ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿಚಕ್ರ ಮಾರುಕಟ್ಟೆಯ ಸಂಚಲನ?

Last Updated 30 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

2015 ಬೈಕ್- ಸ್ಕೂಟರ್‌ ಪಾಲಿಗೆ ಅಷ್ಟೇನೂ ಹೊಸತನವನ್ನು ನೀಡಲಿಲ್ಲ. ಯಮಹಾದ ‘ಫಸಿನೊ’, ಹೀರೊ ‘ಮೀಸ್ಟ್ರೊ ಎಡ್ಜ್’, ‘ಡ್ಯುಯೆಟ್’ ಮುಂತಾದ ಕೆಲವೇ ಕೆಲವು ಸ್ಕೂಟರ್‌ಗಳನ್ನು ಬಿಟ್ಟರೆ, ಹೊಸ ಸ್ಕೂಟರ್‌ಗಳು ಹೆಚ್ಚಾಗಿ ಬಿಡುಗಡೆ ಆಗಲೇ ಇಲ್ಲ. ಬದಲಿಗೆ ಇರುವ ಹಳೆಯ ಸ್ಕೂಟರ್‌ಗಳಿಗೆ ಸ್ಟಿಕರ್‌ ಅಂಟಿಸಿ, ಕೊಂಚ ಎಂಜಿನ್‌ ಮಾರ್ಪಾಟು ಮಾಡಿ ಬಿಡುಗಡೆ ಮಾಡಲಾಯಿತಷ್ಟೇ.

ಬೈಕ್‌ಗಳೂ ಅಷ್ಟೇ. ಹೇಳಿಕೊಳ್ಳುವಂತಹ ಹೊಸ ಬೈಕ್‌ಗಳ ಬಿಡುಗಡೆ ಆಗಲೇ ಇಲ್ಲ. ಮಹಿಂದ್ರಾ ತನ್ನ ಹೊಸ ‘ಮೋಜೊ’ ಬೈಕ್‌ ಅನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಳ್ಳುತ್ತಲೇ, 2016ಕ್ಕೆ ಸಾಗಿಹಾಕಿತು. ಕೆಟಿಎಂ, ರಾಯಲ್‌ ಎನ್‌ಫೀಲ್ಡ್‌, ಬಜಾಜ್‌ ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸುವ ತಲೆಕೆಡಿಸಿಕೊಳ್ಳಲಿಲ್ಲ. ಟಿವಿಎಸ್‌ ಅಂತೂ ಇರುವುದೇ ಜನರಿಗೆ ಮರೆತುಹೋಗುತ್ತಿದೆ. ಅಷ್ಟು ನಿಷ್ಕ್ರಿಯವಾಗಿದೆ.

ಆದರೆ, 2016 ಹೇಗಿರಬಹುದು? ಹೊಸ ಬೈಕ್‌, ಸ್ಕೂಟರ್‌ಗಳ ಬಿಡುಗಡೆ ಇರುವುದೇ? ಹೊಸ ವಾಹನಗಳನ್ನು ಬಿಡುಗಡೆ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ಈ ಕಂಪೆನಿಗಳಿಗೆ. ಏಕೆಂದರೆ ಹಳೆಯ ಬೈಕ್‌ಗಳನ್ನೇ ಎರಡು ವರ್ಷ ನಿರಂತರವಾಗಿ ಮಾರಾಟ ಮಾಡುವುದು ಕಷ್ಟದ ವಿಚಾರ. ಹಾಗಾಗಿ, 2016 ಹೊಸ ಬೈಕ್‌- ಸ್ಕೂಟರ್‌ಗಳಿಂದ ತುಂಬಿರಲಿದೆ. ಹೀಗೊಂದು, 2016ರ ದ್ವಿಚಕ್ರ ವಾಹನದ ಇಣುಕು ನೋಟ ಇಲ್ಲಿದೆ.

ಸಾಂಪ್ರದಾಯಿಕ ಬೈಕ್‌ ಹಾಗೂ ಸ್ಕೂಟರ್‌ಗಳ ಜತೆಗೇ, ವಿದ್ಯುಚ್ಛಾಲಿತ ಸ್ಕೂಟರ್‌ಗಳ ಭರಾಟೆ ಈ ಹೊಸ ವರ್ಷದಲ್ಲಿ ಇರಲಿದೆ ಎಂಬ ಲೆಕ್ಕಾಚಾರ ಈಗ ನಡೆದಿದೆ. 2016ರಲ್ಲಿ ‘ಹೀರೊ ಎಲೆಕ್ಟ್ರಿಕ್‌’ ಕಂಪೆನಿಯ ಬಹುನಿರೀಕ್ಷಿತ ಹೈಬ್ರಿಡ್‌ ಸ್ಕೂಟರ್‌ ‘ಲೀಪ್‌’ ಬಿಡುಗಡೆ ಆಗುವ ನಿರೀಕ್ಷೆ ಇದೆ. ಪೆಟ್ರೋಲ್‌ ಹಾಗೂ ವಿದ್ಯುತ್‌- ಈ ಎರಡೂ ಶಕ್ತಿಮೂಲಗಳಿಂದ ಸ್ಕೂಟರ್‌ ಚಲಿಸಲಿದೆ. ಲೀಟರ್‌ ಪೆಟ್ರೋಲಿಗೆ 200 ಕಿಲೋಮೀಟರ್‌ ಮೈಲೇಜ್‌ ನೀಡುವ ಸಾಮರ್ಥ್ಯ ಈ ಸ್ಕೂಟರ್‌ಗೆ ಇರಲಿದೆ. ಅಂದರೆ, ಕೇವಲ ಪೆಟ್ರೋಲ್‌ನಿಂದ ಅಲ್ಲ, ವಿದ್ಯುತ್‌ ಮೋಟಾರ್‌ನ ಸಹಾಯದಿಂದ ಈ ಮೈಲೇಜ್‌ ಸಾಧ್ಯ. ನಿರಂತರ ಸಂಶೋಧನೆ ಹಾಗೂ ಪ್ರಯೋಗದಿಂದ ತಡವಾಗಿದ್ದ ಈ ಸ್ಕೂಟರ್‌ ಬಿಡುಗಡೆ 2016ರಲ್ಲಿ ಇರಲಿದೆ ಎಂಬ ಸುದ್ದಿ ಈಗಾಗಲೇ ದಟ್ಟವಾಗಿದೆ.

ಸ್ಕೂಟರ್‌ ಲೋಕ: ಹೊಸತುಗಳ ಮಾಲೆ?
ಹೊಸ ಕಂಪೆನಿಗಳ ಪರಿಚಯವೂ ಸೇರಿ ಹೊಸ ಹೊಸ ಸ್ಕೂಟರ್‌ಗಳ ಬಿಡುಗಡೆ ಈ ವರ್ಷದ ವಿಶೇಷ. ಮೂರು ವರ್ಷಗಳ ಹಿಂದೆ ‘ಪಿಯಾಜ್ಜಿಯೊ’ ಕಂಪೆನಿ ‘ವೆಸ್ಪಾ’ ಸ್ಕೂಟರ್‌ಗಳನ್ನು ಭಾರತದಲ್ಲಿ ಮರು ಬಿಡುಗಡೆಗೊಳಿಸಿತ್ತು. ಅಂತೆಯೇ 2016ರಲ್ಲಿ ‘ಪ್ಯೂಗಾಟ್‌’ ಕಂಪೆನಿಯು ತನ್ನ ಸ್ಕೂಟರ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ‘ಪ್ಯೂಗಾಟ್‌’ ಕಂಪೆನಿಗೆ ಯೂರೋಪ್‌ನಲ್ಲಿ ಅತಿ ದೊಡ್ಡ ಹೆಸರು.

‘ಪಿಯಾಜ್ಜಿಯೊ’ ಕಂಪೆನಿಯು ನಯವಾದ ಸ್ಕೂಟರ್‌ಗಳನ್ನು ತಯಾರು ಮಾಡಿದರೆ, ‘ಪ್ಯೂಗಾಟ್‌’ ಒರಟಾದ ಗಡಸು ಸ್ಕೂಟರ್‌ಗಳನ್ನು ತಯಾರಿಸುವುದರಲ್ಲಿ ಹೆಸರುವಾಸಿ. ಈ ಎರಡೂ ಬಗೆಯ ಸ್ಕೂಟರ್‌ಗಳಿಗೆ ಅಭಿಮಾನಿಗಳು ಇರುವುದರಿಂದ ಬೇಡಿಕೆ ಇದ್ದೇ ಇರುತ್ತದೆ. ಅಂತೆಯೇ ಈಗ ಯೂರೋಪ್‌ನಲ್ಲಿ ಸಾಕಷ್ಟು ಹೆಸರು ಮಾಡಿರುವ ‘ಪ್ಯೂಗಾಟ್‌’, 2016ರಲ್ಲಿ ಭಾರತದಲ್ಲಿ ಕಾರ್ಯಾರಂಭ ಮಾಡಲಿದೆ.

ತನ್ನ ಎರಡು ಹೊಸ ಸ್ಕೂಟರ್‌ಗಳನ್ನು ‘ಪ್ಯೂಗಾಟ್‌’ ಬಿಡುಗಡೆ ಮಾಡಲಿದೆ. ‘ಡಿಜಾಂಗೊ’, ‘ಸ್ಯಾಟೆಲಿಸ್ 125’ ಹಾಗೂ ‘ಸ್ಪೀಡ್‌ಫೈಟ್‌’. ‘ಡಿಜಾಂಗೊ’ ಎನ್ನುವ ಹೆಸರಿನ ಸಿನಿಮಾವೊಂದು ಹಾಲಿವುಡ್‌ನಲ್ಲಿ ಬಿಡುಗಡೆ ಆಗಿತ್ತು. ಲಿಯಾರ್ನೆಡೊ ಡಿ ಕಾಪ್ರಿಯೊ ಈ ಸಿನಿಮಾದಲ್ಲಿ ನಟಿಸಿ ಹೆಸರು ಮಾಡಿದ್ದರು. ಹೆಸರಿಗೆ ತಕ್ಕಂತೆ ಗಡಸುತನ ಈ ಹೊಸ ಸ್ಕೂಟರ್‌ನದು.

ಆದರೂ, ಭಾರತದಲ್ಲಿ ಬಿಡುಗಡೆ ಆಗುವ ಸ್ಕೂಟರ್‌ಗಳಿಗೆ ಹೆಚ್ಚು ಸಾಮರ್ಥ್ಯದ ಎಂಜಿನ್‌ ಇರುವುದಿಲ್ಲ. ‘ಡಿಜಾಂಗೊ’ ಪಾಲಿಗೂ ಕಡಿಮೆ ಸಾಮರ್ಥ್ಯದ ಎಂಜಿನ್‌ ಸಿಕ್ಕಿದೆ. 125 ಸಿಸಿಯ ಎಂಜಿನ್‌. 10.1 ಬಿಎಚ್‌ಪಿ ಶಕ್ತಿ. ಸರಾಸರಿ 55 ಕಿಲೋಮೀಟರ್‌ ಮೈಲೇಜ್‌ ನೀಡುವ ಸಾಮರ್ಥ್ಯ. ಆದರೆ, ಇದಲ್ಲ ಈ ಸ್ಕೂಟರ್‌ನ ವಿಶೇಷತೆ. ‘ಡಿಜಾಂಗೊ’ ಬೈಕ್‌ ತನ್ನ ವಿನ್ಯಾಸಕ್ಕೆ ಸದ್ದು ಮಾಡಿದೆ. ಅಂದರೆ, ಇದು ಪಕ್ಕಾ ಗಡಸು ವಿನ್ಯಾಸ ಹೊಂದಿದೆ. 1960ರ ಶೈಲಿಯ ವಿನ್ಯಾಸವಿದು.

ಸ್ಕೂಟರ್‌ನ ಬದಿಗಳಲ್ಲಿ ಏರ್‌ ಸ್ಕೂಪ್‌, ವಯ್ಯಾರದ ಬಳಕು ನೋಟದ ಸೀಟ್‌ ವಿನ್ಯಾಸ, ಎರಡೂ ಬದಿಯಲ್ಲಿ ಡಿಸ್ಕ್‌ ಬ್ರೇಕ್‌ಗಳು, ಹಿಂಬದಿ ದೀಪಕ್ಕೆ ಸ್ಪಾಯ್ಲರ್‌. ಅಂತೆಯೇ ಮುಂಬದಿ ದೀಪಕ್ಕೆ ಶೇಡ್‌ ಇರಲಿದೆ. ಬೆಲೆಯೂ ತೀರಾ ಹೆಚ್ಚೇನು ಇರದು. 65 ಸಾವಿರ ರೂಪಾಯಿ ಎಕ್ಸ್ ಶೋರೂಂ ಬೆಲೆಗೆ ಸಿಗಲಿದೆ. ಆದರೆ, ಇದರ ದೇಹ ಮಾತ್ರ ಫೈಬರ್‌ನದು. ಲೋಹದ ದೇಹವಿದ್ದಿದ್ದರೆ, ಈ ಸ್ಕೂಟರ್‌ ಅನ್ನು ಹಿಡಿದು ನಿಲ್ಲಿಸುವಂತೆ ಇರಲಿಲ್ಲ.

ಅದೇ ಕಂಪೆನಿಯ ಮತ್ತೊಂದು ಸ್ಕೂಟರ್‌ ‘ಸ್ಪೀಡ್‌ಫೈಟ್’. ಇದು ಸಹ 125 ಸಿಸಿ ಎಂಜಿನ್‌ ಹೊಂದಿರುತ್ತದೆ. ಆದರೆ, ವಿನ್ಯಾಸ ಮಾತ್ರ ಪಕ್ಕಾ ಆಧುನಿಕ. ಜತೆಗೆ, ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ. ಚೂಪಾದ ಹಗುರ ದೇಹ ಯುವತಿಯರಿಗೆ ಇಷ್ಟವಾಗುತ್ತದೆ. ಹಿಂಬದಿಯಲ್ಲಿರುವ ಏರ್‌ ಸ್ಕೂಪ್‌ಗಳು ನೋಟವನ್ನು ದ್ವಿಗುಣಗೊಳಿಸುತ್ತವೆ. ಮುಂಬದಿಯ ಜೋಡಿ ಹೆಡ್‌ ಲೈಟ್‌, ದೇಹದೊಳಗೆ ಇರಿಸಲಾಗಿರುವ ಸಿಗ್ನಲ್‌ ಇಂಡಿಕೇಟರ್‌ಗಳು ಮುದ ನೀಡುತ್ತವೆ. ದೇಹಕ್ಕೆ ಕೊಂಚ ದೊಡ್ಡದು ಎನ್ನಿಸುವ ಚಕ್ರಗಳು ವಿಶೇಷ ನೋಟವನ್ನು ನೀಡುತ್ತವೆ.

ಅಂತೆಯೇ ಪುರುಷರಿಗೂ ಇಷ್ಟವಾಗಬಲ್ಲ ‘ಸ್ಯಾಟೆಲಿಸ್‌ 125’ ಎಂಬ ಸ್ಕೂಟರ್‌ ಅನ್ನು ‘ಪ್ಯೂಗಾಟ್‌’ ಬಿಡುಗಡೆ ಮಾಡಲಿರುವುದು ವಿಶೇಷ. ಇದಕ್ಕೆ ಕೊಂಚ ದೈತ್ಯ ದೇಹವಿದೆ. ಆದರೆ, ಎಂಜಿನ್‌ ಮಾತ್ರ 125 ಸಿಸಿ. ಇದು ಈ ದೊಡ್ಡ ದೇಹಕ್ಕೆ ಕೊಂಚ ಕಡಿಮೆ ಆಯಿತು. 200 ಸಿಸಿಯಾದರೂ ಇರಬೇಕಿತ್ತು. ಎರಡು ಹಂತಗಳಲ್ಲಿ ಇರುವ ಸೀಟ್‌ಗಳು ಗಡಸು ನೋಟವನ್ನು ನೀಡುತ್ತವೆ. ಅಂತೆಯೇ ಅತಿ ಆರಾಮದಾಯಕ ಆಸನಗಳಿವು. ಕೊಂಚವೂ ಸುಸ್ತಾಗದ ಪ್ರಯಾಣ ಸಿಗುತ್ತದೆ. 125 ಸಿಸಿ ಎಂಜಿನ್‌ ಸ್ಕೂಟರ್‌ಗಳನ್ನು ಮಾತ್ರ ಪ್ಯೂಗಾಟ್‌ ಬಿಡುಗಡೆ ಮಾಡುತ್ತಿದೆ. ಬೆಲೆಯೂ ಸರಾಸರಿ 65 ಸಾವಿರದ ಸುತ್ತಮುತ್ತಲೇ ಇರಲಿದೆ.

ವೆಸ್ಪಾ ಹೊಸ ಸ್ಕೂಟರ್‌
‘ಫ್ಲೈ’ ಎನ್ನುವ ಹೊಸ ಸ್ಕೂಟರ್‌ ಅನ್ನು ‘ವೆಸ್ಪಾ’ ಬಿಡುಗಡೆ ಮಾಡುತ್ತಿದೆ. ವೆಸ್ಪಾ ಪಾಲಿಗೆ ಇದು ಯಶಸ್ಸು ತರುವುದೋ ಇಲ್ಲವೋ ಗೊತ್ತಿಲ್ಲ. ಇದಕ್ಕೆ 125 ಸಿಸಿ ಎಂಜಿನ್‌ ಇದೆ. ಬಹುಶಃ ಫೈಬರ್‌ ದೇಹ. ಆಧುನಿಕ ನೋಟ ಇರುವ ಸ್ಕೂಟರ್‌ ಇದು. ಸ್ಪೋರ್ಟ್ಸ್‌ ವಿಭಾಗದಲ್ಲಿ ತನ್ನದೂ ಒಂದು ಬೈಕ್‌ ಇರಲಿ ಎಂದು ‘ವೆಸ್ಪಾ’ ಈ ಸ್ಕೂಟರ್‍ ಅನ್ನು ಬಿಡುಗಡೆ ಮಾಡುತ್ತಿರುವಂತೆ ಇದೆ. ಆದರೆ, ಬೆಲೆ ಕಡಿಮೆ ಇರಲಿದೆ. ಸಾಮಾನ್ಯವಾಗಿ ‘ವೆಸ್ಪಾ’ ಸ್ಕೂಟರ್‌ಗಳು ದುಬಾರಿ. ಈ ಸ್ಕೂಟರ್‌ ಕೇವಲ 60 ಸಾವಿರ ರೂಪಾಯಿ ಎಕ್ಸ್‌ ಶೋರೂಂಗೆ ಸಿಗಲಿದೆ.

ಹೋಂಡಾ ಮ್ಯಾಕ್ಸಿ ಸ್ಕೂಟರ್‍
ಈವರೆಗೂ ಭಾರತದಲ್ಲಿ ‘ಮ್ಯಾಕ್ಸಿ ಸ್ಕೂಟರ್‍’ಗಳ ಬಿಡುಗಡೆ ಆಗಿರಲಿಲ್ಲ. ಇದಕ್ಕೆ ಹೋಂಡಾ ಸೇರ್ಪಡೆ ಆಗುತ್ತಿದೆ. ಪ್ಯೂಗಾಟ್‌ನ ‘ಸ್ಯಾಟೆಲಿಸ್‌ 125’ ಕೊಂಚ ಮ್ಯಾಕ್ಸಿ ಸ್ಕೂಟರ್‌ನಂತೆ ಕಾಣುವುದು ನಿಜ. ಆದರೆ, ಅದು ಸಹ ಹೊಸ ಬಿಡುಗಡೆಯೇ. ಹೋಂಡಾ ‘ಪಿಸಿಎಕ್ಸ್ 150’ ಹೆಸರಿನ ಮ್ಯಾಕ್ಸಿ ಸ್ಕೂಟರ್‌ ಬಿಡುಗಡೆ ಮಾಡಲಿದೆ. ಇದರ ದೈತ್ಯ ದೇಹಕ್ಕೆ ತಕ್ಕಂತೆ 150 ಸಿಸಿ ಎಂಜಿನ್‌ ಇರುವುದು ವಿಶೇಷ. ಉದ್ದನೆಯ ದೇಹ, ದೊಡ್ಡ ಸೀಟ್‌ಗಳು ಆರಾಮದಾಯಕ ಪ್ರಯಾಣವನ್ನು ನೀಡುತ್ತವೆ. ಅಂತೆಯೇ ಸುರಕ್ಷೆಗೂ ಅವಕಾಶವಿದೆ. ಆ್ಯಂಟಿ ಲಾಕ್‌ ಬ್ರೇಕಿಂಗ್‌ ಸಿಸ್ಟಂ ಇದೆ. ಬಹುಶಃ 2016ರ ಜೂನ್‌ ತಿಂಗಳಿನಲ್ಲಿ ಈ ಸ್ಕೂಟರ್‌ನ ಬಿಡುಗಡೆ ಆಗಲಿದೆ. ಬೆಲೆ 75 ಸಾವಿರ ರೂಪಾಯಿ ಎಕ್ಸ್ ಶೋರೂಂ.

ಇದರ ಜತೆಗೆ ‘ಲೀಡ್‌’ ಎನ್ನುವ ಹೊಸ ಸ್ಕೂಟರ್‌ ಸಹ ಹೋಂಡಾದಿಂದ ಬಿಡುಗಡೆ ಆಗಲಿದೆ. ‘ಆಕ್ಟಿವಾ’ ಸ್ಕೂಟರ್‌ ಹಳೆಯದಾಯಿತು. ಜನಕ್ಕೀಗ ಹೊಸತು ಬೇಕು. ಆಕ್ಟಿವಾ ಅನ್ನು ಬಹುತೇಕ ಆಕ್ರಮಿಸುವ ಈ ಹೊಸ ಸ್ಕೂಟರ್‌ ಅದರ ಉತ್ತರಾಧಿಕಾರಿ ಎಂದೇ ಹೆಸರು ಮಾಡಿದೆ. 135 ಸಿಸಿ ಎಂಜಿನ್ ಇರಲಿದೆ. ಬೆಲೆ 65 ಸಾವಿರ ರೂಪಾಯಿ ಎಕ್ಸ್ ಶೋರೂಂ. ಬಹುಶಃ ಲೋಹದ ದೇಹ ಈ ಸ್ಕೂಟರ್‌ಗೂ ಇರಲಿದೆ. ಇದರ ಜತೆಗೆ, ಹೀರೊ ಕಂಪೆನಿ ‘ಜೆಡ್‌ಐಆರ್‌ 150’ ಎಂಬ ಮ್ಯಾಕ್ಸಿ ಸ್ಕೂಟರ್‌ ಬಿಡುಗಡೆ ಮಾಡಲಿದೆ. ಇದು ಹೋಂಡಾ ಕಂಪೆನಿಗೆ ಪೈಪೋಟಿ ನೀಡಲಿದೆ ಎನ್ನಲಾಗಿದೆ, 150 ಸಿಸಿ ಎಂಜಿನ್‌ ಇದೆ. ಉದ್ದನೆಯ ದೇಹ ಉತ್ತಮವಾಗಿದೆ. ವಿನ್ಯಾಸವೂ ಚೆನ್ನಾಗಿದೆ.

ಬೈಕ್‌ಗಳ ಸರಮಾಲೆ
ಸದ್ದಿಲ್ಲದೇ ಕುಳಿತಿರುವ ಹೀರೊ ಕಂಪೆನಿ ಅನೇಕ ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಲಿರುವುದು 2016ರ ವಿಶೇಷ. ಬಹುನಿರೀಕ್ಷಿತ ಹೀರೊ ‘ಎಚ್‌ಎಕ್ಸ್‌ 250 ಆರ್‌’ ಬೈಕ್‌ ಬಿಡುಗಡೆ ಆಗಲಿದೆ. 250ಸಿಸಿಯ ಸೂಪರ್‍ ಸ್ಪೋರ್ಟ್ಸ್‌ ಬೈಕ್‌ ಇದು. ಲಿಕ್ವಿಡ್ ಕೂಲ್ಡ್‌ ಎಂಜಿನ್‌ ಇದು. ಪಕ್ಕಾ ಸ್ಪೋರ್ಟ್ಸ್‌ ವಿನ್ಯಾಸ. ಸದ್ಯಕ್ಕೆ ‘ಯಮಹಾ ಆರ್‌ 15’ಗೆ ಪೈಪೋಟಿ ನೀಡಲು ಈ ಪ್ರಯತ್ನ. ಅಂತೆಯೇ ಹೋಂಡಾ ಕಂಪೆನಿಯ 250 ಸಿಸಿ ಬೈಕ್‌ಗಳಿಗೂ ಪೈಪೋಟಿ ನೀಡುವ ಪ್ರಯತ್ನ ಇದರಲ್ಲಿದೆ. ಇದರ ಜೊತೆಗೆ ‘ಹಸ್ಟರ್‌’ ಎಂಬ ಆಧುನಿಕ ವಿನ್ಯಾಸ ಬೈಕ್‌ ಬಿಡುಗಡೆ ಆಗಲಿದೆ. ಇದನ್ನು ಭವಿಷ್ಯತ್‌ ವಿನ್ಯಾಸದ ಬೈಕ್‌ ಎನ್ನಬಹುದು.

ಏಕೆಂದರೆ, ಹಾಲಿವುಡ್‌ನ ಸೈನ್ಸ್ ಫಿಕ್ಷನ್‌ ಸಿನಿಮಾಗಳಲ್ಲಿ ಕಾಣುವಂಥ ವಿನ್ಯಾಸ ಇದರದ್ದು. ಕೊಂಚ ಕೆಟಿಎಂ ನಕಲು ಎನ್ನಬಹುದಾದರೂ, ತನ್ನದೇ ಆದ ವಿಶೇಷಗಳನ್ನು ಒಳಗೊಂಡಿದೆ. ಪಕ್ಕಾ ಅಲ್ಯುಮಿನಿಯಂ ಎಂಜಿನ್‌ ಇದಕ್ಕಿದೆ. 600 ಸಿಸಿಯ ಅದ್ಭುತ ಶಕ್ತಿ ಇದೆ. ಆದರೆ, ಬೆಲೆ ಮಾತ್ರ ತೀರಾ ಹೆಚ್ಚು. 4 ರಿಂದ 6 ಲಕ್ಷ ರೂಪಾಯಿ ಎಕ್ಸ್ ಶೋರೂಂ. ಐಷಾರಾಮಿ ಪ್ರೀಮಿಯಂ ಘಟ್ಟದಲ್ಲಿ ನಾವೂ ಇದ್ದೇವೆ ಎಂದು ತೋರಿಸಿಕೊಳ್ಳಲು ಹೀರೊ ಈ ಬೈಕ್‌ ಬಿಡುಗಡೆ ಮಾಡುತ್ತಿರಬಹುದು. ಜತೆಗೆ, ಮಹೀಂದ್ರಾ ಕಂಪೆನಿಯ ‘ಮೋಜೊ’ ಬೈಕ್ ಸಹ ಹೊಸ ಸೇರ್ಪಡೆ ಆಗಲಿದೆ. ಪಕ್ಕಾ ಆಧುನಿಕ ನೋಟದ ಬಹುನಿರೀಕ್ಷಿತ ಬೈಕ್‌ ಇದು.

ವಿದ್ಯುತ್‌ ಸ್ಕೂಟರ್‌ ಮೈಲಿಗಲ್ಲು
ಈವರೆಗೂ ಅನೇಕ ವಿದ್ಯುಚ್ಛಾಲಿತ ಸ್ಕೂಟರ್‌ಗಳು ಭಾರತದಲ್ಲಿ ಬಿಡುಗಡೆ ಆಗಿವೆ. ಆದರೆ, ‘ಹೀರೊ ಎಲೆಕ್ಟ್ರಿಕ್‌ ಕಂಪೆನಿ’ 2016ರಲ್ಲಿ ಹೊಸ ಹೈಬ್ರಿಡ್‌ ಸ್ಕೂಟರ್‌ ಬಿಡುಗಡೆಗೊಳಿಸಿ ಹೊಸ ಮೈಲಿಗಲ್ಲನ್ನು ಸ್ಥಾಪಿಸುವ ಹೆಜ್ಜೆ ಇಡಲಿದೆ. ಇದು ಹೀರೊ ‘ಲೀಪ್‌’. ಇದರಲ್ಲಿ 110 ಬಿಎಚ್‌ಪಿ ವಿದ್ಯುತ್‌ ಮೋಟಾರ್‌ ಹಾಗೂ 124 ಸಿಸಿ ಪೆಟ್ರೋಲ್‌ ಎಂಜಿನ್‌ ಇರಲಿದೆ. ಬರೋಬ್ಬರಿ 300 ಕಿಲೋಮೀಟರ್‌ ಮೈಲೇಜ್ ಸಿಗುವ ತಂತ್ರಜ್ಞಾನವಿದು. ರಸ್ತೆಯಲ್ಲಿ ಈ ಮೈಲೇಜ್‌ ಕಡಿಮೆಯಾದರೂ ಆಗಬಹುದು. ಗರಿಷ್ಠ 100 ಕಿಲೋಮೀಟರ್‌ ವೇಗವನ್ನು ಮುಟ್ಟಬಲ್ಲ ಶಕ್ತಿ ಇದಕ್ಕಿದೆ. ಈ ಬಹುನಿರೀಕ್ಷಿತ ಸ್ಕೂಟರ್‌ ಅನ್ನು ಬಿಡುಗಡೆಗೊಳಿಸಲು ಹೀರೊ ಎಲೆಕ್ಟ್ರಿಕ್‌ ಬಹು ಪ್ರಯೋಗಗಳನ್ನು ಮಾಡಿದೆ. ನಿರಂತರ ಸಂಶೋಧನೆ ಹಾಗೂ ಪ್ರಯೋಗಗಳಲ್ಲಿ ಸಫಲವಾಗಿ ಈಗ ಬಿಡುಗಡೆಗೆ ಹೆಜ್ಜೆ ಇಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT