ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿದಳ ಧಾನ್ಯಗಳ ಬೆಲೆಯಲ್ಲಿ ಭಾರಿ ಏರಿಕೆ

Last Updated 14 ಜುಲೈ 2012, 19:10 IST
ಅಕ್ಷರ ಗಾತ್ರ

ಬೆಂಗಳೂರು: ದ್ವಿದಳ ಧಾನ್ಯಗಳ ಬೆಲೆಯು ಒಂದೇ ವಾರದಲ್ಲಿ ಕೆ.ಜಿ.ಗೆ 10 ರಿಂದ 15 ರೂಪಾಯಿ ಹೆಚ್ಚಾಗಿದೆ. ಅದರಲ್ಲೂ ಹೆಸರುಬೇಳೆ, ಉದ್ದಿನಬೇಳೆ, ತೊಗರಿಬೇಳೆ, ಕಡಲೆಬೇಳೆ ಮುಂತಾದ ದ್ವಿದಳ ಧಾನ್ಯಗಳ ಬೆಲೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ.

ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಗೋದಾಮುಗಳಲ್ಲಿ ದ್ವಿದಳ ಧಾನ್ಯಗಳನ್ನು ಸಂಗ್ರಹಣೆ ಆರಂಭಿಸಿರುವುದೇ ಬೆಲೆ ಏರಿಕೆಗೆ ಕಾರಣ ಎನ್ನುವ ಕಾರಣ ಮಾರುಕಟ್ಟೆಯಲ್ಲಿ ಕೇಳಿಬರುತ್ತಿದೆ.

ಮಾರುಕಟ್ಟೆಯಲ್ಲಿ ದಾಸ್ತಾನು ಕಡಿಮೆಯಾಗಿ, ಪೂರೈಕೆ ಕುಸಿದರೆ ಮತ್ತೆ ಬೆಲೆ ಏರಬಹುದು ಎನ್ನುವ ಲೆಕ್ಕಾಚಾರದಿಂದ ವರ್ತಕರೇ ದ್ವಿದಳ ಧಾನ್ಯಗಳ ಸಂಗ್ರಹ ಮಾಡುತ್ತಿರಬಹುದು ಎನ್ನುವ ಆರೋಪಗಳು ಕೇಳಿಬರುತ್ತಿವೆ.

`ಈ ದ್ವಿದಳ ಧಾನ್ಯಗಳ ಬೆಲೆ ಏರಿಕೆಯಲ್ಲಿ ಮಧ್ಯವರ್ತಿಗಳದೇ ಪಾತ್ರ ದೊಡ್ಡದಾಗಿದೆ. ಏಕೆಂದರೆ, ಅವರು ಮಾರುಕಟ್ಟೆಯಲ್ಲಿ ಆಹಾರ ಪದಾರ್ಥ ಪೂರೈಕೆ ಕಡಿಮೆಯಾಗಿದೆ, ದಾಸ್ತಾನು ಇಲ್ಲ ಎಂದು ಗಾಳಿಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಇದರಿಂದ ರಾಜ್ಯದ ಮಾರುಕಟ್ಟೆಯ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತಿವೆ.

ಈ ಮಧ್ಯವರ್ತಿಗಳು ತಮ್ಮ ಲಾಭಕ್ಕಾಗಿ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಹೊರೆಯನ್ನು ಹೊರಿಸುತ್ತಿದ್ದಾರೆ. ನಗರದಿಂದಲೇ ತಮಿಳುನಾಡಿಗೆ ದಿನಕ್ಕೆ 30,000 ಚೀಲ ಅಕ್ಕಿ ಸಾಗಾಣೆಯಾಗುತ್ತಿದೆ.

ಇದರಿಂದ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ 38 ರಿಂದ 40 ರೂಪಾಯಿವರೆಗೆ ಹೆಚ್ಚಾಗಿದೆ~ ಎಂದು ಕೃಷಿ ಮಾರುಕಟ್ಟೆ ಸಮಿತಿಯ ಕಾರ್ಮಿಕ ಸಂಘದ ಅಧ್ಯಕ್ಷ ಪರಮೇಶ ಅವರು ಹೇಳಿದರು.

`ಮುಂಗಾರು ಮಳೆ ಸರಿಯಾಗಿ ಆಗದೇ ಇರುವುದರಿಂದ ಮುಂದೆ ಮಳೆ ಬೀಳುವ ನಿರೀಕ್ಷೆಯಲ್ಲಿ ರೈತರು ತಮ್ಮ ಧಾನ್ಯಗಳನ್ನು ಮಾರಾಟಕ್ಕೆ ಮಾರುಕಟ್ಟೆಗೆ ತರುತ್ತಿಲ್ಲ. ಇದರಿಂದ ದಾಸ್ತಾನು ಕಡಿಮೆಯಾಗಿ, ದ್ವಿದಳ ಧಾನ್ಯಗಳ ಬೆಲೆ ಹೆಚ್ಚಾಗುತ್ತಿದೆ~ ಎಂದು ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಎನ್.ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.

ಗುಲ್ಬರ್ಗದಿಂದ ಪೂರೈಕೆಯಾಗುವ ತೊಗರಿಬೇಳೆ ಪ್ರಮಾಣ ಕಡಿಮೆಯಾಗಿದೆ. ಗಂಗಾವತಿ, ಹಾರಂಗಿ, ತುಮಕೂರು, ರಾಯಚೂರುಗಳಿಂದ ಪೂರೈಕೆಯಾಗುವ ದ್ವಿದಳ ಧಾನ್ಯಗಳ ಪೂರೈಕೆಯೂ ಸಹ ಅಲ್ಪ ಪ್ರಮಾಣದಲ್ಲಿದೆ. ಬೇರೆ ರಾಜ್ಯಗಳಿಂದ ಪೂರೈಕೆಯಾಗುವ ಅವರೆಕಾಳು, ಕಡಲೆ ಕಾಳು ಮತ್ತು ಆಂಧ್ರಪ್ರದೇಶದಿಂದ ಪೂರೈಕೆಯಾಗುವ ತೊಗರಿ ಬೇಳೆ ಪೂರೈಕೆ ಪ್ರಮಾಣದಲ್ಲೂ ಕುಸಿತವಾಗಿದೆ. ಇದರಿಂದ ದ್ವಿದಳ ಧಾನ್ಯಗಳ ಬೆಲೆಯು ಹೆಚ್ಚಾಗಿದೆ ಎಂದು ಅವರು ಹೇಳಿದರು.

`ರೈತರಿಗೆ ಸಂತಸದ ವಿಚಾರ~

`ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಸ್ವಲ್ಪ ಪ್ರಮಾಣದಲ್ಲಿ ಹೊರೆಯಾದರೂ ಸಹ, ರೈತರಿಗೆ ಇದು ಸಂತಸದ ವಿಚಾರ. ಏಕೆಂದರೆ, ಅವರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರೆಯುತ್ತಿದೆ. ಉತ್ಪಾದನೆ ಕಡಿಮೆಯಾಗಲು ಮಳೆಯ ಕೊರತೆಯೇ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಈಗಿನ ಬೆಲೆ ಹೆಚ್ಚಾಗಿರುವುದಕ್ಕೆ ಮಳೆ ಕಾರಣವಲ್ಲ. ಇದು ಹಿಂದಿನ ವರ್ಷದ ಮಳೆ ಮತ್ತು ಉತ್ಪಾದನೆ ಕಡಿಮೆಯಾಗಿರುವುದು ಕಾರಣವಾಗಿದೆ. ಈ ವರ್ಷದ ಪರಿಣಾಮ ಮುಂದಿನ ವರ್ಷಗಳಲ್ಲಿ ಆಗುತ್ತದೆ. ಬೆಲೆ ಹೆಚ್ಚಾಗಿರುವುದು ರೈತರ ಮಟ್ಟಿಗೆ ಸಂತಸದ ವಿಷಯವಾಗಿದೆ~

-ಡಾ.ಸಿ.ಸೋಮಶೇಖರ
ನಿರ್ದೇಶಕ, ಕೃಷಿ ಮಾರುಕಟ್ಟೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT