ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಗೆ ತಣಿಸಲು ತಂಪು ಕಲ್ಲಂಗಡಿ

Last Updated 14 ಮಾರ್ಚ್ 2011, 9:35 IST
ಅಕ್ಷರ ಗಾತ್ರ

ಹಾಸನ: ಮಾರ್ಚ್ ಬಂತೆಂದರೆ ಬಿಸಿ ಏರುವ ಕಾಲ ಆರಂಭವಾಯಿತು ಎಂದೇ ಅರ್ಥ. ಈ ಬಾರಿ ‘ಬಿಸಿ’ ಸ್ವಲ್ಪ ಜಾಸ್ತಿಯೇ ಇದೆ. ಮಾಚ್ ಸಮೀಪಿಸುತ್ತಿದ್ದಂತೆ ಮೊದಲು ಬಿಸಿ ತಟ್ಟುವುದು ವಿದ್ಯಾರ್ಥಿಗಳಿಗೆ. ಮಾ.17ರಿಂದ ಪಿಯುಸಿ ಪರೀಕ್ಷೆಗಳು ಆರಂಭವಾಗಲಿವೆ. ಅದಾದ ಕೂಡಲೇ ಏ.1ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗುತ್ತಿವೆ. ಮಕ್ಕಳಿಗೆ ಮಾತ್ರವಲ್ಲ, ಪರೀಕ್ಷೆ ಸಮೀಪಿಸಿದವೆಂದರೆ ಪಾಲಕರಿಗೂ ಬಿಸಿ ಹೆಚ್ಚಾಗು ತ್ತದೆ. ಸಾಲದೆಂಬಂತೆ ಈ ಬಾರಿ ಪರೀಕ್ಷೆ ಸಮಯಕ್ಕೆ ಸರಿಯಾಗಿ ವಿಶ್ವಕಪ್ ಕ್ರಿಕೆಟ್ ಸಹ ಆರಂಭವಾಗಿ ಹೊಸ ಬಿಸಿ ಉಂಟುಮಾಡಿದೆ.
 
ಇದೆಲ್ಲ ಪ್ರತಿ ವರ್ಷ ಸಹಜವಾಗಿ ಬರುವ ಬರುವ ‘ಬಿಸಿ’ಗಳು ಆದರೆ ಈ ಬಾರಿ ನಿಜವಾಗಿ ‘ತಲೆಬಿಸಿ’ ಮಾಡಿಕೊಳ್ಳಬೇಕಾದ ವಿಚಾರ ಬೇರೆಯೇ ಇದೆ. ಅದೆಂದರೆ ಈ ವರ್ಷ ಮಾರ್ಚ್ ತಿಂಗಳಲ್ಲೇ ಹಾಸನದಲ್ಲಿ ಸೆಖೆ ಹೆಚ್ಚಾಗಿದೆ. ಕಳೆದ ಕೆಲವು ದಿನಗಳಿಂದ ಹಾಸನದ ಜನರು ಈ ಬಿಸಿಯನ್ನು ಅನುಭವಿಸುತ್ತಿದ್ದಾರೆ. ಮುಂಜಾನೆ ಹತ್ತರ ಬಿಸಿಲೂ ಮೈ ಸುಡುವಂತಿದೆ. ಸಾಮಾನ್ಯವಾಗಿ ಏಪ್ರಿಲ್- ಮೇ ತಿಂಗಳಲ್ಲಿ ಕಾಣುವ ಸೆಖೆ ಈಬಾರಿ ಮಾರ್ಚ್ ಮೊದಲ ವಾರದಲ್ಲೇ ಅನುಭವವಾ ಗುತ್ತಿದೆ. ಜನರು ಅಡಿಕೊಳ್ಳುವುದು ಮಾತ್ರವಲ್ಲ.

ಇದು ವಾಸ್ತವವೂ ಹೌದು. ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ 30 ರಿಂದ 32 ಡಿಗ್ರಿ ಉಷ್ಣಾಂಶವಿದ್ದರೆ, ಈ ಬಾರಿ ಮಾರ್ಚ್ ಎರಡನೇ ವಾರದಲ್ಲಿಯೇ 34.2 ರಿಂದ 34.6 ರಷ್ಟು ಉಷ್ಣಾಂಶ ದಾಖಲಾಗಿದೆ. ಏಪ್ರಿಲ್- ಮೇ ತಿಂಗಳಲ್ಲಿ ಇನ್ನೇನಾಗುವುದೋ ಎಂಬ ಭಯವೂ ಆರಂಭವಾಗಿದೆ. ಸಾಲದೆಂಬಂತೆ ಈಗಾಗಲೇ ಅನಿಯಮಿತ ವಿದ್ಯುತ್ ಕಡಿತವೂ ಆರಂಭವಾಗಿದ್ದು, ಜನರು ಈ ಬೇಸಿಗೆಯಲ್ಲಿ ಸ್ವಲ್ಪ ಹೆಚ್ಚು ಬಿಸಿ ಅನುಭವಿಸಬೇಕಾಗುವುದು ಖಚಿತ ಎನ್ನುವಂತಾಗಿದೆ.

ನಗರದಲ್ಲಿರುವ ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಹಾಗೂ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದು ಇದಕ್ಕೆ ಕಾರಣ ಎಂದು ಪರಿಸರ ಪ್ರಿಯರು ನುಡಿಯುತ್ತಿದ್ದಾರೆ. ಇಷ್ಟೇ ಅಲ್ಲ ಅತ್ತ ಪಶ್ಚಿಮ ಘಟ್ಟವೂ ಒಳಗಿನಿಂದ ಟೊಳ್ಳಾಗುತ್ತಿರುವ ಬಗ್ಗೆ ಸಕಲೇಶಪುರದ ಜನರು ಹೋರಾಟ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಾಸನದ ಸ್ಥಿತಿ ಇನ್ನೂ ಹದಗೆಡಲಿದೆ ಎನ್ನುತ್ತಿದ್ದಾರೆ.ಬೇಸಿಗೆಯ ಬೇಗೆ ತಣಿಸಲು ಈಗಾಗಲೇ ರಾಶಿರಾಶಿ ಕಲ್ಲಂಗಡಿ ಹಣ್ಣುಗಳು ಬಂದು ಬಿದ್ದಿವೆ. ಜತೆಗೆ ದುಬಾರಿಯೂ ಆಗಿವೆ. ಕಬ್ಬಿನ ಹಾಲಿನ ಅಂಗಡಿಗಳ ಮುಂದೆ ಜನರ ಗುಂಪುಗಳು ಗೋಚರಿಸುತ್ತಿವೆ.

ಅಲ್ಲಲ್ಲಿ ಹಣ್ಣು ಮಾರಾಟ ಮಾಡುವ ಡಬ್ಬಾ ಅಂಗಡಿಗಳೆದ್ದಿವೆ. ವಿವಿಧ ಕೆಲಸಗಳಿಗಾಗಿ ಜಿಲ್ಲೆಯ ಮೂಲೆ ಮೂಲೆಗಳಿಂದ ಹಾಸನಕ್ಕೆ ಬರುವ ಜನರು, ವಿದ್ಯಾರ್ಥಿಗಳು ಇಂಥ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಪಟ್ಟಣದ ಜನರಿಗೆ ಒಂದು ಸಮಸ್ಯೆಯಾದರೆ ಗ್ರಾಮೀಣ ಜನರು ನೀರಿಗಾಗಿ ಬವಣೆ ಪಡುವಂತಾ ಗಿದೆ. ಜನತೆಗೆ ಕುಡಿಯುವ ನೀರು ನೀಡಲು ಕೈಗೆತ್ತಿಕೊಂಡ ಯೋಜನೆಗಳಲ್ಲಿ ಆಗಿರುವ ಅಭಿವೃದ್ಧಿ ಶೇ 33ನ್ನು ದಾಟಿಲ್ಲ.

ಹಳ್ಳಿ ಪ್ರದೇಶದಲ್ಲಿ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಸುವಂತೆ ವರ್ಷಪೂರ್ತಿ ಜಿ.ಪಂ. ಸದಸ್ಯರು ಸಭೆಯಲ್ಲಿ ಒತ್ತಾಯಿಸಿ ಗದ್ದಲ ಮಾಡಿದರೂ ಈ ಕ್ಷೇತ್ರದಲ್ಲಿ ಆಗಿರುವ ಸಾಧನೆ ಶೂನ್ಯ. ಹೊಸ ಕೊಳವೆಬಾವಿಗಳನ್ನೂ ಕೊರೆಸಲು ಸಾಧ್ಯವಾಗಿಲ್ಲ. ಗ್ರಾಮೀಣ ಭಾಗದ ಜನರು ನೀರಿಗಾಗಿ ಒದ್ದಾಡುವುದು ತಪ್ಪಿಲ್ಲ. ನಗರದ ಮಧ್ಯದಲ್ಲೇ ಇರುವ ಹೌಸಿಂಗ್ ಬೋರ್ಡ್, ಸಾಲಗಾಮೆ ರಸ್ತೆ, ಹೇಮಾವತಿ ನಗರದ ಕೆಲವು ಭಾಗಗಳು ಹಾಗೂ ಇನ್ನೂ ಕೆಲವು ಬಡಾವಣೆಗಳಲ್ಲಿ ಈಗಲೂ ನೀರಿನ ಸಮಸ್ಯೆ ಇದೆ. ಈಗಾಗಲೇ ಆರಂಭವಾಗಿರುವ ಬೇಸಿಗೆ ಈ ಭಾಗದ ಜನರಿಗೆ ಹೆಚ್ಚು ಬಿಸಿಯುಂಟುಮಾಡುವ ಸಾಧ್ಯತೆ ದಟ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT