ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರೆಗಿಳಿದ ಕೈಲಾಸ

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಹಿಮಾಲಯ ಎಂಬ ಹೆಸರು ಕೇಳಿದರೆ ರೋಮಾಂಚನವಾಗುತ್ತದೆ. ಒಮ್ಮೆಯಾದರೂ ಅದನ್ನು ನೋಡಬೇಕೆಂದು ಆಸೆ ಇಟ್ಟುಕೊಂಡವರು ಹೆಚ್ಚು. ಅದರ ಸೊಬಗೇ ಹಾಗೆ, ಕಣ್ಮನ ಸೆಳೆಯವಂಥದ್ದು. ಅದೊಂದು ನಿಗೂಢ, ವಿಸ್ಮಯ ಲೋಕ. ಸುಂದರ ಗಿರಿ ಶಿಖರಗಳ ಒಡಲು. ಎಲ್ಲರಿಗೂ ಹಿಮಾಲಯ, ಕೈಲಾಸಕ್ಕೆ ಹೋಗಲು ಆಗುವುದಿಲ್ಲ. ಹಾಗಾಗಿ ಉದ್ಯಾನನಗರಿಯಲ್ಲಿ ಜನರಿಗೆ ಕೈಲಾಸ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಮದನ ಗೋಪಾಲ.

ವೃತ್ತಿಯಲ್ಲಿ ಐಎಎಸ್ ಆಫೀಸರ್. ಆದರೆ ಚಿತ್ತ ಮಾತ್ರ ಪ್ರಕೃತಿಯತ್ತ. ಪದೇಪದೇ ಕನಸಿನ ಬೆನ್ನುಹತ್ತಿದ ಛಲಗಾರ. `ಅದೊಂದು ಕಪ್ಪು ಪರ್ವತ, ಆದರೆ ಸಾಮಾನ್ಯ ಪರ್ವತಗಳಂತೆ ಗಗನಮುಖಿಯಾದ ಏಕ ಆಕಾರವಲ್ಲ, ವರ್ಣನೆಗೆ ನಿಲುಕುವ ಸ್ವರೂಪವೂ ಅಲ್ಲ. ಆ ಕರಿ ಶಿಖರದೊಳಗೆ ದಾರಿಯಂಥ ಕೋಲು ಬೆಳಕು ಬೀರುವ ಒಂದು ಸೀಳು. ಅದೆಲ್ಲಿಂದಲೋ ತೂರಿಬರುವ ಮತ್ತೊಂದು ಬೆಳಕಿನ ಕಿರಣ. ಆ ಬೆಳಕನ್ನು ಹಿಂಬಾಲಿಸಿ ಅದರೊಳಗೆ ನಾನು ಹೋದಂತೆ... ಹಾಗೇ ಅದೃಶ್ಯನಾದಂತೆ, ನನ್ನೊಳಗೆ ನಾನೇ ಕಳೆದು ಹೋದಂತೆ... ಮಾಯಗಾರ ಮಹದೇವನ ಕಬಂಧಬಾಹುಗಳಲ್ಲಿ ಬಂಧಿಯಾದಂತೆ~-

ಹೀಗೆ ಚಿಕ್ಕಂದಿನಿಂದಲೂ ಸುಪ್ತ ಮನದಾಳಲ್ಲಿ ಕಾಡಿದ ಹಿಮಾಲಯ ಹಾಗೂ ತಮ್ಮ ಕನಸನ್ನು ಅವರು ಬಿಚ್ಚಿಟ್ಟರು.

ಮನಸ್ಸಿನಲ್ಲಿ ತುಂಬಿಕೊಂಡ ಕನಸಿನ ಹಿಮಾಲಯವನ್ನು ಮುಖಾಮುಖಿಯಾಗಲು ಐದು ದಶಕ ಬೇಕಾಯಿತು ಎಂದು ಹೇಳುವ ಅವರ ಕಣ್ಣಿನಲ್ಲಿ ಕಂಡಿದ್ದು ನಿರಾಳಭಾವ. ತಾವು ಕಂಡಿದ್ದನ್ನು ತಮ್ಮಲ್ಲೇ ಬಚ್ಚಿಟ್ಟುಕೊಳ್ಳದೆ ಉಳಿದವರೊಂದಿಗೂ ಹಂಚಿಕೊಳ್ಳಬೇಕು ಎಂಬ ಅವರ ಮುಕ್ತತೆ, ಮುಗ್ಧತೆಗೆ ಸಾಕ್ಷಿಯಾಗಿರುವುದು ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿರುವ ಕೈಲಾಸ ಪರ್ವತದ ಚಿತ್ರಗಳು.

12ನೇ ಶತಮಾನದ `ಪೆರಿಯ ಪುರಾಣಂ~ ಎಂಬ ಗ್ರಂಥದಲ್ಲಿ ಉಲ್ಲೇಖವಾದ 63 ಸಂತರ ಸಂಖ್ಯೆಯೇ ಕೈಲಾಸ ಪರ್ವತ ದರ್ಶನದ ತಮ್ಮ ಛಾಯಾಚಿತ್ರ ಪ್ರದರ್ಶನದ ಮೂಲಸೂತ್ರ ಎಂದು ಹೆಮ್ಮೆಯಿಂದ ಹೇಳುವ ಅವರು ತಮಗೆ ಆ ಪರ್ವತವನ್ನು ಆಮೂಲಾಗ್ರವಾಗಿ ಸೆರೆಹಿಡಿದ ಭ್ರಮೆ ಇಲ್ಲ, ಆ ಆಗಾಧತೆಯ ಕಣವೊಂದು ಇಲ್ಲಿ ಪ್ರತಿಫಲಿತವಾಗಿದ್ದರೆ ಅದೇ ತಮ್ಮ ಪುಣ್ಯ ಎಂದು ವಿಧೇಯರಾಗುತ್ತಾರೆ.

ಈ ಪ್ರದರ್ಶನದಲ್ಲಿ 63 ಮಹಾತ್ಮರ ಕತೆ ಇದೆ. ಒಂದೊಂದು ಚಿತ್ರವೂ ವಿಶಿಷ್ಟ. ಸಂಕ್ರಾಂತಿ ಹಬ್ಬದ ದಿನ ಜನರ ಕಣ್ಮನಗಳಿಗೆ ಒಳಿತು ನೀಡುವ ಉದ್ದೇಶ ನನ್ನದು. ಹಾಗೇ ದೇವರು ಒಂದು ಜಾತಿಗೆ ಸಂಬಂಧಪಟ್ಟಿಲ್ಲ. ಎಲ್ಲರೊಳಗೂ ಅವನಿದ್ದಾನೆ ಎಂದು ಹೇಳುವಾಗ ಅವರಲ್ಲಿ ಕಂಡಿದ್ದು ಧನ್ಯತೆಯ ಭಾವ.

`ಈ ಹಿಂದೆ ಹಿಮಾಲಯ ಕುರಿತಂತೆ ಛಾಯಾಚಿತ್ರ ಪ್ರದರ್ಶನ ನಡೆದಾಗ ಕೈಲಾಸ ಪರ್ವತದ ಚಿತ್ರಗಳನ್ನು ಏಕೆ ಪ್ರದರ್ಶಿಸಿಲ್ಲ ಎಂದು ಗೆಳೆಯರು ಪ್ರಶ್ನಿಸಿದ್ದರು. ಹಾಗಾಗಿ ಕೈಲಾಸ ಪರ್ವತವನ್ನು ನನ್ನ ಕೈಲಾದಷ್ಟು ಮಟ್ಟಿಗೆ ಪ್ರದರ್ಶಿಸುವ ಸಣ್ಣ ಪ್ರಯತ್ನ ಮಾಡಿದೆ. ಇದರಲ್ಲಿ ನನ್ನ ಪತ್ನಿ ದುರ್ಗಾಭವಾನಿಯೂ ಭಾಗಿ~ ಎಂದು ಸಂತಸ ವ್ಯಕ್ತಪಡಿಸಿದರು. 

ಹಿಮಾಲಯ, ಕೈಲಾಸ ಪರ್ವತ ನೋಡಲಿಲ್ಲ ಎಂದು ಪರಿತಪಿಸುವವರು (ಜ.) 17ರೊಳಗೆ ವೆಂಕಟಪ್ಪ ಆರ್ಟ್ ಗ್ಯಾಲರಿಗೆ ಭೇಟಿ ಕೊಟ್ಟರೆ ಅಲ್ಲಿ ಮದನ ಗೋಪಾಲ ಅವರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಕೈಲಾಸ ಪರ್ವತದ ದರ್ಶನ ಪಡೆಯಬಹುದು. ಸಂಪರ್ಕಕ್ಕೆ: 99455 89999. 



 

ಕಳೆದ ವರ್ಷ ಸಾಲು ಮರದ ತಿಮ್ಮಕ್ಕನಿಂದ ಚಾಲನೆಗೊಂಡಿದ್ದ ಚಿತ್ರ ಪ್ರದರ್ಶನ ಈ ಸಲ ಆಟೋ ಮಹಾದೇವ ತ್ರಿವಿಕ್ರಮ ಅವರಿಂದ (ಶುಕ್ರವಾರ) ಉದ್ಘಾಟನೆಗೊಳ್ಳಲಿದೆ. 77,000ಕ್ಕೂ ಅಧಿಕ ಅನಾಥ ಶವಗಳಿಗೆ ಸಂಸ್ಕಾರ ಮಾಡಿದ ಹೆಗ್ಗಳಿಕೆ ಇವರದು. ಪ್ರದರ್ಶನದ ಸಮಯ: ಬೆಳಿಗ್ಗೆ 10ರಿಂದ ಸಂಜೆ 7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT