ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರಣಿನಿರತ ಉಪಾಧ್ಯಕ್ಷೆ ಅಸ್ವಸ್ಥ: ಉಪವಾಸ ಅಂತ್ಯ

Last Updated 20 ಅಕ್ಟೋಬರ್ 2012, 7:30 IST
ಅಕ್ಷರ ಗಾತ್ರ

ಹಿರಿಯೂರು: ಆಡಳಿತ ನಡೆಸುವಲ್ಲಿ ಅಧ್ಯಕ್ಷರು ಅಸಮರ್ಥರಾಗಿದ್ದಾರೆ. ಪುರಸಭೆಗೆ ಆದಾಯ ತರುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿ ಪುರಸಭೆ ಉಪಾಧ್ಯಕ್ಷೆ ಜ್ಯೋತಿಲಕ್ಷ್ಮೀ ಯಾದವ್ ಪುರಸಭೆ ಮುಂಭಾಗ ಗುರುವಾರ ಬೆಳಗಿನಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಶುಕ್ರವಾರ ಸಂಜೆ ತೀವ್ರ ಅಸ್ವಸ್ಥರಾದ ಪ್ರಯುಕ್ತ ಪೊಲೀಸರು ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದರು.

ಚಿತ್ರದುರ್ಗದಿಂದ ಎರಡನೇ ಬಾರಿಗೆ ಧರಣಿ ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ನಾಗರಾಜ್ ಅವರು  ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಉಪಾಧ್ಯಕ್ಷೆಯನ್ನು ತಕ್ಷಣ ಪುರಸಭೆ ವಾಹನದಲ್ಲಿ ಆಸ್ಪತ್ರೆಗೆ ಕಳಿಸುವ ವ್ಯವಸ್ಥೆ ಮಾಡಿಸಿ, ಬೇಡಿಕೆಗಳನ್ನು ಈಡೇರಿಸವ ಭರವಸೆ ನೀಡಿ ನಿರಶನ ಅಂತ್ಯಗೊಳಿಸುವಂತೆ ಮಾಡುವಲ್ಲಿ ಯಶಸ್ವಿಯಾದರು.
 ಜ್ಯೋತಿಲಕ್ಷ್ಮೀ ಅವರ ಧರಣಿ ಕುರಿತಂತೆ ಉಪ ವಿಭಾಗಾಧಿಕಾರಿ ಬರುವ ಮುಂಚೆ,  ಶುಕ್ರವಾರ ಪುರಸಭೆಯಲ್ಲಿ ಶೇ 18ರ ಹಣ ಸದ್ವಿನಿಯೋಗ ಕುರಿತಂತೆ ಚರ್ಚೆ ನಡೆಸಲು ಹಮ್ಮಿಕೊಂಡಿದ್ದ ವಿಶೇಷ ಸಭೆಯಲ್ಲಿ ಪರ- ವಿರೋಧ ಅಭಿಪ್ರಾಯ ವ್ಯಕ್ತವಾಯಿತು.

ಹಿರಿಯ ಸದಸ್ಯ ಬಿ. ಕೆ. ಕರಿಯಪ್ಪ ಮತ್ತು ಚಂದ್ರಶೇಖರ್ ಅವರು ಮಾತನಾಡಿ, ಸಹೋದ್ಯೋಗಿಯೊಬ್ಬರು ಕಚೇರಿ ಮುಂದೆ ಉಪವಾಸ ಕುಳಿತಿರುವಾಗ ಸಭೆ ನಡೆಸುವುದು ಎಷ್ಟು ಸರಿ. ಸಭೆಯನ್ನು ಮುಂದೂಡಿ ಎಂದು ಜೋರು ದನಿಯಲ್ಲಿ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಜಿ. ಧನಂಜಯಕುಮಾರ್, ಪನ್ನೀರ್‌ಸೆಲ್ವಂ, ಎ. ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್. ವೆಂಕಟೇಶ್, ಈ. ಮಂಜುನಾಥ್ ಮತ್ತಿತರರು, ಗುರುವಾರ ಮತ್ತು ಶುಕ್ರವಾರ ಎರಡು ಬಾರಿ ಧರಣಿ ನಿಲ್ಲಿಸುವಂತೆ ಮನವಿ ಮಾಡಿದ್ದೇವೆ. ಅವರ ವಾರ್ಡ್‌ಗೆ ್ಙ 1.25 ಕೋಟಿ ಅನುದಾನ ಬಿಡುಗಡೆ ಆಗಿದೆ.

ಕಾಮಗಾರಿಗಳು ಪ್ರಗತಿಯಲ್ಲಿವೆ. ಹಕ್ಕುಪತ್ರ ಕೊಡುವ ಕೆಲಸವೂ ಪ್ರಗತಿಯಲ್ಲಿದೆ. ನೆಹರು ಮಾರುಕಟ್ಟೆ ಕಟ್ಟಡವನ್ನು ನ. 9ರಂದು ಉದ್ಘಾಟಿಸಿ, ನ. 15ರಂದು ಮಳಿಗೆಗಳ ಹರಾಜು ಮಾಡುತ್ತೇವೆ. ಮಾಂಸ ಮಾರುಕಟ್ಟೆ ಕುರಿತಂತೆ ಕ್ರಮ ಕೈಗೊಳ್ಳಲಾಗುತ್ತದೆ.
 
ಪುರಸಭೆ ಮುಂದಿರುವ ಮಳಿಗೆಗಳ ಬಾಡಿಗೆ ವಿಚಾರ ಪುರಸಭೆ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿ ಹೇಳಿದರೂ ಅವರು ಒಪ್ಪಲಿಲ್ಲ. ಇದರ ಮೇಲೆ ನಾವೇನು ಮಾಡಲು ಸಾಧ್ಯ? ಎಂದು ಪ್ರಶ್ನೆ ಮಾಡಿದರು.

ಮುಖ್ಯಾಧಿಕಾರಿಗಳು ಮೂರ‌್ನಾಲ್ಕು ಬಾರಿ ಹೋಗಿ ಮಾತನಾಡಿದ್ದಾರೆ. ಗುರುವಾರ ರಾತ್ರಿ ಉಪ ವಿಭಾಗಾಧಿಕಾರಿ, ತಹಶೀಲ್ದಾರರು ಬಂದು ಪ್ರಯತ್ನ ಮಾಡಿದ್ದಾರೆ. ಆದರೂ ಜಿಲ್ಲಾಧಿಕಾರಿಗಳೇ ಬರಬೇಕೆಂದು ಹಠ ಹಿಡಿದಿದ್ದಾರೆ. 

ಧರಣಿ ನಡೆಸುವ ಮುಂಚೆ ಯಾವ ಸದಸ್ಯರನ್ನೂ ಕೇಳಿಲ್ಲ. ಹೀಗಾಗಿ ಇದು ಅವರ ವೈಯಕ್ತಿಕ ತೀರ್ಮಾನವಾಗಿದ್ದು, ಏನಾದರೂ ಮಾಡಿಕೊಳ್ಳಲಿ, ಸಭೆ ನಡೆಸೋಣ ಎಂದು ಒತ್ತಾಯಿಸಿದಾಗ, ಸಭೆಗೆ ಮುಂಚೆ ಎಲ್ಲ ಸದಸ್ಯರು ಇನ್ನೊಮ್ಮೆ ಮಾತನಾಡಿಸೋಣ ಎಂದು ಕರಿಯಪ್ಪ ಮನವಿ ಮಾಡಿದ್ದರಿಂದ, ಅಧ್ಯಕ್ಷೆ ಮಂಜುಳಾ ಅವರನ್ನು ಹೊರತು ಪಡಿಸಿ ಉಳಿದವರೆಲ್ಲ ಧರಣಿ ಸ್ಥಳಕ್ಕೆ ಹೋದರು.

ಇಂತಹ ಭರವಸೆಗಳನ್ನು ಹಿಂದೆ ಆರು ಬಾರಿ ಧರಣಿ ನಡೆಸಿದಾಗಲೂ ಕೇಳಿದ್ದೇನೆ. ಈಗಲೂ ಅದೇ ಭರವಸೆ ಕೊಡುತ್ತಿದ್ದೀರಿ. ಪ್ರಧಾನ ರಸ್ತೆಯಲ್ಲಿ ಮಳಿಗೆಗಳ ಬಾಡಿಗೆ ರೂ 25-30 ಸಾವಿರ ರೂ, ಇದೆ.

ಆದರೆ ರಾಜ್‌ಮೋಹನ್ ಟೆಕ್ಸ್‌ಟೈಲ್ಸ್ ಮಳಿಗೆಯನ್ನು ರೂ 1,500 ಕೊಡಲಾಗಿದೆ. ಈ ಅನ್ಯಾಯ ಸರಿಪಡಿಸಿ ಎನ್ನುವುದು ತಪ್ಪೇ? ಬಡವರಿಗೆ ನಿವೇಶನ ಹಕ್ಕು ಪತ್ರ ಕೊಡಲು ಒತ್ತಾಯಿಸುವುದು ತಪ್ಪೇ? ಎಂದು ಪ್ರಶ್ನೆ ಮಾಡಿದ ಜ್ಯೋತಿಲಕ್ಷ್ಮಿ, ಜಿಲ್ಲಾಧಿಕಾರಿ ಬರುವವರೆಗೆ ಧರಣಿ ಕೈಬಿಡುವುದಿಲ್ಲ ಎಂದರು.

ಈ ನಡುವೆ ಉಪಾಧ್ಯಕ್ಷೆ ಪತಿ ಗೋಪಿಯಾದವ್ ಮತ್ತು ಕೆ.ಆರ್. ವೆಂಕಟೇಶ್ ನಡುವೆ ಮಾತಿನ ಚಕಮಕಿ ನಡೆದ ಕಾರಣದಿಂದ ಕೆಲವು ಸದಸ್ಯರು ಏನಾದರೂ ಮಾಡಿಕೊಳ್ಳಿ ಎಂದು ಕಚೇರಿಯ ಒಳಗೆ ಹೋದರು. ಜಿ.ಪಂ. ಮಾಜಿ ಅಧ್ಯಕ್ಷ ಎಂ. ಜಯಣ್ಣ ಜ್ಯೋತಿಲಕ್ಷ್ಮೀ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಉಪಾಧ್ಯಕ್ಷೆ ತಮ್ಮ ಮೇಲೆ ಮಾಡುತ್ತಿರುವ ಆರೋಪ ನಿರಾಧಾರವಾದುದು. ಹಿಂದಿನ ಇಬ್ಬರು ಜಿಲ್ಲಾಧಿಕಾರಿ ಪುರಸಭೆ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಮಾತಿಗೆ ಬೆಲೆ ಕೊಡುವುದಿಲ್ಲ ಎಂಬ ಕಾರಣಕ್ಕೆ ಧರಣಿ ಸ್ಥಳಕ್ಕೆ ಹೋಗಿಲ್ಲ. ಅವರ ಎಲ್ಲಾ ಪ್ರಶ್ನೆಗಳಿಗೂ ಲಿಖಿತ ಉತ್ತರ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT