ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನ್ಯತೆ, ವಿಷಾದದ ಕಥನ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕನ್ನಡ ಚಳವಳಿ ಇತಿಹಾಸ
ಲೇ: ಜಾಣಗೆರೆ ವೆಂಕಟರಾಮಯ್ಯ
ಪು. 414, ಬೆಲೆ ರೂ.200. ಪ್ರ: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು- 560 018

ಭಾಷಾವಾರು ಪ್ರಾಂತ್ಯಗಳ ರಚನೆಯಾದ ನಂತರವೂ ರಾಜ್ಯದ ಅಧಿಕೃತ ಭಾಷೆಯ ಬಳಕೆಗೆ ಒತ್ತಾಯಿಸಲು ಜನಾಂದೋಲನ ರೂಪುಗೊಂಡದ್ದು ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ಎಂಬುದು ಹೆಗ್ಗಳಿಕೆಯ ವಿಷಯವಲ್ಲ.
 
ಆದರೆ, ಇದು ಐತಿಹಾಸಿಕ ಸಂಗತಿ. ಸ್ವಾತಂತ್ರ್ಯಪೂರ್ವದಲ್ಲಿ ಅರಸರ ಆಳ್ವಿಕೆಯಲ್ಲಿದ್ದ ಮೈಸೂರು ಸಂಸ್ಥಾನಕ್ಕೆ ಬೆಂಗಳೂರು ನಗರವೇ ರಾಜಧಾನಿಯಾಗಿದ್ದರೂ, ಸಂಸ್ಥಾನದ ಭಾಷೆಯಾದ ಕನ್ನಡಕ್ಕೆ ಸಾರ್ವಜನಿಕವಾಗಿ ಪ್ರಾಧಾನ್ಯವೇ ಇರಲಿಲ್ಲ. ಬ್ರಿಟಿಷರ ಆಡಳಿತ ಕಾಲದಲ್ಲಿ ಇಂಗ್ಲಿಷ್ ಪಾರಮ್ಯ ಅರ್ಥವಾಗುವಂಥದ್ದು. ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಕನ್ನಡ ಅವಜ್ಞೆಗೆ ಗುರಿಯಾಗಿದ್ದುದಕ್ಕೆ ಸಮರ್ಪಕ ಕಾರಣಗಳಿಲ್ಲ.

ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ರಚನೆಯಾಗಿ ನಾಡು ಏಕೀಕರಣವಾದ ನಂತರವೂ ರಾಜಧಾನಿಯಲ್ಲಿ ಪರಭಾಷಿಕರ, ವಿಶೇಷವಾಗಿ ತಮಿಳರ ಅಬ್ಬರ ಮುಂದುವರಿದಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕನ್ನಡ ಚಳವಳಿ ರೂಪುಗೊಂಡ ಬಗೆಯನ್ನು ಗುರುತಿಸುವುದು ಕುತೂಹಲದ ಸಂಗತಿ. ಇದು ಸಾಂಸ್ಕೃತಿಕವಾಗಿ ಮಾತ್ರವಲ್ಲದೆ ಸಾಮಾಜಿಕ ದೃಷ್ಟಿಯಿಂದಲೂ ಮಹತ್ವದ್ದಾಗುತ್ತದೆ.
 
ಬಹುತೇಕ ವಲಸಿಗರಿಂದಲೇ ಭೌಗೋಳಿಕವಾಗಿ ವಿಸ್ತಾರವಾಗುತ್ತಿದ್ದ ಬೆಂಗಳೂರಿನಲ್ಲಿ ಕನ್ನಡ ಭಾಷೆ, ಕಲೆ, ಸಾಹಿತ್ಯ ಒಳಗೊಂಡ ಸಾಂಸ್ಕೃತಿಕ ಚೈತನ್ಯವನ್ನು ರಕ್ಷಿಸಿಕೊಳ್ಳಲು ಹೋರಾಟ ನಡೆಸಬೇಕಾಗಿ ಬಂದ ವಿಷಾದಕರ ಪರಿಸ್ಥಿತಿಯ ಅಧ್ಯಯನ ಸಾಂಸ್ಕೃತಿಕವಾಗಿಯೂ ಗಮನಾರ್ಹವಾದದ್ದು.

ಕನ್ನಡ ನಾಡು-ನುಡಿ ಬಗೆಗಿನ ಉತ್ಕಟ ಭಾವನೆಯೇ ಕನ್ನಡ ಚಳವಳಿ ರೂಪುಗೊಳ್ಳುವುದಕ್ಕೆ ಕಾರಣ. ಕನ್ನಡಕ್ಕೆ ಸಾಂಸ್ಕೃತಿಕ ವಲಯದಲ್ಲಿ ಸಿಗಬೇಕಾದ ಸ್ಥಾನ ಸಿಗುತ್ತಿಲ್ಲವೆಂದು ಕನ್ನಡ ಭಾಷೆ, ಸಾಹಿತ್ಯ- ಕಲೆಯ ಬಗ್ಗೆ ತೀವ್ರ ಕಾಳಜಿ ಇದ್ದ ಉತ್ಸಾಹಿಗಳು ಸ್ವಯಂ ಪ್ರೇರಣೆಯಿಂದ ನಡೆಸಿದ ಹೋರಾಟ ಸಾರ್ವಜನಿಕ ಕ್ಷೇತ್ರದಲ್ಲಿ ಮಹತ್ವದ್ದು. ಆಧುನಿಕ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಗಣ್ಯರಾದ ಅನಕೃ, ತರಾಸು, ಮ.ರಾಮಮೂರ್ತಿ ಮೊದಲಾದವರು ಇಂಥ ಹೋರಾಟಕ್ಕಾಗಿ ಬೀದಿಗೆ ಇಳಿದಿದ್ದರು.

ಬೆಂಗಳೂರು ನಗರದ ಕೇಂದ್ರ ಸ್ಥಳಗಳಲ್ಲಿದ್ದ ಚಿತ್ರಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಬೇಕು, ರಾಮೋತ್ಸವದಂತಹ ಧಾರ್ಮಿಕ ಸಮಾರಂಭಗಳಲ್ಲಿ ಸಂಗೀತ ಕಛೇರಿ ನಡೆಸುವ ಸಂಗೀತಗಾರರು ಕನ್ನಡ ಹಾಡುಗಳನ್ನು ಹೇಳಬೇಕು, ಕನ್ನಡಿಗ ಕಲಾವಿದರಿಗೆ ಆದ್ಯತೆ ನಿಡಬೇಕು- ಎಂಬಂಥ ಬೇಡಿಕೆಗಳಿಗೆ ಸಾರ್ವಜನಿಕವಾಗಿ ಒತ್ತಾಯಿಸುವ ಮೂಲಕ ಆರಂಭಗೊಂಡ ಹೋರಾಟ- ಬೆಂಗಳೂರು ಬಂದ್, ರೈಲು ತಡೆ, ಕಪ್ಪು ಬಾವುಟ ಪ್ರದರ್ಶನ, ಸಾರ್ವಜನಿಕ ಪ್ರತಿಭಟನಾ ಸಭೆ, ಮೆರವಣಿಗೆಗಳ ವರೆಗೆ ವಿಸ್ತಾರಗೊಂಡದ್ದು ರಾಜ್ಯದ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಗಮನಿಸುವಂಥದ್ದು.

ಕಳೆದ ಐವತ್ತು ವರ್ಷಗಳಲ್ಲಿ ಕನ್ನಡ ಚಳವಳಿ ಕನ್ನಡಿಗರ ನೋವು, ಸಿಟ್ಟು, ನಿರಾಶೆ, ಆತಂಕ ಮತ್ತು ಅಸಹಾಯಕತೆಗಳಿಗೆ ಧ್ವನಿಯಾಗಿದೆ. ಕನ್ನಡ ಭಾಷೆಗೆ ಕುತ್ತು ಬಂದಾಗ, ಕನ್ನಡಿಗರ ಹಕ್ಕಿಗೆ ಧಕ್ಕೆ ಒದಗಿದಾಗ, ಕನ್ನಡ ಮನಸ್ಸುಗಳಿಗೆ ನೋವಾದಾಗ ಚಳವಳಿಗಳು ನಡೆದಿವೆ. ಅರವತ್ತರದ ದಶಕದಲ್ಲಿ ಬೆಂಗಳೂರಿನಲ್ಲಿ ಕೇಂದೋದ್ಯಮಗಳಲ್ಲಿ ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶಕ್ಕಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ಇದ್ದರೆ, 90ರ ದಶಕದ ನಂತರ ಬಹುರಾಷ್ಟ್ರೀಯ ಸಂಸ್ಥೆಗಳ ವಿರುದ್ಧ ಧ್ವನಿ ಎತ್ತುವ ಸ್ಥಿತಿ ನಿರ್ಮಾಣವಾಯಿತು. ಇವನ್ನೆಲ್ಲ ಕನ್ನಡ ಚಳವಳಿ ಗುರುತಿಸಿದೆ. ಸರ್ಕಾರಗಳ ಗಮನ ಸೆಳೆದಿವೆ.
 
ತತ್ಕಾಲದ ಪರಿಹಾರ ಸಿಗುವುದಕ್ಕೂ ಕಾರಣವಾಗಿವೆ. ಭಾಷೆಯನ್ನೇ ಆಧರಿಸಿದ ಹೋರಾಟ ಕರ್ನಾಟಕ ಜನತೆಯ ಬದುಕನ್ನೂ ಆವರಿಸಿಕೊಳ್ಳುವಷ್ಟು ಮಹತ್ವ ಗಳಿಸಿದ್ದನ್ನು ವಸ್ತುನಿಷ್ಠವಾಗಿ ದಾಖಲಿಸುವ ಪ್ರಯತ್ನ ಸ್ವಾಗತಾರ್ಹ.

ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸ್ವಲ್ಪ ಕಾಲ ಕನ್ನಡ ಚಳವಳಿಯ ಹಿನ್ನೆಲೆಯಿಂದ ಬಂದವರು ಜನಪ್ರತಿನಿಧಿಗಳಾಗಿ ಆಯ್ಕೆಯಾದ ಸಂದರ್ಭ ಮತ್ತು ವಾಟಾಳ್ ನಾಗರಾಜ್, ಜಿ.ನಾರಾಯಣಕುಮಾರ್, ಪ್ರಭಾಕರ ರೆಡ್ಡಿ ಅವರು ವಿಧಾನಸಭೆಯನ್ನು ಪ್ರವೇಶಿಸಿದ ಸಂದರ್ಭಗಳಲ್ಲಿ ಕನ್ನಡ ಚಳವಳಿ ರಾಜಕೀಯ ಶಕ್ತಿಯಾಗಿ ರೂಪುಗೊಂಡಿದ್ದು ಈ ಐವತ್ತು ವರ್ಷಗಳಲ್ಲಿ ಮಹತ್ವದ ಘಟ್ಟ.

ನಾಡು ನುಡಿಯ ಪ್ರಶ್ನೆ ಎಬ್ಬಿಸುವ ಭಾವನಾತ್ಮಕ ಪ್ರಚೋದನೆ ಸಂಘಟಿತ ಶಕ್ತಿಯಾಗಿ ರೂಪುಗೊಳ್ಳುವ ವಿದ್ಯಮಾನ ರಾಜಧಾನಿಯ ಕನ್ನಡ ಹೋರಾಟದಲ್ಲಿ ಹರಳುಗಟ್ಟಲಿಲ್ಲವೆಂಬುದು ವಾಸ್ತವ ಸಂಗತಿ.

`ಕನ್ನಡ ಚಳವಳಿಯ ಇತಿಹಾಸ~ ಜಾಣಗೆರೆ ವೆಂಕಟರಾಮಯ್ಯ ಅವರ 25ನೆಯ ಕೃತಿ. ಜಾಣಗೆರೆಯವರು ಕನ್ನಡ ಹೋರಾಟಗಾರರು. ಸಾಹಿತಿ. ಪತ್ರಕರ್ತರು. ಕನ್ನಡ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಕನ್ನಡ ಕಾರ್ಯಕರ್ತ. ಅವರದು ಮೊನಚು ಮಾತುಗಾರಿಕೆ. ವ್ಯವಸ್ಥೆಯ, ಸರ್ಕಾರದ ವಿರುದ್ಧ ನಿರ್ದಾಕ್ಷಿಣ್ಯವಾಗಿ ಮಾತನಾಡುವ ಛಾತಿ. ಚಳವಳಿಯಲ್ಲಿ ತೊಡಗಿಕೊಂಡಿದ್ದ ಸ್ವಂತ ಅನುಭವ ಮತ್ತು ಲಭ್ಯವಿರುವ ದಾಖಲೆಗಳನ್ನು ಆಧರಿಸಿ ಈ ಕೃತಿಯನ್ನು ಅವರು ರೂಪಿಸಿದ್ದಾರೆ.

ಒಟ್ಟು 43 ಭಾಗಗಳಿರುವ ಈ ಕೃತಿ ಆಕರ್ಷಕ ಶೀರ್ಷಿಕೆಗಳಿಂದ ಗಮನ ಸೆಳೆಯುತ್ತದೆ. `ಇತಿಹಾಸದತ್ತ ಇಣುಕು ನೋಟ~, `ಸಂಭ್ರಮದಲ್ಲೂ ಮಡುಗಟ್ಟಿದ ಆತಂಕ~, `ಆಂದೋಲನದ ಬೀಜಾಂಕುರ~, `ಅಭೂತಪೂರ್ವ ಶಕ್ತಿ ಸಂಚಯ...~ ಇತ್ಯಾದಿ ಶೀರ್ಷಿಕೆಗಳು ಕೃತಿಯ ಸಾಹಿತ್ಯಿಕ ಸ್ವರೂಪದ ಸೂಚನೆ ನೀಡುತ್ತವೆ. ಅದನ್ನು ಪುಷ್ಟೀಕರಿಸುವಂತೆ ಪ್ರತಿ ಭಾಗವೂ ಕ್ರಾಂತಿಗೀತೆಯನ್ನು ನೆನಪಿಸುವ ಕವನದಿಂದ ಆರಂಭವಾಗುತ್ತದೆ.

ಒಂದು ಕಾಲಘಟ್ಟದ ವಿದ್ಯಮಾನಗಳು, ಅವುಗಳಿಗೆ ವ್ಯಕ್ತವಾದ ಕ್ರಿಯೆ-ಪ್ರತಿಕ್ರಿಯೆ, ಅದರಿಂದ ಸಾಧಿತವಾದ ಫಲಿತಾಂಶ, ಸಾಧನೆಯ ಸಂಭ್ರಮ ಇಲ್ಲವೇ ವೈಫಲ್ಯದ ವಿಷಾದ- ಈ ಧಾಟಿಯಲ್ಲಿ ಇಲ್ಲಿನ ಪ್ರತಿ ಭಾಗದ ಬರವಣಿಗೆ ಸಾಗುತ್ತದೆ.

ಕನ್ನಡ ಚಳವಳಿಯಲ್ಲಿ ತೊಡಗಿಕೊಂಡಿದ್ದ ಜಾಣಗೆರೆ ಅವರು ಎಲ್ಲ ಹೋರಾಟಗಳಲ್ಲಿ ತಮ್ಮ ಛಾಪು ಮೂಡಿಸಿದವರು. ಹೋರಾಟದ ಕಲ್ಲುಮುಳ್ಳಿನ ಹಾದಿಯಲ್ಲಿ ಅಲ್ಲಲ್ಲಿ ಯಶಸ್ಸು ಕಂಡ ಧನ್ಯತೆಯನ್ನೂ, ಸೋಲನ್ನು ಕಂಡ ವಿಷಾದವನ್ನೂ ದಾಖಲಿಸಿದ್ದಾರೆ. ಭಾವನಾತ್ಮಕ ಸತ್ವ ಇದ್ದ ಚಳವಳಿ, ಮುಂಚೂಣಿ ನಾಯಕರ ಲೌಕಿಕ ಪ್ರಯೋಜನಕ್ಕೆ ಮಾರ್ಗವಾದಾಗ ಹೆಚ್ಚಿನ ಸಾಧನೆಗಳು ಮರೀಚಿಕೆಯಾಗುತ್ತವೆ. ಇದನ್ನು ಅರ್ಥ ಮಾಡಿಕೊಂಡೇ ಜಾಣಗೆರೆಯವರು `ಕನ್ನಡಪರ ಚಳವಳಿಯ ಮುಖ್ಯ ಆಶಯ ಕನ್ನಡಿಗರ ಬದುಕು ಮತ್ತು ಅನ್ನದ ಪ್ರಶ್ನೆಯನ್ನು ಬಗೆಹರಿಸುವುದಾಗಿದ್ದರೆ ಚಳವಳಿಗೆ ಶಕ್ತಿ, ಚೈತನ್ಯಗಳು ತಂತಾನೇ ಲಭಿಸುತ್ತಿದ್ದವು; ಜನಬೆಂಬಲವೂ ನಿರಂತರವಾಗಿರುತ್ತಿತ್ತು~ ಎಂಬ ಅಭಿಪ್ರಾಯಕ್ಕೆ ಬರುತ್ತಾರೆ.

`ಒಗ್ಗಟ್ಟಿನಲ್ಲಿ ಬಲವಿದೆ, ಛಲವಿದೆ ಎಂಬುದಕ್ಕೆ ಒಲವು ತುಂಬಿ ಬರಲೇ ಇಲ್ಲ... ನಾಯಕರು ಮತ್ತು ಸಂಘಟನೆಗಳ ನಡುವೆ ಪರಸ್ಪರ ದ್ವೇಷಾಸೂಯೆ, ಮೇಲುಕೀಳಿನಾಟಗಳೇ  ವಿಜೃಂಭಿಸಿದ್ದರಿಂದಾಗಿ ಚಳವಳಿ ಉಳಿದುಕೊಂಡಿತು. ನಾಯಕರು ವಿಜೃಂಭಿಸಿದರು. ಆದರೆ, ಶಕ್ತಿಹೀನವಾಯಿತು. ಪರಿಣಾಮವೂ ಶೂನ್ಯವಾಯಿತು. ಚಳವಳಿಗೆ ಮಹತ್ವವೂ ಕಡಿಮೆಯಾಯಿತು. ಅದರ ಫಲವಾಗಿ ಕನ್ನಡಿಗರ ಪರದಾಟ, ಪರಿತಾಪಗಳಿಗೆ ಮುಕ್ತಿ ಸಿಗಲಿಲ್ಲ..~ ಎಂಬುದು ಜಾಣಗೆರೆಯವರು ದಾಖಲಿಸಿದ ಆರು ದಶಕಗಳ ಚಳವಳಿಯ ಒಟ್ಟು ಸಾರಾಂಶ.

ಸಮಕಾಲೀನ ಚರಿತ್ರೆಯನ್ನು ದಾಖಲಿಸುವುದಕ್ಕೂ ಅಧಿಕೃತ ಆಕರಗಳ ಕೊರತೆ ಇರುವ ಈ ದಿನಗಳಲ್ಲಿ ಜಾಣಗೆರೆಯವರು ತಮ್ಮನ್ನೇ ಕೇಂದ್ರವಾಗಿಟ್ಟುಕೊಂಡು ಹೋರಾಟದ ವಿವರಗಳನ್ನು ದಾಖಲಿಸಿದ್ದರೆ ಕೃತಿಗೆ ಹೆಚ್ಚಿನ ಮೌಲ್ಯ ಲಭಿಸುತ್ತಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT