ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಗುರುವಿಗೆ ಹಾರ್ದಿಕ ಬೀಳ್ಕೊಡುಗೆ

Last Updated 14 ಡಿಸೆಂಬರ್ 2012, 11:01 IST
ಅಕ್ಷರ ಗಾತ್ರ

ಮುಂಡಗೋಡ: ಕಳೆದ 15ದಿನಗಳಿಂದ ಇಲ್ಲಿನ ಟಿಬೆಟನ್ ಕ್ಯಾಂಪ್‌ನಲ್ಲಿ ವಾಸ್ತವ್ಯ ಹೂಡಿದ್ದ ಟಿಬೆಟನ್ ಧರ್ಮಗುರು ದಲೈಲಾಮಾ ಅವರು ಗುರುವಾರ ಮಧ್ಯಾಹ್ನ ಗೋವಾದತ್ತ ಪ್ರಯಾಣ ಬೆಳೆಸಿದರು. ಇದರಿಂದ ಪುಟ್ಟ ಟಿಬೆಟ್‌ನಂತೆ ಕಾಣುತ್ತಿದ್ದ ನಿರಾಶ್ರಿತರ ಕಾಲೊನಿಯಲ್ಲಿನ ಜಾತ್ರೆಯ ಸಂಭ್ರಮಕ್ಕೆ ತೆರೆ ಎಳೆದಂತಾಗಿದೆ.

ಕ್ಯಾಂಪ್ ನಂ.6ರ ಡ್ರೆಪುಂಗ್ ಬೌದ್ಧ ಮಂದಿರದಿಂದ ಹೊರಬಂದ ದಲೈ ಲಾಮಾ ನೆರೆದಿದ್ದ ಸಹಸ್ರಾರು ಬೌದ್ಧ ಭಿಕ್ಕುಗಳತ್ತ ಕೈಬೀಸಿದರು. ನಂತರ ಬಿಗಿಯಾದ ಭದ್ರತೆಯಲ್ಲಿ ಪ್ರಯಾಣ ಬೆಳೆಸಿದ ಧರ್ಮ ಗುರುವಿಗೆ ಕೈಯಲ್ಲಿ ಬಿಳಿ ಹಾಗೂ ನೀಲಿ ಬಣ್ಣದ ವಸ್ತ್ರ, ಹೂಗುಚ್ಚಗಳನ್ನು ಹಿಡಿದುಕೊಂಡು ರಸ್ತೆ ಬದಿಗೆ ನಿಂತಿದ್ದ ಟಿಬೆಟನ್ನರು, ಬೌದ್ಧ ಭಿಕ್ಕುಗಳು ಹಾಗೂ ವಿದೇಶಿಯರು ನಮಸ್ಕರಿಸುತ್ತಾ ಹಾರ್ದಿಕವಾಗಿ ಬೀಳ್ಕೊಟ್ಟರು. ಚಿಕ್ಕ ಮಕ್ಕಳು ಗುರುವಿನ ಬೀಳ್ಕೊಡುಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಮರಳಿ ಊರಿನತ್ತ ಪ್ರಯಾಣ ಬೆಳೆಸಿದ ವಿದೇಶಿಯರು: ಕಳೆದ 15 ದಿನಗಳಿಂದ ಇಲ್ಲಿನ ಕ್ಯಾಂಪ್‌ಗೆ ಆಗಮಿಸಿ ಟಿಬೆಟನ್ ಧರ್ಮಗುರು ದಲೈಲಾಮಾ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ವಿದೇಶಿಯರು ದಲೈಲಾಮಾ ಇಂದು ತೆರಳುತ್ತಿದ್ದಂತೆ ಅವರಿಗೆ ಹಾರ್ದಿಕವಾಗಿ ಬೀಳ್ಕೊಟ್ಟು ತಮ್ಮ ದೇಶದತ್ತ ಪ್ರಯಾಣ ಬೆಳೆಸಿದರು. ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದೇಶಿಯರು ತಮ್ಮ ಊರಿನತ್ತ ಪ್ರಯಾಣ ಬೆಳೆಸಿದರು. ಇದಲ್ಲದೇ ಧರ್ಮಶಾಲಾ ಹಾಗೂ ಇನ್ನಿತರ ಕಡೆಗಳಿಂದ ಆಗಮಿಸಿದ್ದ ಟಿಬೆಟನ್‌ರು ಹಾಗೂ ಬೌದ್ಧ ಭಿಕ್ಕುಗಳು ಪ್ರಯಾಣ ಬೆಳೆಸಿದರು.

ಅಂತರಾಷ್ಟ್ರೀಯ ನಾಯಕ ಹಾಗೂ ಧರ್ಮಗುರುವಿನ ಸೂಕ್ತ ರಕ್ಷಣೆಯ ಜವಾಬ್ದಾರಿ ಹೊತ್ತಿದ್ದ ಜಿಲ್ಲಾ ಪೊಲೀಸ್ ಇಲಾಖೆ ಕಳೆದ 15ದಿನಗಳಿಂದ ಹಗಲು ರಾತ್ರಿ ಎನ್ನದೇ ಭದ್ರತಾ ಕಾರ್ಯದಲ್ಲಿ ತೊಡಗಿತ್ತು. ಎಸ್.ಪಿ ಕೆ.ಟಿ.ಬಾಲಕೃಷ್ಣ ನೇತೃತ್ವದಲ್ಲಿ ಕ್ಯಾಂಪ್‌ನಲ್ಲಿಯೇ ಬಿಡಾರ ಹೂಡಿದ್ದ ಹೆಚ್ಚುವರಿ ಎಸ್.ಪಿ ಸುಭಾಷ ಗುಡಿಮನಿ, ಡಿವೈಎಸ್‌ಪಿ ಎನ್.ಡಿ.ಬಿರ್ಜೆ, ಸಿಪಿಐ ಬಿ.ಗಿರೀಶ, ಸಿ.ಪಿ.ಐ ವಿರೇಂದ್ರಕುಮಾರ ಸೇರಿದಂತೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಭದ್ರತೆಯನ್ನು ನಿಭಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT