್ಕ'. ಯಥಾಪ್ರಕಾರ ಹೆಸರಿಗೆ ಅಡ್ಡಿ ಆತಂಕ ಎದುರಾದಾಗ ಚಿತ್ರತಂಡ ಹೊಸ ನಾಮಕರಣ ಮಾಡಿತು. ರಾಧಿಕಾ ಗಾಂಧಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ನಾಯಕಿ ಇಲ್ಲದ ಸಿನಿಮಾ ಇದು ಎನ್ನಲು ರವಿಶಂಕರ್ ಮರೆಯಲಿಲ್ಲ.

ನಟ ಸುದೀಪ್ ಅಭಿನಯದ `ಬಚ್ಚನ್'ನಂಥ ಚಿತ್ರದ ಎದುರು ಪೈಪೋಟಿಗಿಳಿಯುತ್ತಿರುವುದನ್ನು ನಿರ್ಮಾಪಕರಲ್ಲಿ ಒಬ್ಬರಾದ ಸಂತೋಷ್ ಭಂಡಾರಿ ಸಾರಿದರು. ಪ್ರೇಕ್ಷಕರ ಮೇಲೆ ಅವರಿಗೆ ಅಪಾರ ವಿಶ್ವಾಸ. ಸಹ ನಿರ್ಮಾಪಕರಾದ ಎಚ್.ಎಂ. ಶಂಕರ್ ಹಾಗೂ ಎಚ್.ಎಂ. ಕೃಷ್ಣ ಸಿನಿಮಾ ಯಶಸ್ವಿಯಾಗುವ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT