ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನ್‌ತೆರಾಸ್; ಬಂಗಾರದ ಹಬ್ಬ

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಧನ್‌ತೆರಾಸ್ ಅಥವಾ ಧನ್ವಂತರಿ ತ್ರಯೋದಶಿ ಉತ್ತರ ಭಾರತೀಯರು ದೀಪಾವಳಿಗೆ ಮುನ್ನುಡಿಯಾಗಿ ಸುಖ, ಸಮೃದ್ಧಿ ಮತ್ತು ಸಂತೋಷದ ಪ್ರತೀಕವಾಗಿ ಆಚರಿಸುವ ಹಬ್ಬ. ಕಾರ್ತಿಕ ಮಾಸದ ಕೃಷ್ಣಪಕ್ಷದ 13ನೇ ದಿನ ಬರುವ ಈ ಹಬ್ಬದಂದು ಧನಲಕ್ಷ್ಮಿ ಪೂಜೆಯೇ ವಿಶೇಷ.

ಈ ಬಾರಿ ಇಂದು (ಅ.24) ಧನ್‌ತೆರಾಸ್ ಆಚರಣೆ. ಇದು ಚಿನ್ನ ಖರೀದಿಸಲು ಪ್ರಸಕ್ತವಾದ ದಿನ ಎಂಬುದು ಉತ್ತರದ ರಾಜ್ಯಗಳಾದ ಒರಿಸ್ಸಾ, ಗುಜರಾತ್, ಪಂಜಾಬ್ ಮತ್ತು ನಮ್ಮ ನೆರೆಯ ನೇಪಾಳದ ಜನರ ನಂಬಿಕೆ.
 
ಧನ್ ಎಂದರೆ ಲಕ್ಷ್ಮಿ ಮತ್ತು ತೇರಾ ಎಂದರೆ 13. ಹಿಂದಿ ಮಾತನಾಡುವ ಪ್ರದೇಶಗಳಲ್ಲಂತೂ ಇದರ ಸಡಗರ ನೋಡಬೇಕು. ಆಸ್ತಿಕರು ಬಹಳ ಶ್ರದ್ಧೆ, ಭಕ್ತಿಯಿಂದ ಲಕ್ಷ್ಮಿಯನ್ನು ಪೂಜೆ ಮಾಡಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.

ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಮನೆಯಲ್ಲಿ ಸಮೃದ್ಧಿ ಉಂಟಾಗುತ್ತದೆ; ಅದೃಷ್ಟ ಲಕ್ಷ್ಮಿ ಒಲಿಯುತ್ತಾಳೆ ಎಂಬ ನಂಬಿಕೆಯಿದೆ. ಅದು ಇತ್ತೀಚಿನ ವರ್ಷಗಳಲ್ಲಿ ಬಲವಾಗುತ್ತಿದೆ. ಹಾಗೆಯೇ ಉತ್ತರ ಭಾರತೀಯರ ಪಾಲಿಗೆ ಧನ್‌ತ್ರಯೋದಶಿ ಅದೃಷ್ಟ ಲಕ್ಷ್ಮಿಯ ದಿನ.
 

ಬೆಂಗಳೂರಿನಲ್ಲಿ ಉತ್ತರ ಭಾರತೀಯರು ಬಹು ಸಂಖ್ಯೆಯಲ್ಲಿ ಬಂದು ನೆಲೆಸಿರುವುದರಿಂದ ಇಲ್ಲೂ ಧನ್ವಂತರಿ ತ್ರಯೋದಶಿಗೆ ಬಹಳ ಮಹತ್ವ ಬಂದಿದೆ. ಚಿನ್ನ ಖರೀದಿಸುವ ಮೋಡಿಗೆ ಇದಕ್ಕಾಗಿಯೇ ಚಿನ್ನಾಭರಣ ಮಳಿಗೆಗಳು ಸಜ್ಜುಗೊಂಡಿವೆ.

ಧನ್‌ತ್ರಯೋದಶಿ ದಿನ ಮನೆಗಳಲ್ಲಿ, ವಾಣಿಜ್ಯ ಮಳಿಗೆಗಳಲ್ಲಿ ಲಕ್ಷ್ಮಿಯ ಆರಾಧನೆ ನಡೆಯುತ್ತದೆ. ಬೆಳಿಗ್ಗೆ ಮನೆಯನ್ನು ಶುಚಿಗೊಳಿಸಿ ಬಣ್ಣ ಬಣ್ಣದ ರಂಗೋಲಿ ಹಾಕಲಾಗುತ್ತದೆ. ಹಣದ ಅಧಿದೇವತೆ ಲಕ್ಷ್ಮಿಯ ಹೆಜ್ಜೆ ಗುರುತುಗಳನ್ನು ಬಣ್ಣದ ಪುಡಿಗಳಲ್ಲಿ ಚಿತ್ರಿಸಲಾಗುತ್ತದೆ.

ಸಂಜೆ ಲಕ್ಷ್ಮಿ ಪೂಜೆ ಮಾಡಿ ಹಾಲು ಪಾಯಸ ನೈವೇದ್ಯ ಮಾಡಲಾಗುತ್ತದೆ. ಸಂಪ್ರದಾಯಸ್ಥ ಮಹಿಳೆಯರು ಮನೆಯಲ್ಲಿ ಲಕ್ಷ್ಮಿಯ ಭಜನೆ, ಲಲಿತಾ ಸಹಸ್ರನಾಮ ಪಾರಾಯಣ ಮಾಡುತ್ತಾರೆ.

ಹಳ್ಳಿಗಳಲ್ಲಿ ಗೋಪೂಜೆಯನ್ನೂ ಧನ್‌ತ್ರಯೋದಶಿ ದಿನವೇ ಆಚರಿಸುವ ರೂಢಿಯಿದೆ. ಏಕೆಂದರೆ ಹಸು ಎಂದರೆ `ಲಕ್ಷ್ಮಿ~ ಎಂಬ ಮನೋಭಾವನೆ. ಹೆಣ್ಣು ಮಕ್ಕಳ ಮಟ್ಟಿಗಂತೂ ಇದು ಚಿನ್ನ ಖರೀದಿಯ ದಿನ. ಇಂದು ಖರೀದಿಸಿದರೆ ಅದೃಷ್ಟಲಕ್ಷ್ಮಿ ಒಲಿಯುವಳು ಎಂಬ ನಂಬಿಕೆಯಿದೆ.

ರೋಚಕ ಹಿನ್ನೆಲೆ: ಹಿಮರಾಜನ 16 ವರ್ಷದ ಮಗ, ಮದುವೆಯಾಗಿ ನಾಲ್ಕನೇ ದಿನವೇ ಹಾವು ಕಡಿದು ಸಾಯುತ್ತಾನೆ ಎಂದು ಆತನ ಜಾತಕದಲ್ಲಿ ಕಂಡುಬಂತು. ಹೀಗಾಗಿ ಆತನ ಪತ್ನಿ ನಾಲ್ಕನೇ ದಿನ ರಾತ್ರಿ ಮಲಗಲು ಬಿಡಲಿಲ್ಲ. ಆಕೆ ತನ್ನ ಮನೆಯಲ್ಲಿ ಚಿನ್ನ, ಬೆಳ್ಳಿ ಆಭರಣಗಳನ್ನು ಇಟ್ಟು ಅದರ ಸುತ್ತ ದೀಪಗಳನ್ನು ಹಚ್ಚಿ ಇಡುತ್ತಾಳೆ. ನಂತರ ಕಥೆಗಳನ್ನು ಹೇಳುತ್ತಾ, ಹಾಡು ಹಾಡುತ್ತಾ ಕಳೆಯುತ್ತಾಳೆ.

ಇದೇ ಸಂದರ್ಭದಲ್ಲಿ ಯಮರಾಯ ಯುವರಾಜನನ್ನು ಕಚ್ಚಿ ಸಾಯಿಸುವಂತೆ ಆಜ್ಞಾಪಿಸಿ ಹಾವನ್ನು ಅಲ್ಲಿಗೆ ಕಳಿಸುತ್ತಾನೆ. ಆ ಹಾವಿಗೆ ಜಗಮಗಿಸುವ ದೀಪದ ಬೆಳಕಿಗೆ ಕಣ್ಣೇ ಕಾಣುವುದಿಲ್ಲ. ಅಲ್ಲದೆ ಹಾವು ಹಾಡು ಕೇಳುತ್ತಾ ರಾತ್ರಿಯಿಡೀ ಕುಳಿತುಕೊಳ್ಳುತ್ತದೆ. ಬೆಳಿಗ್ಗೆ ಎದ್ದು ಸುಮ್ಮನೆ ಹೋಗುತ್ತದೆ. ಹೀಗೆ ಯುವರಾಜನ ಪತ್ನಿ ಆತನನ್ನು ಸಾವಿನ ದವಡೆಯಿಂದ ಪಾರು ಮಾಡುತ್ತಾಳೆ. ಅಂದಿನಿಂದ ಈ ಹಬ್ಬಕ್ಕೆ `ಯಮದೀಪನ್~ ಎಂಬ ಹೆಸರೂ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT