ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರೆಗಿಳಿದ ವರುಣ, ಜನಜೀವನ ಅಸ್ತವ್ಯಸ್ತ

Last Updated 12 ಮೇ 2012, 19:25 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶನಿವಾರ ಗುಡುಗು ಸಹಿತ ಧಾರಾಕಾರ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಮತ್ತು ಮರಗಳು ಉರುಳಿ ಬಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು.

ಹಲವೆಡೆ ಕಾಲುವೆಗಳು ಕಟ್ಟಿಕೊಂಡು ಕೊಳಚೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತು. ಮತ್ತೆ ಕೆಲವು ಬಡಾವಣೆಗಳಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ನಿಂತು ಮತ್ತು ಮರಗಳು ರಸ್ತೆಗೆ ಉರುಳಿ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಆಜಾದ್‌ನಗರ ಒಂದನೇ `ಎ~ ಅಡ್ಡರಸ್ತೆ, ಭಕ್ಷಿ ಗಾರ್ಡನ್, ಬೆಳ್ಳಂದೂರು, ಹೆಗ್ಗನಹಳ್ಳಿ ರಸ್ತೆ, ರಾಜಗೋಪಾಲನಗರದ ಕಸ್ತೂರಿ ಬಡಾವಣೆ, ಲಗ್ಗೆರೆಯ ಚೌಡೇಶ್ವರಿನಗರ ಐದನೇ ಅಡ್ಡರಸ್ತೆ, ಮತ್ತಿಕೆರೆ ಸಮೀಪದ ಬೃಂದಾವನನಗರ, ಮಾಗಡಿ ಮುಖ್ಯರಸ್ತೆಯ ಗೊಲ್ಲರಹಟ್ಟಿ ಒಂದನೇ ಅಡ್ಡರಸ್ತೆ, ಪದ್ಮನಾಭನಗರ 14ನೇ ಅಡ್ಡರಸ್ತೆ, ಹೊಸಕೆರೆಹಳ್ಳಿ, ಯಡಿಯೂರು 24ನೇ ಮುಖ್ಯರಸ್ತೆ, ಭುವನೇಶ್ವರಿನಗರ ಎಂಟನೇ ಮುಖ್ಯರಸ್ತೆಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ಸ್ಥಳೀಯರು ತೀವ್ರ ತೊಂದರೆ ಅನುಭವಿಸಿದರು.

ಪಶ್ಚಿಮ ಕಾರ್ಡ್ ರಸ್ತೆ, ಆಜಾದ್ ನಗರ ಏಳನೇ ಅಡ್ಡರಸ್ತೆ, ಬಸವನಗುಡಿಯ ರತ್ನವಿಲಾಸ್ ರಸ್ತೆ, ರಾಮಕೃಷ್ಣ ಆಶ್ರಮದ ಬಳಿ, ಹನುಮಂತನಗರ 50 ಅಡಿ ರಸ್ತೆ, ಶ್ರೀನಗರದ ಪೈಪ್‌ಲೈನ್ ರಸ್ತೆ, ಬಸವನಗುಡಿ ಪೊಲೀಸ್ ಠಾಣೆ ಸಮೀಪ, ಬನಶಂಕರಿ ಎರಡನೇ ಹಂತ, ಜಯನಗರ ನಾಲ್ಕನೇ `ಟಿ~ ಬ್ಲಾಕ್, ಅರಸು ಕಾಲೊನಿ ಸೇರಿದಂತೆ ನಗರದ ಹಲವು ಬಡಾವಣೆಗಳಲ್ಲಿ ಮರಗಳು ಧರೆಗುರುಳಿದ ಪರಿಣಾಮ ಸುತ್ತಮುತ್ತಲ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.

ಮೆಜೆಸ್ಟಿಕ್. ಕೆಂಪೇಗೌಡ ರಸ್ತೆ, ಸಿಟಿ ಮಾರುಕಟ್ಟೆ, ಶೇಷಾದ್ರಿ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ, ಹೊಸೂರು ರಸ್ತೆ, ಶಾಂತಿನಗರ, ಲಾಲ್‌ಬಾಗ್, ಎಂ.ಜಿ.ರಸ್ತೆ ಸುತ್ತಮುತ್ತಲ ಪ್ರದೇಶದಲ್ಲಿ ಹಲವು ತಾಸುಗಳ ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿ ವಾಹನ ಸವಾರರು ಪರದಾಡಿದರು. ಮಳೆ ಆರಂಭವಾಗುತ್ತಿದ್ದಂತೆ ಕೆಲ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಮಳೆ ನಿಂತ ನಂತರವೂ ವಿದ್ಯುತ್ ಬಾರದ ಕಾರಣ ಜನರು ಕತ್ತಲಲ್ಲೇ ಕಾಲ ಕಳೆಯುವಂತಾಯಿತು.

ಸ್ಪಂದಿಸುತ್ತಿಲ್ಲ: `ದೊಡ್ಡ ಮೋರಿ ಕಟ್ಟಿಕೊಂಡು ಹಲವು ಮನೆಗಳಿಗೆ ನೀರು ನುಗ್ಗಿದೆ. ಈ ಬಗ್ಗೆ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಮೂರ್ನಾಲ್ಕು ಬಾರಿ ಕರೆ ಮಾಡಿ ದೂರು ನೀಡಿದರೂ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬದಲಿಗೆ ಕೆಲ ಹೊತ್ತಿನಲ್ಲೇ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಪಾಲಿಕೆ ಸಿಬ್ಬಂದಿ ಒಂದು ತಾಸಿನಿಂದ ಇದೇ ರೀತಿ ಸತಾಯಿಸುತ್ತಿದ್ದಾರೆ~ ಎಂದು ಭಕ್ಷಿಗಾರ್ಡನ್ ನಿವಾಸಿ ಶ್ರೀನಿವಾಸ್ `ಪ್ರಜಾವಾಣಿ~ಗೆ ತಿಳಿಸಿದರು.

ದೂರು ನೀಡಿದ್ದೆವು: `ಹಿಂದಿನ ವರ್ಷಗಳಲ್ಲೂ ಇದೇ ರೀತಿ ಮೋರಿ ಕಟ್ಟಿಕೊಂಡು ಕೊಳಚೆ ನೀರು ಮನೆಗಳಿಗೆ ನುಗ್ಗಿ ಸಾಕಷ್ಟು ತೊಂದರೆಯಾಗಿತ್ತು. ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿ ಮೋರಿ ಸ್ವಚ್ಛಗೊಳಿಸುವಂತೆ ಮನವಿ ಮಾಡಿದ್ದೆವು. ಆದರೆ, ಅಧಿಕಾರಿಗಳು ಮೋರಿ ಸ್ವಚ್ಛಗೊಳಿಸಲು ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ತೊಂದರೆ ಅನುಭವಿಸುವಂತಾಗಿದೆ~ ಎಂದು ಗೊಲ್ಲರಹಟ್ಟಿ ನಿವಾಸಿ ಗಂಗಾ ದೂರಿದರು.

ಮಿ.ಮೀ ಮಳೆ
ನಗರದ ಒಳ ಭಾಗದಲ್ಲಿ 41.2 ಮಿ.ಮೀ ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣ ಸುತ್ತಮುತ್ತ 19.8 ಮಿ.ಮೀ ಮಳೆಯಾಗಿದೆ. ನಗರದಲ್ಲಿ ಬೆಳಿಗ್ಗೆ ಗರಿಷ್ಠ 31 ಮತ್ತು ಕನಿಷ್ಠ 19.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು, ಮುಂದಿನ 24 ಗಂಟೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಮಾನತಿಗೆ ಶಿಫಾರಸು
ನಗರದಲ್ಲಿ ಶನಿವಾರ ಮಳೆ ಸುರಿದ ವೇಳೆ ಪಾಲಿಕೆ ನಿಯಂತ್ರಣ ಕೊಠಡಿಗೆ ಹಾಜರಾಗದೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಮೂವರು ಎಂಜಿನಿಯರ್‌ಗಳನ್ನು ಸೇವೆಯಿಂದ ಅಮಾನತುಗೊಳಿಸಲು ಮೇಯರ್ ಡಿ.ವೆಂಕಟೇಶಮೂರ್ತಿ ಶಿಫಾರಸು ಮಾಡಿದ್ದಾರೆ.

ಪಾಲಿಕೆಯ 99ನೇ ವಾರ್ಡ್‌ನ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಆರ್.ಜಗನ್ನಾಥ್, ನಗರ ಯೋಜನೆ ವಿಭಾಗದ ಸಹಾಯಕ ಎಂಜಿನಿಯರ್‌ಗಳಾದ ಕೆ.ಎನ್.ಕೃಷ್ಣಮೂರ್ತಿ ಮತ್ತು ಎಚ್.ರವೀಂದ್ರನಾಥ್ ಅವರ ಅಮಾನತಿಗೆ ಶಿಫಾರಸು ಮಾಡಲಾಗಿದೆ.

ಮೇಯರ್ ವೆಂಕಟೇಶಮೂರ್ತಿ ಹಾಗೂ ಉಪ ಮೇಯರ್ ಎಲ್.ಶ್ರೀನಿವಾಸ್ ಅವರು ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT